ನಾವು ‘ಶಾಸ್ತ್ರ’ ಎಂಬ ಪದದ ಗಾಢತೆ, ವಿಶಾಲತೆ ಹಾಗೂ ಅರ್ಥವನ್ನು ತಿಳಿದೋ, ತಿಳಿಯದೆಯೋ ಅಥವಾ ತಪ್ಪು ತಿಳಿದೋ, ಹಲವು ಬಾರಿ ಸಂಭಾಷಣೆಯ ಮಧ್ಯೆ ಕೇಳಿರಬಹುದು ಇಲ್ಲವೇ ಉಪಯೋಗಿಸಿರಬಹುದು. ’ಶಾಸ್ತ್ರಂ’ ಎಂಬ ಸಂಸ್ಕೃತ ಪದದ ವಾಚ್ಯಾರ್ಥ ‘ಚತುರ್ವಿಧ ಪುರುಷಾರ್ಥಗಳ ವಿಷಯವನ್ನು ಹೊಂದಿರುವ ವೈದಿಕ ಸನಾತನಧರ್ಮದ ಗ್ರಂಥಗಳು’. ಶಾಸ್ತ್ರಗ್ರಂಥಗಳು ಮಾನವನಿಗೆ ಸಹಾಯ ಮಾಡಲು ಇರುವವೇ ವಿನಃ ಸ್ವಾತಂತ್ರ್ಯ ಕಸಿದುಕೊಳ್ಳಲು ಅಥವಾ ತೊಂದರೆ ಕೊಡುವುದಕ್ಕಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ರೈಲ್ವೆ ನಿಲ್ದಾಣದಲ್ಲಿನ Enquiry ಸೇವಾಕೌಂಟರ್, ಸಹಾಯ ಕೇಳಿದವರಿಗೆ ಸೂಕ್ತ ಮಾರ್ಗದರ್ಶನ, ಮಾಹಿತಿ ನೀಡುವಂತೆ ಶಾಸ್ತ್ರಗಳೂ ಪುರುಷಾರ್ಥ ಪ್ರಾಪ್ತಿಯನ್ನು ಸಾಧಿಸಿಕೊಳ್ಳಲು ಮಾರ್ಗದರ್ಶನ ಬಯಸುವ ಮಾನವನಿಗೆ ದಾರಿದೀಪದ ಹಾಗೆ, ಶಿಶುವನ್ನು ಕೈಹಿಡಿದು ನಡೆಸುವ ತಾಯಿಯಂತೆ ಸೂಕ್ತಹಾದಿಯಲ್ಲಿ ಮುನ್ನಡೆಸುತ್ತವೆ. ’ಶಾಸ್ತ್ರಂ’ ಎಂಬ ಪದವನ್ನು ’ಸೂಕ್ತ ಬೋಧನೆ, ಸಲಹೆಗಳ ಮೂಲಕ ಮಾನವನನ್ನು ಸಂರಕ್ಷಣೆ ಮಾಡುವ ಸಾಧನ’ (‘ಶಾಸನಾತ್ ತ್ರಾಯತೇ ಇತಿ ಶಾಸ್ತ್ರಂ’) ಎಂದು ಅರ್ಥೈಸಬೇಕು. ಪ್ರಪಂಚದ ಬಹುತೇಕ ಮತಗಳು ಒಂದು ಗ್ರಂಥಕ್ಕಷ್ಟೇ ಸೀಮಿತವಾಗಿದ್ದರೆ, ವೈದಿಕ ಸನಾತನಧರ್ಮದಲ್ಲಿ ಹಲವಾರು ಶಾಸ್ತ್ರಗ್ರಂಥಗಳಿದ್ದು, ಒಬ್ಬ ವ್ಯಕ್ತಿಯು ತನ್ನ ಸಂಪೂರ್ಣ ಜೀವಿತಾವಧಿಯಲ್ಲಿ ಓದಿಮುಗಿಸಲಾಗದಷ್ಟು ಬೃಹತ್ಗ್ರಂಥರಾಶಿಯಾಗಿದೆ. ಮೂಲ ಗ್ರಂಥಗಳಾದ ವೇದಗಳು: ’ವೇದ’ ಎಂಬ ಪದದ ಅರ್ಥ ’ಜ್ಞಾನ’. ವೇದಗಳು ಯಾವುದೇ ಮನುಷ್ಯನಿಂದ ಸೃಷ್ಟಿಯಾದ ಜ್ಞಾನವಾಗಿರದೆ, ಸ್ವಯಂ ಪರಮಾತ್ಮನಿಂದ ಮಾನವಕುಲಕ್ಕೆ ದೊರಕಿದ ಜ್ಞಾನ ಭಂಡಾರವಾದ ಕಾರಣ, ಇವನ್ನು ’ಅಪೌರುಷೇಯ ಶಾಸ್ತ್ರ’ ಎಂದು ಕರೆಯುತ್ತಾರೆ. ಈ ವಿಷಯವು ವೇದಗಳಲ್ಲಿ ಹಲವು ಕಡೆ ಉಲ್ಲೇಖವಾಗಿದೆ. ಉದಾಹರಣೆ ಶ್ವೇತಾಶ್ವತ್ತರ ಉಪನಿಷತ್ – ‘ಯೋ ಬ್ರಹ್ಮಾಣಂ ವಿದಧಾತಿ ಪೂರ್ವಂ ಯೋ ವೈ ವೇದಾಂಶ್ಚ ಪ್ರಹಿಣೋತಿ ತಸ್ಮೈಃ’* – ಪರಮಾತ್ಮನು ಸೃಷ್ಟಿಯ ಪೂರ್ವದಲ್ಲಿ ಚತುರ್ಮುಖ ಬ್ರಹ್ಮನನ್ನು ಸೃಷ್ಟಿಸಿ, ನಂತರ ವೇದಜ್ಞಾನವನ್ನು ಅವನಿಗೆ ಕೊಟ್ಟನು. ಇಂತಹ ಅತ್ಯಮೂಲ್ಯ ಉಡುಗೊರೆ ಮಾನವಕುಲಕ್ಕೆ ದೊರೆತುದಾದರೂ ಹೇಗೆ? ತಪಸ್ಸಿನ ಮೂಲಕ ಸಾಧನೆ ಮಾಡಿದ ಋಷಿಗಳು ತಮ್ಮ ಅತಿಸೂಕ್ಷ್ಮ ಮನಸ್ಸಿನಲ್ಲಿ ಶಬ್ದರೂಪದಲ್ಲಿದ್ದ ವೇದಮಂತ್ರಗಳನ್ನು ಸಾಕ್ಷಾತ್ಕರಿಸಿಕೊಂಡರು. ಇದು ಸೃಷ್ಟಿಯಲ್ಲಿ ಸದಾ ಇರುವ ವೈಜ್ಞಾನಿಕ ಸತ್ಯಗಳನ್ನು ಸಂಶೋಧನಾನಿರತ ವಿಜ್ಞಾನಿಗಳು ಒಂದು ನಿರ್ದಿಷ್ಟ ಸಮಯದಲ್ಲಿ ಕಂಡುಹಿಡಿದ ಹಾಗೆ. ಆದ್ದರಿಂದ ಋಷಿಗಳನ್ನು ’ಮಂತ್ರದ್ರಷ್ಟಾರ’ ಎಂದು ಕರೆಯುತ್ತೇವೆ ಹೊರತು ’ಮಂತ್ರಕರ್ತಾ’ ಎಂದಲ್ಲ. ಈ ಮಂತ್ರಗಳು ಗುರುಶಿಷ್ಯ ಪರಂಪರೆಯಲ್ಲಿ ಅವ್ಯಾಹತವಾಗಿ ಕರ್ಣ(ಶ್ರೋತ್ರ) ಮಾಧ್ಯಮದ ಮೂಲಕ ಹರಿದುಬಂದ ಕಾರಣ ವೇದಗಳನ್ನು ’ಶ್ರುತಿ’ ಅಥವಾ ’ಶಬ್ದಪ್ರಮಾಣ’ವೆಂದೂ ಕರೆಯುತ್ತಾರೆ. ವ್ಯಾಸ ಮಹರ್ಷಿಗಳು ಸಮಸ್ತ ವೇದಜ್ಞಾನವನ್ನು ನಾಲ್ಕು ವೇದಗಳನ್ನಾ ಗಿ ವಿಂಗಡಿಸಿದ್ದಾರೆ, ಅವೇ ಋಗ್ವೇದ, ಯಜುರ್ವೇದ, ಸಾಮವೇದ ಹಾಗು ಅಥರ್ವಣವೇದ. ಪ್ರತಿ ವೇದದಲ್ಲಿಯೂ ಧರ್ಮ-ಅರ್ಥ-ಕಾಮ ವಿಷಯಾಧಾರಿತ ಕರ್ಮಪ್ರಧಾನವಾದ ‘ವೇದಪೂರ್ವ(ಕರ್ಮಕಾಂಡ)’ ಹಾಗೂ ಮೋಕ್ಷವಿಷಯವನ್ನು ಉಪನಿಷತ್ತುಗಳ ಮೂಲಕ ಪ್ರತಿಪಾದಿಸುವ ಜ್ಞಾನಪ್ರಧಾನವಾದ ‘ವೇದಾಂತ(ಜ್ಞಾನಕಾಂಡ)’ಗಳೆಂದು ಮರುವಿಂಗಡಿಸಬಹುದು. ಕಾಲಪ್ರವಾಹದಲ್ಲಿ ಬೃಹತ್ಗಾತ್ರದ ಮಂತ್ರಗಳು ನಷ್ಟವಾದ ನಂತರವೂ, ಇಂದು ನಮಗೆ ದೊರೆತಿರುವ ಒಟ್ಟು ವೇದಮಂತ್ರಗಳು ಸುಮಾರು 20000!! ವೈದಿಕ ವಾಜ್ಮಯದಲ್ಲಿ ವೇದಗಳು ಮೂಲ ಗ್ರಂಥಗಳಾದರೂ, ಹಲವಾರು ಶಾಸ್ತ್ರಗ್ರಂಥಗಳು ನಮ್ಮ ನೆರವಿಗೆ ಬರುತ್ತವೆ. ಅವುಗಳ ವಿವರಣೆಯನ್ನು ನಾಳಿನ ಅಂಕಣದಲ್ಲಿ ನೋಡೋಣ. ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ವೇದಾಂತ ಪರಿಚಯ ಭಾಗ 2: ಪುರುಷಾರ್ಥಗಳ ಪ್ರಮುಖ ಮೂರು ಭಾವಾರ್ಥಗಳು ವೇದಾಂತ ಪರಿಚಯ: ಸ್ಮೃತಿಗಳು ಎಂದರೇನು, ಹೇಗೆ ಹುಟ್ಟಿಕೊಂಡವು, ಎಷ್ಟು ಸ್ಮೃತಿಗಳಿವೆ?