Bhaja Govindam Shloka 10: Self Knowledge is the Only Cure for Life’s Sufferingಆದಿ ಶಂಕರಾಚಾರ್ಯ

ಸಂಸಾರನಿವೃತ್ತಿ ಎಂಬ ವ್ಯಾಧಿಗೆ ಬೇಕಾದ ಸೂಕ್ತಚಿಕಿತ್ಸೆಯನ್ನು ಉಪದೇಶವಾಗಿ ಶಂಕರಾಚಾರ್ಯರು ಮುಂದಿನ ಶ್ಲೋಕದಲ್ಲಿ ಉಪಮೆಗಳ ಮೂಲಕ ವಿವರಿಸಿದ್ದಾರೆ.

ವಯಸಿ ಗತೇ ಕಃ ಕಾಮವಿಕಾರಃ

ಶುಷ್ಕೇ ನೀರೇ ಕಃ ಕಾಸಾರಃ ।

ಕ್ಷೀಣೇ ವಿತ್ತೇ ಕಃ ಪರಿವಾರಃ

ಜ್ಞಾತೇ ತತ್ತ್ವೇ ಕಃ ಸಂಸಾರಃ  

ವಯಸಿ ಗತೇ ಕಃ ಕಾಮವಿಕಾರಃ – ಯೌವ್ವನದ ವಯಸ್ಸು ಕಳೆದ ನಂತರ ಕಾಮವಿಕಾರಕ್ಕೆಲ್ಲಿ ಸ್ಥಳವಿರುತ್ತದೆ. ಇಲ್ಲಿ ಕಾಮವೆಂದಾಗ ಸ್ತ್ರೀ-ಪುರುಷ ಪರಸ್ಪರ ಆಕರ್ಷಣೆ ಎಂದು ಅರ್ಥೈಸುವುದು ಉತ್ತಮ. ವಿಕಾರ ಎಂದರೆ ಕಾರ್ಯ. ಯೌವ್ವನದ ವಯಸ್ಸಿನಲ್ಲಿ ಒಬ್ಬ ವ್ಯಕ್ತಿಯ ನಡೆ, ನುಡಿ, ಕೆಲಸಗಳ ಉದ್ದೇಶ ಹೇಗಾದರೂ ಮತ್ತೊಬ್ಬರನ್ನು ಆಕರ್ಷಿಸುವಲ್ಲಿ ಮತ್ತು ಕಾಮಗಳನ್ನು ಪೂರೈಸುವುದರಲ್ಲೇ ಇರುತ್ತದೆ.

ವ್ಯಕ್ತಿ ವಯಸ್ಸಾದಂತೆ, ಆತನ ದೇಹ ಕ್ಷೀಣಿಸಿ, ವೀರ್ಯಶಕ್ತಿಯನ್ನು ಕಳೆದುಕೊಳ್ಳುತ್ತದೆ. ನಂತರ ಈ ಕಾಮದ ಚೇಷ್ಟೆ ಕಡಿಮೆಯಾಗುತ್ತಾ ಹೋಗುತ್ತದೆ ಹಾಗೂ ವಯೋವೃದ್ಧರಲ್ಲಿ ಇಲ್ಲವೇ ಇಲ್ಲದಂತಾಗಬಹುದು. ಹಾಗಾಗಿ, ಯೌವ್ವನದ ನಮ್ಮೆಲ್ಲಾ ಕರ್ಮಗಳಿಗೆ ಕಾಮ ಕಾರಣವಾದರೆ, ಕಾಮಕ್ಕೆ ದೇಹದ ಬಲ/ಶಕ್ತಿ ಕಾರಣವಾಗುತ್ತದೆ. ಯೌವ್ವನ ಕಳೆದು ದೇಹ ದುರ್ಬಲವಾದಾಗ ಕಾಮ-ಕರ್ಮಗಳೂ ತಮ್ಮ ಪ್ರಬಲತೆಯನ್ನು ಕಳೆದುಕೊಂಡು ನಿಂತುಹೋಗುತ್ತದೆ.

ಶುಷ್ಕೇ ನೀರೇ ಕಃ ಕಾಸಾರಃ – ನೀರಿಲ್ಲದ ಸರೋವರವಾದರೂ ಯಾವುದು!? ಕಾಸಾರ ಎಂದರೆ ಕೊಳ, ಸರೋವರ ಹೀಗೆ ಯಾವುದಾದರೂ ಜಲಸ್ಥಾನವಾಗಬಹುದು. ಬಿಸಿಲಿನ ಬೇಗೆಯಿಂದಲೋ, ಬರಗಾಲದಿಂದಲೋ ನೀರೆಲ್ಲಾ ಆವಿಯಾದರೆ, ಸರೋವರವನ್ನು ಸರೋವರವೆಂದು ಕರೆಯಲು ಸಾಧ್ಯವೇ? ನೀರು ಕಾರಣ, ಸರೋವರ ಕಾರ್ಯ. ಕಾರಣವಿಲ್ಲದ ಕಾರ್ಯವಾದರೂ ಎಲ್ಲಿ!

ಕ್ಷೀಣೇ ವಿತ್ತೇ ಕಃ ಪರಿವಾರಃ – ಧನ, ಸಂಪತ್ತು ಕಳೆದುಕೊಂಡ ಮೇಲೆ ಬಂಧು ಬಾಂಧವರು ಎಲ್ಲಿರುತ್ತಾರೆ. ನಮ್ಮಲ್ಲಿ ಧನ, ಅಧಿಕಾರ, ಸಂಪತ್ತುಗಳಿದ್ದಾಗ ಪರಿವಾರದವರಿಂದ ಸಿಗುವ ಪ್ರೀತಿ-ಗೌರವ-ಮನ್ನಣೆಗೂ, ಧನಹೀನನಾದವನಿಗೆ ದೊರೆಯುವ ಮರ್ಯಾದೆಗೂ ಅಜಗಜಾಂತರ ವ್ಯತ್ಯಾಸವಿರುವುದು ನಮ್ಮೆಲ್ಲರ ಅನುಭವದಲ್ಲೇ ಇದೆ. ಈ ಸಂದರ್ಭದಲ್ಲಿ ಹಾಸ್ಯೋಕ್ತಿಯಂತೆ ಕಾಣುವ ಸುಭಾಷಿತವೊಂದನ್ನು ನೆನಪಿಗೆ ತಂದುಕೊಳ್ಳಬಹುದು.”भो दारिद्र्य नमस्तुभ्यं सिद्धोऽहं त्वत्प्रसादतः | पश्याम्यहं जगतसर्वं न मां पश्यति कश्चन ||” – “ಹೇ ದಾರಿದ್ರ್ಯವೇ, ನಿನಗೆ ನಮಸ್ಕಾರ! ನಿನ್ನ ಪ್ರಸಾದದಿಂದ ನಾನು ಸಿದ್ಧನಾಗಿದ್ದೇನೆ. ಜಗತ್ತೆಲ್ಲವನ್ನು ನಾನು ನೋಡಬಲ್ಲೆ. ಆದರೆ ಒಬ್ಬರೂ ನನ್ನ ಕಡೆ ತಿರುಗುವುದಿಲ್ಲ.” ವಿತ್ತ ಮತ್ತು ಪರಿವಾರದ ಸಂಬಂಧವನ್ನು ಪ್ರಸ್ತುತಗ್ರಂಥದ “ಯಾವಾದ್ವಿತ್ತೋ..||” (ಭ.ಗೋ 5) ಶ್ಲೋಕದಲ್ಲಿ ವಿಶ್ಲೇಷಿಸಲಾಗಿದೆ.

ಮೇಲಿನ ಮೂರು ಉಪಮೆಗಳನ್ನು ಗಮನಿಸಿದಾಗ ನಮಗೆ ತಿಳಿದುಬರುವ ವಿಷಯಗಳೆಂದರೆ –

1) ಕಾಮ, ಸರೋವರದ ನೀರು, ಪರಿವಾರಗಳೆಲ್ಲವೂ ಅನಿತ್ಯ.

2) ಕಾಮ ವಯಸ್ಸಿನ ಮೇಲೆ, ಸರೋವರ ನೀರಿನ ಮೇಲೆ ಅವಲಂಬಿಸಿದೆ ಮತ್ತು ಪರಿವಾರದವರು ಸಂಪತ್ತಿನ ಮೇಲೆ ಅವಲಂಬಿಸಿರುತ್ತಾರೆ

3) ಕಾರಣ ನಾಶೇ ಕಾರ್ಯ ನಾಶ: – ನೀರು ತೆಗೆದರೆ ಸರೋವರ ನಾಶ, ವಿತ್ತನಾಶದಿಂದ ಪರಿವಾರ ನಿವೃತ್ತಿ ಹಾಗೂ ಯೌವ್ವನ ಹೋದನಂತರ ಕಾಮಭಾವನೆಗಳ ನಿವೃತ್ತಿ.

ಇಷ್ಟೆಲ್ಲಾ ಉದಾಹರಣೆಗಳನ್ನು ಕೊಟ್ಟ ಉದ್ದೇಶವಾದರೂ ಏನು? ಆದಿ ಶಂಕರಾಚಾರ್ಯರಯ ನಮಗೆ ತಿಳಿದಿರುವ ವಿಷಯವನ್ನೇ ಹೇಳುತ್ತಿರುವರಲ್ಲ ಎಂದೆನಿಸಬಹುದು. ಶ್ಲೋಕದ ಕಡೆಯಪಾದವೇ ಮುಖ್ಯ ಉಪದೇಶ.

ಜ್ಞಾತೇ ತತ್ತ್ವೇ ಕಃ ಸಂಸಾರಃ – ತತ್ತ್ವಜ್ಞಾನವಾದ ಬಳಿಕ ಸಂಸಾರವೆಲ್ಲಿ!? ಈ ಕರ್ಮಚಕ್ರದ ಸಂಸಾರದಿಂದ ಹೊರಬರಲು ಧಾರ್ಮಿಕರೆಲ್ಲರಿಗೂ ಆಸೆಯಿರುವುದು ಸಹಜ. ಆದರೆ ಸಂಸಾರದಿಂದ ಹೊರಬರಲು ಮಾಡುವ ಪ್ರಯತ್ನಗಳು ಅದರ ಮೂಲಕಾರಣದ ನಿರ್ಮೂಲನೆಯ ದಿಕ್ಕಿನಲ್ಲಿದೆಯೋ ಅಥವಾ ಸಂಸಾರದ ಮೇಲ್ಮೈಲಕ್ಷಣಗಳಿಗೆ ಮುಲಾಮು ಹಾಕುವುದರಲ್ಲಿದೆಯೋ? ಕರ್ಮಚಕ್ರದಿಂದ ಬಿಡಿಸಿಕೊಳ್ಳಲು ಮತ್ತಷ್ಟು ಕರ್ಮದಿಂದ ಸಾಧ್ಯವಿಲ್ಲ. ಈ ಕರ್ಮಕ್ಕೆ ಕಾರಣ ಕಾಮ. ಕಾಮಕ್ಕೆ ಕಾರಣ ನಮ್ಮ ಬಗ್ಗೆ ನಮಗಿರುವ ಅವಿದ್ಯೆ. ಅವಿದ್ಯಾ-ಕಾಮ-ಕರ್ಮದ ಚಕ್ರದಲ್ಲಿ ಸಿಕ್ಕಿಹಾಕಿಕೊಂಡಿರುವ ಜೀವ, ಸಂಸಾರದಿಂದ ಹೊರಬರಲು ಅವಿದ್ಯೆ/ಅಜ್ಞಾನ ತೊಲಗಿಸುವುದೊಂದೇ ಮಾರ್ಗ.

ಈ ವಿಷಯವನ್ನೇ ಆಚಾರ್ಯರು ಇಲ್ಲಿ ತಿಳಿಸಿರುವುದು – ಆತ್ಮಜ್ಞಾನವನ್ನು ಪಡೆದವನಿಗೆ ಇನ್ಯಾವ ಸಂಸಾರ? ನಾವು ಅರಸುತ್ತಿರುವ ಶಾಂತಿ, ಆನಂದ, ಪೂರ್ಣತೆ ಎಲ್ಲವೂ ನಮ್ಮ ಸ್ವರೂಪವೇ ಆಗಿದೆ. ಅದನ್ನು ತಿಳಿಯುವುದಷ್ಟೇ ಮೋಕ್ಷ. ಮೋಕ್ಷವೆಂಬುದು ಯಾವುದೇ ಕರ್ಮದಿಂದಲ್ಲ; ಜ್ಞಾನದಿಂದ ಮಾತ್ರ ಸಾಧ್ಯ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದಾರೆ. ತನ್ನ ಜೇಬಿನಲ್ಲಿರುವ ಅನರ್ಘ್ಯವಸ್ತುವನ್ನು ಮರೆತು ಊರೆಲ್ಲಾ ಹುಡುಕಿ, ಕಂಗಾಲಾಗಿರುವ ವ್ಯಕ್ತಿಗೆ ಜೇಬಿನಲ್ಲಿರುವ ವಸ್ತುವಿನ ಜ್ಞಾನಮಾತ್ರದಿಂದ ಸರ್ವದುಃಖನಿವಾರಣೆಯಾಗುವಂತೆ ನಮ್ಮ ಜೀವನದ ಸರ್ವ ದುಃಖ ನಿವಾರಣೆಗೆ ಆತ್ಮಜ್ಞಾನವೊಂದೇ ಮದ್ದು.

ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *