ಗ್ರೀಷ್ಮಋತು: ಇದು ಮೇ ಮಧ್ಯಭಾಗದಿಂದ ಜುಲೈ ಮಧ್ಯದವರೆಗೂ ವಿಸ್ತರಿಸುತ್ತದೆ. ಈ ಋತುವಿನ ಪ್ರಭಾವ ಏಪ್ರಿಲ್ ಮಧ್ಯದಿಂದಲೇ ಪ್ರಾರಂಭವಾಗಿ ಮೇ ಹಾಗೂ ಜೂನ್ ತಿಂಗಳಲ್ಲಿ ತೀವ್ರವಾಗಿರುತ್ತದೆ. ಈ ಕಾಲದಲ್ಲಿ ಸೂರ್ಯನ ಕಿರಣಗಳು ಅತ್ಯಂತ ಉಷ್ಣತೆಯಿಂದ ಕೂಡಿದ್ದು, ತೀಕ್ಷ್ಮವಾಗಿರುತ್ತವೆ. ಹಾಗಾಗಿ ಇದು ವಾತಾವರಣದ ತೇವಾಂಶವನ್ನೆಲ್ಲ ಹೀರಿ ಒಣಗಿಸುತ್ತದೆ. ಈ ಋತುವಿನ ಪ್ರಭಾವ ಅತ್ಯಂತ ರೂಕ್ಷ, ಕಟು, ಪಿತ್ತಕಾರಕ ಹಾಗೂ ಕಫನಾಶಕವೆಂದು ಆಯುರ್ವೇದ (Ayurveda) ಗ್ರಂಥಗಳಲ್ಲಿ ವರ್ಣಿಸಲಾಗಿದೆ. ಈ ಋತುವಿನಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಆಯುರ್ವೇದ ವೈದ್ಯರು ತಿಳಿಸಿದ್ದಾರೆ. ಸಿಹಿ, ಶೀತ ಹಾಗೂ ಶಕ್ತಿವರ್ಧಕ ಪಾನೀಯಗಳನ್ನು ಆಗಾಗ ಸೇವಿಸುವುದು ಲೇಸು. ದ್ರಾಕ್ಷಿ, ಸೇಬು, ಬಾಳೆಹಣ್ಣು, ಸಪೋಟ, ಕಲ್ಲಂಗಡಿ, ಕರಬೂಜ, ಜಂಬು ನೇರಳೆ, ಹಲಸು, ಅನಾನಸ್, ಮಾವು ಇವುಗಳಲ್ಲಿ ಯಾವುದಾದರೂ ಒಂದರ ರಸಕ್ಕೆ ಸಕ್ಕರೆ, ಹಾಲು ಹಾಕಿ ಕುಡಿಯುವುದು ಒಳ್ಳೆಯದು. ಐಸ್‌ಕ್ರೀಂ ಮುಂತಾದ ತೀರ ತಣ್ಣನೆಯ ಪದಾರ್ಥಗಳನ್ನು ಸೇವಿಸಿದರೂ ಹೆಚ್ಚು ಉಪದ್ರವ ಇರುವುದಿಲ್ಲ. ಇದನ್ನು ಒಣ ಅಥವಾ ತಾಜಾ ಹಣ್ಣುಗಳೊಡನೆ ಸೇವಿಸಿದರೆ ಹೆಚ್ಚಿನ ಶಕ್ತಿ ದೊರೆಯುತ್ತದೆ. ಶೀತ ಕಾಲದ ಕಾಯಿಲೆಗಳಾದ ನೆಗಡಿ. ಆಸ್ತ್ರ, ಕೆಮ್ಮುಗಳಿಂದ ನರಳುವ ಮಕ್ಕಳು ತಮ್ಮ ನೆಚ್ಚಿನ ಐಸ್ಕ್ರೀಂ ಮತ್ತು ಹಣ್ಣು-ಹಂಪಲುಗಳಿಂದ ವಂಚಿತರಾಗಿರುತ್ತಾರೆ. ಅಂಥವರೂ ಈ ಋತುವಿನಲ್ಲಿ ಅವುಗಳನ್ನು ತಿಂದು ಆನಂದಿಸಬಹುದು. ಮನೆಯಲ್ಲಿ ತಯಾರಿಸಿದ ರಾಗಿ ಹುರಿಹಿಟ್ಟಿನ ಪಾನೀಯ, ಅಕ್ಕಿ ಹುರಿಹಿಟ್ಟಿನ ಪಾನೀಯಗಳನ್ನು ಸೇವಿಸಬಹುದು. ಕಲ್ಲಂಗಡಿ ಹಾಗೂ ಕರಬೂಜ ಹಣ್ಣುಗಳಲ್ಲಿ ನೀರಿನ ಅಂಶ ಹೆಚ್ಚಾಗಿದ್ದು, ಇವು ಸಾಮಾನ್ಯವಾಗಿ ಈ ಋತುವಿನಲ್ಲಿ ಕಂಡು ಬರುವ ಉಪದ್ರವಗಳನ್ನು ಯಶಸ್ವಿಯಾಗಿ ನಿವಾರಿಸುತ್ತವೆ. ಲಸ್ಸಿಯು ಗ್ರೀಷ್ಮಋತುವಿನ ಉಪದ್ರವಗಳನ್ನು ನಿವಾರಿಸಲು ಉತ್ತಮ ಆಹಾರ ಪದಾರ್ಥ. ಇದನ್ನು ಅವರವರ ನಾಲಿಗೆ ರುಚಿಗೆ ತಕ್ಕಂತೆ ಸಿಹಿಯಾಗಿ ಅಥವಾ ಖಾರವಾಗಿ ಸೇವಿಸಬಹುದು. ಆಹಾರದೊಡನೆ ತುಪ್ಪ, ಹಾಲನ್ನು ಧಾರಾಳವಾಗಿ ಸೇವಿಸಬಹುದು. ಈ ಋತುವಿನಲ್ಲಿ ಅತ್ಯಂತ ಶ್ರೇಷ್ಠವಾದ ಆಹಾರವೆಂದರೆ ಪಾಯಸ. ಗ್ರೀಷ್ಮ ಋತುವಿನ ಎಲ್ಲ ಕೆಟ್ಟ ಪರಿಣಾಮಗಳನ್ನು ನಿಗ್ರಹಿಸುವ ಗುಣ ಅದರಲ್ಲಿದೆ. ಧಾನ್ಯಗಳಲ್ಲಿ ಅಕ್ಕಿ, ಗೋಧಿಗಳ ಬಳಕೆ ಒಳ್ಳೆಯದು. ಬೇಳೆಗಳಲ್ಲಿ ಹೆಸರು ಬೇಳೆ, ಉದ್ದು ಮತ್ತು ಮಸೂರ್ ಬೇಳೆಗಳ ಬಳಕೆ ಲೇಸು. ಖಾರ, ಒಗರು ಮತ್ತು ಕಹಿ ಪದಾರ್ಥಗಳನ್ನು ಬಳಸುವುದು ಬೇಡ. ಅಂದರೆ ಹಾಗಲಕಾಯಿ, ಅಡಿಕೆ, ಮೆಣಸಿನಕಾಯಿ, ಮೂಲಂಗಿ, ನುಗ್ಗೆಕಾಯಿ, ಪಡವಲ ಕಾಯಿ, ಹೀರೆಕಾಯಿ ಮುಂತಾದವುಗಳ ಬಳಕೆ ತೀರ ಕಡಿಮೆ ಇರಲಿ. ಮಧ್ಯಾಹ್ನ ವ್ಯಾಯಾಮ ಮಾಡುವುದು ಬೇಡ (ಜಿಮ್‌ಗಳಲ್ಲಿ ಮಧ್ಯಾಹ್ನ ವ್ಯಾಯಾಮ ಮಾಡುವವರಿಗೆ ಇದು ಕಿವಿ ಮಾತು). ಈ ಋತುವಿನಲ್ಲಿ ಮಾತ್ರ ಆಯುರ್ವೇದ ಹಗಲು ಹೊತ್ತು ನಿದ್ದೆ ಮಾಡಲು ಆಕ್ಷೇಪಿಸುವುದಿಲ್ಲ. ಅತಿಯಾದ ಉಷ್ಣತೆಯಿಂದ ದುರ್ಬಲತೆ ತಲೆದೋರುತ್ತದೆ. ಹಗಲು ನಿದ್ದೆಯು ಶಾರೀರಿಕ ಕಫ ಗುಣವನ್ನು ಹೆಚ್ಚಿಸುವುದರಿಂದ ಹಗಲು ನಿದ್ದೆ ಮಾಡಬಹುದು. ಮನೆಯಲ್ಲಿ ತಂಪಾಗಿರುವ ಕೊಠಡಿಯಲ್ಲಿ ಇರುವುದು ಒಳಿತು. ವಾಸಿಸುವ ಜಾಗ ತುಂಬಾ ಬಿಸಿಲಿನಿಂದ ಕೂಡಿದ್ದರೆ, ಬೇಸಿಗೆ ಕಳೆಯುವವರೆಗೆ ತಂಪಾದ ಪ್ರದೇಶಗಳಿಗೆ ಹೋಗಿ ವಾಸವಾಗುವುದು ಒಳ್ಳೆಯದು. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation Ayurveda Health Tips: ಋತುಗಳ ತಕ್ಕಹಾಗೆ ಜೀವನ ಕ್ರಮ, ವಸಂತದಲ್ಲಿ ಸೇವಿಸಬಹುದಾದ ಆಹಾರಗಳು Ayurveda Health Tips: ಶಿಶಿರ ಋತುವಿನಲ್ಲಿ ಸೇವಿಸಬಹುದಾದ ಆಹಾರ