ರಾಜ್ಯದಲ್ಲಿ ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಬೆಂಗಳೂರು (Bengaluru) ಮತ್ತು ಇದರ ಸುತ್ತಲಿನ ನಾಲ್ಕು ಜಿಲ್ಲೆಗಳಿಗೆ ಸೀಮಿತವಾಗಿ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತಿದೆ. ನಮ್ಮ ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎಂದು ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಜಿಲ್ಲೆಯ ಜನರ ಕೂಗೂ ನಿತ್ಯ ಕೇಳಿ ಬರುತ್ತದೆ. ಈ ವಿಚಾರವಾಗಿ ಖಾಸಗಿ ಸುದ್ದಿ ಸಂಸ್ಥೆ ಟೈಮ್ಸ್ ನೌ ವರದಿ ಪ್ರಕಟಿಸಿದ್ದು, ಕನ್ನಡ ಅನುವಾದ ಇಲ್ಲಿದೆ. ಕಲ್ಯಾಣ ಮತ್ತು ಕಿತ್ತೂರು ಪ್ರದೇಶಗಳಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಹೂಡಿಕೆ ಇನ್ನೂವರೆಗೂ ಬೆಂಗಳೂರು ಸೇರಿದಂತೆ ಸುತ್ತಲಿನ ನಾಲ್ಕು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಸರ್ಕಾರವು ವಿಧಾನಸಭೆಗೆ ತಿಳಿಸಿದ ಮಾಹಿತಿ ಪ್ರಕಾರ, 2023-24 ರಿಂದ 2025-26ರವರೆಗೆ ರಾಜ್ಯ ಉನ್ನತ ಮಟ್ಟದ ಅನುಮೋದನೆ ಸಮಿತಿ (SHLCC) ಮತ್ತು ರಾಜ್ಯ ಮಟ್ಟದ ಏಕ ಗವಾಕ್ಷಿ ತೆರವು ಸಮಿತಿ SLSWCC ಅನುಮೋದಿಸಿದ 1,423 ಯೋಜನೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಿಗೆ ಸೀಮಿತವಾಗಿವೆ. ಈ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 1.87 ಲಕ್ಷ ಕೋಟಿ ರೂ. ಹೂಡಿಕೆಯಾಗಿದ್ದು, ಈ ಮೂಲಕ ಬೆಂಗಳೂರು ಇನ್ನೂ ಕೈಗಾರಿಕಾ ಕೇಂದ್ರವಾಗಿಯೇ ಉಳಿದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 65,203 ಕೋಟಿ ರೂ. ವೆಚ್ಚದಲ್ಲಿ 509 ಯೋಜನೆಗಳು ಮಂಜೂರಾಗಿವೆ. ಇದರಿಂದ ಸುಮಾರು 1.19 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕ್ರಮವಾಗಿ 139 ಮತ್ತು 121 ಯೋಜನೆಗಳು ಜಾರಿಯಾಗಿವೆ. ಬೆಂಗಳೂರು ನಗರ ಮತ್ತು ಮೈಸೂರು ಜಿಲ್ಲೆಗಳಿಗೆ ಕಡಿಮೆ ಯೋಜನೆ ಮಂಜೂರಾಗಿದ್ದರೂ, ಹೆಚ್ಚಿನ ಹಣ ಹೂಡಿಕೆಯಾಗಿದೆ. ಆದರೆ, ಯೋಜನೆಗಳ ಅನುಷ್ಠಾನ ನಿಧಾನಗತಿಯಲ್ಲಿರುವುದು ಚಿಂತಾಜನಕವಾಗಿದೆ. 1,423 ಯೋಜನೆಗಳಲ್ಲಿ ಕೇವಲ 26 ಮಾತ್ರ ಪೂರ್ಣಗೊಂಡಿದ್ದು, 1,392 ಯೋಜನೆಗಳು ವಿವಿಧ ಹಂತಗಳಲ್ಲಿ ಮುಂದುವರಿದಿವೆ. ಟೈಮ್ಸ್ ನೌಗೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹೂಡಿಕೆಯಾಗುತ್ತಿದೆ. ಹೆಚ್ಚಿನ ಕೈಗಾರಿಕಾ ಯೋಜನೆಗಳು ಪೂರ್ಣಗೊಳ್ಳಲು 3 ರಿಂದ 5 ವರ್ಷಗಳ ಕಾಲ ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಸವದತ್ತಿ ಯಲ್ಲಮ್ಮ ಗುಡ್ಡ ಅವ್ಯವಸ್ಥೆ ಆಗರ: ಮುರಿದ ಗರ್ಭಗುಡಿಯ ಗಂಟೆ, ಪ್ರವೇಶ ದ್ವಾರದ ಬೆಳ್ಳಿಯ ಕವಚ ಬೇಸಿಗೆ ರಜೆ: ಹುಬ್ಬಳ್ಳಿ-ರಾಮೇಶ್ವರಂಗೆ ಸಾಪ್ತಾಹಿಕ ವಿಶೇಷ ಎಕ್ಸಪ್ರೆಸ್ ರೈಲು