ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ (West Bengal Assembly Elections) ದಿನಾಂಕ ಘೋಷಣೆಯಾಗಿದೆ. ಏಪ್ರಿಲ್ 23 ಮತ್ತು 29 ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಬಂಗಾಳದಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಅಭ್ಯರ್ಥಿಗಳು ಮತಕ್ಕಾಗಿ ವಿವಿಧ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಪಶ್ಚಿಮ ಬಂಗಾಳ ರಾಜ್ಯದ ಚುನಾವಣೆಯೆಂದರೆ ಭರ್ಜರಿ ಸಭೆಗಳು, ಲೌಡ್‌ಸ್ಪೀಕರ್‌ಗಳ ಗದ್ದಲ ಮತ್ತು ಭರವಸೆಗಳು ಇವೇ ಸಾಮಾನ್ಯ ದೃಶ್ಯವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಅಭ್ಯರ್ಥಿಗಳು ಭಾಷಣಗಳಿಗಿಂತ ಕಾರ್ಯಗಳ ಮೂಲಕ ಮತದಾರರ ಮನ ಗೆಲ್ಲಲು ಮುಂದಾಗಿದ್ದಾರೆ. ಮಾತಾಡುವುದಕ್ಕಿಂತ ಕೆಲಸ ಮಾಡೋಣ ಎನ್ನುವ ರೀತಿಯಲ್ಲಿ ಅವರು ಶೇವಿಂಗ್, ಅಡುಗೆ ಮಾಡಲು ಇಳಿದಿದ್ದಾರೆ. ಬಿಜೆಪಿ ಅಭ್ಯರ್ಥಿ ಅನುಪ್ ಕುಮಾರ್ ಸಾಹಾ ಬಿರ್ಭೂಮ್ ಜಿಲ್ಲೆಯ ದುಬ್ರಾಜ್ಪುರ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಮತದಾರರೊಬ್ಬರಿಗೆ ಶೇವಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಇದು “ಗ್ರಾಸ್ರೂಟ್ ಸಂಪರ್ಕ”ನಾ ಅಥವಾ “ಉಚಿತ ಸ್ಯಾಲೂನ್ ಸೇವೆ”ನಾ ಎಂಬುದರ ಬಗ್ಗೆ ರಾಜಕೀಯ ವಿಶ್ಲೇಷಕರು ಚರ್ಚೆ ನಡೆಸುತ್ತಿದ್ದಾರೆ. ಸ್ಥಳೀಯ ಕ್ಷೌರಿಕರು ಮಾತ್ರ ಈ ಹೊಸ ಪ್ರಚಾರದಿಂದ ಆತಂಕಗೊಂಡಿದ್ದಾರೆ. ಇನ್ನೊಂದೆಡೆ, ತೃಣಮೂಲ ಕಾಂಗ್ರೆಸ್‌ನ ಅಭ್ಯರ್ಥಿ ಪಾರ್ಥ ಹಜಾರಿ ಮತದಾರರ ಮನೆಯಲ್ಲೇ ರೊಟ್ಟಿ ಮಾಡಿದ್ದಾರೆ. ಹೂಘ್ಲಿ ಜಿಲ್ಲೆಯ ಪುರ್ಷುರಾ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಮನೆಯೊಳಗೆ ಹೋಗಿ, ಮನೆಯವರೊಂದಿಗೆ ಮಾತುಕತೆ ನಡೆಸುತ್ತಾ, ರೊಟ್ಟಿ ಮಾಡಲು ಆರಂಭಿಸಿದರು. ಇದನ್ನು ಕಂಡು ಮನೆಯವರು ಬೆರಗಾದರು. ಈ ವೇಳೆ ಪಾರ್ಥ ಹಜಾರಿ ಅಡುಗೆ ಅನಿಲದ ಕೊರತೆಯ ವಿಚಾರವನ್ನು ಪ್ರಸ್ತಾಪಿಸಿ, ಕೇಂದ್ರ ಸರ್ಕಾರದ ಮೇಲೆ ಟೀಕೆ ಕೂಡ ಮಾಡಿದರು. ಈ ಘಟನೆ “ರಾಜಕೀಯ ರೊಟ್ಟಿ ರ‍್ಯಾಲಿ” ಎಂಬ ಹೆಸರನ್ನೂ ಪಡೆದುಕೊಂಡಿತು! ಸಿಪಿಎಮ್‌ನ ಅಭ್ಯರ್ಥಿ ಬಿಥಿಕಾ ಪಂಡಿತ್ ಅರಾಂಬಾಗ್ ಮೆಡಿಕಲ್ ಕಾಲೇಜಿನ ಆವರಣವನ್ನು ಸ್ವಚ್ಛಗೊಳಿಸಿದರು. ಮಳೆಯ ನಂತರ ಆಸ್ಪತ್ರೆ ಆವರಣದ ಒಳಗೆ ನೀರು ನಿಂತಿದ್ದನ್ನು ಕಂಡು, ಬಕೆಟ್ ಹಿಡಿದು ನೀರು ತೆರವುಗೊಳಿಸಲು ಆರಂಭಿಸಿದರು. ಕಾರ್ಯಕರ್ತರೂ ಸೇರಿಕೊಂಡು ಸ್ಥಳವನ್ನು ಸ್ವಚ್ಛಗೊಳಿಸಿದರು. ಇದನ್ನು ನೋಡಿ ಜನರು “ಇದು ರಾಜಕೀಯವೇ? ಸ್ವಚ್ಛತಾ ಅಭಿಯಾನವೇ?” ಎಂದು ಆಶ್ಚರ್ಯಪಟ್ಟರು. ಮಾಜಿ ಐಪಿಎಸ್ ಅಧಿಕಾರಿ, ತೃಣಮೂಲ ಕಾಂಗ್ರೆಸ್‌ನ ಅಭ್ಯರ್ಥಿ ಹುಮಾಯೂನ್ ಕಬೀರ್ ತಮ್ಮ ಪ್ರಚಾರದ ವೇಳೆ ಚಹಾ ತಯಾರಿಸಿ ಮತದಾರರಿಗೆ ವಿತರಿಸಿದರು. ಇದು ಮತ್ತೊಂದು ವಿಭಿನ್ನ ಪ್ರಯತ್ನವಾಗಿದೆ ಇನ್ನು ಸಿಪಿಎಮ್‌ನ ಅಭ್ಯರ್ಥಿ ಮೀನಾಕ್ಷಿ ಮುಖರ್ಜಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೋಮದಲ್ಲಿ ತುಪ್ಪ ಹಾಕುತ್ತಿರುವುದು ಗಮನ ಸೆಳೆದಿದೆ. ಸಾಮಾನ್ಯವಾಗಿ ಧಾರ್ಮಿಕ ಕಾರ್ಯಕ್ರಮಗಳಿಂದ ದೂರವಿರುವ ಈ ಪಕ್ಷದ ನಾಯಕರು ಈಗ ಪೂಜೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಹಾಗೆಯೇ, ಕಲ್ತಾನ್ ದಾಸ್‌ಗುಪ್ತ ತಮ್ಮ ಪ್ರಚಾರವನ್ನು ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭಿಸಿದ್ದಾರೆ. ಒಟ್ಟಿನಲ್ಲಿ, ಪಶ್ಚಿಮ ಬಂಗಾಳದ ಚುನಾವಣಾ ವಾತಾವರಣ ಈಗ ಒಂದು ರಿಯಾಲಿಟಿ ಶೋ ಮಾದರಿಯಾಗಿದೆ. ಶೇವ್ ಬೇಕಾ? ಅಭ್ಯರ್ಥಿ ಸಿದ್ಧ. ಹಸಿವಾ? ರೊಟ್ಟಿ ಮಾಡುತ್ತಾರೆ. ರಸ್ತೆಯಲ್ಲಿ ನೀರು ನಿಂತಿದೆಯಾ? ಅದನ್ನೂ ಸ್ವಚ್ಛಗೊಳಿಸುತ್ತಾರೆ! ಇದನ್ನೆಲ್ಲಾ ನೋಡಿ ಮತದಾರರು ಹಾಸ್ಯಭರಿತವಾಗಿ ಕೇಳುತ್ತಿರುವ ಪ್ರಶ್ನೆ ಏನೆಂದರೆ: “ನಾವು ಇವರಿಗೆ ಮತ ಹಾಕಿದ್ರೆ, ನಂತರ ಮನೆಗೆ ಬಂದು ಪಾತ್ರೆ ತೊಳೆಯ್ತಾರಾ?” ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಈ ಸಮಯದಲ್ಲಿ ರೈಲು ಟಿಕೆಟ್ ರದ್ದು ಮಾಡಿದ್ರೆ ಹಣ ವಾಪಸ್ ಬರಲ್ಲ: ಮಹತ್ವದ ಬದಲಾವಣೆ ಗ್ರಾಮೀಣ ಜನರ ಆಸ್ತಿ ವಿವಾದ ಬಗೆಹರಿಸಿದ ಆಸ್ತಿ ಕಾರ್ಡ್: ಏನಿದು ಯೋಜನೆ? ಇಲ್ಲಿದೆ ಮಾಹಿತಿ