Ayurveda Health Tips: Lifestyle according to the seasons, Best Foods to Eat During Spring Vasanta Rituಸಾಂದರ್ಭಿಕ ಚಿತ್ರ

ಆಯುರ್ವೇದದಲ್ಲಿ (Ayurveda) ಮಕರ ಸಂಕ್ರಾಂತಿಯ ನಂತರದ ಆರು ತಿಂಗಳನ್ನು ‘ಉತ್ತರಾಯಣ’ವೆಂದೂ, ನಂತರದ ಆರು ತಿಂಗಳನ್ನು ದಕ್ಷಿಣಾಯನವೆಂದೂ ಕರೆದಿದ್ದಾರೆ. ಉತ್ತರಾಯಣ ಕಾಲದಲ್ಲಿ ಸೂರ್ಯನು ಪ್ರಬಲನಾಗುವುದರಿಂದ ಮಾನವ ಜೀವಿಗಳು ಸೇರಿದಂತೆ ಎಲ್ಲ ಪ್ರಾಣಿಗಳ ಬಲವನ್ನು ಹೀರುತ್ತಾನೆ. ಹಾಗೆಯೇ ದಕ್ಷಿಣಾಯನದಲ್ಲಿ ಚಂದ್ರನು ಪ್ರಬಲನಾಗಿ ಎಲ್ಲ ಜೀವರಾಶಿಗಳಿಗೂ ಬಲವನ್ನೀಯುತ್ತಾನೆ.

ಬೇಸಿಗೆಯಲ್ಲಿ ಸೂರ್ಯನ ಪ್ರಖರವಾದ ಕಿರಣಗಳು ಜನರಲ್ಲಿ ಸುಸ್ತು, ಸಂಕಟ, ಬಾಯಾರಿಕೆ, ಮೈಉರಿ, ದೌರ್ಬಲ್ಯಗಳನ್ನು ಕ್ರಮೇಣ ಹೆಚ್ಚಿಸುತ್ತಾ ಹೋಗುತ್ತವೆ. ಶಿಶಿರ ಋತುವಿನಿಂದ ಪ್ರಾರಂಭವಾಗುವ ಸೂರ್ಯನ ತಾಪ ವಸಂತ ಋತುವಿನಲ್ಲಿ ಪ್ರಬಲತೆ ಪಡೆದು ಗ್ರೀಷ್ಮ ಋತುವಿನಲ್ಲಿ ಪರಾಕಾಷ್ಠೆ ಮುಟ್ಟುತ್ತದೆ.

ಸೂರ್ಯನ ಪ್ರಖರತೆ ಋತುಮಾನಗಳಿಗನುಗುಣವಾಗಿ ಶರೀರದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆರೋಗ್ಯ ರಕ್ಷಣೆಗೆ ಆಯಾ ಋತುವಿಗನುಗುಣವಾಗಿಯೇ ಆಹಾರ ಇತ್ಯಾದಿ ಚಟುವಟಿಕೆಗಳನ್ನು ಅನುಸರಿಸಬೇಕಾಗುತ್ತದೆ.

ವಸಂತ ಋತು

ಈ ಋತು ಸಾಮಾನ್ಯವಾಗಿ ಮಾರ್ಚ್ ಮಧ್ಯದಿಂದ ಮೇ ಮಧ್ಯದವರೆಗೂ ಇರುತ್ತದೆ. ಚಳಿಗಾಲದಲ್ಲಿ ಹೆಪ್ಪುಕಟ್ಟಿದ ಕಫ ಈ ಋತುವಿನಲ್ಲಿ ಸೂರ್ಯನ ಪ್ರಖರವಾದ ಕಿರಣಗಳಿಂದ ಕರಗಿ ನೀರಾಗಿ ಹರಿಯುತ್ತದೆ.

ಹೀಗಾಗಿ ಕಫಜನಿತ ವ್ಯಾಧಿಗಳಾದ ಅಜೀರ್ಣತೆ, ಅಗ್ನಿಮಾಂದ್ಯ, ಆಸ್ತ್ರ, ಜ್ವರ, ನೆಗಡಿ, ಕೆಮ್ಮು, ಅತಿ ನಿದ್ರೆ, ನವೆ, ಮೈಭಾರ ಮುಂತಾದ ಉಪದ್ರವಗಳು ಹೆಚ್ಚಾಗುತ್ತವೆ. ಶರೀರದ ಮಧುರತೆ, ಸ್ನಿಗ್ಧತೆ ಹಾಗೂ ಕಫ ದೋಷಗಳು ಹೆಚ್ಚಾಗಿರುವುದರಿಂದ ಅವುಗಳಿಗೆ ವಿರುದ್ಧವಾಗಿ ಆಹಾರ ಸೇವನೆ ಹಾಗೂ ಈ ಕೆಳಗಿನ ಉಪಚಾರ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಆಹಾರ ಕ್ರಮ

  • ಹೊಟ್ಟೆಗೆ ಭಾರವಾಗುವಷ್ಟು ಆಹಾರ ಸೇವಿಸಕೂಡದು.
  • ಜೀರ್ಣಶಕ್ತಿಗೆ ತೊಂದರೆಯಾಗುವುದರಿಂದ ತುಂಬ ಹುಳಿ ಮತ್ತು ಸಿಹಿ ಪದಾರ್ಥಗಳನ್ನು ಸೇವಿಸುವುದು ಬೇಡ.
  • ಜೀರ್ಣಿಸಲು ಸುಲಭವಾದ ಜವೆ ಗೋಧಿ (ಬಾರಿ), ಹೆಸರುಬೇಳೆ, ಹಳೇ ಅಕ್ಕಿ, ಗೋಧಿ, ರಾಗಿ ಮುಂತಾದವುಗಳಿಂದ ತಯಾರಿಸಿದ ಖಾದ್ಯ ಪದಾರ್ಥಗಳನ್ನು ಸೇವಿಸುವುದು ಲೇಸು.
  • ಆಹಾರ ಜೀರ್ಣವಾಗಲು ಸಹಕರಿಸುವ ತರಕಾರಿಗಳಾದ ಹೀರೆಕಾಯಿ, ಮೂಲಂಗಿ, ನುಗ್ಗೆ ಕಾಯಿ, ಕೋಸು ಮುಂತಾದವುಗಳ ಬಳಕೆ ಉತ್ತಮ,
  • ಮಸಾಲೆ ಪದಾರ್ಥಗಳಾದ ಈರುಳ್ಳಿ, ಶುಂಠಿ, ಜೀರಿಗೆ, ಮೆಣಸು, ಬೆಳ್ಳುಳ್ಳಿ ಮುಂತಾದವುಗಳನ್ನು ಧಾರಾಳವಾಗಿ ಬಳಸಬಹುದು.
  • ಮೊಸರಿಗಿಂತ ನೀರು ಮಜ್ಜಿಗೆ ಒಳ್ಳೆಯದು. ಇದಕ್ಕೆ ಶುಂಠಿ, ಕೊತ್ತಂಬರಿ ಸೊಪ್ಪು, ಉಪ್ಪು, ಕರಿಬೇವು ಹಾಕಿ ಕುಡಿಯವುದು ಇನ್ನೂ ಉತ್ತಮ.
  • ಕರಿದ ತಿಂಡಿ, ಜಿಡ್ಡಿನ ಪದಾರ್ಥಗಳು, ತುಪ್ಪದಲ್ಲಿ ಮಾಡಿದ ಸಿಹಿ ಪದಾರ್ಥಗಳ ಸೇವನೆ ಮಿತಿಯಲ್ಲಿದ್ದಷ್ಟೂ ಒಳ್ಳೆಯದು.
  • ಬಿಸಿಲಿನ ಬೇಗೆಯಿಂದ ಬಾಯಾರಿಕೆ ಹೆಚ್ಚಾದರೆ ಜಾಸ್ತಿ ನೀರು ಬೆರೆಸಿದ ಹಣ್ಣಿನ ರಸ ಸೇವಿಸಿ. ಬೆಲ್ಲದ ಅಥವಾ ನಿಂಬೆ ಪಾನಕ ಒಳ್ಳೆಯದು.
  • ಕುಡಿಯುವ ನೀರನ್ನು ಚೆನ್ನಾಗಿ ಕುದಿಸಿ ಆರಿಸಿ ಅದಕ್ಕೆ ಹೊನ್ನಾರಿ ಗಡ್ಡೆ, ಸೊಗದೆ ಬೇರು ಅಥವಾ ಶುಂಠಿ ಇವುಗಳಲ್ಲಿ ಒಂದನ್ನು ಬೆರೆಸಿ ಕುಡಿ ಯುವುದು ಲೇಸು.
  • ಕಫ ಹೆಚ್ಚಾಗುವುದರಿಂದ ಹಗಲು ನಿದ್ದೆ ಬೇಡ.
  • ಎಲ್ಲ ಕಾಲದಲ್ಲೂ ವ್ಯಾಯಾಮವನ್ನು ಶರೀರದ ಅರ್ಧ ಬಲದಷ್ಟು ಮಾತ್ರ ಮಾಡಬೇಕೆಂಬ ನಿಯಮವಿದೆ. ಆದರೆ ವಸಂತ ಋತುವಿನಲ್ಲಿ ಕಫ ದೋಷ ಹೆಚ್ಚಾಗುವುದರಿಂದ ಅದನ್ನು ನಿವಾರಿಸಲು ಹೆಚ್ಚಿನ ವ್ಯಾಯಾಮ ಮಾಡಬಹುದು.
  • ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಅಥವಾ ಔಷಧಿಯುಕ್ತ ಎಣ್ಣೆಗಳನ್ನು ಹಚ್ಚಿ ಸ್ನಾನಮಾಡಬಹುದು.
  • ಆಹಾರದಲ್ಲಿ ಹೆಚ್ಚಾಗಿ ಬಾರಿ ಅಥವಾ ಗೋಧಿಯ ಬಳಕೆ ಉತ್ತಮ. ಅದರಲ್ಲೂ ಎಣ್ಣೆ ಹಾಕದೆ ಮಾಡುವ ಒಣರೊಟ್ಟಿ ಅತ್ಯುತ್ತಮ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *