₹1,356 crore investment in the aviation sector, 1,350 jobs createdಸಿಎಂ ಸಿದ್ದರಾಮಯ್ಯ ಸಚಿವರು, ಅಧಿಕಾರಿಗಳೊಂದಿಗೆ ಸಭೆ

ಬೆಂಗಳೂರು, ಏಪ್ರಿಲ್‌ 14: ಉತ್ತರ ಕರ್ನಾಟಕದ ಜನರಿಗೆ ಸಿಹಿ ಸುದ್ದಿ ದೊರೆತಿದೆ. ಏರೋಸ್ಪೇಸ್‌ ಕ್ಷೇತ್ರದಲ್ಲಿ, ಅರೋಸ್ಟ್ರಕ್ಚರ್ಸ್ ಮ್ಯಾನ್ಯೂಫ್ಯಾಕ್ಚರಿಂಗ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ (Aerostructures Manufacturing India Private Limited) ಕಂಪನಿ ಬೆಳಗಾವಿಯಲ್ಲಿ 1,356 ಕೋಟಿ ರೂ. ಹೂಡಿಕೆ ಮಾಡಲಿದ್ದು, ಇದರಿಂದ ಸುಮಾರು 1,350 ಉದ್ಯೋಗಗಳನ್ನು ಸೃಷ್ಟಿಯಾಗಲಿದೆ.

ಕರ್ನಾಟಕ ರಾಜ್ಯದ ಉನ್ನತ ಮಟ್ಟದ ಅನುಮೋದನಾ ಸಮಿತಿ (SHLCC) ಏಪ್ರಿಲ್ 13 ರಂದು ನಡೆದ ಸಭೆಯಲ್ಲಿ ಒಟ್ಟು 18,430.44 ಕೋಟಿ ರೂ. ಮೌಲ್ಯದ ಹೂಡಿಕೆ ಪ್ರಸ್ತಾವನೆಗಳನ್ನು ಅನುಮೋದಿಸಿದ್ದು, ಇದರ ಮೂಲಕ ಸುಮಾರು 15,032 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಹಿರಿಯ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು. ಒಟ್ಟು 17 ಪ್ರಸ್ತಾವನೆಗಳಲ್ಲಿ 11 ಹೊಸ ಯೋಜನೆಗಳು ಹಾಗೂ 6 ವಿಸ್ತರಣೆ ಅಥವಾ ಹೆಚ್ಚುವರಿ ಹೂಡಿಕೆ ಯೋಜನೆಗಳನ್ನು ಈ ಸಭೆಯನ್ನು ಅನುಮೋದಿಸಲಾಗಿದೆ.

ಪಿ.ಎಮ್.ಐ. ಟೆಕ್ನಾಲಜಿ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿಯು ಬೆಂಗಳೂರಿನಲ್ಲಿ 1,000 ಕೋಟಿ ರೂ. ಮೌಲ್ಯದ ವಿಮಾನೋದ್ಯಮ ಹಾಗೂ ವಾಹನೋದ್ಯಮ ಸಂಬಂಧಿತ ಯೋಜನೆಗೆ ಅನುಮೋದನೆ ಪಡೆದುಕೊಂಡಿದ್ದು, ಇದರ ಮೂಲಕ ಸುಮಾರು 800 ಉದ್ಯೋಗಗಳು ಸೃಷ್ಟಿಯಾಗಲಿವೆ.

ಔಷಧೋದ್ಯಮ ಕ್ಷೇತ್ರದಲ್ಲಿ ಒನ್‌ಸೋರ್ಸ್ ಸ್ಪೆಷಾಲಿಟಿ ಫಾರ್ಮಾ ಲಿಮಿಟೆಡ್ ಕಂಪನಿ ಬೆಂಗಳೂರು ಗ್ರಾಮಾಂತರದಲ್ಲಿ 700 ಕೋಟಿ ರೂ. ಹೂಡಿಕೆ ಮಾಡಲಿದ್ದು, ಸೈ ಲೈಫ್ ಸೈಂಸೆಸ್ ಲಿಮಿಟೆಡ್ ಕಂಪನಿ ಬೀದರ್‌ನಲ್ಲಿ 900 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದೆ.

ಅಧಿಕಾರಿಗಳ ಪ್ರಕಾರ, ಈ ಅನುಮೋದನೆಗಳು ವಿವಿಧ ಜಿಲ್ಲೆಗಳು ಮತ್ತು ಕ್ಷೇತ್ರಗಳನ್ನು ಒಳಗೊಂಡಿದ್ದು, ವಾಹನೋದ್ಯಮ, ಎಲೆಕ್ಟ್ರಿಕ್‌ ವೆಹಿಕಲ್‌ (ಇವಿ), ವಿಮಾನೋದ್ಯಮ, ಸೆಮಿಕಂಡಕ್ಟರ್, ಔಷಧೋದ್ಯಮ, ನವೀಕರಿಸಬಹುದಾದ ಇಂಧನ, ಜವಳಿ ಹಾಗೂ ಲೋಹೋದ್ಯಮ ಕ್ಷೇತ್ರಗಳನ್ನು ಒಳಗೊಂಡಿವೆ.

11 ಹೊಸ ಯೋಜನೆಗಳಿಗೆ ₹14,906 ಕೋಟಿ ಹೂಡಿಕೆ

ಸಮಿತಿಯು 14,906.9 ಕೋಟಿ ರೂ. ಮೌಲ್ಯದ 11 ಹೊಸ ಹೂಡಿಕೆ ಪ್ರಸ್ತಾವನೆಗಳನ್ನು ಅನುಮೋದಿಸಿದ್ದು, ಇದರ ಮೂಲಕ ಸುಮಾರು 13,050 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಈ ಯೋಜನೆಗಳು ಕೋಲಾರ, ಚಿಕ್ಕಬಳ್ಳಾಪುರ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ತುಮಕೂರು, ದಕ್ಷಿಣ ಕನ್ನಡ, ಬಳ್ಳಾರಿ, ಬೀದರ್ ಮತ್ತು ಬೆಂಗಳೂರಿನಲ್ಲಿ ಅನುಷ್ಠಾನಕ್ಕೆ ಬರಲಿವೆ.

ವೋಲ್ವೋ ಗ್ರೂಪ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿ ಬೆಂಗಳೂರು ಗ್ರಾಮಾಂತರದಲ್ಲಿ ಆಟೋಮೊಬೈಲ್‌ ಕ್ಷೇತ್ರದಲ್ಲಿ 1,500 ಕೋಟಿ ರೂ. ಹೂಡಿಕೆ ಮಾಡಲಿದ್ದು, ಸುಮಾರು 1,700 ಉದ್ಯೋಗಗಳನ್ನು ಸೃಷ್ಟಿಯಾಗಲಿವೆ. ರಿವರ್ ಮೊಬಿಲಿಟಿ ಪ್ರೈವೆಟ್ ಲಿಮಿಟೆಡ್ ಕಂಪನಿ ಕೋಲಾರದಲ್ಲಿ 1,028 ಕೋಟಿ ರೂ. ಮೌಲ್ಯದ ಎಲೆಕ್ಟ್ರಿಕ್‌ ವಾಹನ ಉತ್ಪಾದನೆಯಲ್ಲಿ ಹೂಡಿಕೆ ಮಾಡಲಿದೆ.

ಸುಮಾರು 900 ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ. ಗೆಂಕ್ಸ್ ಪಿವಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಚಿಕ್ಕಬಳ್ಳಾಪುರದಲ್ಲಿ 1,000 ಕೋಟಿ ರೂ. ಹೂಡಿಕೆ ಮಾಡಿ ಸೌರ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದ್ದು, ಸುಮಾರು 1,500 ಉದ್ಯೋಗಗಳನ್ನು ಸೃಷ್ಟಿಸಲಿದೆ.

ಎಮ್11 ಎನರ್ಜಿ ಟ್ರಾನ್ಸಿಷನ್ ಪ್ರೈವೆಟ್ ಲಿಮಿಟೆಡ್ ಕಂಪನಿ ದಕ್ಷಿಣ ಕನ್ನಡದಲ್ಲಿ 1,600 ಕೋಟಿ ರೂ. ಮೌಲ್ಯದ ವಿಮಾನ ಇಂಧನ ಯೋಜನೆಯನ್ನು ಸ್ಥಾಪಿಸಲಿದೆ. ಲೋಹೋದ್ಯಮ ಕ್ಷೇತ್ರದಲ್ಲಿ, ಜೆಎಸ್‌ಡಬ್ಲ್ಯೂ ವಿಜಯನಗರ ಮೆಟಾಲಿಕ್ಸ್ ಲಿಮಿಟೆಡ್ ಕಂಪನಿ ಬಳ್ಳಾರಿಯಲ್ಲಿ 4,600 ಕೋಟಿ ರೂ. ಹೂಡಿಕೆ ಮಾಡಲು ಬದ್ಧವಾಗಿದೆ. ಈ ಯೋಜನೆಯಿಂದ ಸುಮಾರು 300 ಉದ್ಯೋಗಗಳು ಸೃಷ್ಟಿಯಾಗಲಿವೆ.

6 ವಿಸ್ತರಣೆ ಯೋಜನೆಗಳಿಗೆ 3,523 ಕೋಟಿ ರೂ. ಅನುಮೋದನೆ

SHLCC ಸಮಿತಿಯು 3,523.54 ಕೋಟಿ ರೂ. ಮೌಲ್ಯದ 6 ವಿಸ್ತರಣೆ ಹಾಗೂ ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳನ್ನು ಸಹ ಅನುಮೋದಿಸಿದ್ದು, ಸುಮಾರು 1,982 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ವಿಸ್ತರಣೆ ಯೋಜನೆಗಳಲ್ಲಿ, ವಿಪ್ರೋ ಗ್ಲೋಬಲ್ ಇಂಜಿನಿಯರಿಂಗ್ & ಇಲೆಕ್ಟ್ರಾನಿಕ್ ಮಟೀರಿಯಲ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ 1,397 ಕೋಟಿ ರೂ. ಹೂಡಿಕೆ ಮಾಡಲಿದೆ. ಪೋದ್ದಾರ್ ಪ್ಲಂಬಿಂಗ್ ಸಿಸ್ಟಂ ಪ್ರೈವೆಟ್ ಲಿಮಿಟೆಡ್ ಕಂಪನಿ ಕೋಲಾರದಲ್ಲಿ 266 ಕೋಟಿ ರೂ. ಹೂಡಿಕೆ ಮಾಡಲಿದ್ದು, ಕಲರ್‌ಟೋನೆ ಟೆಕ್ಸ್ಟೈಲ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿ ಚಾಮರಾಜನಗರದಲ್ಲಿ 355 ಕೋಟಿ ರೂ. ಹೂಡಿಕೆ ಮಾಡಲಿದೆ.

ಗೂದ್ರಿಚ್ ಅಯರ್‌ಪೇಸ್ ಸರ್ವಿಸೆಸ್ ಪ್ರೈವೆಟ್ ಲಿಮಿಟೆಡ್ ಕಂಪನಿ ಬೆಂಗಳೂರಿನಲ್ಲಿ 141.50 ಕೋಟಿ ರೂ. ಹೂಡಿಕೆ ಮಾಡಲಿದ್ದು, ಎಂ.ಎಸ್.ಪಿ.ಎಲ್. ಲಿಮಿಟೆಡ್ ಮತ್ತು ಇಂಡಿಯನ್ ಕೇನ್ ಪವರ್ ಲಿಮಿಟೆಡ್ ಕಂಪನಿಗಳು ಕ್ರಮವಾಗಿ ಬಳ್ಳಾರಿ ಮತ್ತು ಬಾಗಲಕೋಟೆಯಲ್ಲಿ ಉಕ್ಕು ಹಾಗೂ ಸಕ್ಕರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲಿವೆ.

ವಿದ್ಯುತ್ ವಾಹನಗಳು, ವಿಮಾನೋದ್ಯಮ, ಸೆಮಿಕಂಡಕ್ಟರ್, ನವೀಕರಿಸಬಹುದಾದ ಶಕ್ತಿ ಹಾಗೂ ಮೂಲಭೂತ ಉತ್ಪಾದನಾ ಕ್ಷೇತ್ರಗಳನ್ನು ಒಳಗೊಂಡ ಈ ಹೂಡಿಕೆಗಳು ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಯನ್ನು ಬಲಪಡಿಸುವುದರ ಜೊತೆಗೆ ವಿವಿಧ ಜಿಲ್ಲೆಗಳಲ್ಲೂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *