Upanishad Stories: Bhrigu Maharshi brahma anveshane storyಸಾಂದರ್ಭಿಕ ಚಿತ್ರ

ಶ್ರೀಕೃಷ್ಣಪರಮಾತ್ಮನು (Lord Krishna) ತನ್ನ ವಿಭೂತಿಗಳನ್ನು ವಿವರಿಸುವ ಸಂದರ್ಭದಲ್ಲಿ ಋಷಿಣಾಮ್ ‘ ಭೃಗುರಹಂ’ ಎಂದು ಗೀತೆಯಲ್ಲಿ ಹೇಳಿರುವುದು ಎಲ್ಲರಿಗೂ ತಿಳಿದಿದೆ. ಆದರೆ ‘ ಭೃಗು ಮಹರ್ಷಿಗಳ ಅಧ್ಯಾತ್ಮ ಜಿಜ್ಞಾಸೆಯ ಕಥೆ ಉಪನಿಷತ್ತಿನಲ್ಲಿದೆ.

ವರುಣದೇವನ ಪುತ್ರನಾದ ಭೃಗು ಸರ್ವಶಾಸ್ತ್ರಗಳನ್ನು ತಂದೆಯಿಂದಲೇ ಕಲಿತಿದ್ದನು.  ಧರ್ಮ, ಕರ್ಮ ಮತ್ತು ಉಪಾಸನೆಗಳನ್ನು ತಂದೆಯೇ ಹೇಳಿಕೊಟಿದ್ದನು. ಒಂದು ದಿನ ಭೃಗು ತನ್ನ ತಂದೆ ವರುಣನ ಬಳಿ, ತಮ್ಮಲ್ಲಿ ನನ್ನದೊಂದು ಪ್ರಶ್ನೆಯಿದೆ ಎಂದು ಕೇಳಿದ. ಪ್ರತಿನಿತ್ಯವೂ ಭೇಟಿಯಾಗುತ್ತಿದ್ದರೂ, ಇಂದು ಏನೋ ವಿಶೇಷವಿದೆ ಎಂಬುದನ್ನು ಅರಿತು ವರುಣದೇವನು ಸಮ್ಮತಿಸಿದನು. ತಂದೆಯನ್ನು ‘ಭಗವನ್ ಎಂದು ಸಂಬೋಧಿಸುವ ಮೂಲಕ ಪ್ರೀತಿ-ಗೌರವ, ಶ್ರದ್ಧಾಭಕ್ತಿಯನ್ನು ವ್ಯಕ್ತಪಡಿಸಿ, ವಿಧಿವತ್ತಾಗಿ ‘ಅಧೀಹಿ ಭಗವೋ ಬ್ರಹ್ಮ ಇತಿ ಎಂದು ಪ್ರಶ್ನಿಸಿದ.

ಮಗನ ಗಂಭೀರ ಪ್ರಶ್ನೆ ಮತ್ತು ಅವನಲ್ಲಿದ್ದಯೋಗ್ಯತೆಯನ್ನು ಗಮನಿಸಿದ ವರುಣದೇವ”, ತಂದೆಯ ಪಾತ್ರವನ್ನು ಬದಿಗಿಟ್ಟು ಗುರುವಿನ ಪಾತ್ರವನ್ನು ವಹಿಸಿ ‘ಬ್ರಹ್ಮವಿದ್ಯೆಯನ್ನು ನೀಡಲು ಮುಂದಾಗುತ್ತಾನೆ.

ಕೊಂಕಣಸುತ್ತಿ ಮೈಲಾರಕ್ಕೆ ಬಂದರು ಎನ್ನುವ ಹಾಗೆ ವಿಷಯವನ್ನು ಎಲ್ಲೆಲ್ಲೋ ಹರಿಬಿಡದೇ, ವರುಣನು ನೇರವಾಗಿ ಬ್ರಹ್ಮಸ್ವರೂಪವನ್ನು ತಿಳಿಸುವ ಎರಡು ನಿರ್ವಚನಗಳನ್ನು ಸೂತ್ರರೂಪದಲ್ಲಿ ನೀಡುತ್ತಾನೆ.  

1) *ಯತೋ ವಾ ಇಮಾನಿ ಭೂತಾನಿ ಜಾಯಂತೇ: ಬ್ರಹ್ಮ ಜಗತ್ಕಾರಣವಸ್ತುವೆಂದು ಉಪದೇಶಿಸುವ ಮೂಲಕ ತಟಸ್ಥ ಲಕ್ಷಣ

2) ಬ್ರಹ್ಮವಸ್ತುವು ಯಾವು ದಲ್ಲವೋ ಅವನ್ನು ನಿಷೇಧಿಸುವ ಮೂಲಕ ಅತತ್ ವ್ಯಾವೃತ್ತಿ ಲಕ್ಷಣ ಅನ್ನಂ, ಪ್ರಾಣ, ಚಕ್ಷು: (ಪಂಚಕೋಶಗಳು)

ಇದನ್ನು ಆಲಿಸಿದ ಭೃಗು ತಂದೆಯನ್ನು ಉದ್ದೇಶಿಸಿ, ‘ಆ ಬ್ರಹ್ಮವನ್ನು ತಿಳಿಯಲು ಸಾಧ್ಯವೇ? ತಿಳಿಯುವ ಮಾರ್ಗವೇನು?”, ಎಂದು ಕೇಳುತ್ತಾನೆ. ವರುಣದೇವನು, ‘ಬ್ರಹ್ಮವಸ್ತುವು ತಿಳಿಯಲೇಬೇಕಾದ ವಿಷಯ. ತಪಸ್ಸಿನ ಮೂಲಕ ಬ್ರಹ್ಮಸ್ವರೂಪವನ್ನು ಅರಿಯಬೇಕು* ಎಂದು ಉಪದೇಶಮಾಡಿ ಮಗನನ್ನು ಕಳಿಸುತ್ತಾನೆ.

ಇಲ್ಲಿ ತಪಸ್ಸು ಎಂದರೆ ದೇಹೆಂದ್ರಿಯ ಮನೋಬುದ್ಧಿಗಳನ್ನು ಶೋಷಿಸುವುದೋ ಅಥವಾ ನಿಗ್ರಹಿಸುವುದೋ ಅಲ್ಲದೇ, ತಸ್ಯ ಜ್ಞಾನಮಯಮ್ ತಹಳ್ ಎಂಬಂತೆ ಆತ್ಮವಿಚಾರವೇ ತಪಸ್ಸು ಎಂದು ತಿಳಿಸಿರುವುದು.

ಭೃಗು, ತಂದೆ ನೀಡಿದ ಸೂತ್ರರೂಪದ ಉಪದೇಶವನ್ನು ಹಿಡಿದು ತಂದೆಯ ಆದೇಶದಂತೆ ಶಾಸ್ತ್ರಾನುಸಾರ ಬ್ರಹ್ಮವಿಚಾರವನ್ನು ಮಾಡಲು ಮುಂದಾಗುತ್ತಾನೆ. ಕಣ್ಣಮುಂದೆ ಕಾಣುತ್ತಿರುವ ಈ ಪಾಂಚಭೌತಿಕವಾದ ಜಗತ್ತು ಯಾವುದರಿಂದ ಬಂದಿದೆ?, ಯಾವುದರಲ್ಲಿ ನೆಲೆ ನಿಂತಿದೆ?, ಹಾಗೂ ಯಾವುದರಲ್ಲಿ ಲಯವಾಗುತ್ತದೆ ಎಂಬುದನ್ನು ಹಲವು ವರ್ಷಗಳು ಗಾಢವಾಗಿ ವಿಚಾರ ಮಾಡಿ ಒಂದು ನಿರ್ಧಾರಕ್ಕೆ ಬಂದರೂ, ಏನೋ ಸಂಶಯ! ಹಾಗಾಗಿ, ತನ್ನ ವೈಚಾರಿಕನಿಲುವನ್ನು ಹಿಡಿದು ತಂದೆಯ ಬಳಿ ತೆರಳಿ, ‘ಅನ್ನದಿಂದ ಈ ಜಗತ್ತೆಲ್ಲವೂ ಬಂದಿದೆ, ಅನ್ನದಲ್ಲೇ ಜಗತ್ತು ನೆಲೆಯಾಗಿದೆ ಹಾಗೂ ಲಯವಾದ ನಂತರ ಜಗತ್ತು ಅನ್ನವನ್ನೇ ಪ್ರವೇಶಿಸುತ್ತದೆ.

ನಾನು ಕಂಡುಕೊಂಡಿರುವ *ಅನ್ನಂ ಬ್ರಹ್ಮವೆಂಚ್ ವಿಷಯ ಸರಿಯೇ?’ ಎಂದು ಪುನಃ ಪ್ರಶ್ನಿಸುತ್ತಾನೆ. ಇಲ್ಲಿ ಅನ್ನ ಎಂದರೆ ದ್ರವ್ಯ (matter) ಎಂದು. ಇಂದಿನ ವಿಜ್ಞಾನಿಗಳು ಹೇಳುವಂತೆ, ಜಗತ್ತಿನ ಕಾರಣ matter ಎಂದು ವಿಚಾರಮಾಡಿಬಂದ ಮಗನಿಗೆ ವರುಣನು ಉತ್ತರವನ್ನು ತಪ್ಪೆಂದು ದೂಷಿಸದೇ, ‘ಮಗುವೇ, ಸರಿಯಾದ ದಿಕ್ಕಿನಲ್ಲಿ ವಿಚಾರಮಾಡುತ್ತಿರುವೆ. ಆದರೆ ಇದು ಪೂರ್ಣಸತ್ಯವಲ್ಲ ತಪಸ್ಸಿನ ಮೂಲಕ ಬ್ರಹ್ಮವನ್ನು ಇನ್ನೂ ಗಾಢವಾಗಿ ವಿಚಾರ ಮಾಡು”, ಎಂದು ಪ್ರೇರೇಪಿಸುತ್ತಾನೆ.

ಭೃಗು ಪುನಃ ಗಾಢವಾದ ವಿಚಾರದಲ್ಲಿ ಮುಳುಗಿ, ಗುರುವಿನ ಉಪದೇಶ, ಶಾಸ್ತ್ರ ಮತ್ತು ತರ್ಕವನ್ನು ಉಪಯೋಗಿಸಿ ಮತ್ತೊಮ್ಮೆ ತನ್ನ ನಿರ್ಣಯವನ್ನು ತಂದೆಗೆ ಹೀಗೆ ತಿಳಿಸುತ್ತಾನೆ – “ಹೇ ಭಗವನ್, ಈ ಜಗತ್ತಿಗೆ ಕಾರಣ ಪ್ರಾಣ, ಹಾಗಾಗಿ *ಪ್ರಾಣವೇ ಬ್ರಹ್ಮವಲ್ಲವೇ?” ಇಲ್ಲಿ ಪ್ರಾಣ ಎಂದರೆ energy ಎಂದು ಭಾವಿಸಬಹುದು. ಶಕ್ತಿಯೇ ಜಗತ್ತಿಗೆ ಕಾರಣ ಮತ್ತು ಶಕ್ತಿಯ ರೂಪಾಂತರವೇ ದ್ರವ್ಯಮಯವಾದ ಜಗತ್ತು ಎಂದು ಪ್ರತಿಪಾದಿಸುವ ವಿಜ್ಞಾನಿಗಳಂತೆ ಭೃಗು ತಂದೆಯ ಬಳಿ ತನ್ನ ಅರ್ಥಗ್ರಹಿಕೆಯನ್ನು ತಿಳಿಸುತ್ತಾನೆ.

ತಂದೆ ವರುಣದೇವ, ಮಗನ ವೈಚಾರಿಕತೆಯನ್ನು ಮೆಚ್ಚಿ ಹಸನ್ಮುಖನಾಗಿ, ಮಗುವೇ, ಸರಿಯಾದ ದಿಕ್ಕಿನಲ್ಲಿ ವಿಚಾರಮಾಡುತ್ತಿರುವೆ. ಆದರೆ ಇದೂ ಪೂರ್ಣಸತ್ಯವಲ್ಲ ತಪಸ್ಸಿನ ಮೂಲಕ ಬ್ರಹ್ಮವನ್ನು ವಿಚಾರ ಮಾಡು”, ಎಂದು ಪುನಃ ಪ್ರೇರೇಪಿಸುತ್ತಾನೆ.

ಹೀಗೆ ಮುಂದುವರೆದು “ಮನಸ್ಸು ಬ್ರಹ್ಮ ವಿಜ್ಞಾನವೇ ಬ್ರಹ್ಮ” ಎಂಬ ವಿಚಾರಕ್ಕೂ ತಂದೆಯಿಂದ ಅದೇ ಉತ್ತರ ಸಿಗುತ್ತದೆ. ಪುನಃ ತೆರಳಿ ತಪಸ್ಸಿನಲ್ಲಿ ಮಗ್ನನಾದ ಭೃಗು ಹಿಂತಿರುಗಿಬರದ ಕಾರಣ, ತಂದೆ ವರುಣನೇ ಮಗನಿರುವ ಸ್ಥಳಕ್ಕೆ ತೆರಳುತ್ತಾನೆ.

 ಅವನಲ್ಲಿದ್ದ ಆ ಪರಿ ಪೂರ್ಣತೆಯ ಭಾವವನ್ನು ಗ್ರಹಿಸಿ, “ನೀನು ಯಾವುದನ್ನು ಬ್ರಹ್ಮವೆಂದು ತಿಳಿದಿದ್ದೀಯೆ?’ ಎಂದು ಕೇಳಲು ಭೃಗು, “ಆನಂದಮ್ ಬ್ರಹ್ಮ ಇತಿ ತಿಳಿದಿದ್ದೇನೆ. ಇದನ್ನು ತಿಳಿದ ನಂತರ ನನ್ನಲ್ಲಿ ಯಾವುದೇ ಸಂಶಯಗಳಿಲ್ಲ’ ಎಂಬುದನ್ನು ತಿಳಿಸುತ್ತಾನೆ. ಮಗನ ಜ್ಞಾನವನ್ನು ಕಂಡು ತಂದೆಯೂ ಖುಷಿಯಿಂದ ತೃಪ್ತನಾಗುತ್ತಾನೆ. ಈ ವಿದ್ಯೆಯನ್ನು ಉಪನಿಷತ್ತು “ಭಾರ್ಗವೀ ವಾರುಣೀ ವಿದ್ಯೆ” ಎಂದು ಹೇಳುವ ಮೂಲಕ ಭೃಗು ವಿನ ಅತ್ಮಶೋಧನೆಯನ್ನು ಕೊಂಡಾಡುತ್ತದೆ.

ಕಥೆಯಿಂದ ತಿಳಿಯಬಹುದಾದ ಅಂಶಗಳು

  1. ಭೃಗುವಿನಂತಹ ಋಷಿವರ್ಯರಿಗೇ ಬ್ರಹ್ಮಾನ್ವೇಷಣೆ ಮಾಡಲು ‘ಗುರುವಿನ ಅವಶ್ಯಕತೆ* ಬಂತೆಂದಮೇಲೆ, ನಾವೂ ಕೂಡ ಬ್ರಹ್ಮಸಾಕ್ಷಾತ್ಕಾರಕ್ಕೆ ಜ್ಯೋತ್ರಿಯ ಬ್ರಹ್ಮನಿಷ್ಠ ಗುರು ಬೇಕೆ  ಬೇಕು
  2. ಗುರುವಾದವರು ಶಿಷ್ಯನಲ್ಲಿ “ಯೋಗ್ಯತೆಯನ್ನು ಕಂಡರೆ ಬ್ರಹೋಪದೇಶವನ್ನು ಮಾಡುವುದು ಕಡ್ಡಾಯ
  3. ಶಿಷ್ಯನು ಎಷ್ಟೇ ಬಾರಿ ಪ್ರಶ್ನಿಸಿದರೂ ತಾಳ್ಮೆಯನ್ನು ಕಳೆದುಕೊಳ್ಳದೆ, ಅವನನ್ನು ಉತ್ತೇಜಿಸಿ, ಪ್ರೀತಿ ಮತ್ತು ಕರುಣೆಯಿಂದ ಉಪದೇಶಿಸುವ ವರುಣನ ರೀತಿ ಅನುಕರಣೀಯ
  4. ಕೆಲವೊಮ್ಮೆ ಗುರುಗಳು ಪ್ರವಚನಾತ್ಮಕವಾಗಿ ಉಪದೇಶವನ್ನು ನೀಡದೆ, ಸಂಗ್ರಹರೂಪದಲ್ಲಿ ತಿಳಿಸಬಹುದು. ಅದನ್ನು ಸ್ವೀಕರಿಸಿದ ಶಿಷ್ಯನು ‘ಗುರೂಪದೇಶದ ಅನುಷ್ಠಾನದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು
  5. ಜಗತ್ಕಾರಣವಾದ ಬ್ರಹ್ಮವನ್ನು ಅರಿಯಲು ಗುರುಮುಖೇನ ಹೊರಬರುವ ಶಾಸ್ತ್ರಪ್ರಮಾಣದ ಹೊರತು ಬೇರೊಂದು ಮಾರ್ಗವಿಲ್ಲ
  6. ಶಿಷ್ಯನಾದವನು ಸಂಶಯ ನಿವೃತ್ತಿಯಾಗುವವರೆಗೂ ಸತ್ಯಾನ್ವೇಷಣೆಯನ್ನು ಬಿಡದೆ, ಗುರುವಿನೊಂದಿಗೆ ಪರಿಪ್ರಶ್ನೆಯ ಮೂಲಕ ‘ಮನನ ಮಾಡಿ ಆತ್ಯನಿಷ್ಠನಾಗಬೇಕು* ಹಾಗೂ ತನ್ಮೂಲಕ ಜನ್ಮಸಾರ್ಥಕ್ಯ ಮಾಡಿಕೊಳ್ಳಬೇಕು

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *