ಗುರುಗ್ರಾಮ, ಮಾರ್ಚ್ 22: ಅಮೆರಿಕ-ಇಸ್ರೇಲ್-ಇರಾನ್ ಉದ್ವಿಗ್ನತೆಯಿಂದಾಗಿ ಎಲ್‌ಪಿಜಿ ಅಡುಗೆ ಸಿಲಿಂಡರ್‌ಗಳ (LPG cooking cylinder) ಪೂರೈಕೆಯಲ್ಲಿ ಅಡಚಣೆ ಉಂಟಾಗುತ್ತಿವೆ ಎಂಬ ವರದಗಳ ಮಧ್ಯೆ, ಅಡುಗೆ ಅನಿಲದ ಪೂರೈಕೆ ಸುಲಭಗೊಳಿಸಲು ಗುರುಗ್ರಾಮ್‌ನಲ್ಲಿ ಹೊಸ ಸೌಲಭ್ಯವನ್ನು ಪರಿಚಯಿಸಲಾಗಿದೆ. ಬ್ಯಾಂಕ್ ಎಟಿಎಂನಿಂದ ಹಣ ಪಡೆಯುವಷ್ಟೇ ಸುಲಭವಾಗಿ ಇನ್ಮುಂದೆ ಗ್ಯಾಸ್ ಸಿಲಿಂಡರ್ ಅನ್ನೂ ಪಡೆಯಬಹುದು. ಹರಿಯಾಣದ ಗುರುಗ್ರಾಮದಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ದೇಶದಲ್ಲೇ ಮೊದಲ ಬಾರಿಗೆ ಎಲ್‌ಪಿಜಿ ಎಟಿಎಂ (LPG ATM) ಅನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಸೋಹ್ನಾ ಸೆಕ್ಟರ್ 33ರಲ್ಲಿ ಇರುವ ಸೆಂಟ್ರಲ್ ಪಾರ್ಕ್ ಫ್ಲವರ್ ವ್ಯಾಲಿಯಲ್ಲಿ ಎಲ್‌ಪಿಜಿ ಮೆಷಿನ್ ಅಳವಡಿಸಲಾಗಿದೆ. ಇದು ಏಟಿಎಂ ಯಂತ್ರದಂತೆ ಕಾರ್ಯನಿರ್ವಹಿಸಿ, ಕೇವಲ 2 ರಿಂದ 3 ನಿಮಿಷಗಳಲ್ಲಿ ತುಂಬಿದ ಗ್ಯಾಸ್ ಸಿಲಿಂಡರ್ ನೀಡುತ್ತದೆ. ಇನ್ಮುಂದೆ ಗ್ಯಾಸ್‌ಗಾಗಿ ಕಾಯಬೇಕಾದ ಅವಶ್ಯಕತೆ ಇಲ್ಲ. ಈ ಯಂತ್ರದ ಮೂಲಕ ಸರಳ ಡಿಜಿಟಲ್ ಪ್ರಕ್ರಿಯೆ ಪೂರ್ಣಗೊಳಿಸಿ ತಕ್ಷಣವೇ ಸಿಲಿಂಡರ್ ಪಡೆದುಕೊಳ್ಳಬಹುದು. ಕೆಲಸದ ಒತ್ತಡ ಇರುವ ಕುಟುಂಬಗಳಿಗೆ ಇದು ಅನುಕೂಲಕರವಾಗಿದೆ. ಸಿಲಿಂಡರ್ ತೂಕದಲ್ಲೂ ಬದಲಾವಣೆ ಇಲ್ಲಿ ಕಬ್ಬಿಣದ ಸಿಲಿಂಡರ್ ಬದಲಾಗಿ ಫೈಬರ್‌ನಿಂದ ತಯಾರಿಸಿದ ಕಾಂಪೋಸಿಟ್ ಸಿಲಿಂಡರ್ ನೀಡಲಾಗುತ್ತದೆ. ಸಾಮಾನ್ಯ ಸಿಲಿಂಡರ್‌ಗಳು ಗ್ಯಾಸ್ ಸೇರಿ ಒಟ್ಟು 31 ಕೆಜಿ ತೂಗಿದರೆ, ಕಾಂಪೋಸಿಟ್ ಸಿಲಿಂಡರ್‌ಗಳು 15 ಕೆಜಿ ತೂಗುತ್ತವೆ. ಈ ಸಿಲಿಂಡರ್‌ಗಳು ಪಾರದರ್ಶಕವಾಗಿದ್ದು, ಒಳಗಿರುವ ಅನಿಲದ ಮಟ್ಟವನ್ನು ಗ್ರಾಹಕರು ಸುಲಭವಾಗಿ ನೋಡಬಹುದು. ಇದು ಹೆಚ್ಚು ಸುರಕ್ಷಿತವೂ ಹೌದು. ಇದು ಜಂಗು ಹಿಡಿಯುವುದಿಲ್ಲ ಮತ್ತು ಧೂಳು ಕಡಿಮೆ ಅಂಟುತ್ತದೆ, ಆದ್ದರಿಂದ ಸ್ವಚ್ಛವಾಗಿಯೂ ಸುರಕ್ಷಿತವಾಗಿಯೂ ಇರುತ್ತದೆ. ಬಳಸುವ ವಿಧಾನ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ OTP ಮೂಲಕ ದೃಢೀಕರಿಸಿ. ನಂತರ ಖಾಲಿ ಸಿಲಿಂಡರ್‌ನ ಮೇಲೆ ಇರುವ ಬಾರ್ಕೋಡ್ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.ನಂತರ, UPI ಅಥವಾ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡಿ. ಯಂತ್ರವು ಪರಿಶೀಲನೆ ನಡೆಸಿ, ತುಂಬಿದ ಸಿಲಿಂಡರ್ ನೀಡುತ್ತದೆ ಮತ್ತು ನಿಮ್ಮ ಖಾಲಿ ಸಿಲಿಂಡರ್ ಅನ್ನು ಸ್ವೀಕರಿಸುತ್ತದೆ. ಈ ಪ್ರಕ್ರಿಯೆ ಸುಮಾರು 2 ರಿಂದ 3 ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ. ನೀವು ಈಗ ಕಬ್ಬಿಣದ ಸಿಲಿಂಡರ್ ಬಳಸುತ್ತಿದ್ದರೆ, ಅದನ್ನು ಈ ಯಂತ್ರದಲ್ಲೇ ಕಾಂಪೋಸಿಟ್ ಸಿಲಿಂಡರ್‌ಗೆ ಬದಲಾಯಿಸಬಹುದು. ಸ್ಟಾಕ್ ನಿರ್ವಹಣೆ ಈ ಯಂತ್ರದಲ್ಲಿ ಒಟ್ಟಾರೆ 10 ಸಿಲಿಂಡರ್‌ಗಳನ್ನು ಇಡಲು ಅವಕಾಶವಿದೆ. ಸ್ಟಾಕ್ ಎರಡು ಸಿಲಿಂಡರ್‌ಗಳಿಗೆ ಇಳಿದಾಗ, ಹತ್ತಿರದ ಗ್ಯಾಸ್ ಏಜೆನ್ಸಿಗೆ ಸ್ವಯಂಚಾಲಿತವಾಗಿ ಮಾಹಿತಿ ಹೋಗುತ್ತದೆ. ನಂತರ ಅವರು ಬಂದು ಯಂತ್ರವನ್ನು ಮರುಪೂರೈಕೆ ಮಾಡುತ್ತಾರೆ. ಪ್ರಾರಂಭಿಕ ಹಂತ ಈ ಯಂತ್ರವನ್ನು ಮಾರ್ಚ್ 6ರಂದು ಅಳವಡಿಸಲಾಗಿದೆ ಮತ್ತು ಇದು ಬಿಪಿಸಿಎಲ್ ಸಂಸ್ಥೆಯ ಪೈಲಟ್ ಯೋಜನೆಯ ಭಾಗವಾಗಿದೆ. ಪ್ರಸ್ತುತ, ಜನರಿಗೆ ಈ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಕೇವಲ ನಾಲ್ಕು ಸಿಲಿಂಡರ್‌ಗಳು ಮಾತ್ರ ವಿತರಿಸಲಾಗಿದೆ. ಆದರೆ ಅಧಿಕಾರಿಗಳ ಪ್ರಕಾರ, ಈ ಯಂತ್ರವನ್ನು ದೀರ್ಘಾವಧಿಗೆ ಬಳಸುವ ಯೋಜನೆ ಇದೆ. ಗ್ಯಾಸ್ ಕೊರತೆ ಸಮಸ್ಯೆ ಕಡಿಮೆಯಾದ ನಂತರವೂ ಇದು ಕಾರ್ಯನಿರ್ವಹಿಸುತ್ತಲೇ ಇರುತ್ತದೆ. ಸೆಂಟ್ರಲ್ ಪಾರ್ಕ್ ಫ್ಲವರ್ ವ್ಯಾಲಿ ಪ್ರದೇಶದ ಸುತ್ತಮುತ್ತ ವಾಸಿಸುವವರು ತಮ್ಮ ಸಿಲಿಂಡರ್ ಖಾಲಿಯಾದಾಗ ಈ ಸೌಲಭ್ಯವನ್ನು ಬಳಸಬಹುದು ಎಂದು ಹೇಳಿದ್ದಾರೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಮಗದೊಂದು ದಾಖಲೆ ಬರೆದ ಪ್ರಧಾನಿ ಮೋದಿ: 8931 ದಿನ ದೀರ್ಘಾವಧಿ ಆಡಳಿತ ಮುಖ್ಯಸ್ಥರಾಗಿ ಸೇವೆ ಈ ಸಮಯದಲ್ಲಿ ರೈಲು ಟಿಕೆಟ್ ರದ್ದು ಮಾಡಿದ್ರೆ ಹಣ ವಾಪಸ್ ಬರಲ್ಲ: ಮಹತ್ವದ ಬದಲಾವಣೆ