AI signals to be installed at Gadag junctions instead of green tarpaulinsಗದಗನಲ್ಲಿ ಅಳವಡಿಸಿರುವ ಹಸಿರು ತಾರ್ಪಲ್‌, ಎಐ ಸಿಗ್ನಲ್‌

ದ್ವಿಚಕ್ರ ವಾಹನ ಸವಾರರು (Two Wheeler Riders) ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ (Traffic signal) ಕಾಯುವಾಗ ಬೇಸಿಗೆಯ ಪ್ರಖರ ಬಿಸಿಲಿನಿಂದ ಸನ್‌ಸ್ಟ್ರೋಕ್‌ ಒಳಗಗಾದಿರಲಿ ಎಂಬ ಉದ್ದೇಶದಿಂದ ಗದಗ (Gadag) ನಗರದ ಮುಳುಗುಂದ ನಾಕಾ ಮತ್ತು ಪುಟ್ಟರಾಜ ಸರ್ಕಲ್‌ನಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ (Gadag District Police Department) ಮತ್ತು ನಗರಸಭೆ ಜಂಟಿಯಾಗಿ ನರ್ಸರಿ ಹಸಿರು ತಾರ್ಪಲ್‌ (ಹಸಿರಿನ ಪೆಂಡಾಲ್‌ಗಳನ್ನು) ಹಾಕಿದೆ.

ಕಳೆದ 2-3 ವರ್ಷಗಳಿಂದ ಈ ನರ್ಸರಿ ತಾರ್ಪಲ್‌ ಅನ್ನು ಜಿಲ್ಲಾ ಪೊಲೀಸ್‌ ಇಲಾಖೆ ಹಾಕುತ್ತಿದೆ. ಇದರಿಂದ, ಸಿಗ್ನಲ್‌ನಲ್ಲಿ ನಿಲ್ಲುವ ದ್ವಿಚಕ್ರವಾಹನ ಸವಾರರು ಬಿಸಿಲಾಘಾತದಿಂದ ತಪ್ಪಿಸಿಕೊಳ್ಳುತ್ತಾರೆ. ನೆರಳಲ್ಲಿ ನಿಂತು ಸ್ವಲ್ಪ ನಿರಾಳರಾಗಿ ಮುಂದೆ ಹೋಗುತ್ತಾರೆ. ಈ ರೀತಿ ವ್ಯವಸ್ಥೆ ಮಾಡಿದ ಜಿಲ್ಲಾ ಪೊಲೀಸ್‌ ಇಲಾಖೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಆದರೆ, ಮಳೆಗಾಲ ಶುರುವಾದ್ರೆ ಗಾಳಿ, ಮಳೆಗೆ ನರ್ಸರಿ ಹಸಿರು ತಾರ್ಪಲ್‌ ಹರಿದು ಹೋಗುತ್ತವೆ. ಕೆಲವೊಂದು ಸಾರಿ ನರ್ಸರಿ ತಾರ್ಪಲ್‌ನ ಪೆಂಡಾಲ್‌ನ ಕಬ್ಬಿಣದ ಕಂಬಗಳು ಬೆಂಡ್‌ ಆಗುತ್ತವೆ. ಬೆಂಡ್‌ ಆಗಿರುವ ಕಂಬಗಳನ್ನು ಸರಿಪಡಿಸಲು ಮತ್ತು ಹೊಸ ನರ್ಸರಿ ತಾರ್ಪಲ್‌ ಹಾಕಲು ಲಕ್ಷಾಂತರ ರೂಪಾಯಿ ಹಣ ಖರ್ಚಾಗುತ್ತದೆ.

ಎಷ್ಟು ವರ್ಷ ಅಂತ ಈರೀತಿ ತಾರ್ಪಲ್‌ ಹಾಕುವುದು? ಇದಕ್ಕೆ ಶಾಶ್ವತ ಪರಿಹಾರ ಇಲ್ಲವೇ? ತಾತ್ಕಾಲಿಕ ತಾರ್ಪಲ್‌ ಅಳವಡಿಸುವುದಕ್ಕಿಂತ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಲ್ಲವೇ? ಹೊಸ ನರ್ಸರಿ ತಾರ್ಪಲ್‌ ಎಷ್ಟು ವರ್ಷ ಅಂತ ಹಾಕುವುದು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇದಾಗಿದೆ.

ಬೇಸಿಗೆಯಲ್ಲಿ ಮಟ ಮಟ ಮಧ್ಯಾಹ್ನ ಮುಳುಗುಂದ ನಾಕಾ ಸಿಗ್ನಲ್‌ನಲ್ಲಿ 2 ನಿಮಿಷ 25 ಸೆಕೆಂಡ್‌ ಅಂದ್ರೆ 145 ಸೆಕೆಂಡ್‌ ನಿಲ್ಲಬೇಕು. ಗದಗಿನ ಮಧ್ಯಾಹ್ನ ಬಿಸಿಲಿನಲ್ಲಿ ಇಷ್ಟು ಹೊತ್ತು ನಿಲ್ಲುವುದೆಂದರೇ ಸಾಹಸ ಮಾಡಿದಂತೆ. ಹೀಗಾಗಿ, ನರ್ಸರಿ ಹಸಿರು ತಾರ್ಪಲ್‌ ಅಳವಡಿಸಲಾಗಿದೆ. ಆದ್ರೆ, ಇದರ ಬದಲಾಗಿ ಸಿಗ್ನಲ್‌ ಸಮಯವನ್ನು ಕಡಿಮೆ ಮಾಡಿ. ಬೇಗ ಸಿಗ್ನಲ್‌ ಬಿಡುವುದರಿಂದ ದ್ವಿಚಕ್ರ ವಾಹನ ಸವಾರರು ಹೆಚ್ಚು ಹೊತ್ತು ನಿಲ್ಲುವುದು ತಪ್ಪುತ್ತದೆ.

ಆದ್ರೆ, ಮುಳಗುಂದ ನಾಕಾ ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ ಜಂಕ್ಷನ್‌ ಆಗಿದೆ. ಈ ಜಂಕ್ಷನ್‌ಗೆ ನಾಲ್ಕು ರಸ್ತೆಗಳು ಬಂದು ಸೇರುತ್ತವೆ. ಒಂದು ಹುಬ್ಬಳ್ಳಿ ರಸ್ತೆ, ಎರಡು ಮುಳುಗುಂದ ರಸ್ತೆ, ಮೂರು ಮತ್ತು ನಾಲ್ಕು ನಗರದ ಒಳಗಿನಿಂದ ಬಂದು ಸೇರುವ ರಸ್ತೆಗಳು. ಇದರಿಂದ ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತದೆ. ಹೀಗಾಗಿ 145 ಸೆಕೆಂಡಿನ ಸಿಗ್ನಲ್‌ ಅಳವಡಿಸಲಾಗಿದೆ ಎಂದು ಓರ್ವ ಪೊಲೀಸ್‌ ಅಧಿಕಾರಿ ತಿಳಿಸಿದರು.

ಸರಿ, ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತದೆ ಎಂದು ಹೇಳುತ್ತೀರಿ, ಆದ್ರೆ, ಮುಳಗುಂದ ನಾಕಾದಲ್ಲಿ ಬೆಳಗ್ಗೆ 9 ಗಂಟೆಗೆ ಸಿಗ್ನಲ್‌ ಶುರುವಾಗುತ್ತದೆ. ರಾತ್ರಿ 8 ಅಥವಾ 8:30ಕ್ಕೆ ಸಿಗ್ನಲ್‌ ಆಫ್‌ ಆಗುತ್ತದೆ. ಸಿಗ್ನಲ್‌ ಆನ್‌ ಇರುವುದು ಕೇವಲ 12 ತಾಸು ಮಾತ್ರ. ಇಲ್ಲಿ ನೀವೇ ಊಹಿಸಿ ಎಷ್ಟು ಸಂಚಾರ ದಟ್ಟಣೆ ಉಂಟಾಗಬಹುದೆಂದು.

ಈ 12 ತಾಸಿನಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮಾತ್ರ ಬಿಸಿಲು. ಕೇವಲ ಐದು ತಾಸಿನ ಬಿಸಿಲಿಗಾಗಿ ನರ್ಸರಿ ಹಸಿರು ತಾರ್ಪಲ್‌ ಅಳವಡಿಸಲಾಗಿದೆ. ನರ್ಸರಿ ಹಸಿರು ತಾರ್ಪಲ್‌ ಬದಲಾಗಿ ಎಐ ಸಿಗ್ನಲ್‌ ಅಳವಡಿಸಿ!

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕುಗ್ಗಿಸಿದ ಎಐ

ಬೆಂಗಳೂರಿನ ಟ್ಯಾಗೋರ್ ಪಾರ್ಕ್ ಜಂಕ್ಷನ್, ವಿಶ್ವೇಶ್ವರಪುರ ಕಾಲೇಜಿನ ಜಂಕ್ಷನ್, ಪೈ ವಿಸ್ತಾ ಕೆ.ಆರ್. ರಸ್ತೆ, ಜಯನಗರ 4ನೇ ಮುಖ್ಯರಸ್ತೆಯ 40ನೇ ಕ್ರಾಸ್ ಹಾಗೂ 36ನೇ ಕ್ರಾಸ್, ಜಯನಗರದ ನ್ಯೂ ಡಯಾಗೊನಲ್ ರಸ್ತೆ, ಜಯನಗರ 4ನೇ ಮುಖ್ಯರಸ್ತೆಯ ಒಂಬತ್ತನೇ ಕ್ರಾಸ್‌ನಲ್ಲಿ ಸೇರಿದಂತೆ 165 ಜಂಕ್ಷನ್‌ಗಳಲ್ಲಿ ಎಐ ಸಿಗ್ನಲ್‌ಗಳನ್ನು ಅಳವಡಿಸಿ, ಬೆಂಗಳೂರು ಟ್ರಾಫಿಕ್‌ ಪೊಲೀಸರು ಯಶಸ್ಸು ಕಂಡಿದ್ದಾರೆ.

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಂಡು ಆಯಾ ರಸ್ತೆಗಳಲ್ಲಿನ ವಾಹನ ದಟ್ಟಣೆಯನ್ನು ಗ್ರಹಿಸಿ ಹಸಿರು ನಿಶಾನೆ ನೀಡುವ ‘ಅಡ್ಯಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್’ (ಎಟಿಸಿಎಸ್) ನಿಂದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂದಿದೆ.

ಎಐ ಸಿಗ್ನಲ್‌ ಹೇಗೆ ಕಾರ್ಯ ನಿರ್ವಹಿಸುತ್ತೆ

ಸಿಗ್ನಲ್‌ ಬಳಿಯ ರಸ್ತೆಗಳಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳ ದಟ್ಟಣೆ ಆಧರಿಸಿ ಹಸಿರು ದೀಪ ಬೆಳಗಿಸುವ ತಂತ್ರಜ್ಞಾನವೇ ಎಟಿಸಿಎಸ್ ಎನ್ನುವರು. ಇದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ.

ವೃತ್ತಗಳಿಗೆ ಹೊಂದಿಕೊಂಡಿರುವ ಎಲ್ಲ ರಸ್ತೆಗಳಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳ ದಟ್ಟಣೆಯನ್ನು ಈ ಕ್ಯಾಮೆರಾಗಳ ಮೂಲಕ ಎಟಿಸಿಎಸ್ ವ್ಯವಸ್ಥೆ ಗ್ರಹಿಸಲಿದೆ. ಯಾವ ರಸ್ತೆಯಲ್ಲಿ ಹೆಚ್ಚು ವಾಹನಗಳು ಇವೆಯೋ ಅಂಥ ಮಾರ್ಗದ ‘ಹಸಿರು’ ಸಿಗ್ನಲ್ ನೀಡಿ ಮುಂದಕ್ಕೆ ಕಳುಹಿಸುತ್ತದೆ.

ನಿಗದಿತ ಸಮಯಕ್ಕೂ ಮೊದಲೇ ರಸ್ತೆ ಖಾಲಿಯಾದರೆ ‘ಕೆಂಪು’ ಸಿಗ್ನಲ್‌ ನೀಡಿ ಬೇರೆ ರಸ್ತೆಯಲ್ಲಿರುವ ವಾಹನಗಳ ಸಂಚಾರಕ್ಕೆ ‘ಹಸಿರು’ ಸಿಗ್ನಲ್ ನೀಡುತ್ತದೆ. ‘ಕೇವಲ ಒಂದೇ ವೃತ್ತದ ವಾಹನಗಳ ದಟ್ಟಣೆಯನ್ನು ಈ ವ್ಯವಸ್ಥೆ ಅಳೆಯುವುದಿಲ್ಲ. ಬದಲಿಗೆ ಅಕ್ಕ-ಪಕ್ಕದಲ್ಲಿರುವ ವೃತ್ತಗಳ ವಾಹನ ದಟ್ಟಣೆಯನ್ನೂ ಗ್ರಹಿಸುತ್ತದೆ.

ಒಂದು ವೃತ್ತದ ದಟ್ಟಣೆಯಿಂದ ಮತ್ತೊಂದು ವೃತ್ತದ ದಟ್ಟಣೆ ಹೆಚ್ಚಾಗದಂತೆ ಸಿಗ್ನಲ್‌ಗಳ ನಿರ್ವಹಣೆ ಮಾಡಲಿದೆ. ಹೀಗಾಗಿ ದಟ್ಟಣೆ ನಿಯಂತ್ರಣಕ್ಕೆ ಬಂದಿದೆ.

ಗದಗಿನಲ್ಲಿ ಏಕೆ ಸಾಧ್ಯವಿಲ್ಲ

ಇದೇ ರೀತಿಯ ಎಐ ಸಗ್ನಿಲ್‌ಗಳನ್ನು ಮುಳುಗುಂದ ನಾಕಾ ಜಕ್ಷನ್‌ನಲ್ಲಿ ಅಳವಡಿಸಿದರೆ ಉತ್ತಮ ಅಲ್ಲವೇ? ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಿ, ದ್ವಿಚಕ್ರ ವಾಹನ ಸವಾರರು ಹೆಚ್ಚುಹೊತ್ತು ಬಿಸಿಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಜೊತೆಗೆ ಸಮಯವೂ ಉಳಿಯುತ್ತದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *