ಕೋಟ್ಯಾಂತರ ಭಕ್ತರ ಆರಾಧ್ಯ ದೇವತೆ, ರಾಜ್ಯದ ಪ್ರಮುಖ ಆದಿಶಕ್ತಿ ದೇವಸ್ಥಾನಗಳಲ್ಲಿ ಒಂದಾದ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ (Sri Renuka Yallamma Temple of Savadatti) ಪ್ರತಿದಿನ ಸಾವಿರಾರು ಭಕ್ತರು ಆಗಮಿಸಿ, ದರ್ಶನ ಪಡೆಯುತ್ತಾರೆ. ಒಂದು ವರ್ಷದಲ್ಲಿ ದೇವಿ ಯಲ್ಲಮ್ಮನ ದೇವಸ್ಥಾನಕ್ಕೆ 1.25 ಯಿಂದ 3 ಕೋಟಿ ಭಕ್ತರ ಭೇಟಿ ನೀಡುತ್ತಾರೆ. ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಕರ್ನಾಟಕ ಮಾತ್ರವಲ್ಲದೇ ಪಕ್ಕದ ಮಹರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಇಷ್ಟೊಂದು ಪ್ರಮಾಣದಲ್ಲಿ ಭಕ್ತರು ಭೇಟಿ ನೀಡುವ ಸವದತ್ತಿ ಯಲ್ಲಮ್ಮನ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶ ಅವ್ಯವಸ್ಥೆಯ ಆಗರವಾಗಿದೆ. ದೇವಿಯ ದರ್ಶನಕ್ಕೆ ತೆರಳುವ ಭಕ್ತರಿಗೆ ಮೊದಲು ಸಿಗುವವರೇ ಪಾರ್ಕಿಂಗ್‌ಗಾಗಿ ಹಣ ಪಡೆಯುವ ದಲ್ಲಾಳಿಗಳು. ಒಂದು ಕಾರ್ ಪಾರ್ಕ್‌ಗೆ 50 ರೂ. ಹಣ ಪಡೆಯುತ್ತಾರೆ. ಇಲ್ಲಿ ಹಣ ಕೊಡಲು ಭಕ್ತರು ಹಿಂಜರಿಯುವುದಿಲ್ಲ, ಆದ್ರೆ, ಹಣ ಕೊಟ್ಟಹಾಗೆ ಪಾರ್ಕಿಂಗ್ ವ್ಯವಸ್ಥೆ ಇದೆಯೇ? ಇಲ್ಲ. ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡಲಾಗುತ್ತದೆ. ಶಿಸ್ತುಬದ್ಧವಾಗಿ ಪಾರ್ಕ್ ಮಾಡಲು ಸ್ಥಳವಿಲ್ಲ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ವಾಹನವನ್ನು ಪಾರ್ಕ್ ಮಾಡಿ, ಕೆಳಗಿಳಿದರೇ, ಮಲ-ಮೂತ್ರ ಸ್ವಾಗತ. ಎಲ್ಲೆಂದರಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಿರುವುದನ್ನು ಮತ್ತು ಮಾಡುತ್ತಿರುವುದನ್ನು ಕಾಣಬಹುದು. ಯಲ್ಲಮನ ಗುಡ್ಡದ ತುಂಬೆಲ್ಲ ಮಲ-ಮೂರ್ತದ ವಾಸನೆ. ಮತ್ತು ಕೊಳಚೆ ನೀರು ರಸ್ತೆ ಮೇಲೆ ಹರಿದು ದುರ್ವಾಸನೆ ಬರುತ್ತಿದೆ. ಮುಂದುವರೆದು, ಗುಡ್ಡದ ಮೇಲಿಂದ ಹರಿದು ಬರುವ ಪವಿತ್ರ ನೀರನ್ನು ಸಿಂಪಡಿಸಿಕೊಳ್ಳಲು ಎಣ್ಣೆ ಹೊಂಡಕ್ಕೆ ಹೋದರೆ, ಅಲ್ಲಂತೂ ದುರ್ವಾಸನೆ, ಎಲ್ಲೆಂದರಲ್ಲಿ ಬಿಸಾಡಿದ ಬಟ್ಟೆಗಳು ಕಂಡು ವಾಕರಿಕೆ ಬರದೆ ಇರದು. ಇಲ್ಲಿ, ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ ಎಂಬ ಸರ್ಕಾರದ ಬೋರ್ಡ್ ಕಾಣ್ತು. ಈ ಬೋರ್ಡ್ ತೋರಿಕೆಗಾಗಿ ಹಾಕಲಾಗಿದೆ ಅಂತ ಅನ್ನಿಸಿತು. ಏಕೆಂದರೆ, ಆ ಬೋರ್ಡ್ ಮುಂದೆಯೇ ಖಾಲಿ ಪ್ಲಾಸ್ಟಿಕ್ ಬಾಟಲ್‌ಗಳನ್ನು 10-20 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಭಕ್ತರು ಎಣ್ಣೆ ಹೊಂಡದ ನೀರು ತುಂಬಿಕೊಂಡು ಹೋಗಲು, ಅಲ್ಲಿನ ಸ್ಥಳೀಯರು ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಸೌಭಾಗ್ಯಕ್ಕೆ ಪ್ಲಾಸ್ಟಿಕ್ ನಿಷೇಧ ಎಂಬ ಬೋರ್ಡ್ ಏಕೆ? ಎಣ್ಣೆ ಹೊಂಡದಲ್ಲಿ ಸ್ನಾನ ಮಾಡಿದ ಭಕ್ತರು ಹಸಿ ಬಟ್ಟೆಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಮಲಿನ ಬಟ್ಟೆಗಳು ರಾಶಿರಾಶಿಯಾಗಿ ಬಿದ್ದಿವೆ. ಎಣ್ಣೆ ಹೊಂಡದ ನೀರು ಹರಿದು ಹೋಗುವ ಜಲಾಯನ ಕಾಲುವೆ ಚರಂಡಿಯಂತೆ ಆಗಿದೆ. ಈ ನೀರು ಮುಂದೆ, ಜೋಗುಳ ಬಾವಿಯನ್ನು ಸೇರುತ್ತದೆ. ದೇವಸ್ಥಾನದ ಒಳಗಡೆ ಮತ್ತು ಹೊರಗಡೆ ಸ್ವಚ್ಛತೆ ಎಂಬುವುದು ಮರಿಚಿಕೆಯಾಗಿದೆ. ದೇವಸ್ಥಾನದ ಒಳಗಡೆ ಸರತಿ ಸಾಲಿನಲ್ಲಿ ನಿಂತಾಗ, ಐಸ್‌ಕ್ಯಾಂಡಿ ಮಾರುವವರ ದಂಡೇ ಇದೆ. ಪ್ರತಿ ಸಾಲಿಗೆ ಒಬ್ಬರಂತೆ ನಿಂತು ಮಾರಾಟ ಮಾಡುತ್ತಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಳಕೆ, ನಾಮಕಾವಸ್ತೆ ಬೋರ್ಡ್ ಭಕ್ತರು ಐಸ್‌ಕ್ಯಾಂಡಿ ತೆಗೆದುಕೊಂಡು ಪ್ಲಾಸ್ಟಿಕ್ ಅಲ್ಲೇ ಬಿಸಾಡಿ ಹೋಗುತ್ತಾರೆ. ಇದು ಮಾತ್ರವಲ್ಲದೇ, ಶೇಂಗಾ, ಹುರಕಡ್ಲಿ ಸೇರಿದಂತೆ ವಿವಿಧ ತಿನಿಸುಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಮಾರಾಟ ಮಾಡುತ್ತಾರೆ. ಅಲ್ಲಿಯೂ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ ಎಂಬ ಬೋರ್ಡ್ ಕಂಡುಬಂತು. ಈ ಬೋರ್ಡ್ ನಾಮಕವಸ್ತೆಗೆ ಮಾತ್ರ ಎಂದೆನಿಸಿತು. ಇನ್ನು, ಈ ಸರತಿ ಸಾಲಿನಲ್ಲಿ ನಿಂತಾಗ ಮಂಗಳಮುಖಿಯರ ಕಾಟ ಹೇಳತೀರದು. ಇವರು ಹಣ ನೀಡುವವರೆಗೂ ದೇವಸ್ಥಾನದ ಒಳಗಡೆ ಬಿಡುವುದೇ ಇಲ್ಲ. ಪ್ರತಿಯೊಬ್ಬರನ್ನು ನಿಲ್ಲಿಸಿ ಹಣ ನೀಡುವವರೆಗೂ ಅವಾಚ್ಯ ಶಬ್ಧಗಳಿಂದ ಬೈಯುವುದು, ನೀಡಿದ ಮೇಲೆ ದೇವಸ್ಥಾನದ ಒಳಗಡೆ ಬಿಡುತ್ತಾರೆ. ಇಲ್ಲಿ ಭಕ್ತರ ಪರದಾಟ ಹೇಳತೀರದು. ಇನ್ನು, ದೇವಸ್ಥಾಕ್ಕೆ ಅರ್ಪಿಸುವ ಭಂಡಾರದ ಕಥೆ ಬೇರೆಯದ್ದೇ ಆಗಿದೆ. ನೆಲಕ್ಕೆ ಬಿದ್ದ ಭಂಡಾರವನ್ನು ಮತ್ತೆ ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ಮಾರಾಟ ಮಾಡುತ್ತಾರೆ. ಗರ್ಭಗುಡಿ ಪ್ರವೇಶ ದ್ವಾರದಲ್ಲಿ ಹಾಕಲಾಗಿರುವ ಗಂಟೆ ಮುರಿದಿದೆ. ದೇವಾಲಯದ ಬಾಗಿಲಿಗೆ ಅಳವಡಿಸಿದ್ದ ಬೆಳ್ಳಿ ಕವಚ ಮುರಿದಿದೆ! ಹೊಸ ಗಂಟೆ, ಬೆಳ್ಳಿ ಕವಚ ಅಳವಡಿಸುವಷ್ಟು ಹಣ ಧಾರ್ಮಿಕ ದತ್ತಿ ಇಲಾಖೆ ಬಳಿ ಇಲ್ಲವೇ? ಯಲ್ಲಮ್ಮನ ಗುಡ್ಡದಲ್ಲಿ ಸ್ವಚ್ಛತೆ ಎಂಬುವುದು ಮರಿಚಿಕೆಯಾಗಿದೆ. ಸರ್ಕಾರ ನೀಡುವ ಹಣ ಎಲ್ಲಿ ಹೋಗುತ್ತದೆ? ಹೋಗ್ಲಿ, ಹುಂಡಿಯಲ್ಲಿ ಸಂಗ್ರಹವಾದ ಕೋಟ್ಯಾಂತರ ರೂಪಾಯಿ ಹಣ ಯಾರ ಪಾಲಾಗುತ್ತದೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ? ದೇವಸ್ಥಾನದಲ್ಲಿ ದಲ್ಲಾಳಿಗಳ ಮತ್ತು ಖಾಸಗಿ ಸಂಸ್ಥೆಯ ವ್ಯಕ್ತಿಗಳ ಹಾವಳಿ ಅಧಿಕವಾಗಿದ್ದು, ಭಕ್ತರಿಂದ ಹಣವನ್ನು ಪೀಕುತ್ತಿದ್ದಾರೆ. ದೇವಿಯ ದರ್ಶನಕ್ಕೆ ಬರುವವರು ಹೈರಾಣಾಗಿ ಹೋಗದೆ ಇರರು. ಎಲ್ಲಿ ಹೋಯ್ತು 200 ಕೋಟಿ ರೂ. ಯಲ್ಲಮ್ಮ ದೇವಸ್ಥಾನ ಮತ್ತು ಸುತ್ತಲಿನ ಸ್ಥಳವನ್ನು ಪ್ರವಾಸಿ ಆಕರ್ಷಣೆಯಾಗಿ ಅಭಿವೃದ್ಧಿಪಡಿಸಲು 200 ಕೋಟಿ ರೂ. ಸಮಗ್ರ ಯೋಜನೆ ಸಿದ್ಧಪಡಿಸಲಾಗಿದೆ.ಇದರಲ್ಲಿ ರಾಜ್ಯ ಸರ್ಕಾರ 90 ಕೋಟಿ ರೂ. ಕೇಂದ್ರ ಸರ್ಕಾರ 100 ಕೋಟಿ ರೂ. ಬಡ್ಡಿರಹಿತ ದೀರ್ಘಾವಧಿ ಸಾಲವನ್ನು ನೀಡಿದೆ. ಮೊದಲ ಹಂತದಲ್ಲಿ 140 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಇದಿಷ್ಟು ಹಣ ಎಲ್ಲಿ ಹೋಯ್ತು. ಎಲ್ಲಿ ಹೋಯ್ತು ಹುಂಡಿ ಹಣ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ 2025ರ ಜುಲೈನಿಂದ ಈವರೆಗೆ ಆರು ಹಂತದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 11.06 ಕೋಟಿ ರೂ. ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ. ಇದರಲ್ಲಿ 9.92 ಕೋಟಿ ರೂ. ನಗದು, 74.89 ಲಕ್ಷ ರೂ. ಮೌಲ್ಯದ 635 ಗ್ರಾಂ ಚಿನ್ನಾಭರಣ ಹಾಗೂ 38.35 ಲಕ್ಷ ಮೌಲ್ಯದ 21.18 ಕೆ.ಜಿ ಬೆಳ್ಳಿ ಆಭರಣ ಸೇರಿವೆ. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation KEA PG-CET Exam Date 2026: ಪ್ರವೇಶ ಪರೀಕ್ಷೆ ದಿನಾಂಕ ಪ್ರಕಟ ಬೆಂಗಳೂರು ಸೇರಿದಂತೆ ಸುತ್ತಲಿನ 4 ಜಿಲ್ಲೆಗಳಲ್ಲಿ 1.87 ಲಕ್ಷ ಕೋಟಿ ರೂ. ಹೂಡಿಕೆ: ಕಿತ್ತೂರು, ಕಲ್ಯಾಣ ಕರ್ನಾಟಕಕ್ಕೆಯಾಕಿಲ್ಲ? ವರದಿ