ಪ್ರಜಾಪತಿ ಬ್ರಹ್ಮ ಜಗತ್ತಿನಲ್ಲಿ ವಾಸಿಸುತ್ತಿದ್ದ ಜೀವಿಗಳಿಗೆ ಪರಿಪೂರ್ಣತೆಯನ್ನು ಪಡೆಯುವ ಮಾರ್ಗವನ್ನು ಉಪದೇಶಿಸುವ ಸಲುವಾಗಿ, ತ್ರಿಭುವನಗಳಿಗೂ ಕೇಳುವಂತೆ ಹೀಗೆ ಘೋಷಿಸುತ್ತಾರೆ, “ಯಾರು ಆತ್ಮವನ್ನು (ತನ್ನನ್ನು) ಅಜರಾಮರನು, ಹಸಿವು-ಬಾಯಾರಿಕೆರಹಿತನು, ಶೋಕಮುಕ್ತನು, ಪುಣ್ಯಪಾಪಾತೀತನು, ಸತ್ಯಕಾಮನು ಮತ್ತು ಸತ್ಯಸಂಕಲ್ಪನು ಎಂದು ಅರಿಯುತ್ತಾರೋ, ಅವರು ಅಜೇಯರಾಗುತ್ತಾರೆ ಮತ್ತು ಸರ್ವಕಾಮಗಳನ್ನು ಅನುಭವಿಸುತ್ತಾರೆ. ಈ ಘೋಷಣೆಯು ದೇವತೆಗಳು ಮತ್ತು ರಾಕ್ಷಸರಲ್ಲಿ ಫಲಾಪೇಕ್ಷೆಯ ಉತ್ಸುಕತೆಯನ್ನು ಹೆಚ್ಚಿಸಿ, ಎರೆಡೂ ಗುಂಪುಗಳ ಚರ್ಚೆ ಚಿಂತನೆಗೆ ಕಾರಣವಾಯಿತು. ಈ ವಿದ್ಯೆಯನ್ನು ಕಲಿತು ಬರಲು, ತಮ್ಮ ತಮ್ಮ ರಾಜರನ್ನು ಪ್ರತಿನಿಧಿಯಾಗಿ ಕಳುಹಿಸಲು ತೀರ್ಮಾನಿಸುತ್ತಾರೆ. ಅದರಂತೆ ದೇವತೆಗಳ ರಾಜ ಇಂದ್ರ ಮತ್ತು ಅಸುರರ ರಾಜ ವಿರೋಚನ ತಮ್ಮ ರಾಜ್ಯ, ಅಧಿಕಾರ ಮತ್ತು ಭೋಗವಸ್ತುಗಳನ್ನು ತ್ಯಜಿಸಿ, ಬ್ರಹ್ಮಚಾರಿಗಳಂತೆ ವಿದ್ಯಾರ್ಜನೆಗಾಗಿ ವಿಧಿಪೂರ್ವಕವಾಗಿ ಪ್ರಜಾಪತಿ ಬ್ರಹ್ಮನ ಬಳಿಗೆ ಆಗಮಿಸುತ್ತಾರೆ. ಇಬ್ಬರ ಉದ್ದೇಶವನ್ನು ತಿಳಿದಿದ್ದರೂ, ಪ್ರಜಾಪತಿ ಬ್ರಹ್ಮ ಅವರಿಗೆ ತಕ್ಷಣ ಉಪದೇಶಿಸದೆ, ಕೆಲಕಾಲ ತಪಸ್ಸು, ಬ್ರಹ್ಮಚರ್ಯ, ಕರ್ಮ, ಉಪಾಸನೆ ಮತ್ತು ಸೇವೆಯಲ್ಲಿ ನಿರತರಾಗಿರಬೇಕೆಂದು ಆದೇಶಿಸುತ್ತಾರೆ. ಇದುವರೆಗೂ ಭೋಗಭಾಗ್ಯಗಳಲ್ಲಿ ನಿರತರಾಗಿದ್ದ ರಾಜರು, ತ್ಯಾಗಜೀವನವನ್ನು ಅಂಗೀಕರಿಸಿ, ವಿನಯದಿಂದ ಸೇವೆ ಮಾಡುತ್ತಾ 32 ಸಂವತ್ಸರಗಳನ್ನು ಕಳೆಯುತ್ತಾರೆ. ಒಂದು ದಿನ ಪ್ರಜಾಪತಿ ಇಬ್ಬರನ್ನೂ ಸಮೀಪಕ್ಕೆ ಕರೆದು, “ಯಾವ ಬಯಕೆಯನ್ನು ಹೊತ್ತು ನೀವು ಇಲ್ಲಿ ತಪಸ್ವೀ ಜೀವನ ನಡೆಸುತ್ತಿರುವಿರಿ?” ಎಂದು ಕೇಳುತ್ತಾರೆ. ಇಂದ್ರ – ವಿರೋಚನರು ವಿನಯದಿಂದ, “ನಾವು ಆತ್ಮಜ್ಞಾನಕ್ಕಾಗಿ ಬಂದಿದ್ದೇವೆ; ಅದರಿಂದ ಲೋಕತ್ರಯಗಳಲ್ಲಿ ಅಜೇಯರಾಗಲು ಬಯಸುತ್ತೇವೆ ಎಂದು ತಿಳಿಸುತ್ತಾರೆ. ಇದನ್ನೂ ಓದಿ: ಉಪನಿಷತ್ತಿನ ಕಥೆಗಳು: ಭೂಮಾ ವಿದ್ಯೆ ಅರಸಿ ಸನತ್ಕುಮಾರರ ಬಳಿ ಬಂದ ನಾರದ ಮಹರ್ಷಿ 32 ವರ್ಷಗಳ ತಪಸ್ಸು ಮತ್ತು ಸಾಧನೆಯಿಂದ ಅವರಲ್ಲಿ ಸಾಕಷ್ಟು ಚಿತ್ತಶುದ್ಧಿಯಾಗಿದೆ ಎಂದು ಭಾವಿಸಿ, ಪ್ರಜಾಪತಿ ಅವರನ್ನು ಶಿಷ್ಯರಾಗಿ ಅಂಗೀಕರಿಸಿ, ಆತ್ಮತತ್ತ್ವದ ಉಪದೇಶವನ್ನು ಪ್ರಾರಂಭಿಸುತ್ತಾರೆ. “ನಿಮ್ಮ ಕಣ್ಣಿನಲ್ಲಿ ಕಾಣುವ ಅಕ್ಷಿಪುರುಷನೇ ಆತ್ಮ. ಯಾರು ಅವನನ್ನು ಯಥಾರ್ಥವಾಗಿ ತಿಳಿಯುತ್ತಾರೋ, ಅವರು ಅಮರರಾಗುತ್ತಾರೆ. ಈ ಉಪದೇಶವು ನೇರವಾದ ಅರ್ಥವನ್ನು ಹೊಂದಿಲ್ಲದೆ, ಲಕ್ಷ್ಯಾರ್ಥವನ್ನು ಸೂಚಿಸುವುದಾದ್ದರಿಂದ, ಇಬ್ಬರೂ ಅದರ ತಾತ್ಪರ್ಯವನ್ನು ಗ್ರಹಿಸಲಿಲ್ಲ. ತಮ್ಮ ಕಣ್ಣಿನಲ್ಲಿ ಕಾಣಿಸಿದ ದೇಹದ ಪ್ರತಿಬಿಂಬವನ್ನೇ ಆತ್ಮವೆಂದು ತಪ್ಪಾಗಿ ನಿರ್ಣಯಿಸುತ್ತಾರೆ. ಅವರ ಅರ್ಥಗ್ರಹಣದಲ್ಲಿರುವ ದೋಷವನ್ನು ಮನಗಂಡ ಪ್ರಜಾಪತಿ ಬ್ರಹ್ಮನು, ಅವರನ್ನು ಮತ್ತೊಮ್ಮೆ ಆಲೋಚನೆಗೆ ಪ್ರೇರೇಪಿಸಲು, ಸಕಲಾಭರಣಭೂಷಿತರಾಗಿ ಬಂದು ನೀರಿನಲ್ಲಿ ತಮ್ಮನ್ನು (ಆತ್ಮವನ್ನು) ಪರಿಶೀಲಿಸಬೇಕೆಂದು ಸೂಚಿಸುತ್ತಾರೆ. ರಾಜರು ತಮ್ಮ ಅಧ್ಯಯನ ಸಂಪೂರ್ಣವಾಗಿದೆ ಎಂಬ ಭಾವದಿಂದ ಸಜ್ಜಾಗಿ ಬಂದು, ನೀರಿನ ಪಾತ್ರೆಯಲ್ಲಿ ತಮ್ಮ ಪ್ರತಿಬಿಂಬವನ್ನು ಗಮನಿಸಿ, “ದೇಹವೇ ಆತ್ಮ”, ಎಂದು ತಪ್ಪುತಿಳಿದು ನಮಸ್ಕರಿಸಿ ಹೊರಡುತ್ತಾರೆ. ಶಿಷ್ಯರಿಗೆ ಸಮ್ಯಗ್ಬೋಧೆಯಾಗಬೇಕೆಂಬ ಕರುಣೆಯಿಂದ ಪ್ರಜಾಪತಿ ಮತ್ತೆ ಹೀಗೆ ಘೋಷಿಸುತ್ತಾರೆ – “ಯಾರು ಆತ್ಮನನ್ನು ಬದಲಾಗುವ ಮತ್ತು ನಾಶವಾಗುವ ವಸ್ತುವೆಂದು ತಿಳಿಯುತ್ತಾರೋ, ಅವರು ನಾಶವನ್ನೇ ಹೊಂದುತ್ತಾರೆ. ಈ ಘೋಷಣೆ ವಿರೋಚನನಿಗೆ ಕೇಳಿದರೂ, ತಾನು ಸರಿಯಾಗಿ ತಿಳಿದಿರುವೆ ಎಂಬ ದುರಭಿಮಾನದಿಂದ ಅಸುರಲೋಕಕ್ಕೆ ಮರಳಿ, “ದೇಹವೇ ಆತ್ಮ ಅದನ್ನು ಅಲಂಕರಿಸಿ, ಪೋಷಿಸಿ, ಮತ್ತು ಅದರ ರಕ್ಷಣೆಗೆ ಸರ್ವಶಕ್ತಿಯಿಂದ ಪ್ರಯತ್ನಿಸಬೇಕು,” ಎಂದು ಉಪದೇಶಿಸಿ ದೇಹಾತ್ಮವಾದದ ಪ್ರಸಾರಕ್ಕೆ ಕಾರಣನಾಗುತ್ತಾನೆ. ಆದರೆ, ಸ್ವರ್ಗಕ್ಕೆ ಮರಳುತ್ತಿದ್ದ ಇಂದ್ರನಿಗೆ ಪ್ರಜಾಪತಿಯ ಘೋಷಣೆ ಚಿಂತನೆಗೆ ಹಚ್ಚುತ್ತದೆ. “ಪ್ರತಿಬಿಂಬದಲ್ಲಿ ಕಾಣುವ ದೇಹವು ಷಡ್ವಿಕಾರಗಳಿಗೆ ಒಳಪಡುವುದು. ಅದು ಆತ್ಮವಾಗುವುದಾದರೂ ಹೇಗೆ? ಅದನ್ನು ತಿಳಿದರೆ ಅಮರತ್ವವಾದರೂ ಹೇಗೆ ಸಾಧ್ಯ?” ಎಂದು ಆಲೋಚಿಸಿ, ಪುನಃ ಪ್ರಜಾಪತಿಯ ಬಳಿಸಾರಿ, “ಆತ್ಮವನ್ನು ನಾನು ಸರಿಯಾಗಿ ಗ್ರಹಿಸಲಿಲ್ಲ ದಯವಿಟ್ಟು ಮತ್ತಷ್ಟು ಉಪದೇಶಿಸಿ,” ಎಂದು ವಿನಯದಿಂದ ಬೇಡಿಕೊಳ್ಳುತ್ತಾನೆ. ಪ್ರಜಾಪತಿಯು ಇಂದ್ರನನ್ನು ಮತ್ತೊಮ್ಮೆ 32 ವರ್ಷಗಳ ತಪಸ್ಸಿನಲ್ಲಿ ನಿರತರಾಗಿರಲು ಸೂಚಿಸುತ್ತಾರೆ. ನಿಗದಿತ ಅವಧಿಯ ನಂತರ ಪ್ರಜಾಪತಿಯು, “ಸ್ವಪ್ನಪುರುಷನೇ ಆತ್ಮ ಅವನನ್ನು ತಿಳಿದವನು ಅಭಯನಾಗುತ್ತಾನೆ ಎಂದು ಉಪದೇಶಿಸುತ್ತಾರೆ. ಇಂದ್ರ – “ಸ್ವಪ್ನದಲ್ಲಿ ಸ್ಥೂಲದೇಹದ ನೋವುಗಳಿಲ್ಲದಿರಬಹುದು. ಆದರೆ, ಸ್ವಪ್ನವೂ ಅನುಭವಸಂಕುಲವೇ. ನೋವುಗಳು ಸ್ವಪ್ನದಲ್ಲಿಯೂ ಇರುವಾಗ, ಸ್ವಪ್ನ ಪುರುಷನು ಆತ್ಮ ಹೇಗೆ ಆಗಲು ಸಾಧ್ಯ?” ಎಂದು ಯುಕ್ತಿಯಿಂದ ಪರಿಶೀಲಿಸಿ, ಮತ್ತೊಮ್ಮೆ ಗುರುವನ್ನು ಶರಣಾಗಿ ತನ್ನ ಸಂಶಯವನ್ನು ವ್ಯಕ್ತಪಡಿಸುತ್ತಾನೆ. ಇಂದ್ರನು ಮತ್ತೆ 32 ವರ್ಷಗಳ ಕಾಲ ಸಾಧನೆಯಲ್ಲಿ ನಿರತನಾದ ನಂತರ, ಪ್ರಜಾಪತಿಯು, “ಸುಷುಪ್ತಿಯಲ್ಲಿರುವ ಪುರುಷನೇ ಆತ್ಮ; ಅದನ್ನು ತಿಳಿದವನು ಅಮೃತತ್ವವನ್ನು ಹೊಂದುತ್ತಾನೆ,” ಎಂದು ಹೇಳುತ್ತಾರೆ. ಸುಷುಪ್ತಿಯಲ್ಲಿ ದುಃಖಭಯಗಳಿಲ್ಲದಿದ್ದರೂ, ಅಂಧಕಾರವೇ ಆವರಿಸಿರುವ ಸ್ಥಿತಿ ಆತ್ಮವಾಗಲು ಸಾಧ್ಯವಿಲ್ಲವೆಂದು ವಿಚಾರಿಸಿ, ಇಂದ್ರ ಮತ್ತೆ ಪ್ರಜಾಪತಿ ಬ್ರಹ್ಮನಲ್ಲಿ ಶರಣಾಗುತ್ತಾನೆ. ಇದಾದ ನಂತರ 5 ವರ್ಷಗಳ ಕಠಿಣ ವ್ರತಾಚರಣೆಯ ಮೂಲಕ ಜ್ಞಾನಯೋಗ್ಯತೆ ಮತ್ತು ಚಿತ್ತಶುದ್ಧಿಯನ್ನು ಹೊಂದಿದ ಇಂದ್ರನಿಗೆ ಪ್ರಜಾಪತಿಯು ಪರಮಾರ್ಥವನ್ನು ಸ್ಪಷ್ಟಪಡಿಸುತ್ತಾರೆ. “ಜಾಗೃತ್, ಸ್ವಪ್ನ ಮತ್ತು ಸುಷುಪ್ತಿಯ ಅವಸ್ಥೆಗಳು ಪ್ರತ್ಯೇಕವಾಗಿ ಆತ್ಮವಲ್ಲವಾದರೂ, ಆತ್ಮವೇ ಮೂರು ಅವಸ್ಥೆಗಳಾಗಿ ತೋರುತ್ತಿರುವುದು. ಆತ್ಮವು ಈ ಮೂರೂ ಅವಸ್ಥೆಗಳಿಗೆ ಸಾಕ್ಷಿಯಾಗಿ ಪ್ರಕಾಶಿಸುತ್ತಿರುವುದರಿಂದ ಆತ್ಮಚೈತನ್ಯವು ಅವಸ್ಥಾತ್ರಯ ಸಾಕ್ಷಿ.” ಈ ಬೋಧನೆಯ ಮೂಲಕ ಇಂದ್ರನು ಆತ್ಮವನ್ನು ಅಪರೋಕ್ಷವಾಗಿ ಅರಿತು, ಮೃತ್ಯುವಿನ ಮೇಲೆ ವಿಜಯವನ್ನು ಸಾಧಿಸಿ, ತ್ರಿಲೋಕಗಳಲ್ಲಿ ಗೌರವಕ್ಕೆ ಪಾತ್ರನಾದನು ಎಂಬಲ್ಲಿಗೆ ಕಥೆಯು ಸಮಾಪ್ತಿಯಾಗುತ್ತದೆ. ಕಥೆಯ ನೀತಿ ಆತ್ಮಜ್ಞಾನಕ್ಕೆ ಗುರುವಿನ ಅವಶ್ಯಕತೆ ಮತ್ತು ವಿಧಿಪೂರ್ವಕ ಶರಣಾಗತಿಯ ಮಹತ್ವ ಚಿತ್ತಶುದ್ಧಿಗೆ ತಪಸ್ಸು, ಸ್ವಾಧ್ಯಾಯ, ಸೇವೆ ಮತ್ತು ಬ್ರಹ್ಮಚರ್ಯದ ಅನಿವಾರ್ಯತೆ ಆತ್ಮಜ್ಞಾನಕ್ಕೆ ಚಿತ್ತಶುದ್ಧಿಯ ಜೊತೆಗೆ ವಿವೇಕಶಕ್ತಿ ಮತ್ತು ಮಂಥನಶೀಲತೆಯ ಅಗತ್ಯತೆ ಯಥಾರ್ಥ ಆತ್ಮಾನುಭವವಿಲ್ಲದೆ ವಿರೋಚನನು ಮಾಡಿದ ಉಪದೇಶ, ಕುರುಡ ಕುರುಡನನ್ನು ಮುನ್ನಡೆಸುವ ಅಂಧಪರಂಪರೆಯನ್ನು ಹುಟ್ಟುಹಾಕಿದಂತೆ. ಇಂದ್ರನಲ್ಲಿದ್ದ ಗುರುವಿನ ಮೇಲಿನ ಶ್ರದ್ಧೆ, 101 ವರ್ಷಗಳ ಕಠಿಣ ತಪಸ್ಸು, ವಿನಯ, ಪರಿಪ್ರಶ್ನೆ ಮತ್ತು ಅನುಸಂಧಾನದ ಗುಣಗಳು ಅನುಕರಣೀಯ ಗುರುವಾಗಿ ಪ್ರಜಾಪತಿ ಬ್ರಹ್ಮನ ಕರುಣೆ ಮತ್ತು ಕ್ರಮಬದ್ಧ ಉಪದೇಶ ವಿಧಾನ ಅನುಪಮ ಸಾ ವಿದ್ಯಾ ಯಾ ವಿಮುಕ್ತಯೇ ಎಂಬ ವೇದೋಕ್ತಿಯಂತೆ, ಆತ್ಮಜ್ಞಾನವೇ ಮೋಕ್ಷಕ್ಕೆ ಮಾರ್ಗವೆಂದು ತಿಳಿದು ಜ್ಞಾನಯೋಗದಲ್ಲಿ ನಿರತರಾಗುವುದು. (ಛಾಂದೋಗ್ಯ ಉಪನಿಷತ್ತು – ಅಧ್ಯಾಯ 8) ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಉಪನಿಷತ್ತಿನ ಕಥೆಗಳು: ಭೂಮಾ ವಿದ್ಯೆ ಅರಸಿ ಸನತ್ಕುಮಾರರ ಬಳಿ ಬಂದ ನಾರದ ಮಹರ್ಷಿ ಉಪನಿಷತ್ತಿನ ಕಥೆಗಳು: ಭೃಗು ಮಹರ್ಷಿಗಳ ಬ್ರಹ್ಮಾನ್ವೇಷಣೆಯ ಸುಂದರ ಕಥೆ