ಕೊಲೆಸ್ಟ್ರಾಲ್ (Cholesterol) ಎಂಬುದು ಒಂದು ಮೃದುವಾದ ಕೊಬ್ಬು ಪದಾರ್ಥ. ಇದು ನಮ್ಮ ಶರೀರದ ಯಕೃತ್ ಹಾಗೂ ನಾವು ಸೇವಿಸುವ ಜಿಡ್ಡಿನ ಪದಾರ್ಥಗಳಾದ ಹಾಲು, ಬೆಣ್ಣೆ, ತುಪ್ಪ, ಮೊಸರು, ಮೊಟ್ಟೆ, ಮಾಂಸಾಹಾರ ಮುಂತಾದವುಗಳಿಂದ ಉಂಟಾಗುತ್ತದೆ. ಕೊಲೆಸ್ಟ್ರಾಲ್‌ನಿಂದ ದೇಹದ ತೂಕ ಹೆಚ್ಚಾಗುತ್ತದೆ. ಶರೀರದ ಆರೋಗ್ಯಯುತ ಚಟುವಟಿಕೆಗೆ ಕೊಲೆಸ್ಟ್ರಾಲ್ ಬೇಕೇಬೇಕು. ಆದರೆ ಈ ಕೊಲೆಸ್ಟ್ರಾಲ್ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾದಾಗ ಅದು ರಕ್ತನಾಳಗಳಲ್ಲಿ ಸಂಚಿತವಾಗಿ ಅವುಗಳ ಕಾರ್ಯವನ್ನು ಕೆಡಿಸುತ್ತದೆ. ಈ ಕೊಲೆಸ್ಟ್ರಾಲ್ ಶರೀರದಲ್ಲಿ ಯಕೃತ್‌ನಿಂದ ಹೊರಗೂ ಹಾಗೂ ಒಳಗೂ ಹಲವು ಸಂಯುಕ್ತ ಸಸಾರಜನಕ ವಸ್ತುಗಳಾದ ‘ಪ್ರೋಟೀನು’ಗಳೊಂದಿಗೆ ಸರಬರಾಜಾಗುತ್ತದೆ. ಇದನ್ನು ಆಧರಿಸಿ ಎರಡು ರೀತಿಯ ಕೊಲೆಸ್ಟ್ರಾಲ್‌ಗಳನ್ನು ವಿಂಗಡಿಸಿದ್ದಾರೆ. ಒಂದು ಅಲ್ಪಸಾಂದ್ರತೆ ಯುಳ್ಳ ಪ್ರೋಟೀನ್ ಘಟಕಗಳು ಇದಕ್ಕೆ ಎಲ್.ಡಿ.ಎಲ್ ಎಂದು, ಮತ್ತೊಂದು ಹೆಚ್ಚಾದ ಸಾಂದ್ರತೆಯುಳ್ಳ ಪ್ರೋಟೀನ್‌ಗಳು ಇದಕ್ಕೆ ಎಚ್.ಡಿ.ಎಲ್. ಎಂದು ಕರೆಯುತ್ತಾರೆ. ಎಲ್.ಡಿ.ಎಲ್.ಗೆ ಕೆಟ್ಟ ಕೊಲೆಸ್ಟ್ರಾಲ್ ಎಂಬ ಬಿರುದು ಇದ್ದು, ಇದು ಕೊಲೆಸ್ಟ್ರಾಲ್‌ನ್ನು ಯಕೃತ್ತಿನಿಂದ ಬೇರೆ ಜೀವಕೋಶಗಳಿಗೆ ಒಯ್ಯುತ್ತದೆ. ಹಾಗೆಯೇ ಎಚ್.ಡಿ.ಎಲ್.ಗೆ ಒಳ್ಳೆಯ ಕೊಲೆಸ್ಟ್ರಾಲ್ ಎಂಬ ಬಿರುದಿದ್ದು ಅದು ಶರೀರದಲ್ಲಿ ಹೆಚ್ಚಾದ ಕೊಲೆಸ್ಟ್ರಾಲ್‌ನ್ನು ಯಕೃತ್‌ಗೆ ವಾಪಸ್ ತರುತ್ತದೆ. ಸಾಮಾನ್ಯವಾಗಿ ಹೆಚ್ಚು ಪ್ರಮಾಣ ಕೊಲೆಸ್ಟ್ರಾಲ್ ಉಳ್ಳವರು ಚೀಸ್, ಹಾಲು, ಮಾಂಸ ಇವುಗಳಲ್ಲಿ ಗಟ್ಟಿಯಾದ ಕೊಬ್ಬಿನಂಶ (Saturated fat) ಹೆಚ್ಚಾಗಿರುವುದರಿಂದ ಇವುಗಳ ಸೇವನೆಯನ್ನು ಕಡಿಮೆ ಮಾಡಿ, ಕೊಲೆಸ್ಟ್ರಾಲ್ ಕಡಮೆ ಇರುವ ಆಲಿವ್ ಎಣ್ಣೆ, ಕಡಲೆಕಾಯಿ ಎಣ್ಣೆ, ಕಾರ್ನ್ ಆಯಲ್ ಬಳಸುವುದು ಉತ್ತಮ. ಜೊತೆಯಲ್ಲಿ ನಿಯಮಿತವಾದ ವ್ಯಾಯಾಮಗಳನ್ನು ನಡೆಸಿ, ಧೂಮಪಾನ, ಮದ್ಯಪಾನಗಳನ್ನು ವರ್ಜಿಸಿ ದೇಹದ ತೂಕವನ್ನು ಕಡಮೆ ಮಾಡಿಕೊಳ್ಳಬೇಕು. ಮನೆ ಮದ್ದುಗಳು ಒಣಬೀಜಗಳಾದ ಬಾದಾಮಿ, ಪಿಸ್ತಾ, ಕಡಲೆಕಾಯಿ ಮುಂತಾದವುಗಳಲ್ಲಿ ವಿಟಮಿನ್ ಇ, ಸೆಲೇನಿಯಂ, ಉತ್ತಮ ಕೊಬ್ಬಿನಂಶಗಳು ಅಧಿಕವಾಗಿರುತ್ತವೆ. ಇವುಗಳನ್ನು ದಿನಂಪ್ರತಿ ಸುಮಾರು 1.5 ಔನ್ಸ್‌ಗಳಷ್ಟು ಪ್ರಮಾಣದಲ್ಲಿ ಸೇವಿಸಬಹುದು. ಕಿತ್ತಳೆ ರಸ, ಹಸಿ ತರಕಾರಿಗಳಲ್ಲಿ ಸಸ್ಯಕೋಶಕಗಳು ಹೆಚ್ಚಾಗಿದ್ದು ಅವು ಕೊಲೆಸ್ಟ್ರಾಲ್‌ನ ಸೇರ್ಪಡೆಯನ್ನು ನಿಯಂತ್ರಿಸುತ್ತವೆ ಹಾಗೂ ಎಲ್.ಡಿ.ಎಲ್. ಕೊಬ್ಬನ್ನು ಕಡಿಮೆಮಾಡುತ್ತವೆ. ಸೋಯಾದಿಂದ ಮಾಡಿದ ಆಹಾರ ಪದಾರ್ಥಗಳನ್ನು ಮಾಂಸಕ್ಕೆ ಬದಲಾಗಿ ಉಪಯೋಗಿಸಬಹುದು. ಸೋಯಾ ಸೇವನೆಯು ಶೇ.3 ಭಾಗದಷ್ಟು ಕೆಟ್ಟ ಕೊಬ್ಬನ್ನು ನಿಯಂತ್ರಿಸುತ್ತದೆ. ಇಷ್ಟಲ್ಲದೇ ನಿಯಮಿತವಾಗಿ ಬೆಳ್ಳುಳ್ಳಿ, ಮೆಂತ್ಯ, ಚಕ್ಕೆ, ಸಾಸಿವೆ ಪದಾರ್ಥಗಳನ್ನು ಆಹಾರದಲ್ಲಿ ಬಳಸುವುದು ಕೊಲೆಸ್ಟ್ರಾಲ್ ನ್ನು ಕಡಮೆಗೊಳಿಸುತ್ತದೆ. ಕೊನೆಯದಾಗಿ ಮಾನಸಿಕ ಉದ್ವೇಗ ಒತ್ತಡ ಉದ್ರೇಕಗಳು ಹಾಗೂ ನಕಾರಾತ್ಮಕ ಧೋರಣೆಗಳು ಕೊಲೆಸ್ಟ್ರಾಲ್ ಕೊಬ್ಬನ್ನು ಹೆಚ್ಚು ಮಾಡುತ್ತವೆಂದು ಸಂಶೋಧನೆಗಳು ತಿಳಿಸಿವೆ. ಹಾಗಾಗಿ ನಿಯಮಿತವಾದ ಧ್ಯಾನ, ಮನಶಾಂತಿ ಕೊಲೆಸ್ಟ್ರಾಲ್ ಅನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಹಾಯಕವೆಂದು ಅರಿತು ಮನಸ್ಸಿನ ಸಮತೋಲನವನ್ನು ಕಾಯ್ದಿಟ್ಟುಕೊಳ್ಳುವುದು ತುಂಬ ಅಗತ್ಯವಾಗಿದೆ. ಸೂಚನೆ: ಇವು ಯಾವ ಔಷಧಿಗಳ ಸಹಾಯವೂ ಇಲ್ಲದೆ ಕೊಲೆಸ್ಟ್ರಾಲ್‌ನ್ನು ತಗ್ಗಿಸುತ್ತವೆ. ಇವುಗಳನ್ನು ಮಾಡಿಯೂ ಕೊಲೆಸ್ಟ್ರಾಲ್ ಕಡಮೆಯಾಗದಿದ್ದರೆ ಆಗ ವೈದ್ಯರ ಸಲಹೆಯ ಮೇರೆಗೆ ಔಷಧಿಗಳನ್ನು ಸೇವಿಸ ಬೇಕಾಗುತ್ತದೆ. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಯುಗಾದಿ: ಬೇವು-ಬೆಲ್ಲ ತಿನ್ನುವುದರ ಹಿಂದಿನ ವೈಜ್ಞಾನಿಕ ಕಾರಣ Ayurveda Health Tips: ಋತುಗಳ ತಕ್ಕಹಾಗೆ ಜೀವನ ಕ್ರಮ, ವಸಂತದಲ್ಲಿ ಸೇವಿಸಬಹುದಾದ ಆಹಾರಗಳು