Upanishad Stories: Janaka Maharaj and Yajnavalkya Maharshi storyಯಾಜ್ಞವಲ್ಕ್ಯ ಮಹರ್ಷಿ

ಮಿಥಿಲಾ ಸಾಮ್ರಾಜ್ಯ ಜನಕವಂಶಸ್ಥರ ಆಳ್ವಿಕೆಯಲ್ಲಿ ಸಂಪದ್ಭರಿತವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದ ಕಾಲ. ಲೋಕದ ದೃಷ್ಟಿಗೆ ಜನಕವಂಶಸ್ಥ ರಾಜರುಗಳು ದಾನ, ಧರ್ಮ ಮಾಡುತ್ತಾ, ಕರ್ಮಯೋಗದ  ಜೀವನಶೈಲಿಯನ್ನು ನಡೆಸುವವರಾಗಿದ್ದರೂ, ಆಂತರಿಕವಾಗಿ ಅವರುಗಳು ಆತ್ಮಾನ್ವೇಷಣೆಯ ಹುಡುಕಾಟದಲ್ಲಿರುವ ಸಾಧಕರು ಮತ್ತು ಆತ್ಮಜ್ಞಾನಿಗಳು. ಮಿಥಿಲಾ ಸಂಸ್ಥಾನದಲ್ಲಿ ಸದಾ ಕವಿಗಳು, ಪಂಡಿತರು, ವಿದ್ವಾಂಸರು ನೆರೆದಿದ್ದು, ಕಾವ್ಯ ಮತ್ತು ವಿಚಾರಗೋಷ್ಠಿಗಳಲ್ಲಿ ರಾಜರುಗಳು ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಒಮ್ಮೆ ಲೋಕಕಲ್ಯಾಣದ ಉದ್ದೇಶದೊಂದಿಗೆ ಜನಕರಾಜನು ಒಂದು ಮಹಾಯಾಗವನ್ನು ಆಯೋಜಿಸಿದನು ಹಾಗೂ ಆ ಯಾಗಕ್ಕೆ ಕುರು, ಪಾಂಚಾಲ, ಇನ್ನಿತರೆ ಸಾಮ್ರಾಜ್ಯಗಳಿಂದ ಸಾವಿರಾರು ಪುರೋಹಿತರು, ಪಂಡಿತರು, ವಿದ್ವಾಂಸರು ಭಾಗವಹಿಸಿ, ತಮ್ಮ ಯೋಗದಾನಕ್ಕೆ ಉಚಿತವಾದ ದಕ್ಷಿಣೆಯನ್ನು ಪಡೆದಿದ್ದರು.

ಈ ವಿದ್ವತ್ಸಾಗರವನ್ನು ಕಂಡ ಜನಕರಾಜನ ಹೃದಯದಲ್ಲಿ ಒಂದು ಆಸೆಯ ಅಂಕುರವಾಯಿತು. ಅದೇನೆಂದರೆ, ವಿದ್ವತ್ಸಭೆಯಲ್ಲಿ ಯಾರು ಶ್ರೇಷ್ಟರೆಂದು ತಿಳಿದರೆ, ಅವರ ಬಳಿ ತಾನು ಆತ್ಮಜ್ಞಾನವನ್ನು ಪಡೆಯಬಹುದೆಂಬ ಮಹದಾಸೆ.

ತಕ್ಷಣವೇ ಒಂದು ಘೋಷಣೆ ಮೊಳಗಿಸಿದನು  “ಎಲ್ಲಾ ವಿದ್ವಾಂಸರಿಗೆ ನಮನಗಳು. ನಿಮ್ಮಲ್ಲಿ ಯಾರು ಶ್ರೇಷ್ಠ ಬ್ರಹ್ಮಜ್ಞಾನಿಯೋ, ಅವರಿಗೆ ಈ ಸಣ್ಣ ಪ್ರಶಸ್ತಿಯನ್ನು ನೀಡಲಾಗುವುದು”, ಎಂದು. ಸಭೆಯಲ್ಲಿದ್ದ ಪಂಡಿತರ ದೃಷ್ಟಿ ಪ್ರಶಸ್ತಿಯ ಕಡೆಗೆ ಹರಿಯಿತು.

ಸಾವಿರ ದಷ್ಟಪುಷ್ಟವಾದ, ಆರೋಗ್ಯವಾಗಿರುವ ಗೋಸಂಪತ್ತು. ಅಷ್ಟೇ ಅಲ್ಲದೇ ಪ್ರತಿಯೊಂದು ಗೋವಿನ ಕೊಂಬುಗಳನ್ನೂ ಸ್ವರ್ಣದಿಂದ ಅಲಂಕರಿಸಲಾಗಿತ್ತು. ಅದನ್ನು ಕಂಡು ಎಲ್ಲರೂ ಮೂಕವಿಸ್ಮಿತರಾದರು. ಸಭೆಯಲ್ಲಿದ್ದ ಎಲ್ಲರೂ ಸಂತೋಷ, ಆಶ್ಚರ್ಯ ಮತ್ತು ವಿಸ್ಮಯದಿಂದ ಮುಂದೆ ಏನಾಗಬಹುದೆಂದು ಕಾಯುತ್ತಿದ್ದರು.

ಕೆಲವರು ಸಂಪತ್ತಿನ ಆಸೆಯಿಂದ ಮುಂದೆ ಹೋಗಲು ಬಯಸಿದರೆ, ಕೆಲವರು ತಾವು ಇಷ್ಟು ವಿದ್ವಾಂಸರಲ್ಲಿ ಶ್ರೇಷ್ಟರಲ್ಲ ಎಂದು ಕುಳಿತರು. ಇನ್ನೂ ಕೆಲವರು ತಮ್ಮಲ್ಲಿ ಶ್ರೇಷ್ಠಾಜ್ಞಾನವಿದ್ದರೂ, ಸಭೆಯ ಮುಂದೆ ಎದ್ದು ನಿಂತರೆ ಗರ್ವದಂತಾಗುತ್ತದೆ ಎಂದು ಸುಮ್ಮನೆ ಕುಳಿತಿದ್ದರು. ಜ್ಞಾನಿಯ ಮತ್ತು ಜ್ಞಾನದ ಹುಡುಕಾಟದಲ್ಲಿ ಕಾತುರದಿಂದ ಕಾಯುತ್ತಿದ್ದ ಜನಕರಾಜನಿಗೆ ನಿರಾಸೆಯಾಯಿತು.

ಅಷ್ಟರಲ್ಲಿ ಒಬ್ಬ ವ್ಯಕ್ತಿ ಜನರ ಮಧ್ಯದಿಂದ ಎದ್ದು ಮುಂದೆ ಬಂದನು. ಸಭೆಯಲ್ಲಿದ್ದ ಮೌನ ಚದುರಿಹೋಯಿತು. ಎಲ್ಲರೂ “ಗುಸುಗುಸು, ಪಿಸುಪಿಸು”, ಎಂದು ಆ ವ್ಯಕ್ತಿಯ ಬಗ್ಗೆ ಮಾತಾಡಲು ಆರಂಭಿಸಿದರು. ಹಲವರಿಗೆ ಆ ವ್ಯಕ್ತಿಯ ಮತ್ತು ವ್ಯಕ್ತಿಯ ವಿದ್ವತ್ತಿನ ಪರಿಚಯವೂ ಇತ್ತು.

ಆ ವ್ಯಕ್ತಿ ಮತ್ತಾರೂ ಅಲ್ಲದೆ ಚತುರ್ವೇದಗಳಲ್ಲಿ ಪಾರಂಗತರಾದ, ಕರ್ಮ-ಉಪಾಸನೆ-ಜ್ಞಾನಗಳೆಲ್ಲದರಲ್ಲೂ ನಿಷ್ಣಾತರಾದ ಯಾಜ್ಞವಲ್ಕ್ಯ ಮಹರ್ಷಿಗಳು. ಯಾಜ್ಞವಲ್ಕ್ಯರು ತನ್ನ ಶಿಷ್ಯನನ್ನು ಕರೆದು, “ಹೇ ಸೋಮಶ್ರವ! ಈ ಗೋವುಗಳನ್ನು ನಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗು”, ಎಂದು ಆದೇಶವಿತ್ತರು.

ಇದನ್ನೂ ಓದಿ: ಉಪನಿಷತ್ತಿನ ಕಥೆಗಳು: ಉಪಕೋಸಲನ ಗುರುಭಕ್ತಿ, ಸೇವಾತತ್ಪರತೆ, ಶ್ರದ್ಧೆ, ಕರ್ಮನಿಷ್ಟೆ ಮಾದರಿ

“ತನ್ನ ವಿದ್ವತ್ತನ್ನು ನಿರೂಪಿಸದೆ, ತಾನೇ ಶ್ರೇಷ್ಟನೆಂದು ತಿಳಿದು, ಪ್ರಶಸ್ತಿಯನ್ನು ಕೊಂಡೊಯ್ಯುತ್ತಿರುವನಲ್ಲ ಈ ಯಾಜ್ಞವಲ್ಕ್ಯ”, ಎಂದು ಸಭೆಯಲ್ಲಿದ್ದ ಎಲ್ಲರಿಗೂ ಕೋಪ. ಆದರೆ ಮಹಾರಾಜರ ಮುಂದೆ ಸಭ್ಯತೆಯನ್ನು ಮೀರಬಾರದೆಂದು ಎಲ್ಲರೂ ಒಬ್ಬರನ್ನೊಬ್ಬರು ನೋಡುತ್ತಾ ಮುಂದೇನಾಗಬಹುದೆಂದು ಕಾಯುತ್ತಿದ್ದರು.

ಜನಕರಾಜನ ಮಂತ್ರಿಯಾಗಿದ್ದ ಆಶ್ವಲ, ಯಾಜ್ಞವಲ್ಕ್ಯರನ್ನು ಉದ್ದೇಶಿಸಿ, “ನಿನ್ನನ್ನು ನೀನು ಬ್ರಹ್ಮಜ್ಞರಲ್ಲಿ ಶ್ರೇಷ್ಠನೆಂದು ಭಾವಿಸಿರುವೆಯಾ?”, ಎಂದು ಪ್ರಶ್ನಿಸಿದನು. ಉತ್ತರವಾಗಿ ಯಾಜ್ಞವಲ್ಕ್ಯರು, “ಇಲ್ಲಿ ನೆಲೆಸಿರುವ ಎಲ್ಲಾ ಬ್ರಹ್ಮಜ್ಞಾನಿಗಳಿಗೆ ನನ್ನ ನಮನಗಳು. ನಾನು ಶ್ರೇಷ್ಟನೆಂಬ ಯಾವ ಭಾವನೆಯೂ ಇಲ್ಲ”, ಎಂದು ವಿನಯದಿಂದ ಸಭೆಗೆ ನಮಿಸಿದರು.

“ನಿನ್ನ ವಿದ್ವತ್ತನ್ನು ನಿರೂಪಿಸದೇ ಗೋವುಗಳನ್ನು ಕೊಂಡೊಯ್ಯಲು ಇವು ದಕ್ಷಿಣೆಯೂ ಅಲ್ಲ, ದಾನವೂ ಅಲ್ಲ. ಇದು ಪರೀಕ್ಷೆಯ ನಂತರ ಪಡೆಯಬೇಕಾದ ಪ್ರಶಸ್ತಿ”, ಎಂಬ ಮಾತಿಗೆ ಯಾಜ್ಞವಲ್ಕ್ಯರು, “ನನ್ನ ಗುರುಕುಲದ ನಿರ್ವಹಣೆಗೆ ಗೋವುಗಳ ಅವಶ್ಯಕತೆಯಿದೆ. ಇಲ್ಲಿ ನೆರೆದಿರುವ ಯಾರೂ ಗೋವುಗಳನ್ನು ಕರೆದುಕೊಂಡುಹೋಗದ ಕಾರಣ, ನಾನು ಕರೆದೊಯ್ಯಲು ಮುಂದಾದೆ”, ಎಂದು ಉತ್ತರಿಸಿದರು.

ವಿದ್ವಾಂಸನೂ, ಮಂತ್ರಿಯೂ ಆಗಿದ್ದ ಆಶ್ವಲ, “ನಮ್ಮ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸದೆ, ನೀನು ಈ ಪ್ರಶಸ್ತಿಯನ್ನು ಕೊಂಡೊಯ್ಯಲು ಬಿಡುವುದಿಲ್ಲ”, ಎಂದಾಗ ಇಡೀ ಸಭೆ, “ಓಂ”, ಎಂದು ಅನುಮೋದಿಸಿತು. ಯಾಜ್ಞವಲ್ಕ್ಯರು ಒಂದು ಕ್ಷಣವೂ ವಿಚಲಿತರಾಗದೆ, “ನೀವೆಲ್ಲರೂ ಯಾವ ಪ್ರಶ್ನೆಯನ್ನಾದರೂ ಕೇಳಬಹುದು ಎಂದು ದಿಟ್ಟವಾಗಿ ನುಡಿದರು.

ತದನಂತರ ಎಲ್ಲರೂ ಯಾಜ್ಞವಲ್ಕ್ಯರ ಮೇಲೆ ಸೂಕ್ಷ್ಮಾತಿಸೂಕ್ಷ್ಮ ಪ್ರಶ್ನೆಗಳ ಮಳೆಯನ್ನೇ ಸುರಿಸಿದರು. ಆಶ್ವಲನು ಕರ್ಮ, ಉಪಾಸನೆ, ಮೃತ್ಯು, ಕಾಲ ಮುಂತಾದ ವಿಷಯಗಳ ಬಗ್ಗೆ ತೀಕ್ಷ್ಣವಾದ ಸವಾಲನ್ನು ಒಡ್ಡಿದರೆ, ಯಾಜ್ಞವಲ್ಕ್ಯರು ಅವುಗಳಿಗೆ ಅನಾಯಾಸವಾಗಿ ಉತ್ತರಿಸಿದರು.

ನಂತರ ಸಭೆಯಲ್ಲಿದ್ದ ಉತ್ಕೃಷ್ಟ ವಿದ್ವಾಂಸರುಗಳಾದ ಆರ್ತಭಾಗನು ಗ್ರಹಾತಿಗ್ರಹ ಎಂಬ ಶಾಸ್ತ್ರದ ಆಳವಾದ ವಿಚಾರವನ್ನು ಕೇಳಿದರೆ, ಭುಜ್ಯುವು ಗಂಧರ್ವನಿಂದ ತಿಳಿದ ವಿದ್ಯೆಯ ಬಗ್ಗೆ ಕೇಳಿದನು.  ಚಾಕ್ರಾಯಣ ಮತ್ತು ಕಹೋಳರು ಆತ್ಮ, ಬ್ರಹ್ಮವನ್ನು ತಿಳಿಯಲು ಪ್ರಮಾಣದ ವಿಚಾರವಾಗಿ ಕೇಳಿದರೆ, ಉದ್ದಾಲಕನು ಅಂತರ್ಯಾಮಿಯ ವಿಚಾರವನ್ನು ಕೇಳಿ ಯಾಜ್ಞವಲ್ಕ್ಯರನ್ನು ಪ್ರಶ್ನೆಗಳ ಬಲೆಯಲ್ಲಿ ಸಿಲುಕಿಸಲು ಪ್ರಯತ್ನಿಸಿದರೆ, ಮಹರ್ಷಿಗಳು ಉತ್ತರಿಸುವ ಮೂಲಕ ಲೀಲಾಜಾಲವಾಗಿ ಬಲೆಯಿಂದ ಹೊರಬಂದರು.

ನಕ್ಷತ್ರಪುಂಜಗಳ ನಡುವೆ ದೇದೀಪ್ಯಮಾನವಾದ ಚಂದ್ರನಂತೆ, ಪಂಡಿತರ ನಡುವೆ ಬೆಳಗುತ್ತಿದ್ದ, ಗೋಷ್ಠಿಗಳಲ್ಲಿ ಅಜೇಯರಾದ, ವಾಚಕ್ನವಿ ಋಷಿಯ ಪುತ್ರಿಯಾದ, ಬ್ರಹ್ಮವಾದಿನಿ ಗಾರ್ಗಿಯು ಪ್ರಶ್ನಿಸಲು ಬಂದಾಗ ಇಡೀ ಸಭೆ ಕುತೂಹಲದಿಂದ ಮೌನವಾಯಿತು. ಮೊದಲಿಗೆ ಭೌತಪ್ರಪಂಚದ ವಿಚಾರವಾಗಿ ಸೂಕ್ಷ್ಮಾತಿಸೂಕ್ಷ್ಮ ಪ್ರಶ್ನೆಗಳನ್ನು ಕೇಳಿದ ಗಾರ್ಗಿಯು, ಯಾಜ್ಞವಲ್ಕ್ಯ ಮಹರ್ಷಿಗಳ ಉತ್ತರಕ್ಕೆ ತನ್ನ ಸೋಲನ್ನೊಪ್ಪಿಕೊಂಡಳು.

ನಂತರ, ಯಾಜ್ಞವಲ್ಕ್ಯರಲ್ಲಿ ಮತ್ತೊಮ್ಮೆ ಅವಕಾಶವನ್ನು ಬೇಡಿ, ಸಭೆಯನ್ನುದ್ದೇಶಿಸಿ, “ನಾನು ಕೇಳುವ ಎರಡು ಪ್ರಶ್ನೆಗಳು ಒಬ್ಬ ನುರಿತ ಬಿಲ್ಲುಗಾರ ಹೂಡುವ ಎರಡು ಅತ್ಯಂತ ಶಕ್ತಿಯುತ ಅಸ್ತ್ರಗಳಂತೆ. ಹೇ ಯಾಜ್ಞವಲ್ಕ್ಯ! ನೀನು ಈ ಬಾಣಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾದರೆ, ನಿನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ”, ಎಂದು ನುಡಿದಳು.

ಎಲ್ಲರೂ ಒಪ್ಪಿಗೆ ನೀಡಿದ ನಂತರ, ಅಧ್ಯಾತ್ಮ ಮತ್ತು ವೇದಾಂತದ ಮೇರುಶಿಖರದ ವಿಷಯವಾದ ಜಗತ್ಕಾರಣ ಪರಬ್ರಹ್ಮದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಕೇಳಿದಳು. ಯಾಜ್ಞವಲ್ಕ್ಯರು ಸರಳವಾಗಿ, ಆದರೆ ನಿಷೇಧಾರ್ಥವಾಗಿ (ನೇತಿ ನೇತಿ) ಉತ್ತರಿಸಿದಾಗ, ಗಾರ್ಗಿ ತನ್ನ ಸೋಲನ್ನೊಪ್ಪಿ, “ಯಾಜ್ಞವಲ್ಕ್ಯರೇ ಬ್ರಹ್ಮಜ್ಞಾನಿಗಳಲ್ಲೇ ಶ್ರೇಷ್ಠರು”, ಎಂದು ಘೋಷಿಸಿದಳು.

ಸರ್ವವಿದ್ವಾಂಸರೂ ಯಾಜ್ಞವಲ್ಕ್ಯರ ವಿದ್ವತ್ತಿಗೆ ಶರಣಾಗಿ, ಅವರಿಗೆ ಪ್ರಶಸ್ತಿ ಪ್ರದಾನವಾಗಿ ಸುಖಾಂತ್ಯವಾಗುವ ವೇಳೆಗೆ, ಶಾಕಲ್ಯನೆಂಬ ವಿದ್ವಾಂಸನು, ಸಭಾಮರ್ಯಾದೆಯನ್ನು ಮೀರಿ ಯಾಜ್ಞವಲ್ಕ್ಯರಿಗೆ ಮತ್ತೆ ಪ್ರಶ್ನೆಗಳನ್ನು ಕೇಳಲು ಮುಂದಾದನು. ಎಲ್ಲರೂ ಅವನನ್ನು ತಡೆದರೂ, ಬೇಸರ-ಹಠದಿಂದ ಹಲವು ಪ್ರಶ್ನೆಗಳನ್ನು ಕೇಳಿದನು. ಎಲ್ಲಕ್ಕೂ ಸಮರ್ಥ ಉತ್ತರವನ್ನು ನೀಡುತ್ತಿದ್ದರೂ, ಅಗೌರವದಿಂದ ಅತಿಪ್ರಶ್ನೆಮಾಡುತ್ತಿದ್ದ ಶಾಕಲ್ಯನು, ಯಾಜ್ಞವಲ್ಕ್ಯ ಮಹರ್ಷಿಗಳ ತಪಸ್ ಶಕ್ತಿಯಿಂದ ಸುಟ್ಟು ಭಸ್ಮವಾದನು ಎಂಬಲ್ಲಿಗೆ ಈ ಆಖ್ಯಾಯಿಕೆ ಸಮಾಪ್ತಿಯಾಗುತ್ತದೆ.

(ಬೃಹದಾರಣ್ಯಕ ಉಪನಿಷತ್)

ಈ ಕಥೆಯಿಂದ ನಾವು ಕಲಿಯಬಹುದಾದ ಕೆಲವು ಅಂಶಗಳು:

  1. ಕರ್ಮಯೋಗ, ಧರ್ಮದಲ್ಲಿ ನಿರತನಾಗಿದ್ದ ಜನಕರಾಜನಲ್ಲಿದ್ದ ಬ್ರಹ್ಮಜಿಜ್ಞಾಸೆ ಶ್ಲಾಘನೀಯ.
  2. ಯಾಜ್ಞವಲ್ಕ್ಯ ಮಹರ್ಷಿಗಳು ಸರ್ವಶಾಸ್ತ್ರಗಳ ಮೇಲೆ ಪೂರ್ಣಹಿಡಿತ ಸಾಧಿಸಿದ್ದರೂ, ಅವರಲ್ಲಿದ್ದ ವಿನಯ ಅನುಸರಣೀಯ.
  3. ಗಾರ್ಗಿ ಭೌತಿಕ ಮತ್ತು ಆಧ್ಯಾತ್ಮಿಕ ವಿಚಾರಗಳೆರೆಡರಲ್ಲೂ ಸಮರ್ಥಳಾಗಿದ್ದಂತೆ, ನಾವೂ ಲೌಕಿಕ ಮತ್ತು ಆಧ್ಯಾತ್ಮಿಕ ವಿಷಯಗಳೆರೆಡರಲ್ಲೂ ಸಮರ್ಥರಾಗಲು ಪ್ರಯತ್ನಿಸಬೇಕು.
  4. ಜ್ಞಾನಿಯನ್ನು ನಿಂದಿಸುವುದು ಜ್ಞಾನವನ್ನು ನಿಂದಿಸಿದಂತೆ ಎಂದು ತಿಳಿಸಲು, ವೇದವು ಶಾಕಲ್ಯನ ಅಂತ್ಯವನ್ನು ತೋರಿಸಿರುತ್ತದೆ. ನಾವು ಎಂದಿಗೂ ಸಂತರ, ಜ್ಞಾನಿಗಳ ಅಪಮಾನ ಮಾಡಬಾರದು.
  5. ಯಾಜ್ಞವಲ್ಕ್ಯ ಮಹರ್ಷಿಗಳ ಉತ್ತರಗಳು ಶೃತಿ, ಯುಕ್ತಿ ಮತ್ತು ಅನುಭವವನ್ನು ಆಧರಿಸಿದ್ದು, ನಮ್ಮ ಅಧ್ಯಾತ್ಮಜ್ಞಾನವು ಸ್ಥಿರವಾಗಲು ಈ ಹಾದಿಯನ್ನು ಹಿಡಿಯಬೇಕು.

ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *