Train ticket cancellation new rules No refund if tickets cancelled less than 8 hoursರೈಲು

ನವದೆಹಲಿ, ಮಾರ್ಚ್‌ 24: ಭಾರತೀಯ ರೈಲ್ವೆ ಇಲಾಖೆಯು (Indian Railway) ಟಿಕೆಟ್‌ಗಳ ರದ್ದುಪಡಿಸುವ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ಉದ್ದೇಶದಿಂದ ಬೋರ್ಡಿಂಗ್ ಪಾಯಿಂಟ್ ಬದಲಾವಣೆಯ ನಿಯಮಗಳನ್ನೂ ಪರಿಷ್ಕರಿಸಿದೆ. ಈ ಹೊಸ ನಿಯಮಗಳು ಏಪ್ರಿಲ್ 1ರಿಂದ ಏಪ್ರಿಲ್ 15ರವರೆಗೆ ಹಂತ ಹಂತವಾಗಿ ಜಾರಿಯಾಗಲಿದೆ.

ಹೊಸ ನಿಯಮಗಳು

ಹೊಸ ನಿಯಮಗಳ ಪ್ರಕಾರ, ಪ್ರಯಾಣಕ್ಕೂ 72 ಗಂಟೆಗಳಿಗಿಂತ ಮೊದಲು ಟಿಕೆಟ್ ರದ್ದು ಮಾಡಿದರೆ ಗರಿಷ್ಠ ಮರುಪಾವತಿ (Refund) ಆಗುತ್ತದೆ. ಈ ಸಂದರ್ಭದಲ್ಲಿ ಪ್ರತಿ ಪ್ರಯಾಣಿಕನಿಗೆ ಕೇವಲ ನಿಗದಿತ ಶುಲ್ಕ ಮಾತ್ರ ಕಡಿತಗೊಳ್ಳುತ್ತದೆ.

72 ಗಂಟೆಗಳೊಳಗೆ ಮತ್ತು 24 ಗಂಟೆಗಿಂತ ಮೊದಲು ಟಿಕೆಟ್ ರದ್ದು ಮಾಡಿದರೆ, ಶೇ 25 ರಷ್ಟು ಹಣ ಕಡಿತಗೊಳ್ಳುತ್ತದೆ.

ಪ್ರಯಾಣಕ್ಕೂ 24 ಗಂಟೆಗಳೊಳಗೆ ಮತ್ತು 8 ಗಂಟೆಗಳಿಗಿಂತ ಮೊದಲು ರದ್ದು ಮಾಡಿದರೆ, ಶೇ 50 ರಷ್ಟು ಹಣ ಕಡಿತಗೊಳ್ಳುತ್ತದೆ.

ಪ್ರಯಾಣ ಆರಂಭಿಸಲು 8 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ಟಿಕೆಟ್ ರದ್ದು ಮಾಡಿದರೇ ಯಾವುದೇ ಹಣ ಮರುಪಾವತಿಯಾಗುವುದಿಲ್ಲ.  

ಕ್ಲಾಸ್ ಅಪ್‌ಗ್ರೇಡ್ ಮತ್ತು ಬೋರ್ಡಿಂಗ್ ಪಾಯಿಂಟ್ ಬದಲಾವಣೆ

ಇನ್ಮುಂದೆ, ಕೌಂಟರ್‌ನಲ್ಲಿ ಟಿಕೆಟ್ ಪಡೆದಿರುವ ಪ್ರಯಾಣಿಕರು ಪ್ರಯಾಣ ಆರಂಭಕ್ಕೆ 30 ನಿಮಿಷಗಳ ಮೊದಲು ತನಕ ತಮ್ಮ ಪ್ರಯಾಣ ವರ್ಗವನ್ನು (travel class) ಅಪ್‌ಗ್ರೇಡ್ ಮಾಡಿಕೊಳ್ಳಬಹುದು. ಮೊದಲು ಚಾರ್ಟ್ ತಯಾರಾದ ನಂತರ ಅಪ್‌ಗ್ರೇಡ್ ಅವಕಾಶ ಇರಲಿಲ್ಲ.

ಇದರ ಜೊತೆಗೆ, ಪ್ರಯಾಣಿಕರು ತಮ್ಮ ನಿರ್ಗಮನ ನಿಲ್ದಾಣವನ್ನು ಪ್ರಯಾಣಕ್ಕೆ 30 ನಿಮಿಷಗಳ ಮೊದಲು ತನಕ ಬದಲಾಯಿಸಿಕೊಳ್ಳಬಹುದು. ವಿಶೇಷವಾಗಿ ಒಂದೇ ನಗರದಲ್ಲಿ ಹಲವು ರೈಲು ನಿಲ್ದಾಣಗಳಿರುವ ಸಂದರ್ಭಗಳಲ್ಲಿ, ಪ್ರಯಾಣಿಕರಿಗೆ ಅನುಕೂಲವಾಗುವ ನಿಲ್ದಾಣದಿಂದ ಹತ್ತುವ ಅವಕಾಶ ಇದು ಒದಗಿಸುತ್ತದೆ.

ಪ್ರಸ್ತುತ ನಿಯಮಗಳ ಪ್ರಕಾರ, ಚಾರ್ಟ್ ತಯಾರಾಗುವ ಮೊದಲು ಮಾತ್ರ ಬೋರ್ಡಿಂಗ್ ಪಾಯಿಂಟ್ ಬದಲಾವಣೆ ಸಾಧ್ಯವಾಗುತ್ತಿತ್ತು.

ಹೊಸ ನಿಯಮಗಳ ಉದ್ದೇಶ

ಕೆಲ ದಂಧೆಗಾರರು ಹೆಚ್ಚುವರಿ ಟಿಕೆಟ್‌ಗಳನ್ನು ಬುಕ್ ಮಾಡಿ, ಮಾರಾಟವಾಗದ ಟಿಕೆಟ್‌ಗಳನ್ನು ಪ್ರಯಾಣಕ್ಕೂ ಮೊದಲು ರದ್ದು ಮಾಡಿ ಹಣವನ್ನು ಮರಳಿ ಪಡೆಯುತ್ತಿದ್ದರು. ಈ ದುರುಪಯೋಗವನ್ನು ತಡೆಯಲು ಈ ನಿಯಮಗಳನ್ನು ಕಠಿಣಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್  ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *