ಯುಗಾದಿ ಹಿಂದೂ ಧರ್ಮದಲ್ಲಿ ಶ್ರೇಷ್ಠವಾದ ಹಬ್ಬವಾಗಿದೆ. ಚೈತ್ರಮಾಸ ಶ್ಲುಕ್ಷ ಪಕ್ಷದ ಪಾಂಡ್ಯದಂದು ಬರುತ್ತದೆ. ಇದು ಹಿಂದೂಗಳಿಗೆ ಅಥವಾ ಭಾರತೀಯರಿಗೆ ವರ್ಷದ ಮೊದಲ ದಿನ “ಯುಗ” ಎಂದರೆ ಸೃಷ್ಠಿಯಕಾಲಮಾನ, “ಆದಿ” ಎಂದರೆ ಆರಂಭ ಅರ್ಥಾತ್ ಹೊಸ ವರುಷದ ಆರಂಭ. ಚೈತ್ರ ಶುದ್ಧ ಪಾಂಡ್ಯದಂದು ಬ್ರಹ್ಮದೇವನು ವಿಶ್ವವನ್ನು ಸೃಷ್ಟಿಸಿದನು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಚಳಿಗಾಲದ ನಂತರ, ಬೇಸಿಗೆಯ ಮುನ್ನ ವಸಂತ ಋತುವನ್ನು “ಋತುಗಳ ರಾಜ” ಎಂದು ಕರೆಯುತ್ತಾರೆ. ಗಿಡ-ಮರಗಳೆಲ್ಲವೂ ತನ್ನ ಹಣ್ಣೆಲೆಯನ್ನುದುರಿಸಿ ಹೊಸ ಚಿಗುರು ಬರುವ ಸಮಯ. ಗಿಡ-ಮರಗಳೆಲ್ಲವೂ ಎಲೆ, ಹೂವು, ಕಾಯಿ ಬಿಟ್ಟು ಸಂಭ್ರಮಿಸುತ್ತವೆ. ಆ ಸೊಬಗು, ಆ ಸಂಭ್ರಮ ನೋಡಲೆರಡು ಕಂಗಳು ಸಾಲದು. ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರು. ಕವಿ, ಸಾಹಿತಿಗಳ ಭಾವಾಂತರಂಗಕ್ಕೆ ಸ್ಪೂರ್ತಿ ನೀಡುತ್ತದೆ. ಇಂತಹ ಒಂದು ಋತುವಿನಲ್ಲಿ ಬರುವ ಯುಗಾದಿ ಹಬ್ಬವು ಮನುಷ್ಯ ಜೀವನದ ಒಂದು ಸಂಕ್ರಮಣ ಕಾಲ. ಹಳೇಯ ದುಃಖ ದುಮ್ಮಾನಗಳೆಲ್ಲವನ್ನು ಮರೆತು ಹೊಸ ಆಶಯಗಳೊಂದಿಗೆ ಈ ಹಬ್ಬವು ಬದುಕಿನ ಹೊಸ ಅಧ್ಯಾಯವನ್ನು ಆರಂಭಿಸುತ್ತದೆ. ವರ್ಷಕ್ಕೆ ಒಂದು ಸಲ ಬರುವ ಈ ಸಮಯದಲ್ಲಿ ಭಗವಂತನ ಆರಾಧನೆ, ಪೂಜೆ, ದಾನ-ಧರ್ಮಗಳನ್ನು ಮಾಡಿ ವರ್ಷ ಪೂರ್ತಿ ಸುಖಮಯವಾಗಲೆಂದು ಪ್ರಾರ್ಥಿಸುತ್ತಾರೆ. ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಯುಗಾದಿ ಯುಗಾದಿ ಹಬ್ಬವು ವಸಂತ ಋತುವಿನ ಆಗಮನವನ್ನು ಸೂಚಿಸುತ್ತದೆ. ಆಯುರ್ವೇದದ ರೀತಿಯಂತೆ ವಸಂತ ಋತುವು ಸೂರ್ಯನು ಪ್ರಖರವಾಗಿರುವ ಉತ್ತರಾಯಣದಲ್ಲಿ ಬರುವುದಾದ್ದರಿಂದ ಸೂರ್ಯನ ತೀಕ್ಷಕಿರಣಗಳು ಜನರಲ್ಲಿ ಸುಸ್ತು, ಸಂಕಟ, ಬಾಯಾರಿಕೆ, ಮೈಉರಿ, ದೌರ್ಬಲ್ಯಗಳನ್ನು ಕ್ರಮೇಣ ಹೆಚ್ಚಾಗಿಸುತ್ತಾ ಹೋಗುತ್ತವೆ. ಯುಗಾದಿ ಹಬ್ಬದ ದಿನದಂದು ಸೇವಿಸುವ ಬೇವಿನ-ಬೆಲ್ಲ ಸೇವಿಸುವುದರ ಹಿಂದಿನ ಆಯುರ್ವೇದಲ್ಲಿ ತಿಳಿಸಲಾಗಿದೆ. ಬೇವಿನ ಗುಣಗಳು ಬೇವಿನ ಸೇವನೆಯು ಕಣ್ಣಿಗೆ ಹಿತವನ್ನುಂಟು ಮಾಡುತ್ತದೆ. ಕ್ರಿಮಿ-ಪಿತ್ತ ಹಾಗೂ ವಿಷಗಳನ್ನು ನಾಶಮಾಡುತ್ತದೆ. ವಾತ ಕಾರಕವಾಗಿದೆ. ಜೀರ್ಣಾನಂತರದ ವಿಪಾಕದಲ್ಲಿ ಕಟು ಭಾವವನ್ನು ಹೊಂದಿರುತ್ತದೆ. ಹಾಗೂ ಎಲ್ಲಾ ರೀತಿಯ ಚರ್ಮದ ಕಾಯಿಲೆಗಳನ್ನು ಮತ್ತು ನಾಲಿಗೆಗೆ ರುಚಿ ಇಲ್ಲದಿರುವ ಅರುಚಿ ರೋಗವನ್ನು ದೂರ ಅಟುತ್ತದೆ. ವಿಶೇಷವಾಗಿ ಬೇವಿನ ಎಲೆಗಳಿಗೆ ಊತವನ್ನು ತಗ್ಗಿಸುವ, ಚರ್ಮವನ್ನು ಉತ್ತೇಜಿಸುವ, ಚರ್ಮದ ಕಾಯಿಲೆಗಳನ್ನು ನಿವಾರಿಸುವ, ಹುಣ್ಣುಗಳನ್ನು ಬದ್ಧಗೊಳಿಸುವ, ವಾಸಿ ಮಾಡುವ, ಯಕೃತ್ತಿಗೆ ಹಿತವನ್ನು ಉಂಟುಮಾಡುವ ಹಾಗೂ ಕ್ರಿಮಿಗಳನ್ನು ನಾಶಮಾಡುವ ಗುಣವಿದೆ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದ್ದೇ ಆದರೆ ಇದು ವಾಂತಿಯನ್ನುಂಟುಮಾಡುತ್ತದೆ. ಬೇವಿನ ಹೂಗಳ ಶೀತಕಷಾಯವು ಜ್ವರ ಬಿಟ್ಟ ನಂತರ ಕಾಡುವ ದುರ್ಬಲತೆಯನ್ನು ಹೋಗಲಾಡಿಸುತ್ತದೆ ಹಾಗೂ ಜೀರ್ಣ ವಿಕಾರಗಳನ್ನು ಸರಿಪಡಿಸುತ್ತದೆ. ಚಿಕಿತ್ಸಾ ಉದ್ದೇಶಗಳಿಗಾಗಿ ಎಲೆಯ ರಸವನ್ನು ಒಂದರಿಂದ ಎರಡು ತೊಲ ಅಂದರೆ 2-4 ಚಮಚ ಸೇವಿಸಬೇಕು. ಬೆಲ್ಲದ ಗುಣಗಳು: ಹೊಸಬೆಲ್ಲ ಹಾಗೂ ಹಳೇ ಬೆಲ್ಲಗಳಿಗೆ ಗುಣಕರ್ಮದಲ್ಲಿ ವ್ಯತ್ಯಾಸವಿದೆ. ಹೊಸ ಬೆಲ್ಲವು ವೀರ್ಯವರ್ಧಕವಾಗಿದ್ದು ಜೀರ್ಣಕ್ಕೆ ಭಾರವಾಗಿರುತ್ತದೆ. ಸ್ನಿಗ್ಧ ಗುಣವನ್ನು ಹೊಂದಿದ್ದು ವಾತವನ್ನು ನಿಗ್ರಹಿಸುತ್ತದೆ. ಮೂತ್ರವನ್ನು ಶುದ್ಧಗೊಳಿಸುತ್ತದೆ. ಸ್ವಲ್ಪಮಟ್ಟಿಗೆ ಪಿತ್ತವನ್ನು ತಹಬಂದಿಗೆ ತರುತ್ತದೆ ಹಾಗೂ ಶರೀರದಲ್ಲಿ ಮೇದಸ್ಸು, ಕಫ ಹಾಗೂ ಬಲಗಳನ್ನು ವೃದ್ಧಿಸುತ್ತದೆ. ಹಳೇ ಬೆಲ್ಲವು ಲಘು ಗುಣವನ್ನು ಪಡೆದಿದೆ. ಶರೀರಕ್ಕೆ ಅತ್ಯಂತ ಹಿತವನ್ನುಂಟುಮಾಡುತ್ತದೆ. ಕಫವನ್ನು ಶೀಘ್ರವಾಗಿ ಹೆಚ್ಚಿಸುವುದಿಲ್ಲ, ಹಸಿವನ್ನು ಹೆಚ್ಚಿಸುತ್ತದೆ. ಶರೀರಕ್ಕೆ ಪುಷ್ಟಿಯನ್ನು ನೀಡುತ್ತದೆ. ಪಿತ್ತವನ್ನು ನಿವಾರಿಸುತ್ತದೆ. ಮಧುರ ರಸವನ್ನು ಹೊಂದಿದ್ದು ವೀರ್ಯವರ್ಧನೆಯನ್ನುಂಟುಮಾಡಿ ವಾತವನ್ನು ನಿಗ್ರಹಿಸುತ್ತದೆ. ರಕ್ತವನ್ನು ದೋಷಗಳಿಂದ ಮುಕ್ತಗೊಳಿಸುತ್ತವೆ. ಹೊಚ್ಚ ಹೊಸ ಬೆಲ್ಲವು ಕಫ, ಕೆಮ್ಮು, ದಮ್ಮಿನ ತೊಂದರೆಯನ್ನು ಉಂಟುಮಾಡುತ್ತದೆ. ಹಸಿವನ್ನು ಹೆಚ್ಚಿಸುತ್ತದೆ. ಬೆಲ್ಲವನ್ನು ವಿವಿಧ ಅನುಪಾನಗಳೊಡನೆ ಸೇವಿಸಿದಾಗ ಅದರ ಗುಣಕರ್ಮಗಳು ಭಿನ್ನವಾಗಿವೆ. ಉದಾಹರಣೆಗೆ ಬೆಲ್ಲವನ್ನು ಹಸಿ ಶುಂಠಿಯ ಜೊತೆ ತಿಂದರೆ ಕಫವನ್ನು ಕೂಡಲೇ ಕಮ್ಮಿ ಮಾಡುತ್ತದೆ. ಅಳಲೇಕಾಯಿಯೊಡನೆ ತಿಂದರೆ ಪಿತ್ತವನ್ನು ದೂರಮಾಡುತ್ತದೆ. ಒಣಶುಂಠಿಯೊಡನೆ ತಿಂದರೆ ಪಿತ್ತವನ್ನು ದೂರೀಕರಿಸುತ್ತದೆ. ಒಣಶುಂಠಿಯೊಡನೆ ತಿಂದಾಗ ಸಂಪೂರ್ಣ ವಾತಸಂಬಂಧಿ ವಿಕಾರಗಳು ದೂರವಾಗುತ್ತವೆ. ಈ ರೀತಿ ಮೂರು ವಿಧವಾದ ದೋಷಗಳನ್ನು ದೂರ ಮಾಡುವ ಬೆಲ್ಲವು ಸರ್ವೋತ್ತಮವಾಗಿದೆ. ಶತಾಯುರ್ವಪ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಂ ॥ ಅಂದರೆ ನೂರು ವರ್ಷಗಳ ಆಯಸ್ಸು, ಗಟ್ಟಿಮುಟ್ಟಾದ ಆರೋಗ್ಯ, ಎಲ್ಲ ರೀತಿಯ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಎಲ್ಲ ರೀತಿಯ ಕೆಡುಕುಗಳ ನಿವಾರಣೆಗಾಗಿಯೂ ಬೇವು, ಬೆಲ್ಲ ಸೇವನೆ ಮಾಡುತ್ತೇನೆಂದು ಹೇಳಬೇಕು. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation Doctor Interview: ಲೈಂಗಿಕಕ್ರಿಯೆಯಲ್ಲಿ ತೊಡಗಿಕೊಂಡರೆ ಗರ್ಭಕೋಶ ಕ್ಯಾನ್ಸರ್ ಬರುತ್ತಾ? ಗುಣಮುಕವಾಗಲು ಈ ನಿಯಮ ಪಾಲನೆ ಕಡ್ಡಾಯ ಭಗವತ್ಪಾದ ಶ್ರೀ ಶಂಕರಾಚಾರ್ಯರು ರಚಿಸಿದ ಭಜಗೋವಿಂದಂ ಸರಣಿ