ಸತ್ಯಕಾಮ ಜಾಬಾಲ ತನ್ನ ಸತ್ಯನಿಷ್ಠೆ, ಗುರುಶುಶ್ರೂಷೆ, ವಿನಯ ಮುಂತಾದ ದೈವಿ ಗುಣಗಳ ಮತ್ತು ಶ್ರವಣ, ಮನನಾದಿ ಸಾಧನೆಗಳ ಮೂಲಕ ತತ್ವಸಾಕ್ಷಾತ್ಕಾರ ಮಾಡಿಕೊಂಡ ರೋಚಕ ಕಥೆಯನ್ನು ಈಗಾಗಲೇ ತಿಳಿದಿದ್ದೇವೆ. ಗುರು ಗೌತಮರಿಂದ ಪ್ರೇರಿತನಾದ ಸತ್ಯಕಾಮ, ವ್ಯಾಸಂಗವನ್ನು ಪೂರ್ಣಗೊಳಿಸಿದ ನಂತರ, ಗೃಹಸ್ಥಾಶ್ರಮವನ್ನು ಪ್ರವೇಶಿಸಿ, ಒಂದು ಗುರುಕುಲವನ್ನು ಪ್ರಾರಂಭಿಸಿ, ವೇದಜ್ಞಾನವನ್ನು ಹರಡುವ ಆಚಾರ್ಯನಾದ. ಅವನ ಅಪಾರ ಜ್ಞಾನ ಮತ್ತು ಅಧ್ಯಾಪನದಲ್ಲಿನ ಸೃಜನಾತ್ಮಕ ಶೈಲಿ ಹೇಗಿತ್ತೆಂದರೆ, ಅವನ ಹೆಸರು – ಕೀರ್ತಿ ಅಷ್ಟ ದಿಕ್ಕುಗಳಲ್ಲೆಲ್ಲ ಹರಡಿ, ನಾನಾ ಸಂಸ್ಥಾನಗಳಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಗುರುಕುಲಕ್ಕೆ ಬಂದರು. ಗುರುಕುಲಗಳಲ್ಲಿ ವೇದಾಧ್ಯಯನದ ಜೊತೆಜೊತೆಗೆ ವಿಜ್ಞಾನಾದಿ ಲೌಕಿಕ ವಿಷಯಗಳನ್ನೂ ಹೇಳಿಕೊಡಲಾಗುತ್ತಿತ್ತು. ಗುರುಕುಲದ ಗೋಶಾಲೆಯ ನಿರ್ವಹಣೆ, ಕೃಷಿ, ಸ್ವಚ್ಛತೆ, ಪಾಕಶಾಲೆಯಲ್ಲಿ ಅಡುಗೆಗಳ ತಯಾರಿ, ಅತಿಥಿ – ಅಭ್ಯಾಗತರ ಸೇವೆ ಹೀಗೆ ಎಲ್ಲಾ ಕೆಲಸಗಳಲ್ಲೂ ವಿದ್ಯಾರ್ಥಿಗಳು ತಮ್ಮ ಶ್ರಮದಾನವನ್ನು ನೀಡುತ್ತಾ ಜೀವನಕೌಶಲ್ಯಗಳನ್ನು ಕಲಿಯುತ್ತಿದ್ದರು ಹಾಗೂ ತನ್ಮೂಲಕ ಚಿತ್ತಶುದ್ಧಿಯನ್ನು ಸಂಪಾದಿಸುತ್ತಿದ್ದರು. ಹೀಗಿರುವಾಗ ಕೋಸಲ ಸಾಮ್ರಾಜ್ಯದಿಂದ ಕಮಲಾಯನ (ಉಪಕೋಸಲ) ನೆಂಬ ವಿದ್ಯಾರ್ಥಿಯು ಗುರುಕುಲಕ್ಕೆ ಪ್ರವೇಶ ಪಡೆದು ಅಧ್ಯಯನವನ್ನು ಪ್ರಾರಂಭಿಸಿದ. ಉಪಕೋಸಲನಿಗೆ ಗುರುಗಳಾದ ಸತ್ಯಕಾಮರೊಡನೆ ಯಾಗಶಾಲೆಯಲ್ಲಿ ಅಗ್ನಿಯನ್ನು ಸಂರಕ್ಷಿಸುವುದು ಹಾಗೂ ಗುರುಗಳ ವೈದಿಕ ಕರ್ಮಗಳಿಗೆ ಸಹಾಯ ಮಾಡುವ ಜವಾಬ್ದಾರಿಯನ್ನು ನೀಡಲಾಗಿತ್ತು. ಆತನು ಅಗ್ನಿದೇವನ ಸೇವಾಕಾರ್ಯವನ್ನು ಶ್ರದ್ಧಾ ಭಕ್ತಿಗಳಿಂದ, ಕರ್ತವ್ಯ ತತ್ಪರತೆಯಿಂದ ಮಾಡುತ್ತಿದ್ದ. ಹೀಗೇ ದಿನಗಳು, ಮಾಸಗಳು, ಸಂವತ್ಸರಗಳು ಉರುಳಿದವು. ಉಪಕೋಸಲನಿಗಿಂತ ಹಿರಿಯರು ಸಮಾವರ್ತನಗೊಂಡು (ಪದವಿ) ಗುರುಕುಲದಿಂದ ನಿರ್ಗಮಿಸಿದರು. ಸಮಾವರ್ತನ ಕಾರ್ಯಕ್ರಮದಲ್ಲಿ ಉಪಕೋಸಲ ಉತ್ಸಾಹದಿಂದ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡು, ಸಂತೋಷದಿಂದ ಎಲ್ಲ ಮಿತ್ರರನ್ನು ಬೀಳ್ಕೊಡುತ್ತಿದ್ದ. ಹೀಗೇ ಕಾಲಕ್ರಮೇಣ ತನ್ನ ಸಹಪಾಠಿಗಳೂ ಮತ್ತು ಕಿರಿಯರೂ ಅಧ್ಯಯನವನ್ನು ಪೂರ್ಣಗೊಳಿಸಿ, ಗುರುಕುಲದಿಂದ ತೆರಳಿದರು. ಆದರೆ ಉಪಕೋಸಲನಿಗೆ ಇನ್ನೂ ಗುರುಕುಲದಿಂದ ನಿರ್ಗಮಿಸಲು ಗುರುಗಳಿಂದ ಅಜ್ಞೆಯಾಗಿರಲಿಲ್ಲ. ಈ ಒಂದು ಯೋಚನೆ ಅವನ ಮನಸ್ಸನ್ನು ಸದಾ ಕಾಡುತ್ತಿತ್ತು – “ನನಗಿಂತ ಹಿರಿಯರಾದ ವಿದ್ಯಾರ್ಥಿಗಳು, ನನ್ನ ಸಹಪಾಠಿಗಳು ಮತ್ತು ನನಗಿಂತ ಕಿರಿಯ ವಿದ್ಯಾರ್ಥಿಗಳೆಲ್ಲರೂ ಅಧ್ಯಯನವನ್ನು ಪೂರ್ಣಗೊಳಿಸಿ, ಸಮಾವರ್ತನೆಗೊಂಡು, ಗುರುಕುಲದಿಂದ ನಿರ್ಗಮಿಸಿದ್ದಾರೆ. ನಾನೂ ಕೂಡ ಹಲವು ವರ್ಷಗಳಿಂದ ಅಧ್ಯಯನ ಮತ್ತು ಗುರುಸೇವೆ ಮಾಡುತ್ತಿದ್ದರೂ, ಗುರುಗಳು ನನ್ನನ್ನು ಏಕೆ ಗುರುಕುಲದಿಂದ ಸಮಾವರ್ತನಾಗಲು ಇನ್ನೂ ಅನುಮತಿ ನೀಡಿಲ್ಲ. ನಾನು ಅಷ್ಟು ಮೂರ್ಖನೇ?”. ಆದರೆ, ಈ ವಿಷಯವಾಗಿ ಗುರುಗಳನ್ನು ನೇರವಾಗಿ ಎಂದೂ ಕೇಳಿರಲಿಲ್ಲ. ಒಮ್ಮೆ ಸತ್ಯಕಾಮರ ಪತ್ನಿ, ಸತ್ಯಕಾಮರ ಕೇಳಿದಾಗ, ಸತ್ಯಕಾಮರು ಮುಗುಳ್ನಕ್ಕು, ಏನೂ ಉತ್ತರಿಸದೆ, ಯಾವುದೋ ಕೆಲಸದ ಮೇಲೆ ಯಾತ್ರೆಗೆ ಹೊರಟರು. ಗುರುಗಳ ನಿರ್ಗಮನದ ನಂತರ, ಉಪಕೋಸಲ ಗುರುಕುಲದಲ್ಲಿ ದಿನನಿತ್ಯ ತಪ್ಪದೇ ತನ್ನ ಕಾರ್ಯಗಳನ್ನು ನಿರ್ವಹಿಸುತ್ತಿದ್ದರೂ, ತಾನಿನ್ನೂ ಗುರುವಿನ ಅನುಗ್ರಹಕ್ಕೆ ಪಾತ್ರನಾಗಿಲ್ಲವಲ್ಲ ಎಂಬ ಖೇದ ಈಟಿಯಂತೆ ಮನಸ್ಸನ್ನು ಇರಿಯುತಿತ್ತು. ಈ ವೇದನೆಯು ಹೆಚ್ಚಾಗಿ, ಗುರುವಿನ ಅನುಗ್ರಹವನ್ನು ಗಳಿಸದ ತನ್ನ ಜೀವನ ವ್ಯರ್ಥವೆಂದು ಭಾವಿಸಿ, ನೀರು, ಆಹಾರ , ವಿಹಾರಗಳನ್ನೆಲ್ಲಾ ತ್ಯಜಿಸಿದನು. ಗುರುಮಾತೆಯಾದ ಸತ್ಯಕಾಮರ ಪತ್ನಿ, ಉಪಕೋಸಲನಿಗೆ ಸಾಂತ್ವನ ಮಾಡಿ, ಸಮಾಧಾನ ಮಾಡಿ, ಊಟೋಪಚರಗಳನ್ನು ಮಾಡಿಸಿ ಮಲಗಿಸಿದಳು. ಗುರುಗಳು ತನಗೆ ಸಮಾವರ್ತನಾಗಲು ಅನುಮತಿ ನೀಡದಿದ್ದಕ್ಕೆ ಗುರುಗಳನ್ನು ದೂಷಿಸದೇ, ಬದಲಾಗಿ ತನ್ನಲ್ಲೇ ಏನೋ ದೋಷವಿರಬಹುದು ಎಂದು ಆತ್ಮಾವಲೋಕನೆ ಮಾಡಿಕೊಳ್ಳಲು ಪ್ರಾರಂಭಿಸಿದ. ಇದರಿಂದ ತನ್ನಲ್ಲಿರುವ ನ್ಯೂನತೆಗಳಾದ – ಭಾವನಾತ್ಮಕ ಅಸಮತೋಲನ, ಸಂಶಯಾತ್ಮಕ ಮನಸ್ಸು ಹಾಗು ಏಕಾಗ್ರತೆಯ ಕೊರತೆಯನ್ನು ಗುರುತಿಸಿಕೊಳ್ಳಲಾರಂಭಿಸಿದನು. ಇದನ್ನೂ ಓದಿ: ಉಪನಿಷತ್ತಿನ ಕಥೆಗಳು: ಭೃಗು ಮಹರ್ಷಿಗಳ ಬ್ರಹ್ಮಾನ್ವೇಷಣೆಯ ಸುಂದರ ಕಥೆ ಗುರುಮಾತೆಯ ಬಳಿ ಈ ಸಮಸ್ಯೆಗಳಿಗೆ ಸಲಹೆಗಳನ್ನು ಪಡೆದು ಅದರಂತೆ ಕರ್ಮೋಪಾಸನೆಗಳಲ್ಲಿ ತೊಡಗಿಸಿಕೊಂಡು ತನ್ನನ್ನು ತಾನು ಉದ್ಧರಿಸಿಕೊಳ್ಳಿರುವ ಕಾರ್ಯದಲ್ಲಿ ನಿರತನಾದ. ಕೆಲವು ತಿಂಗಳುಗಳ ನಂತರ, ಯಾಗಶಾಲೆಯಲ್ಲಿ ತನ್ನ ನಿತ್ಯಕರ್ಮವನ್ನು ಮಾಡುತ್ತಿರುವಾಗ ಅಗ್ನಿದೇವನು ಪ್ರತ್ಯಕ್ಷನಾಗಿ, “ಎಲೈ ಉಪಕೋಸಲ, ಹಲವಾರು ವರ್ಷಗಳಿಂದ ನನ್ನ ಸೇವೆಯನ್ನು ಮಾಡಿರುವೆ. ನಿನ್ನ ಶ್ರದ್ಧಾ – ಭಕ್ತಿಗೆ ಮೆಚ್ಚಿ, ನಿನ್ನ ಸೇವೆಗೆ ಸಂಪ್ರೀತನಾಗಿರುವೆ. ನಿನಗೆ ತಿಳಿಯಲು ಆಸಕ್ತಿ ಇದ್ದರೆ ಉಪದೇಶಿಸುವೆ”, ಎಂದು ವರವನ್ನು ನೀಡಿದ. ಆನಂದ ಮತ್ತು ಉತ್ಸುಕತೆಯಿಂದ ಉಪಕೋಸಲ, “ಧನ್ಯನಾದೆ ಅಗ್ನಿದೇವ. ನನಗೆ ಬ್ರಹ್ಮವನ್ನು ಉಪದೇಶಿಸಿ ಎಂದು ಬೇಡಲು ಅಗ್ನಿದೇವ, “ಪ್ರಾಣೋ ಬ್ರಹ್ಮ ಕಂ ಬ್ರಹ್ಮ ಖಂ ಬ್ರಹ್ಮ”, ಎಂದು ಸೂಚ್ಯವಾಗಿ ಉಪದೇಶಿಸಿದ. ಏಕಾಗ್ರತೆಯಿಂದ ಆಲಿಸಿದ ಉಪಕೋಸಲ, ದೇವಾ! ಪ್ರಾಣ ಬ್ರಹ್ಮವೆಂಬ ವಿಷಯ ಅರ್ಥವಾಯಿತು. ಆದರೆ ಕಂ ಎಂದರೆ ಅನಿತ್ಯವಾದ ವಿಷಯಸುಖ ಮತ್ತು ಖಂ ಎಂದರೆ ಜಡವಾದ ಆಕಾಶ. ಇವು ಹೇಗೆ ಬ್ರಹ್ಮವೆಂದು ತಿಳಿಯಲಿಲ್ಲ ಎಂದು ಕೇಳಲು ಅಗ್ನೀದೇವನು, ಯತ್ ಕಂ ತದೇವ ಖಂ, ಯದೇವ ಖಂ ತದೇವ ಕಂ. ಹೃದಯಾಕಾಶ (ಖಂ) ಎಂಬ ಉಪಲಬ್ಧಿಸ್ಥಾನದಲ್ಲಿ ಅನುಭವವಾಗುವ ಪ್ರತಿಯೊಂದು ಆನಂದವೂ(ಕಂ) ಬ್ರಹ್ಮದ ಪ್ರತಿಬಿಂಬವೇ ಆಗಿದೆ. ಇದನ್ನು ಧ್ಯಾನಿಸು. ಮುಂದಿನ ವಿದ್ಯೆಯನ್ನು ಮತ್ತು ಫಲದ ವಿಷಯಗಳನ್ನು ನಿನ್ನ ಗುರುಗಳು ಉಪದೇಶಿಸುತ್ತಾರೆ ಎಂದು ಉತ್ತರಿಸಿ ಅಂತರ್ಧಾನನಾದ. ಅಗ್ನಿದೇವನಿಂದಲೇ ಜ್ಞಾನವನ್ನು ಪಡೆದರೂ, ಸ್ವಲ್ಪವೂ ದರ್ಪವಿಲ್ಲದೆ, ಉಪಕೋಸಲ ತನ್ನ ನಿತ್ಯಕರ್ಮಗಳನ್ನು, ಗುರುಕುಲದ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಮುಂದುವರೆದ. ಕೆಲವು ದಿನಗಳ ನಂತರ ಸತ್ಯಕಾಮರು ಗುರುಕುಲಕ್ಕೆ ಹಿಂದಿರುಗಿ ಬಂದರು. ಮರುದಿನ ಯಾಗಶಾಲೆಯಲ್ಲಿ ಅಗ್ನಿಯ ಮುಂದೆ ಜಾಜ್ವಲ್ಯಮಾನವಾಗಿ ಬೆಳಗುತ್ತಿದ್ದ ಶಿಷ್ಯನಾದ ಉಪಕೋಸಲನನ್ನು ಗಮನಿಸಿ ಸತ್ಯಕಾಮರು, “ನಿನ್ನ ಮುಖ ಬ್ರಹ್ಮತೇಜಸ್ಸಿನಿಂದ ಹೊಳೆಯುತ್ತಿದೆ. ನಿನಗೆ ಯಾರಾದರೂ ಬ್ರಹ್ಮೋಪದೇಶವನ್ನು ಮಾಡಿದರೇ? ಎಂದು ಪ್ರಶ್ನಿಸಿದರು. ಉಪಕೋಸಲ ವಿನಯದಿಂದ ತನಗಾದ ಅನುಭವ ಮತ್ತು ಉಪದೇಶವನ್ನು ತಿಳಿಸಿ, ನನಗೆ ನಿಮ್ಮ ಹೊರತು ಬೇರಾರು ಗತಿಯಿಲ್ಲ ಗುರುವರ್ಯ. ದಯಮಾಡಿ ಬ್ರಹ್ಮವನ್ನು ಪೂರ್ಣವಾಗಿ ಉಪದೇಶಿಸಿ ಎನ್ನಲು ಗುರುಗಳು ಸಂತೋಷದಿಂದ ಈ ಕಾಲಕ್ಕಾಗಿ ನಾನು ಇಷ್ಟು ವರ್ಷ ಕಾಯುತ್ತಿದ್ದೆ. ನಿನ್ನನ್ನು ಬ್ರಹ್ಮಜ್ಞಾನಿಯನ್ನಾಗಿ ಮಾಡಲು ಇಷ್ಟು ಕಾಲ ಗುರುಕುಲದಲ್ಲಿ ಉಳಿಸಿಕೊಂಡೆ. ನಿನಗೆ ಅಗ್ನಿದೇವನಿಂದ ಉಪದೇಶವಾಗಿರುವುದು ಕೇವಲ ಬ್ರಹ್ಮದ ಉಪಲಬ್ಧಿಸ್ಥಾನ. ಬ್ರಹ್ಮದ ನಿಜ ಸ್ವರೂಪವನ್ನು ತಿಳಿಸುವೆ ಎಂದು ಅವನಿಗೆ ಕ್ರಮಬದ್ಧವಾಗಿ ಉಪದೇಶಿಸಿದರು. ಉಪಕೋಸಲನಿಗೆ ತನ್ನ ಗುರು ತನ್ನನ್ನು ಹೆಚ್ಚು ಕಾಲ ಗುರುಕುಲದಲ್ಲಿ ಉಳಿಸಿಕೊಂಡಿದ್ದು ತನ್ನ ಮೇಲಿನ ತಾತ್ಸಾರದಿಂದಲ್ಲ ಬದಲಿಗೆ ತನ್ನಲ್ಲಿ ಜ್ಞಾನಯೋಗ್ಯತೆಗಳನ್ನು ಬೆಳೆಸಿ, ಬ್ರಹ್ಮಜ್ಞಾನಿಯನ್ನಾಗಿ ಮಾಡಬೇಕೆಂಬ ನಿರತಿಶಯ ಪ್ರೀತಿಯಿಂದ ಎಂದು ತಿಳಿಯಿತು. ಉಪಕೋಸಲನು ಆತ್ಮವನ್ನರಿತು ಕೃತಕೃತ್ಯನಾದ ಎಂಬಲ್ಲಿಗೆ ಛಾಂದೋಗ್ಯ ಉಪನಿಷತ್ತಿನ ಈ ಸುಂದರ ಆಖ್ಯಾಯಿಕೆ ಪೂರ್ಣಗೊಳ್ಳುತ್ತದೆ. ಈ ಕಥೆಯಿಂದ ಕಲಿಯಬಹುದಾದ ನೀತಿ ಆತ್ಮಜ್ಞಾನದಿಂದಲೇ ಜೀವನದಲ್ಲಿ ಕೃತಕೃತ್ಯತೆ ಸಿಗುವುದು ಎಂಬ ಗುರಿಯನ್ನು ನಿಶ್ಚಯ ಮಾಡಿಕೊಳ್ಳುವುದು. ಸತ್ಯಕಾಮರು ತನ್ನ ಶಿಷ್ಯರಲ್ಲಿ ವೇದ, ವಿಜ್ಞಾನ, ಜೀವನಕಲೆ ಮತ್ತು ಮೌಲ್ಯಗಳನ್ನು ಬಿತ್ತುತ್ತಿದ್ದ ರೀತಿ ಶಿಕ್ಷಕರೆಲ್ಲರಿಗೂ ಮಾರ್ಗಸೂಚಿಯಾಗಬೇಕು. ಉಪಕೋಸಲನ ಗುರುಭಕ್ತಿ, ಸೇವಾತತ್ಪರತೆ, ಶ್ರದ್ಧೆ ಮತ್ತು ಕರ್ಮನಿಷ್ಟೆ ಅನುಸರಣೀಯ. ತನಗೆ ಬೇಕಿದ್ದ ಉದ್ದೇಶ ಪೂರ್ಣವಾಗದಿದ್ದಾಗ, ಗುರುಗಳನ್ನು ದೂಷಿಸದೆ, ಉಪಕೋಸಲ ಆಯ್ದುಕೊಂಡ ಆತ್ಮಾವಲೋಕನೆ ಎಲ್ಲರೂ ಕೈಗೊಳ್ಳಬೇಕು. ಬೇಸರದಲ್ಲಿದ್ದಾಗ ಗುರುಮಾತೆ ತೋರಿದ ಪ್ರೀತಿ, ಕಾಳಜಿ ಮತ್ತು ಆಪ್ತಸಲಹೆ ಕುಗ್ಗಿಹೋಗಿದ್ದ ಉಪಕೋಸಲನ ಉತ್ಸಾಹವನ್ನು ಜಾಗ್ರತ ಮಾಡಿದಂತೆ, ನಾವೂ ಸಹ ಸುತ್ತಮುತ್ತಲಿನವರಿಗೆ ಸಂವೇದನಾಶೀಲರಾಗಿರಬೇಕು. ದೇವತೆಗಳಿಂದ ಜ್ಞಾನವನ್ನು ಪಡೆದ ಬಳಿಕವೂ ಉಪಕೋಸಲನಲ್ಲಿದ್ದ ವಿನಯ, ವಿನಮ್ರತೆ ಮತ್ತು ಗುರುಭಕ್ತಿ ನಮಗೆಲ್ಲರಿಗೂ ಆದರ್ಶವಾಗಬೇಕು. ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಉಪನಿಷತ್ತಿನ ಕಥೆಗಳು: ಭೃಗು ಮಹರ್ಷಿಗಳ ಬ್ರಹ್ಮಾನ್ವೇಷಣೆಯ ಸುಂದರ ಕಥೆ ಉಪನಿಷತ್ತಿನ ಕಥೆಗಳು: ಜನಕರಾಜನ ಆಸ್ಥಾನದಲ್ಲಿ ಯಾಜ್ಞವಲ್ಕ್ಯ ಮಹರ್ಷಿಗಳ ಪಾಂಡಿತ್ಯ ಪರೀಕ್ಷೆ