ಸನಾತನ ಧರ್ಮದ ಮೂಲಗ್ರಂಥಗಳಾದ, ಜೀವನಕ್ಕೊಂದು ಕೈಪಿಡಿಯಂತಿರುವ ವೇದಗಳು, ಶಾಸ್ತ್ರಗಳ ಬಗ್ಗೆ ಹಿಂದಿನ ಅಂಕಣದಲ್ಲಿ ತಿಳಿದಿದ್ದೆವು ವೇದಾಂತ ಪರಿಚಯ: ಶಾಸ್ತ್ರಗಳ ಹುಟ್ಟು ಮತ್ತು ಅರ್ಥ ಮುಂದುವರೆದು ಸ್ಮೃತಿಗಳು, ಇತಿಹಾಸ ಮತ್ತು ಉಪಪ್ರಧಾನ ಗ್ರಂಥಗಳನ್ನು ತಿಳಿಯೋಣ. ಮೂಲಗ್ರಂಥವಾದ ವೇದಗಳನ್ನು ಅಧ್ಯಯನ ಮಾಡಿ, ಅವನ್ನು ಆಧರಿಸಿ, ವಿದ್ವಾಂಸರು, ಆಚಾರ್ಯರುಗಳಿಂದ ರಚಿಸಲ್ಪಟ್ಟ ಗ್ರಂಥಗಳು ಅಥವಾ ಬರವಣಿಗೆಗಳನ್ನು ‘ಉಪಪ್ರಧಾನ ಗ್ರಂಥʼ ಗಳೆಂದು ಕರೆಯುತ್ತಾರೆ. ಈ ಗ್ರಂಥಗಳು ಮಾನವನಿಂದ ರಚಿಸಲ್ಪಟ್ಟ ಕಾರಣದಿಂದ, ಇವನ್ನು ’ಪೌರುಷೇಯ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಉಪಪ್ರಧಾನ ಗ್ರಂಥಗಳ ಅವಶ್ಯಕತೆ: ಸ್ವಯಂ ಭಗವಂತನಿಂದಲೇ ಬಂದಿರುವ ವೇದಗಳಿರುವಾಗ, ಇನ್ನು ಉಪಪ್ರಧಾನ ಗ್ರಂಥಗಳ ಅವಶ್ಯಕತೆಯಾದರೂ ಏನು? ಎಂಬ ಯೋಚನೆ ಬರುವುದು ಸಾಮಾನ್ಯ. ಇದಕ್ಕೆ ಕಾರಣಗಳೆಂದರೆ: ವೇದಗಳ ಹಲವು ವಿಷಯಗಳು ಇಂದ್ರಿಯ ಅಗೋಚರವಾಗಿದ್ದು, ಸಾಮಾನ್ಯ ವ್ಯಕ್ತಿಗೆ ಅರ್ಥವಾಗುವುದು ಕಷ್ಟ. ವೇದಾರ್ಥವನ್ನು ಐತಿಹಾಸಿಕ ಘಟನೆಗಳು, ದೃಷ್ಟಾಂತಗಳು, ಕಥೆಗಳು, ಸೂತ್ರಗಳು ಇತ್ಯಾದಿಗಳ ಮೂಲಕ ಸುಲಭವಾಗಿ ಅರ್ಥಮಾಡಿಸುವ ಮಾಧ್ಯಮದ ಅವಶ್ಯಕತೆ ಇರುತ್ತದೆ. ಹೇಗೆಂದರೆ ಗಣಿತದಲ್ಲಿ ಸಂಖ್ಯೆಗಳು ಅಮೂರ್ತ ಕಲ್ಪನೆಯಾಗಿದ್ದು (abstract concept) ಪುಟ್ಟಮಕ್ಕಳಿಗೆ ಅರ್ಥಮಾಡಿಸಲು, ವಸ್ತುಗಳ ಮಾಧ್ಯಮದ ಮೂಲಕ ಕಲಿಸಲಾಗುತ್ತದೆ. ಹಲವು ಮಂತ್ರದ್ರಷ್ಟಾರರಿಂದ ದೊರಕಿದ ವೇದಮಂತ್ರಗಳು ಅವ್ಯವಸ್ಥಿತವಾಗಿದ್ದು, ಇವನ್ನು ವಿಷಯವಾರು ಕ್ರಮಬದ್ಧವಾಗಿ, ವ್ಯವಸ್ಥಿತವಾಗಿ ಪ್ರಸ್ತುತಪಡಿಸುವ ಅಗತ್ಯತೆ ಇದೆ. ವೇದವಿಷಯಗಳಿಗೆ ವಿವರಣೆ, ವಿಶ್ಲೇಷಣೆ ನೀಡುವ ಆವಶ್ಯಕತೆ ಇದೆ. ವೇದಗಳನ್ನು ಅರ್ಥೈಸುವ ಕಾಲಘಟ್ಟದಲ್ಲಿ ಮೂಡುವ ಸಂಶಯಗಳನ್ನು ಪರಿಹರಿಸುವ ಅನಿವಾರ್ಯತೆ ಇದೆ. ಉಪಪ್ರಧಾನ ಗ್ರಂಥಗಳೆಂದರೆ ಸೂತ್ರಗಳು, ಸ್ಮೃತಿಗಳು, ಇತಿಹಾಸಗಳು ಹಾಗೂ ಪುರಾಣಗಳು. ಸೂತ್ರಗಳು: ಸೂತ್ರಗಳು ಒಂದು ವಿಶಿಷ್ಟ ರೀತಿಯ ಗ್ರಂಥಗಳಾಗಿದ್ದು, ಇದರ ಲಕ್ಷಣವನ್ನು ಹೇಳುವ ಸಂಸ್ಕೃತಶ್ಲೋಕ ಹೀಗಿದೆ: ಅಲ್ಪಾಕ್ಷರಂ ಅಸಂದಿಗ್ಧಂ ಸಾರವತ್ ವಿಶ್ವತೋಮುಖಮ್ । ಅಸ್ತೋಭಮನವಧ್ಯಂ ಸೂತ್ರಂ ಸೂತ್ರವಿದೋ ವಿದುಃ ॥ ಅರ್ಥ: ಸಾಧ್ಯವಾದಷ್ಟು ಕಡಿಮೆ ಅಕ್ಷರಗಳನ್ನು ಒಳಗೊಂಡ, ಸಂದೇಹದಿಂದ ಮುಕ್ತವಾಗಿರುವ, ಅರ್ಥಗರ್ಭಿತವಾಗಿರುವ, ಸಾರ್ವತ್ರಿಕವಾಗಿ ಅನ್ವಯಿಸಲಾಗಿ ವ್ಯಾಪಕವಾಗಿ ಅರ್ಥೈಸಲಾಗುವ, ಅನಗತ್ಯ ವಿರಾಮಗಳಿಲ್ಲದ, ದೋಷರಹಿತವಾಗಿರುವ ಲಕ್ಷಣ ಹೊಂದಿರುವ ಪದಸಮೂಹವನ್ನು ’ಸೂತ್ರ’ವೆಂದು ಕರೆಯುತ್ತಾರೆ. ಇದು ಕಂಪ್ಯೂಟರ್ ನಲ್ಲಿನ compress ಆಗಿರುವ file/folder ಇದ್ದ ಹಾಗೆ. ಸೂತ್ರಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವ ಕಾರಣದಿಂದ ಗುರುಶಿಷ್ಯ ಪರಂಪರೆಯಲ್ಲಿ ಅವ್ಯಾಹತವಾಗಿ ಪ್ರಸರಣವಾಯಿತು. ಕಲ್ಪಸೂತ್ರಗಳು, ಶುಲ್ಬಸೂತ್ರಗಳು, ಶ್ರೌತಸೂತ್ರಗಳು, ಧರ್ಮಸೂತ್ರಗಳು, ಯೋಗಸೂತ್ರಗಳು ಹಾಗು ಪಾಣಿನಿ ವ್ಯಾಕರಣಸೂತ್ರಗಳು ಕೆಲವು ಪ್ರಮುಖ ಸೂತ್ರ ಗ್ರಂಥಗಳಾಗಿವೆ. ತತ್ವಸಿದ್ಧಾಂತವನ್ನು ತಾರ್ಕಿಕವಾಗಿ ವಿಶ್ಲೇಷಿಸಿ, ನಿರೂಪಿಸಿರುವ ಆರು ದರ್ಶನಗಳಾದ ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಪೂರ್ವಮೀಮಾಂಸ ಹಾಗೂ ಉತ್ತರಮೀಮಾಂಸ ಗ್ರಂಥಗಳೂ ಕೂಡ ಸೂತ್ರರೂಪದಲ್ಲಿವೆ. ಸ್ಮೃತಿಗಳು: ಸೂತ್ರಗಳನ್ನು ಅರ್ಥೈಸಲು ಸಾಮಾನ್ಯವಾಗಿ ಕಷ್ಟಕರವಾಗಿದ್ದು, ಸಂಶಯಗಳಿಗೆ ಎಣೆಮಾಡಿಕೊಡುವ ಕಾರಣ ಸ್ಮೃತಿಗ್ರಂಥಗಳು ಆವಶ್ಯಕವಾಗುತ್ತವೆ. ’ಸ್ಮೃತಿʼ ಎಂದರೆ ’ನೆನಪಿಸಿಕೊಂಡ ಜ್ಞಾನ’ – ವೇದಗಳನ್ನು ಅಧ್ಯಯನಮಾಡಿ, ಅರ್ಥೈಸಿಕೊಂಡ ಆಚಾರ್ಯರು, ನಂತರ ಅವನ್ನು ನೆನಪಿಸಿಕೊಂಡು, ಕ್ರಮಬದ್ಧವಾಗಿ ವಿಷಯಾನುಸಾರ ಪ್ರಸ್ತುತಿಪಡಿಸಿದ ಗ್ರಂಥಗಳಾಗಿವೆ. ಸ್ಮೃತಿಗಳು ಶ್ಲೋಕರೂಪದಲ್ಲಿದ್ದು ವಿಸ್ತೃತವಾಗಿವೆ. ವೇದಗಳ ಅಧ್ಯಯನ ಮತ್ತು ವ್ಯಾಖ್ಯಾನಕ್ಕೆ ಅಗತ್ಯವಾದ ವೈದಿಕ ಸಾಹಿತ್ಯದ ಭಾಗವಾಗಿರುವ ಆರು ಸಹಾಯಕ ವಿಭಾಗಗಳಾದ ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ಸು ಹಾಗು ಜ್ಯೋತಿಷ್ಯ ಶಾಸ್ತ್ರಗ್ರಂಥಗಳನ್ನು ’ವೇದಾಂಗ’ಗಳೆಂದು ಕರೆಯುತ್ತಾರೆ. ವೇದಗಳಿಗೆ ಪೂರಕವಾಗಿದ್ದು, ಜೀವನ ಮತ್ತು ಸಮಾಜದ ವಿವಿಧ ಕ್ಷೇತ್ರಗಳಿಗೆ ಪ್ರಾಯೋಗಿಕ ಜ್ಞಾನವನ್ನು ಒದಗಿಸುವ ಗ್ರಂಥಗಳಾದ ಆಯುರ್ವೇದ, ಧನುರ್ವೇದ, ಗಂಧರ್ವವೇದ ಮತ್ತು ಶಿಲ್ಪವೇದಗಳನ್ನು(ಅರ್ಥಶಾಸ್ತ್ರ) ’ಉಪವೇದʼ ಗಳೆಂದು ಕರೆಯುತ್ತಾರೆ. ಇವುಗಳೂ ಅಲ್ಲದೆ ಮನುಸ್ಮೃತಿ, ಪರಾಶರಸ್ಮೃತಿ, ಶಾಂಡಿಲ್ಯಸ್ಮೃತಿ, ವ್ಯಾಸಸ್ಮೃತಿಗಳು ಕೆಲವು ಮುಖ್ಯ ಸ್ಮೃತಿಗ್ರಂಥಗಳಾಗಿವೆ. ಸ್ಮೃತಿಯಲ್ಲಿರುವ ಕೆಲವು ವಿಷಯಗಳು ದೇಶ-ಕಾಲಕ್ಕೆ ಬದಲಾಗುವ ಕಾರಣ, ಅವನ್ನು ಸಂದರ್ಭೋಚಿತವಾಗಿ ಮರುವ್ಯಾಖ್ಯಾನ ಮಾಡಲಾಗುತ್ತದೆ ಅಥವಾ ವೇದವಿರುದ್ಧವಾಗದಂತೆ ಬದಲಾಯಿಸಲಾಗುತ್ತದೆ. ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ವೇದಾಂತ ಪರಿಚಯ: ಶಾಸ್ತ್ರಗಳ ಹುಟ್ಟು ಮತ್ತು ಅರ್ಥ ವೇದಾಂತ ಪರಿಚಯ: ಪುರಾಣಗಳು ಎಂದರೇನು, ಹೇಗೆ ಹುಟ್ಟಿಕೊಂಡವು, ಎಷ್ಟು ಪುರಾಣಗಳಿವೆ?