2026ರ ಐಸಿಸಿ ಟಿ20 ವಿಶ್ವಕಪ್ (T20 World Cup) ಫೈನಲ್‌ನಲ್ಲಿ ಟಿಂ ಇಂಡಿಯಾ (Team India) ತಂಡವು ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಹಲವು ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿತು. ವಿಶೇಷವಾಗಿ, ಭಾರತ ತಂಡವು ಮೊದಲ ಬಾರಿಗೆ ತನ್ನದೇ ನೆಲದಲ್ಲಿ ಟಿ20 ವಿಶ್ವಕಪ್ ಅನ್ನು ಗೆದ್ದಿದೆ. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿ ಸಂಭವಿಸಿದ ಸಾಧನೆಯಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 20 ಓವರ್‌ಗಳಲ್ಲಿ 255/5 ರನ್ ಗಳಿಸಿತು. ಇದು ಟಿ20 ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ದಾಖಲಾಗಿದ ಅತ್ಯಧಿಕ ತಂಡದ ಮೊತ್ತವಾಗಿದೆ. ಇದರ ಜೊತೆಗೆ, ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ತಂಡ 200 ರನ್ ಗಡಿ ದಾಟಿದ ಸಾಧನೆಯೂ ಇದಾಗಿದೆ. ಭಾರತದ ಟಾಪ್ ಆರ್ಡರ್ ಬ್ಯಾಟರ್‌ಗಳ ಆಕ್ರಮಣಕಾರಿ ಆಟದಿಂದ ಪವರ್‌ಪ್ಲೇನಲ್ಲಿಯೇ ಹೆಚ್ಚಿನ ರನ್‌ಗಳು ಹರಿದುಬಂದವು.

ಈ ಪಂದ್ಯದಲ್ಲಿ ಮತ್ತೊಂದು ಪ್ರಮುಖ ದಾಖಲೆ ಎಂದರೆ ಗೆಲುವಿನ ಅಂತರ. ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು, ಇದು ಟಿ20 ವಿಶ್ವಕಪ್‌ನಲ್ಲಿ ಭಾರತದ ಅತ್ಯಧಿಕ ರನ್ ಅಂತರದ ಗೆಲುವಾಗಿದೆ.

ಇದನ್ನೂ ಓದಿ: ವಿಶ್ವಕಪ್ ಗೆ ಮುತ್ತಿಟ್ಟ ಭಾರತ, ಸತತ 2ನೇ ಬಾರಿ ಚಾಂಪಿಯನ್

ಇನ್ನು, ವಿಕೆಟ್ ಕೀಪರ್ ಕಮ್ ಬ್ಯಾಟರ್ ಸಂಜು ಸ್ಯಾಮ್ಸನ್ ಫೈನಲ್ ಪಂದ್ಯದಲ್ಲಿ ಅದ್ಭುತ ಇನಿಂಗ್ಸ್ ಆಡಿದ್ದು, ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರಾಗಿದ್ದಾರೆ. ಇದೇ ಟೂರ್ನಿಯಲ್ಲಿ ಅವರು ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ಸಹ ನಿರ್ಮಿಸಿದರು.

ಈ ಗೆಲುವಿನೊಂದಿಗೆ ಭಾರತ ತಂಡ ಮತ್ತೊಂದು ಐತಿಹಾಸಿಕ ಸಾಧನೆಗೂ ಪಾತ್ರವಾಯಿತು. ಭಾರತವು ಐಸಿಸಿ ಟಿ20 ವಿಶ್ವಕಪ್ ಅನ್ನು ಮೂರನೇ ಬಾರಿ ಗೆದ್ದ ಮೊದಲ ತಂಡವಾಗಿ ಹೊರಹೊಮ್ಮಿತು. ಜೊತೆಗೆ, ಸತತ ಎರಡು ಬಾರಿ ಭಾರತ ಟಿ20 ವಿಶ್ವಕಪ್ ಅನ್ನು ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗು ಪಾತ್ರವಾಗಿದೆ.

ಒಟ್ಟಿನಲ್ಲಿ, ತವರಿನಲ್ಲಿ ನೆಲದಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆಲುವು, ಅತ್ಯಧಿಕ ಫೈನಲ್ ಸ್ಕೋರ್, ಭರ್ಜರಿ ಗೆಲುವಿನ ಅಂತರ, ಮತ್ತು ವೈಯಕ್ತಿಕ ದಾಖಲೆಗಳು ಸೇರಿದಂತೆ ಹಲವು ಐತಿಹಾಸಿಕ ಸಾಧನೆಗಳೊಂದಿಗೆ 2026ರ ಫೈನಲ್ ಪಂದ್ಯವು ಟಿ20 ವಿಶ್ವಕಪ್ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *