ಸನಾತನ ಧರ್ಮದ ಮೂಲಗ್ರಂಥಗಳಾದ, ಜೀವನಕ್ಕೊಂದು ಕೈಪಿಡಿಯಂತಿರುವ ಉಪಪ್ರಧಾನ, ಸ್ಮೃತಿಗಳ ಬಗ್ಗೆ ಹಿಂದಿನ ಅಂಕಣದಲ್ಲಿ ತಿಳಿದಿದ್ದೆವು ಸ್ಮೃತಿಗಳು ಎಂದರೇನು, ಹೇಗೆ ಹುಟ್ಟಿಕೊಂಡವು, ಎಷ್ಟು ಸ್ಮೃತಿಗಳಿವೆ?. ಇಂದು ಇತಿಹಾಸ, ಪುರಾಣಗಳ ಬಗ್ಗೆ ತಿಳಿಯೋಣ. ಇತಿಹಾಸಗಳು ’ಇತಿಹಾಸ’ ಪದದ ಅರ್ಥ ’ಹಾಗೆಯೇ ಆಗಿತ್ತು’. ಇದರ ಕಾರಣ ಇತಿಹಾಸ ಗ್ರಂಥಗಳಾದ ’ರಾಮಾಯಣ’ ಮತ್ತು ’ಮಹಾಭಾರತ’ಗಳು, ಪಾಶ್ಚಾತ್ಯರು ಕರೆಯುವ ಹಾಗೆ Mythology ಅಲ್ಲ. ’The Titanic’ ಇಂಗ್ಲಿಷ್ ಸಿನಿಮಾವು ನೈಜ ಘಟನೆಗಳ ಆಧಾರಿತವಾದುದಾದರು, ಕಾಲ್ಪನಿಕ ಘಟನೆಗಳು ಸೇರಿರುವಂತೆ, ಇತಿಹಾಸಗಳು ವಾಸ್ತವಿಕ-ಕಾಲ್ಪನಿಕ ಘಟನೆಗಳ ಮಿಶ್ರಣವೆಂದು ಅರ್ಥೈಸಬೇಕು. ಭಾರತದ ಜ್ಞಾನಪರಂಪರೆಯ ಅನರ್ಘ್ಯ ರತ್ನಗಳಾಗಿರುವ, ಇವುಗಳ ಬಗ್ಗೆ ತಿಳಿಯದ ಭಾರತೀಯನಿಲ್ಲವೆಂದರೆ ಅತಿಶಯೋಕ್ತಿಯಾಗದು! ಇವುಗಳು ಮಾನವರಿಗೆ ದೊರೆತಿರುವ ದೃಶ್ಯಕೈಪಿಡಿಗಳಾಗಿದ್ದು, ಇದರಲ್ಲಿನ ಕಥೆಗಳು ಭಾರತವನ್ನಷ್ಟೇ ಅಲ್ಲದೇ, ಜಗತ್ತಿನ ಹಲವು ದೇಶಗಳ ಮನೆಮನಗಳನ್ನು ಪ್ರವೇಶಿಸಿ ಆದರ್ಶವಾಗಿವೆ. ವಾಲ್ಮೀಕಿ ವಿರಚಿತ ರಾಮಾಯಣವು ’ಆದಿಕಾವ್ಯ’ವೆಂದು ಪ್ರಸಿದ್ಧಿಯಾಗಿದ್ದು 24,000 ಶ್ಲೋಕಗಳಿವೆ. ವೇದವ್ಯಾಸ ವಿರಚಿತ ಮಹಾಭಾರತವು ’ಪಂಚಮವೇದ’ವೆಂದು ಪ್ರತೀತಿ ಹೊಂದಿದ್ದು ಸುಮಾರು 1,00,000 ಶ್ಲೋಕಗಳಿರುವ ಕಾರಣ ’ಜಗತ್ತಿನ ಅತಿದೊಡ್ಡ ಮಹಾಕಾವ್ಯ’ವಾಗಿದೆ. ಪುರಾಣಗಳು ’ಪುರಾಣ’ವೆಂದರೆ ‘ಪ್ರಾಚೀನ ಮತ್ತು ನವನವೀನ’ ಎಂದರ್ಥ. ಇವುಗಳು ಜನಸಾಮಾನ್ಯರಿಗೆ ವೇದವಿಷಯವನ್ನು ಕಥಾರೂಪದಲ್ಲಿ ತಲುಪಿಸುವ ಮಾಧ್ಯಮವಾಗಿದ್ದು, ಇಲ್ಲಿ ನಿರೂಪಿಸಿರುವ ಹಲವು ವಿಷಯಗಳು ಇಂದಿಗೂ ಪ್ರಸ್ತುತವಾಗಿವೆ. ಇವುಗಳಲ್ಲಿ ಕಲ್ಪನೆಯ ವಿಷಯಗಳೊಂದಿಗೆ, ಬಹಳ ಹಿಂದೆ ಸಂಭವಿಸಿದ ಕೆಲವೊಂದು ನೈಜ ಘಟನೆಗಳೂ ಸೇರಿಕೊಂಡಿವೆ. ಪಾಶ್ಚಾತ್ಯದಲ್ಲಿ ಪ್ರಖ್ಯಾತಿಯಾಗಿರುವ Batman, Superman, Harry Potter ಇನ್ನಿತರ ಕಾಲ್ಪನಿಕ ಕಥೆಗಳಲ್ಲಿರುವ ಅವಾಸ್ತವಿಕ ಘಟನೆಗಳು, ಅತಿರೇಕದ ಕಲ್ಪನೆಗಳು, ರೋಚಕತೆಯ ತಿರುವುಗಳು ಪುರಾಣಗಳಲ್ಲಿ ಅತ್ಯದ್ಭುತವಾಗಿ ವರ್ಣಿಸಲ್ಪಟ್ಟಿದೆ. ರಾಜ ಹರಿಶ್ಚಂದ್ರನ ಕಥನದಿಂದ ’ಸತ್ಯಂ ವದ’ ಎಂಬ ವೇದವಾಕ್ಯದ ವ್ಯಾಖ್ಯಾನವನ್ನು, ಪ್ರಹ್ಲಾದ ಚರಿತೆಯು ಭಕ್ತಿಯ ಪರಾಕಾಷ್ಠೆಯನ್ನು, ಶಿಬಿ ಚಕ್ರವರ್ತಿಯ ಕಥೆಯು ದಾನದ ಮಹಿಮೆಯನ್ನು, ತಾಯಿ ಮದಾಲಸ ಕಥನವು ಮಕ್ಕಳಿಗೆ ಗುರುವಾಗಿ ಉತ್ಕೃಷ್ಟ ಆಧ್ಯಾತ್ಮಿಕ ವಿಚಾರಗಳನ್ನು ಬೋಧಿಸುವುದನ್ನು ಗಮನಿಸಿದರೆ, ಪುರಾಣಗಳು ಆದರ್ಶ-ಮೌಲ್ಯಗಳ ಗಣಿಯಾಗಿರುವುದನ್ನು ಗಮನಿಸಬಹುದು. ವಿಶ್ವಕೋಶವಾಗಿರುವ ಪುರಾಣ ಸಾಹಿತ್ಯದಲ್ಲಿ ವಿಶ್ವಶಾಸ್ತ್ರ, ಖಗೋಳಶಾಸ್ತ್ರ, ಖನಿಜಶಾಸ್ತ್ರ, ತತ್ವಶಾಸ್ತ್ರ, ಧರ್ಮಬೋಧನೆಗಳಲ್ಲದೆ ಹಲವು ವ್ಯಾಪಕ ಶ್ರೇಣಿಯ ವಿಷಯಗಳನ್ನು (ದೇವತೆಗಳು, ಋಷಿ-ದೇವತೆಗಳ ವಂಶಾವಳಿ, ರಾಜರುಗಳ ಬಗ್ಗೆ) ಪ್ರಸ್ತಾಪಿಸಲಾಗಿದೆ. ಹಲವು ಪುರಾಣಗಳಿಗೆ ವಿಷ್ಣು, ಶಿವ, ಬ್ರಹ್ಮ, ಸ್ಕಂದ, ಗಣಪತಿ ಮತ್ತು ದೇವೀಯಂತಹ ಗಮನಾರ್ಹ ದೇವತೆಗಳ ಹೆಸರಿಡಲಾಗಿದೆ. ಇದರೊಂದಿಗೆ ಪೂರಕವಾಗಿ ಉಪಪುರಾಣಗಳು ಕೂಡ ಈ ವಿಷಯಗಳನ್ನೇ ಪ್ರಸ್ತುತಪಡಿಸುತ್ತವೆ. ವೇದವ್ಯಾಸರು 18 ಪುರಾಣ ಹಾಗು 18 ಉಪಪುರಾಣಗಳನ್ನು ರಚಿಸಿದ್ದಾರೆಂದು ನಂಬಿಲಾಗಿದ್ದು, ಇವುಗಳಲ್ಲಿರುವ 4 ಲಕ್ಷಗಳಿಗೂ ಅಧಿಕ ಶ್ಲೋಕಗಳು ಶಾಸ್ತ್ರದ ಅಗಾಧತೆಗೆ ಸಾಕ್ಷಿಯಲ್ಲವೇ?! ಭಾಷ್ಯಗಳು: ವೇದಗಳು ಹಾಗು ಉಪಪ್ರಧಾನಗ್ರಂಥಗಳನ್ನು ವೇದಕ್ಕೆ ವಿರುದ್ಧವಾಗದ ರೀತಿಯಲ್ಲಿ ವ್ಯಾಖ್ಯಾನಿಸಿ, ವಿಸ್ತರಿಸಲ್ಪಟ್ಟ ಗ್ರಂಥಗಳನ್ನು ’ಭಾಷ್ಯ’ಗಳೆಂದು ಕರೆಯುತ್ತಾರೆ. ಶಂಕರಾಚಾರ್ಯರು ಉಪನಿಷತ್ತುಗಳಿಗೆ ಹಾಗು ಭಗವದ್ಗೀತೆಗೆ ರಚಿಸಿದ ಗ್ರಂಥಗಳು ಭಾಷ್ಯಗಳಿಗೆ ಉದಾಹರಣೆಯಾಗಿದೆ. ಶಾಸ್ತ್ರೋ ರಕ್ಷತಿ ರಕ್ಷಿತಃ: ’ತಸ್ಮಾಚ್ಛಾಸ್ತ್ರಂ ಪ್ರಮಾಣಂ ತೇ ಕಾರ್ಯಾಕಾರ್ಯವ್ಯವಸ್ಥಿತೌ’ ಎಂಬ ಭಗವದ್ಗೀತೆಯಲ್ಲಿನ ಶ್ರೀಕೃಷ್ಣನ ಉಪದೇಶದಂತೆ ಏನು ಮಾಡಬೇಕು (ನಿಯತ ಕರ್ಮಗಳು) ಮತ್ತು ಏನು ಮಾಡಬಾರದು (ನಿಷಿದ್ಧ ಕರ್ಮಗಳು) ಎಂಬುದನ್ನು ನಿರ್ಧರಿಸುವಲ್ಲಿ ನಮ್ಮ ಇಂದ್ರಿಯಗಳು, ತರ್ಕ ಇನ್ನಿತರ ಯಾವುದೇ ಜ್ಞಾನಸಾಧನಗಳು ಪ್ರಮಾಣವಾಗದ ಕಾರಣ, ಕೇವಲ ಶಾಸ್ತ್ರಗಳು ಮಾತ್ರವೇ ವಿಶ್ವಾಸಾರ್ಹ ಪ್ರಮಾಣವಾಗಿದೆ. ಹಿಂದೆ ಕೆಲವರಿಗಷ್ಟೇ ಸೀಮಿತವಾಗಿ, ಚದರಿಕೊಂಡಿದ್ದ ಈ ಅಗಾಧ ಪ್ರಮಾಣದ ಜ್ಞಾನಭಂಡಾರವು, ಇಂದು ಮಾಹಿತಿತಂತ್ರಜ್ಞಾನ ಕ್ರಾಂತಿಯ (IT Revolution) ಕೃಪೆಯಿಂದ ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲ್ಪಟ್ಟಿದ್ದು, ಜಾಲತಾಣದಲ್ಲಿ ಎಲ್ಲರಿಗೂ ಲಭ್ಯವಾಗಿದೆ. ಇಂತಹ ಅನರ್ಘ್ಯನಿಧಿಯನ್ನು ಮೂಢನಂಬಿಕೆ, ಅಪ್ರಸ್ತುತ ಅಥವಾ ಕೇವಲ ಒಂದು ಧರ್ಮಕ್ಕೆ ಸೀಮಿತವಾದುದೆಂಬ ತಪ್ಪುಕಲ್ಪನೆಗಳನ್ನು ತೊಡೆದುಹಾಕುವುದು ಅತ್ಯಾವಶ್ಯಕ. ಈ ಸುವರ್ಣಪರ್ವದಲ್ಲಿ ಶಾಸ್ತ್ರಗಳ ಅಧ್ಯಯನ ಮಾಡುವುದರೊಂದಿಗೆ, ಅಲ್ಲಿ ತಿಳಿಸಿರುವ ಮಾರ್ಗದರ್ಶನದಂತೆ ಜೀವನ ನಡೆಸುತ್ತಾ, ನಂತರ ಇವುಗಳನ್ನು ಮುಂದಿನ ಯುವಪೀಳಿಗೆಗೆ ಯಥಾವತ್ತಾಗಿ ಹಸ್ತಾಂತರಿಸುವುದೇ ಶಾಸ್ತ್ರರಕ್ಷಣೆ. ಇದರಿಂದ ಸ್ವಹಿತದೊಂದಿಗೆ ಜಗತ್ಕಲ್ಯಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ವೇದಾಂತ ಪರಿಚಯ: ಸ್ಮೃತಿಗಳು ಎಂದರೇನು, ಹೇಗೆ ಹುಟ್ಟಿಕೊಂಡವು, ಎಷ್ಟು ಸ್ಮೃತಿಗಳಿವೆ? ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಯುಗಾದಿ: ಬೇವು-ಬೆಲ್ಲ ತಿನ್ನುವುದರ ಹಿಂದಿನ ವೈಜ್ಞಾನಿಕ ಕಾರಣ