central-government-urges-karnataka-to-promote-rural-cinema-theatresಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೊಂದಿಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಚಂಚಲ್ ಕುಮಾರ್ ಸಭೆ

ಬೆಂಗಳೂರು, ಅ. 31: ರಾಜ್ಯದ ಮಾಧ್ಯಮ ಮತ್ತು ಮನರಂಜನಾ ವಲಯವನ್ನು ಬಲಪಡಿಸುವ ದೃಷ್ಟಿಯಿಂದ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಚಂಚಲ್ ಕುಮಾರ್ ಅವರು ಶುಕ್ರವಾರ (ಅ.30) ರಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೊಂದಿಗೆ ಸಭೆ ನಡೆಸಿದರು.

ಬೆಂಗಳೂರಿನ ಆಕಾಶವಾಣಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಮಾಧ್ಯಮ ಮತ್ತು ಮನರಂಜನಾ ವಲಯ ಸಾಂಸ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ಸುಗಮ ವ್ಯವಹಾರಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು ಸೇರಿದಂತೆ ಹಲವು ಉಪಕ್ರಮಗಳ ಕುರಿತು ಚರ್ಚಿಸಲಾಯಿತು.

ನಾವೀನ್ಯತೆಗೆ ಉತ್ತೇಜನ ನೀಡುವುದು, ಉದ್ಯಮಗಳಿಗೆ ಸೂಕ್ತ ಪಾಲುದಾರರನ್ನು ಗುರುತಿಸಿ ಸಂಪರ್ಕ ಕಲ್ಪಿಸುವುದು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶಾವಕಾಶ ಕಲ್ಪಿಸುವ ಉದ್ದೇಶದಿಂದ, ವೇವ್ ಎಕ್ಸ್ ಕಾರ್ಯಕ್ರಮದಲ್ಲಿ ಕರ್ನಾಟಕ ಮೂಲದ ನವೋದ್ಯಮಗಳು ಭಾಗವಹಿಸಲು ಅಗತ್ಯವಾದ ಅನುಕೂಲಗಳನ್ನು ಕಲ್ಪಿಸುವಂತೆ ಹಾಗೂ ವೇವ್ಸ್ ಬಜಾರ್‌ನಲ್ಲಿ ಕಂಟೆಂಟ್‌ ನಿರ್ಮಾಪಕರು, ಸ್ಟುಡಿಯೋಗಳು, ಖರೀದಿದಾರರು ಮತ್ತು ವಿತರಕರನ್ನು ಒಳಗೊಳ್ಳಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಚಂಚಲ್‌ ಕುಮಾರ್‌ ಸಲಹೆ ನೀಡಿದರು.  

ಭಾರತೀಯ ಸಮೂಹ ಸಂವಹನ ಸಂಸ್ಥೆಯ (ಐಐಎಂಸಿ) ಸಹಯೋಗದೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ (ಡಿಐಪಿಆರ್) ಅಧಿಕಾರಿಗಳಿಗೆ ವ್ಯವಸ್ಥಿತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸರ್ಕಾರಿ ಸಂವಹನ ವ್ಯವಸ್ಥೆಯನ್ನು ಬಲಪಡಿಸುವುದು, ಪತ್ರಿಕಾ ಮತ್ತು ನಿಯತಕಾಲಿಕಗಳ ನೋಂದಣಿ ಕಾಯ್ದೆ, 2023ರ ಅಡಿಯಲ್ಲಿ ಡಿಜಿಟಲ್ ವ್ಯವಸ್ಥೆಗೆ ಪರಿವರ್ತನೆಯ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸೂಚಿಸಿದರು.

ಪ್ರೆಸ್ ಸೇವಾ ಪೋರ್ಟಲ್‌ನಲ್ಲಿ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡುವುದು, ಪ್ರಾದೇಶಿಕ ಭಾಷೆಯ ಚಲನಚಿತ್ರಗಳು ಹೆಚ್ಚಿನ ಜನರನ್ನು ತಲುಪಲು ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ವೆಚ್ಚದ ಚಿತ್ರಮಂದಿರಗಳನ್ನು ಉತ್ತೇಜಿಸುವುದು ಹಾಗೂ ಕೇಬಲ್ ಆಪರೇಟರ್‌ಗಳಿಗೆ ಪಾರದರ್ಶಕ ಮತ್ತು ನಿಗದಿತ ಕಾಲಮಿತಿಯೊಳಗಿನ ‘ರೈಟ್ ಆಫ್ ವೇ’ (Right of Way) ವ್ಯವಸ್ಥೆಯನ್ನು ರೂಪಿಸುವುದು ಸೇರಿದಂತೆ ಇತರ ಪ್ರಮುಖ ವಿಷಯಗಳ ಬಗ್ಗೆಯೂ ಸಲಹೆ ನೀಡಿದರು.

ಈ ಮಧ್ಯೆ, ಬೆಂಗಳೂರಿನಲ್ಲಿಂದು ಆಕಾಶವಾಣಿ ಕೇಂದ್ರದಲ್ಲಿ ಸಚಿವಾಲಯದ ಅಧೀನದಲ್ಲಿರುವ ವಿವಿಧ ಮಾಧ್ಯಮ ಘಟಕಗಳ ಮುಖ್ಯಸ್ಥರೊಂದಿಗೂ ಕಾರ್ಯದರ್ಶಿಯವರು ಸಂವಾದ ನಡೆಸಿದರು. ಈ ಸಭೆಯಲ್ಲಿ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಕೃಷ್ಣ ಕುಮಾರ್ ನಿರಾಲಾ ಅವರೂ ಉಪಸ್ಥಿತರಿದ್ದರು.

ಸಂವಾದದ ಸಂದರ್ಭದಲ್ಲಿ ಮಾತನಾಡಿದ ಕಾರ್ಯದರ್ಶಿಯವರು, ಇಂದಿನ ಜಗತ್ತಿನಲ್ಲಿ ಡಿಜಿಟಲ್ ಮಾಧ್ಯಮದ ಹೆಚ್ಚುತ್ತಿರುವ ಪಾತ್ರವನ್ನು ಒತ್ತಿಹೇಳಿದರು. ಸರ್ಕಾರದ ಕಲ್ಯಾಣ ಯೋಜನೆಗಳು ಮತ್ತು ಉಪಕ್ರಮಗಳ ಕುರಿತಾದ ವಿಶ್ವಾಸಾರ್ಹ ಮಾಹಿತಿಯನ್ನು ಹೆಚ್ಚಿನ ಜನರಿಗೆ ತಲುಪಿಸಲು ಡಿಜಿಟಲ್ ಮಾಧ್ಯಮಗಳನ್ನು ವ್ಯಾಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಮಾಧ್ಯಮ ಘಟಕಗಳಿಗೆ ಕರೆ ನೀಡಿದರು. ಸಾರ್ವಜನಿಕ ಕಲ್ಯಾಣಕ್ಕೆ ಸಂಬಂಧಿಸಿದ ಮಾಹಿತಿಯ ಪ್ರಚಾರವನ್ನು ವಿಸ್ತರಿಸಲು ಹಾಗೂ ಸರ್ಕಾರದ ಉಪಕ್ರಮಗಳ ಪ್ರಯೋಜನಗಳು ಉದ್ದೇಶಿತ ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಡಿಜಿಟಲ್ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮಹತ್ವವನ್ನು ಕಾರ್ಯದರ್ಶಿಯವರು ಒತ್ತಿಹೇಳಿದರು.

ಮಾಧ್ಯಮ ಘಟಕಗಳ ಕಾರ್ಯಚಟುವಟಿಕೆಗಳಿಗೆ ಹೊಸ ದೃಷ್ಟಿಕೋನ, ನವೀನ ಆಲೋಚನೆಗಳು ಮತ್ತು ಹೊಸ ಕಾರ್ಯವಿಧಾನವನ್ನು ತರಲು ಯುವ ಪ್ರತಿಭೆಗಳನ್ನು ಅವುಗಳಲ್ಲಿ ಸೇರ್ಪಡೆಗೊಳಿಸುವ ಅಗತ್ಯವನ್ನೂ ಕಾರ್ಯದರ್ಶಿಯವರು ಒತ್ತಿಹೇಳಿದರು. ಸಭೆಯಲ್ಲಿ ವಿವಿಧ ಮಾಧ್ಯಮ ಘಟಕಗಳ ಸಾಧನೆಗಳು ಹಾಗೂ ಅವುಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಯೂ ಚರ್ಚೆಗಳು ನಡೆದಿದ್ದು, , ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡರು.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *