Bhaja Govindam Shloka 11: Obstacles on the Path to Mokshaಸಾಂದರ್ಭಿಕ ಚಿತ್ರ

ವಿಷಯಗಳ ಮೇಲಿರುವ ಸಂಗ(ಅಂಟು). ನಾವೆಲ್ಲರೂ ಈ ಅಂಟಿನ ನಂಟನ್ನು ಬಿಡಿಸಿಕೊಂಡು ಮೋಕ್ಷಸ್ವರೂಪದಲ್ಲಿ ನೆಲೆನಿಲ್ಲಬೇಕೆಂಬ ಆಶಯದಿಂದ ಶಂಕರರು ಹೀಗೆ ಉಪದೇಶಿಸುತ್ತಿದ್ದಾರೆ.

ಮಾ ಕುರು ಧನ-ಜನ-ಯೌವನ-ಗರ್ವಂ

ಹರತಿ ನಿಮೇಷಾತ್ಕಾಲಃ ಸರ್ವಮ್ ।

ಮಾಯಾಮಯಮಿದಮಖಿಲಂ ಹಿತ್ವಾ

ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ 

ಯೌವ್ವನದ ಗರ್ವ – ಯಾವುದೇ ವ್ಯಕ್ತಿಗಾದರೂ ಗರ್ವ, ಮದ, ಅಹಂಕಾರ ತೋರಲು ಮೊದಲ ಕಾರಣವೆಂದರೆ ಯೌವ್ವನ. ತಂದೆ/ತಾಯಿಯ ಅಸರೆಯಲ್ಲಿದ್ದು ಎಲ್ಲಕ್ಕೂ ಅವರನ್ನು ಅವಲಂಬಿಸುತ್ತಿದ್ದ ತರುಣರು, ಯೌವ್ವನಕ್ಕೆ ಪ್ರವೇಶಿಸಿದ ನಂತರ ತಂದೆ-ತಾಯಂದಿರ ಮಾತನ್ನು ಕೇಳುವುದಿರಲಿ, ಅವರನ್ನೇ ದೂಷಿಸುವುದನ್ನು ಕಂಡಿಲ್ಲವೇ? ‘ದೇವಾಲಯಕ್ಕೆ ಹೋಗು’ ಅಥವಾ ‘ಪ್ರಾರ್ಥನೆ ಮಾಡು’ ಎಂಬ ಉಪದೇಶವೆಲ್ಲವೂ ಯಾರಲ್ಲಿ ಶಕ್ತಿಯಿಲ್ಲವೋ, ದುರ್ಬಲರೋ ಅಂಥವರಿಗೆ ಈ ಮಾತುಗಳು ಸರಿ ಎಂದು ಯುವಕರು  ವ್ಯಂಗ್ಯಮಾಡುವುದಕ್ಕೆ ನಾವೆಲ್ಲಾ ಮೂಕ ಪ್ರೇಕ್ಷಕರಾಗಿಲ್ಲವೇ?  

ಧನದ ಗರ್ವ – ಈ ಯೌವ್ವನದ ಅವಸ್ಥೆಯಲ್ಲಿ ಹೆಚ್ಚು ಸಂಬಳ ದೊರಕುವ ಕೆಲಸವಿದ್ದರೆ ವ್ಯಕ್ತಿಯ ಗರ್ವ ದುಪ್ಪಟ್ಟಾಗುತ್ತದೆ. ಧನದಿಂದ ತೀರದ ಬಯಕೆಗಳ ಬೆನ್ನತ್ತಿಹೋಗುವುದು, ರಂಗುರಂಗಿನ ಉಡುಪುಗಳು, ಕಾರು, ಬಂಗಲೆ ಮುಂತಾದ ವಿಷಯ-ವಸ್ತುಗಳನ್ನು ಅವಶ್ಯವಲ್ಲದಿದ್ದರೂ,  ಪ್ರದರ್ಶನಕ್ಕಾಗಿ ಖರೀದಿಸಿ ವಿಜೃಂಭಿಸುವುದು ಇಂದಿನ ಸಮಾಜದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಇಂಥಹ ವ್ಯಕ್ತಿಯ ಗರ್ವದ ಪರಿಮಾಣ ಎಷ್ಟೆಂದು ಊಹಿಸಲಸಾಧ್ಯ.

ಜನ ಗರ್ವ – ಯೌವ್ವನವೂ ಇದ್ದು, ಧನ-ಸಂಪತ್ತೂ ಇದ್ದರೆ ಸುತ್ತಮುತ್ತ ಹೊಗಳುಭಟ್ಟರಿಗೇನು ಕೊರತೆ! ‘ನೀನೇ ಇಂದ್ರ, ನೀನೇ ಚಂದ್ರ. ನಿನ್ನಿಂದಲೇ ಎಲ್ಲವೂ ನಡೆಯುತ್ತಿರುವುದು’ ಎಂದು ಏರಿಸಿದರೆ, ಈ ಮನುಷ್ಯನ ಗರ್ವವು ಸಾವಿರಪಟ್ಟಾಗುತ್ತದೆ. ಈ ವ್ಯಕ್ತಿ ಎಲ್ಲೇ ಹೋದರೂ, ಇವರ ಸುತ್ತಮುತ್ತ ಜನರ ದಂಡು ಕಾಣುತ್ತದೆ. ಇವೆಲ್ಲವೂ ಇರುವ ವ್ಯಕ್ತಿ ಭೂಮಿಯ ಮೇಲೆ ನಡೆಯುವುದಕ್ಕಿಂತ ಕಾಲ್ಪನಿಕ ಆಕಾಶದಲ್ಲೇ ತೇಲಾಡುತ್ತಿರುತ್ತಾನೆ   

ಇಂದಿನ ಯುವಸಮಾಜ ಧನ-ಜನ-ಯೌವ್ವನವೇ ತಮ್ಮ ಜೀವನದ ಗುರಿಯೆಂದು ಭಾವಿಸಿ ನಡೆಯುತ್ತಿರುವುದು ವಿಪರ್ಯಾಸ. ಇದರಲ್ಲಿ ಒಂದರ ಪ್ರಾಪ್ತಿಯಿಂದಲೇ ಗರ್ವ, ಡಂಭ ಬರುವಾಗ, ಮೂರೂ ಒಬ್ಬ ವ್ಯಕ್ತಿಯಲ್ಲಿದ್ದರೆ (3 in 1 offer) ಗರ್ವದ ಮೂರ್ತರೂಪವೇ ಆಗಿಬಿಡುತ್ತಾನೆ.

ಮಾ ಕುರು ಗರ್ವಂ – ಗರ್ವ ಪಡಬೇಡ. ಏಕೆಂದರೆ, ಗರ್ವದಿಂದ ಅಹಂಕಾರ ಹೆಚ್ಚಾಗುತ್ತದೆ. ಅಹಂಕಾರ ಹೆಚ್ಚಾದಷ್ಟೂ ದೇಹಾಭಿಮಾನ ಗಾಢವಾಗುತ್ತಾ ಬರುತ್ತದೆ. ದೇಹಾಭಿಮಾನದ ಸಂಸ್ಕಾರ ಮನಸ್ಸಿನಲ್ಲಿ ಅಚ್ಚಾಗುತ್ತಾ ಧನ-ಜನ-ಯೌವ್ವನದ ಮೇಲಿನ ಅವಲಂಬನೆ ಹೆಚ್ಚಾಗಿ, ವಿಷಯವಸ್ತುಗಳ ದಾಸನಾದ ವ್ಯಕ್ತಿ ಅಧ್ಯಾತ್ಮ ಮಾರ್ಗದಿಂದ ವಿಮುಖರಾಗುವುದು ಖಚಿತ. (ಕ್ಲೇಶೋಧಿಕ…ದೇಹವದ್ಭಿ: ಅವಾಪ್ಯತೆ|| ಗೀತೆ – 12.5)

ಹರತಿ ನಿಮೇಷಾತ್ಕಾಲಃ ಸರ್ವಮ್ – ಇವೆಲ್ಲವನ್ನೂ ಕಾಲತತ್ತ್ವವು ಕ್ಷಣಮಾತ್ರದಲ್ಲಿ ಕಸಿದುಕೊಳ್ಳುತ್ತದೆ. ಉಗ್ರರ ದಾಳಿಯಿಂದ ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದ ಹಲವರು ಧನ-ಜನರನ್ನು ಕಳೆದುಕೊಳ್ಳುವುದರೊಂದಿಗೆ, ಜೀವನವನ್ನೇ ಕಳೆದುಕೊಂಡರಲ್ಲ. ಚರಿತ್ರೆಯಲ್ಲಿ ಪ್ರವಾಹ, ಭೂಕಂಪ ಇನ್ನಿತರೆ ಪ್ರಾಕೃತಿಕ ವಿಕೋಪಕ್ಕೊಳಗಾಗಿ ಸರ್ವವನ್ನೂ ಕಳೆದುಕೊಂಡ ಜನರೆಷ್ಟೋ!  ‘ನಮ್ಮದು’ ಎಂದು ಗಟ್ಟಿಯಾಗಿ ಹಿಡಿದುಕೊಂಡು ಜೀವಿಸುತ್ತಿರುವುದೆಲ್ಲವನ್ನೂ ಈ ಕಾಲವೆಂಬುದು ಕ್ಷಣಮಾತ್ರದಲ್ಲಿ ಕಸಿದುಕೊಂಡು ಬಿಡುತ್ತದೆ. ಇವೆಲ್ಲವೂ ಆ ಕಾಲತತ್ತ್ವದ ಆಟವೇ!

ಹಾಗಾದರೆ, ಇದಾವುದನ್ನೂ ಗಳಿಸಬಾರದೇ? ಈ ಉಪದೇಶ ನಿರಾಶಾವಾದವಾಗುವುದಿಲ್ಲವೇ? ಹೀಗೆ ಅರ್ಥೈಸಬಾರದೆಂದು

ಮಾಯಾಮಯಮಿದಮಖಿಲಂ ಹಿತ್ವಾ – ಧನ-ಜನ-ಯೌವ್ವನವೆಲ್ಲವೂ ಮಾಯೆಯ ಕಾರ್ಯವೆಂದು ತಿಳಿದು ಮನಸ್ಸಿನಿಂದ ತ್ಯಾಗಮಾಡುವುದು. ಶಾಸ್ತ್ರೀಯ ಅರ್ಥಕ್ಕೆ ಹೋಗದೆ, ಪ್ರಸ್ತುತದಲ್ಲಿ ಮಾಯಾಮಯವೆಂದರೆ ಹುಸಿತೋರಿಕೆಯೆಂದು ತಿಳಿದರೆ ಸಾಕು. ನಮ್ಮೆಲ್ಲ ಪ್ರಾಪಂಚಿಕ ಗಳಿಕೆಗಳು ಅನಿತ್ಯ, ಅಸಾರ ಮತ್ತು ಬಂಧಕವೇ ಆಗಿವೆ. ಈ ವಸ್ತುಗಳು ನಮ್ಮೊಡನೆ ಇರುವಂತೆ ತೋರಿ, ಮರುಕ್ಷಣವೇ ಇಲ್ಲದಂತಾಗಬಹುದಾದ ಕಾರಣ ಇವೆಲ್ಲವೂ ಅನಿತ್ಯವೇ.  

ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ – ನೀನು ಪರಮಸತ್ಯವನ್ನು ತಿಳಿದು ಬ್ರಹ್ಮಪದವನ್ನು ಪ್ರವೇಶಿಸುವವನಾಗು. ಬ್ರಹ್ಮಪದವೆಂಬುದು ಮತ್ತಾವುದೇ ಲೋಕಪ್ರಾಪ್ತಿಯಲ್ಲದೆ, ಆತ್ಮವು ನಿತ್ಯ-ಶುದ್ಧ-ಬುದ್ಧ-ಮುಕ್ತಸ್ವರೂಪವೆಂಬ ನಿಶ್ಚಯಜ್ಞಾನವೇ ಆಗಿದೆ. ಇದನ್ನು ಸೂಚಿಸಲೆಂದೇ ‘ವಿದಿತ್ವಾ’ ಎಂಬ ಪದವನ್ನು ಉಪಯೋಗಿಸಿರುವುದು. ಜಗತ್ತನ್ನು ತುಚ್ಛವಾಗಿ ಕಾಣದೆ, ಜಗತ್ತಿಗೆ ಆಧಾರವಾದ ಬ್ರಹ್ಮವಸ್ತುವನ್ನು ಹೃದಯಗುಹೆಯಲ್ಲಿ, ‘ನಾನೇ ಆ ಬ್ರಹ್ಮವಾಗಿದ್ದೇನೆ’, ಎಂಬ ಜ್ಞಾನವೇ ಮೋಕ್ಷ.( ತಮೇವ ವಿದಿತ್ವಾ ಅತಿಮೃತ್ಯುಮೇತಿ ನಾನ್ಯ: ಪಂಥಾ ವಿದ್ಯತೇ ಅಯನಾಯ – ಶ್ವೇ. ಉ ) ಇದೇ ಅಧ್ಯಾತ್ಮಮಾರ್ಗದ ಪರಾಮಗುರಿ.  ಮಾ ಕುರು ಧನ-ಜನ-ಯೌವನ ಗರ್ವಂ – ಯೌವ್ವನ, ಧನ, ಜನರ ಗರ್ವವನ್ನು ಹೊಂದಬೇಡ. ಇಲ್ಲಿ ಯೌವ್ವನವನ್ನೋ, ಧನವನ್ನೋ ಅಥವಾ ಜನ/ಸಂಬಂಧಿಕರನ್ನೋ ದೂಷಿಸಿಲ್ಲ, ಅದರಿಂದ ಹುಟ್ಟುವ ಗರ್ವವನ್ನು ದೂಷಿಸಲಾಗಿದೆ.

ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *