ಕರ್ನಾಟಕವನ್ನು ಇತ್ತೀಚಿನ ದಿನಗಳಲ್ಲಿ ಸೂಜಿಗಲ್ಲಿನಂತೆ ಸೆಳೆದ ವ್ಯಕ್ತಿಗಳಲ್ಲಿ ಒಬ್ಬರು ‘ಕೆಫೆ ಕಾಫಿ ಡೇ’ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ. ಯಶಸ್ವಿ (?) ಉದ್ಯಮಿಯಾಗಿ ಹಾಗೂ ಮಾಜಿ ಸಿಎಂ ದಿ. ಎಸ್.ಎಂ. ಕೃಷ್ಣ ಅವರ ಅಳಿಯನಾಗಿ ಅವರ ಹೆಸರು ನಾಡಿನೆಲ್ಲೆಡೆ ಚಿರಪರಿಚಿತ. ಆದರೆ, ಇಂಥಹದ್ದೊಂದು ಪ್ರಭಾವಿ ವ್ಯಕ್ತಿ ಏಳು ವರ್ಷಗಳ ಹಿಂದೆ (2019 ರಲ್ಲಿ) ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದು ಇಡೀ ಉದ್ಯಮ ಜಗತ್ತನ್ನು, ರಾಜ್ಯವನ್ನು ಹಾಗೂ ವಿಶೇಷವಾಗಿ ಅವರ ತವರೂರು ಚಿಕ್ಕಮಗಳೂರನ್ನು ತಲ್ಲಣಗೊಳಿಸಿತ್ತು. ಆಗ ಎಲ್ಲರ ತಲೆಯಲ್ಲೂ ಬಂದ ಮೊದಲ ಪ್ರಶ್ನೆ- ʼಆಗರ್ಭ ಶ್ರೀಮಂತನಿಗೆ ಅಂಥದ್ದೇನಾಯ್ತು? ಯಾಕವರು ಈ ಕಠಿಣ ನಿರ್ಧಾರ ಕೈಗೊಂಡರು?ʼ. ಈ ಜಿಜ್ಞಾಸೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವೇ ಈ ‘ಕಾಫಿ ಕಿಂಗ್’ ಪುಸ್ತಕ. ಸಿದ್ಧಾರ್ಥ ಏಕೆ ಆತ್ಮಹತ್ಯೆ ಮಾಡಿಕೊಂಡರು? ಜಗಮಗಿಸುತ್ತಿದ್ದ ಕಾಫಿ ಡೇ ಒಳಗೆ ನಿಜಕ್ಕೂ ಏನು ನಡೆದಿತ್ತು? ಈ ಪ್ರಶ್ನೆಗಳಿಗೆ ಹುಡುಕುತ್ತಾ ಹೊರಟ ಲೇಖಕರಾದ ರುಕ್ಮಿಣಿ ರಾವ್ ಹಾಗೂ ಪ್ರೊಸೇನ್‌ಜಿತ್ ದತ್ತಾ ಅವರು, ತಾವು ಕಂಡುಕೊಂಡ ಸತ್ಯಗಳನ್ನು ಹಸಿಹಸಿಯಾಗಿ ಈ ಪುಸ್ತಕದಲ್ಲಿ ದಾಖಲಿಸುತ್ತಾ ಹೋಗಿದ್ದಾರೆ. ಈ ಕೃತಿಯನ್ನು ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆ ಕನ್ನಡಕ್ಕೆ ತಂದಿದ್ದು, ಕಾರ್ತಿಕಾದಿತ್ಯ ಬೆಳ್ಗೋಡು ಅವರು ಸೊಗಸಾಗಿ ಅನುವಾದಿಸಿದ್ದಾರೆ. 2019ರ ಜುಲೈ 29ರಂದು ನೇತ್ರಾವತಿ ನದಿಯ ಸೇತುವೆ ಮೇಲೆ ವಿ.ಜಿ. ಸಿದ್ಧಾರ್ಥ ಕಾಣೆಯಾದ ನಂತರ ಅವರ ಚಾಲಕ ನೀಡಿದ ದೂರಿನ ಪ್ರತಿಯಿಂದಲೇ ಈ ಪುಸ್ತಕ ತೆರೆದುಕೊಳ್ಳುತ್ತದೆ. ನಂತರ ಕಥೆಯು ನೇರವಾಗಿ ಚಿಕ್ಕಮಗಳೂರಿನ ಶಂಕರಕೂಡಿಗೆಗೆ ಹೊರಳುತ್ತದೆ. ಅವರ ಮೂಲ ಕುಟುಂಬ, ಅದಕ್ಕೆ ಬೆಸೆದುಕೊಂಡ ಕಾಫಿ ಕೃಷಿಯನ್ನು ವಿವರಿಸುತ್ತಲೇ, ಗಂಗಯ್ಯ ಹೆಗ್ಡೆಯವರ ಪುತ್ರ ಸಿದ್ಧಾರ್ಥರ ಬೆಳೆವಣಿಗೆಯನ್ನು ಲೇಖಕರು ಕಟ್ಟಿಕೊಡಲು ಆರಂಭಿಸಿಸುತ್ತಾರೆ. ಸಿದ್ಧಾರ್ಥ ಅವರ ಬೆಳವಣಿಗೆ ಎಂದರೆ ಅದು ಅವರ ಉದ್ಯಮ ಸಾಮ್ರಾಜ್ಯದ ಗರ್ಭಾವಸ್ಥೆ, ಜನನ, ಮತ್ತು ಬೃಹತ್ ಬೆಳವಣಿಗೆಯ ಕತೆಯೂ ಹೌದು. ಒಂದೊಂದೇ ಘಟನೆಗಳನ್ನು ಎಳೆಎಳೆಯಾಗಿ ಓದುಗರ ಮುಂದಿಡುವ ಲೇಖಕರು, ಕಾಫಿ ಡೇ ಸಂಸ್ಥಾಪಕರ ಆರ್ಥಿಕ ಏಳು-ಬೀಳುಗಳನ್ನು ವಿವರವಾಗಿ ದಾಖಲಿಸುತ್ತಾ ಸಾಗುತ್ತಾರೆ. ಕೊನೆಗೆ, ಉದ್ಯಮ ಜಗತ್ತಿನಲ್ಲಿ ಸಿದ್ಧಾರ್ಥ ಮಾಡಿದ ತಪ್ಪುಗಳು ಮತ್ತು ಅವರು ಸಾಲದ ಸುಳಿಯಲ್ಲಿ ಸಿಲುಕಿಕೊಂಡ ಬಗೆಯನ್ನು ಓದುಗರ ಮುಂದೆ ಬಿಚ್ಚಿಡುತ್ತಾರೆ. ಹಣಕಾಸು ಜಗತ್ತಿನ ಅರಿವಿರುವವರಿಗೆ ಹಾಗೂ ಷೇರು ಮಾರುಕಟ್ಟೆಯ ಪರಿಚಯ ಇದ್ದವರಿಗೆ ಈ ಪುಸ್ತಕ ಒಂದು ಅತ್ಯುತ್ತಮ ಥ್ರಿಲ್ಲರ್ ‘ವೆಬ್ ಸಿರೀಸ್’ ನೋಡಿದ ಅನುಭವವನ್ನು ನೀಡುತ್ತದೆ. ʼಕಾಫಿ ಡೇ ಎಂಟರ್‌ಪ್ರೈಸಸ್‌ನಿಂದ ಮಾಯವಾದ 3,000 ಕೋಟಿ ರೂ.ಗೂ ಹೆಚ್ಚಿನ ಹಣದಲ್ಲೇ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಅಡಗಿದೆʼ ಎನ್ನುವುದರೊಂದಿಗೆ ಈ ಪುಸ್ತಕ ಕೊನೆಯಾಗುತ್ತದೆ. ಆದರೆ, ಆ ಸಾವಿರಾರು ಕೋಟಿ ರೂ. ಹಣ ಎಲ್ಲಿ ಹೋಯಿತು? ಎಂಬುದಕ್ಕೆ ಮಾತ್ರ ಇಲ್ಲಿ ಉತ್ತರ ಸಿಗುವುದಿಲ್ಲ. ʼಆ ರಹಸ್ಯ ಕೆಲವೇ ಕೆಲವು ವ್ಯಕ್ತಿಗಳಿಗಷ್ಟೇ ತಿಳಿದಿರಬಹುದು. ಆದರೆ ಸದ್ಯಕ್ಕೆ ಅವರು ಆ ಸತ್ಯವನ್ನು ಬಹಿರಂಗಪಡಿಸಲು ಇಚ್ಛಿಸುತ್ತಿಲ್ಲʼ ಎನ್ನುವ ಮಾರ್ಮಿಕ ಸಾಲುಗಳೊಂದಿಗೆ ಈ ರೋಚಕ ಪುಸ್ತಕವನ್ನು ಲೇಖಕರು ಬರೆದು ಮುಗಿಸುತ್ತಾರೆ. * ಪುಸ್ತಕ: ಕಾಫಿ ಕಿಂಗ್ * ಪುಟಗಳು: 280 * ದರ: 350 ರೂ. * ಲೇಖಕರು: ರುಕ್ಮಿಣಿ ರಾವ್, ಪ್ರೊಸೇನ್‌ಜಿತ್ ದತ್ತಾ * ಕನ್ನಡಕ್ಕೆ: ಕಾರ್ತಿಕಾದಿತ್ಯ ಬೆಳ್ಗೋಡು * ಪ್ರಕಾಶಕರು: ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನ -ಎನ್. ಸಚ್ಚಿದಾನಂದ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಶಿಕ್ಷಣ ಸೇವೆಯ ಯುಗ ಪುರುಷ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಜನ್ಮದಿನ