Ayurveda for health: avoid these activities after eatingಸಾಂದರ್ಭಿಕ ಚಿತ್ರ

ಊಟ ಮಾಡಿದ ಕೂಡಲೇ ಕೆಲ ಕಾರ್ಯಗಳನ್ನು ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ವಿಶೇಷವಾಗಿ ಬಿಸಿಲಿನಲ್ಲಿ ಹೆಚ್ಚು ಕಾಲ ಇರುವುದು, ಬೆಂಕಿಯ ಹತ್ತಿರ ಕೆಲಸ ಮಾಡುವುದು, ತಕ್ಷಣ ಪ್ರಯಾಣಕ್ಕೆ ಹೊರಡುವುದು, ಈಜು ಅಥವಾ ವಾಹನ ಚಾಲನೆ ಮಾಡುವುದನ್ನು ತಪ್ಪಿಸುವುದು ಉತ್ತಮ. ಇವು ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ.

ಆಹಾರ ಸೇವನೆ ಸಮಯ – ಋತುಗಳಿಗೆ ಅನುಗುಣವಾಗಿ ಬದಲಾವಣೆ ಅಗತ್ಯ

ಆಯುರ್ವೇದ ಪ್ರಕಾರ, ಹಗಲು-ರಾತ್ರಿ ಅವಧಿಯ ಬದಲಾವಣೆಯನ್ನು ಗಮನದಲ್ಲಿಟ್ಟು ಆಹಾರ ಸೇವನೆ ಸಮಯವನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಬೇಕು. ಹೇಮಂತ ಮತ್ತು ಶಿಶಿರ  ಋತುಗಳಲ್ಲಿ (ಮಾರ್ಚ್ 15 – ಮೇ 15) ರಾತ್ರಿ ಹೆಚ್ಚು ಇರುವುದರಿಂದ ಬೆಳಿಗ್ಗೆ ಬೇಗನೆ, ಅಂದರೆ 9 ಗಂಟೆಯೊಳಗೆ ಊಟ ಮಾಡುವುದು ಸೂಕ್ತ. ಗ್ರೀಷ್ಮ ಮತ್ತು ವರ್ಷಾ ಋತುಗಳಲ್ಲಿ (ಮೇ 15 – ಸೆಪ್ಟೆಂಬರ್ 15) ಹಗಲು ಹೆಚ್ಚು ಇರುವುದರಿಂದ ಮಧ್ಯಾಹ್ನ 12ರಿಂದ 3 ಗಂಟೆಯೊಳಗೆ ಊಟ ಮಾಡುವುದು ಉತ್ತಮ. ವಸಂತ ಋತುವಿನಲ್ಲಿ (ಮಾರ್ಚ್ 15 – ಮೇ 15) ಹಗಲು ಮತ್ತು ರಾತ್ರಿ ಸಮವಾಗಿರುವುದರಿಂದ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರೊಳಗೆ ಆಹಾರ ಸೇವಿಸಬೇಕು.

ಪ್ರತಿ ಋತುವಿಗೆ ತಕ್ಕ ಆಹಾರ ಪದಾರ್ಥಗಳನ್ನು ಸೇವಿಸುವುದು ಮುಖ್ಯ. ದಿನಕ್ಕೆ ಎರಡು ಬಾರಿ ಊಟ ಮಾಡುವವರಲ್ಲಿ ಸಾಮಾನ್ಯವಾಗಿ ಬೆಳಿಗ್ಗೆ 9ರಿಂದ 9:45ರೊಳಗೆ ಮತ್ತು ರಾತ್ರಿ 7:30ರಿಂದ 8ರೊಳಗೆ ಊಟ ಮಾಡುವುದು ಒಳ್ಳೆಯದು. ಇದರಲ್ಲಿ ರಾತ್ರಿ ಊಟದ ಪ್ರಮಾಣ ಬೆಳಗಿನ ಊಟಕ್ಕಿಂತ ಕಡಿಮೆ ಇರಬೇಕು. ಇವೆಲ್ಲ ಆಯುರ್ವೇದದಲ್ಲಿ ಹೇಳಿರುವ ನಿಯಮಗಳು, ಆದರೆ ಇಂದಿನ ಜೀವನಶೈಲಿಯಲ್ಲಿ ಇವುಗಳನ್ನು ಹಲವರು ಪಾಲಿಸುತ್ತಿಲ್ಲ.

ಇಂದಿನ ಆಹಾರ ಪದ್ಧತಿ – ಸರಳ ಮಾರ್ಗದರ್ಶನ

ದೇಹವು ಒಂದು ಯಂತ್ರದಂತಿದೆ. ಯಂತ್ರಕ್ಕೆ ಇಂಧನ ಹೇಗೆ ಮುಖ್ಯವೋ, ನಮ್ಮ ದೇಹಕ್ಕೆ ಆಹಾರವೂ ಅಷ್ಟೇ ಮುಖ್ಯ. ಆದರೆ ತಪ್ಪಾದ ಸಮಯದಲ್ಲಿ ಅಥವಾ ಅತಿಯಾಗಿ ಆಹಾರ ಸೇವಿಸಿದರೆ ದೇಹಕ್ಕೆ ಹಾನಿಯಾಗುತ್ತದೆ. ಇಂತಹ ತಪ್ಪುಗಳು ನಮ್ಮದೇ ಕಾರಣದಿಂದಾಗಿದ್ದರೂ, ನಾವು ಗಮನ ಕೊಡದೆ ಬಿಡುತ್ತೇವೆ. ಇಂದಿನ ವೇಗದ ಜೀವನದಲ್ಲಿ ಆಯುರ್ವೇದದ ಎಲ್ಲಾ ನಿಯಮಗಳನ್ನು ಪಾಲಿಸುವುದು ಕಷ್ಟವಾದರೂ, ಕನಿಷ್ಠ ಕೆಲವು ಸರಳ ನಿಯಮಗಳನ್ನು ಪಾಲಿಸುವುದು ನಮ್ಮ ಆರೋಗ್ಯಕ್ಕಾಗಿ ಬಹಳ ಅಗತ್ಯವಾಗಿದೆ.

ಸರಳವಾಗಿ ಪಾಲಿಸಬಹುದಾದ ನಿಯಮಗಳು:

ದಿನಕ್ಕೆ ಸಾಧ್ಯವಾದಷ್ಟು ಎರಡು ಬಾರಿ ಮಾತ್ರ ಊಟ ಮಾಡುವುದು ಉತ್ತಮ. ಅಗತ್ಯವಿದ್ದರೆ ಮಧ್ಯದಲ್ಲಿ ಋತುವಿಗೆ ತಕ್ಕ ದ್ರವಾಹಾರವನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಬಹುದು. ಯಾವ ಋತು ನಡೆಯುತ್ತಿದೆಯೋ, ಅದಕ್ಕೆ ತಕ್ಕ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡುವುದು ಆರೋಗ್ಯಕರ. ಪ್ರತಿದಿನ ಒಂದೇ ತರಹದ ಆಹಾರ ಸೇವಿಸುವುದನ್ನು ತಪ್ಪಿಸಿ, ವಿವಿಧತೆಯನ್ನು ಕಾಪಾಡಿಕೊಳ್ಳಿ.

ನಿಜವಾದ ಹಸಿವು ಬಂದಾಗ ಮಾತ್ರ ಊಟ ಮಾಡಬೇಕು. ಹಸಿವು ಮತ್ತು ಊಟದ ಸಮಯ ಒಂದೇ ರೀತಿಯಾಗಿ ಇರಲು ಆಹಾರದ ಪ್ರಮಾಣ ಮತ್ತು ಗುಣಮಟ್ಟವನ್ನು ಸರಿಯಾಗಿ ಹೊಂದಿಸಿಕೊಳ್ಳಬೇಕು. ತಿನ್ನುವ ವಿಷಯದಲ್ಲಿ ಅತಿರೇಕ ಅಥವಾ ತೋರಾಟ ಬೇಡ. ಊಟಕ್ಕೆ ಮುನ್ನ ಮಲ ಮತ್ತು ಮೂತ್ರ ವಿಸರ್ಜನೆ ಮಾಡಿಕೊಂಡಿರುವುದು ಒಳ್ಳೆಯದು. ಊಟ ಮಾಡುವಾಗ ದೇಹ, ಮನಸ್ಸು ಮತ್ತು ಇಂದ್ರಿಯಗಳು ಹಗುರವಾಗಿದ್ದು ಶಾಂತವಾಗಿರಬೇಕು.

ಆಹಾರ ಸೇವನೆಗೆ ದೇಹದಿಂದ ಕೆಲವು ಸೂಚನೆಗಳು ಬರುತ್ತವೆ. ಉದಾಹರಣೆಗೆ, ಶುದ್ಧವಾದ  ತೇಗು (ಉದ್ಗಾರ) ಬರುತ್ತಿರುವುದು, ಹಿಂದಿನ ಊಟ ಸರಿಯಾಗಿ ಜೀರ್ಣವಾಗಿರುವುದು, ದೇಹದಲ್ಲಿ ಮತ್ತೆ ಹಸಿವು ಮೂಡುವುದು ಮತ್ತು ನಾಲಿಗೆಗೆ ರುಚಿ ಚೆನ್ನಾಗಿ ಅನಿಸುವುದು. ಇವುಗಳೆಲ್ಲವೂ ಆರೋಗ್ಯದ ಪ್ರಮುಖ ಲಕ್ಷಣಗಳಾಗಿವೆ.

ಈ ಲಕ್ಷಣಗಳಲ್ಲಿ ಯಾವುದಾದರೂ ಕಾಣಿಸದಿದ್ದರೆ, ಅದು ದೇಹದಲ್ಲಿ ಯಾವುದೋ ಅಸಮತೋಲನವಿದೆ ಎಂಬ ಸೂಚನೆ. ಅಂಥ ಸಮಯದಲ್ಲಿ ಊಟ ಮಾಡುವುದು ಸರಿಯಲ್ಲ. ತಪ್ಪಾದ ಸಮಯದಲ್ಲಿ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆ ಹಾಳಾಗಿ, ರೋಗಕ್ಕೆ ತುತ್ತಾಗುತ್ತೀರಿ.

ಆಹಾರ ಸೇವನೆ ಮತ್ತು ಕಾಲದ ಮಹತ್ವ

ಹಗಲು-ರಾತ್ರಿ ಬದಲಾವಣೆ, ಹವಾಮಾನದ ತಾಪಮಾನ ವ್ಯತ್ಯಾಸ ಇವುಗಳನ್ನೆಲ್ಲ ನಾವು “ಕಾಲ” ಎಂದು ಕರೆಯುತ್ತೇವೆ. ಈ ಬದಲಾವಣೆಗಳು ಪರಿಸರದಲ್ಲಷ್ಟೇ ಅಲ್ಲ, ನಮ್ಮ ವಯಸ್ಸು ಮತ್ತು ಆರೋಗ್ಯದ ಸ್ಥಿತಿಗಳಲ್ಲೂ ಕಂಡುಬರುತ್ತವೆ. ಆದ್ದರಿಂದ ಆಯುರ್ವೇದದಲ್ಲಿ ಕಾಲವನ್ನು ಎರಡು ಭಾಗಗಳಾಗಿ ವಿವರಿಸಲಾಗಿದೆ. ಋತುಗಳ ಆಧಾರಿತ ಕಾಲ ಮತ್ತು ದೇಹದ/ರೋಗದ ಸ್ಥಿತಿಯ ಆಧಾರಿತ ಕಾಲ.

ಮಗುವಿನ ಆಹಾರ ಪದ್ಧತಿ, ಯುವಕರ ಅಥವಾ ವೃದ್ಧರ ಆಹಾರ ಪದ್ಧತಿಯಿಂದ ಭಿನ್ನವಾಗಿರುತ್ತದೆ. ಹಾಗೆಯೇ, ಆರೋಗ್ಯವಾಗಿರುವಾಗ ತೆಗೆದುಕೊಳ್ಳುವ ಆಹಾರ ಮತ್ತು ರೋಗದ ಸಮಯದಲ್ಲಿ ತೆಗೆದುಕೊಳ್ಳುವ ಆಹಾರ ಒಂದೇ ಆಗುವುದಿಲ್ಲ. ಉದಾಹರಣೆಗೆ, ಜ್ವರದ ಆರಂಭದಲ್ಲಿ ಕೊಡುವ ಆಹಾರ ಮತ್ತು ಜ್ವರ ಕಡಿಮೆಯಾಗುವಾಗ ಕೊಡುವ ಆಹಾರ ಬೇರೆ. ಅದೇ ರೀತಿ, ಬೇರೆ ಬೇರೆ ರೋಗಗಳಿಗೆ ಆಹಾರ ಕ್ರಮವೂ ಬದಲಾಗುತ್ತದೆ. ಆದ್ದರಿಂದ ಆಹಾರ ತಯಾರಿಕೆ ಮತ್ತು ಸೇವನೆ ಎರಡರಲ್ಲೂ ಸರಿಯಾದ ಸಮಯ ಮತ್ತು ಪರಿಸ್ಥಿತಿಯನ್ನು ಗಮನಿಸುವುದು ತುಂಬಾ ಮುಖ್ಯವಾಗಿದೆ.

ಯಾವಾಗ ಊಟ ಮಾಡಬೇಕು? (ಸರಿಯಾದ ಸಮಯದ ಲಕ್ಷಣಗಳು)

  • ಮಲ ಮತ್ತು ಮೂತ್ರ ವಿಸರ್ಜನೆ ಆಗಿರಬೇಕು
  • ಮನಸ್ಸು ಶಾಂತವಾಗಿರಬೇಕು
  • ದೇಹದ ದೋಷಗಳು ಸಮತೋಲನದಲ್ಲಿರಬೇಕು
  • ಶುದ್ಧವಾದ ತೇಗು ಬರುತ್ತಿರಬೇಕು
  • ನಿಜವಾದ ಹಸಿವು ಇರಬೇಕು
  • ದೇಹದಲ್ಲಿನ ವಾಯು ಹೊರ ಹೋಗಿರಬೇಕು
  • ಇಂದ್ರಿಯಗಳು ಸ್ವಚ್ಛವಾಗಿರಬೇಕು
  • ದೇಹ ಹಗುರವಾಗಿರಬೇಕು.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *