ತೊಟ್ಟ ಬಾಣ ಗುರಿ ತಲುಪಿ ಚಿನ್ನದ ಪದಕ್ಕಕ್ಕೆ ಪಾಯಲ್ ನಾಗ್ ಮುತ್ತಿಡುವ ಮೂಲಕ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್ ಆಗಿದ್ದಾರೆ. ಹಾಗಿದ್ದರೆ ಯಾರು ಈ ಪಾಯಲ್ ನಾಗ್? ಇಲ್ಲಿದೆ 18 ವರ್ಷದ ತರುಣಿಯ ಯಶೋಗಾಥೆ. ಸಾಧಿಸುವ ಛಲ ಇದ್ರೆ ಸಾಕು ಎಂತಹದ್ದೇ ಕಷ್ಟ ಬಂದರೂ ಗೆಲ್ಲಬಹುದು ಎಂಬ ಮಾತಿಗೆ ಪಾಯಲ್ ನಾಗ್ ಉದಾಹರಣೆಯಾಗಿದ್ದಾರೆ. ಬ್ಯಾಂಕಾಕ್‌ನಲ್ಲಿ ನಡೆದ ಚೊಚ್ಚಲ ಆವೃತ್ತಿಯ ವಿಶ್ವ ಪ್ಯಾರಾ ಆರ್ಚರಿ ಸೀರಿಸ್‌ನ ಮಹಿಳೆಯರ ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ಶೀತಲ್ ದೇವಿ ವಿರುದ್ಧ ಪಾಯಲ್ ನಾಗ್ 139-136 ಅಂಕಗಳಿಂದ ಗೆದ್ದಿದ್ದಾರೆ. ಅರ್ಹತಾ ಸುತ್ತಿನಲ್ಲಿ ಶೀತಲ್‌ಗಿಂತ 20 ಅಂಕ ಕಡಿಮೆ (678-698) ಅಂಕ ಗಳಿಸಿದ್ದ ಪಾಯಲ್, ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಗೆದ್ದಿದ್ದಾರೆ. ಪಾಯಲ್ ನಾಗ ಯಶೋಗಾಥೆ ಪಾಯಲ್ ನಾಗ್ ಒಡಿಶಾದ ಬಡ ಕುಟುಂಬದಲ್ಲಿ ಜನಿಸಿದರು. ಪಾಯಲ್ ಅವರ ತಂದೆ ದಿನಗೂಲಿ ಗಾರೆ ಕೆಲಸ ಮಾಡುತ್ತಾರೆ. ಪಾಯಲ್ ಅವರು 8 ವರ್ಷವಿದ್ದಾಗ ಕಾಮಗಾರಿ ನಡೆಯುತ್ತಿದ್ದ ಮನೆಯೊಂದರ ಟೆರೇಸ್ ಮೇಲೆ ನಿಂತಿದ್ದ ನೀರಿನಲ್ಲಿ ಆಡುತ್ತಿದ್ದರು. ಈ ವೇಳೆ ಹೈವೋಲ್ಟ್ ವಿದ್ಯುತ್ ತಂತಿ ತಾಗಿ ಅವಘಡಕ್ಕೆ ತುತ್ತಾಗಿದ್ದರು. ಜೀವಕ್ಕೆ ಅಪಾಯವಿದ್ದ ಕಾರಣ ವೈದ್ಯರು ಪಾಯಲ್ ಅವರ ಎರಡೂ ಕೈ ಮತ್ತು ಎರಡೂ ಕಾಲುಗಳನ್ನು ಕತ್ತರಿಸಿ ತೆಗೆದಿದ್ದರು. ಇದಾದ ಬಳಿಕ ಪಾಯಲ್‌ರನ್ನು ಪೋಷಕರಾದ ಬಿಜಯ್ ಮತ್ತು ಜನತಾ, ಆಶ್ರಮಕ್ಕೆ ಸೇರಿಸಿದ್ದರು. ಪಾಯಲ್‌ಗೆ ವಿಷ ಕೊಡಿ ಎಂದಿದ್ದ ಸಂಬಂಧಿಕರು ತನ್ನರೆಡೂ ಕೈಕಾಲುಗಳನ್ನು ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿದ್ದ ಪಾಯಲ್ ಬಗ್ಗೆ ನೆರೆಹೊರೆಯುವರು, ಕುಟುಂಬಸ್ಥರು ಚುಚ್ಚು ಮಾತುಗಳನ್ನಾಡಿದ್ದರು. “ಅವಳಿಗೆ ನಡೆದಾಡಲು, ತಿನ್ನಲು ಸಾಧ್ಯವಿಲ್ಲ. ಇದಕ್ಕಿಂತ ಅವಳಿಗೆ ವಿಷ ಕೊಡುವುದೇ ಉತ್ತಮ” ಎಂದು ಕುಟುಂಬಸ್ಥರು ಪಾಯಲ್ ಪೋಷಕರಿಗೆ ಹೇಳಿದ್ದರಂತೆ. ಪಾಯಲ್‌ಗೆ ಸಿಕ್ಕ ದ್ರೋಣಾಚಾರ್ಯ ಪಾಯಲ್ ಆಶ್ರಮದಲ್ಲಿದ್ದಾಗ ಬಾಯಿಂದ ಚಿತ್ರಗಳನ್ನು ಬಿಡಿಸುತ್ತಿದ್ದರು. ಪಾಯಲ್ ಅವರು ಬಿಡಿಸಿದ್ದ ಚಿತ್ರವೊಂದು ಸಾಮಾಜಿಕ ಮಾಧ್ಯಮ ‘X’ ನಲ್ಲಿ ವೈರಲ್ ಆಗಿತ್ತು. ಈ ವೈರಲ್ ವಿಡಿಯೋ ಖ್ಯಾತ ಆರ್ಚರಿ ಕೋಚ್ ಕುಲದೀಪ್ ವೆದ್ವಾನ್ ಅವರ ಕಣ್ಣಿಗೆ ಬಿದಿತ್ತು. ಇಲ್ಲಿಂದ ಪಾಯಲ್ ಅವರ ಜೀವನ ಬದಲಾಯಿತು. ಆರ್ಚರಿ ಕೋಚ್ ಕುಲದೀಪ್ ವೆದ್ವಾನ್ ಅವರು 2022ರಲ್ಲಿ ಪಾಯಲ್ ಅವರನ್ನು ಜಮ್ಮುವಿಗೆ ಕರೆದುಕೊಂಡು ಹೋಗಿ, ಆರ್ಚರಿ ತರಬೇತಿ ನೀಡಲು ಆರಂಭಿಸಿದರು. ಈ ವೇಳೆ ಪಾಯಲ್ ಅವರ ಅಕ್ಕ ವರ್ಶಾ ನಾಗ ತರಬೇತಿ ಅಕಾಡೆಮಿಯಲ್ಲೇ ಇದ್ದುಕೊಂಡು ಪಾಯಲ್‌ಗೆ ಸ್ನಾನದಿಂದ ಹಿಡಿದು ಆಹಾರವರೆಗೂ ಎಲ್ಲ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದರು. ಕೃತಕ ಕಾಲು, ಬಿಲ್ಲು ಕೋಚ್ ಕುಲ್ದೀಪ್ ಅವರು ಪಾಯಲ್‌ಗಾಗಿ ವಿಶೇಷ ವಿನ್ಯಾಸದ ಕೃತಕ ಕಾಲುಗಳನ್ನು ಮಾಡಿಸಿ ಅಭ್ಯಾಸ ಆರಂಭಿಸಿದ್ದರು. ಪಾಯಲ್‌ಗಾಗಿ ವಿಶೇಷ ವಿನ್ಯಾಸದ ಬಿಲ್ಲು (ಬೋ) ಸಹ ಮಾಡಿಸಲಾಯಿತು. ಕೃತಕ ಕಾಲಿನ ಸಹಾಯದಿಂದ ಬಾಣ ಬಿಡುವುದನ್ನು ಪಾಯಲ್ ಕೇವಲ 3 ತಿಂಗಳಲ್ಲೇ ಕಲಿತರು. ಅವರ ಬಿಲ್ಲಿಗೆ ಬಾಣಗಳನ್ನು ಬೇರೆಯವರು ಹೂಡುತ್ತಾರೆ. ಕೃತಕ ಕಾಲು ಮತ್ತು ಭುಜದ ಸಹಾಯದಿಂದ ಪಾಯಲ್ ಬಾಣವನ್ನು ಗುರಿಯತ್ತ ಬಿಡುತ್ತಾರೆ. ಶೀತಲ್-ಪಾಯಲ್ ಇಬ್ಬರಿಗೂ ಬೆಳಕಾದ ಕೋಚ್ ಕುಲ್ದೀಪ್ ವೆದ್ವಾನ್ ಅವರು ಪ್ಯಾರಾ ಅಥ್ಲೀಟ್‌ಗಳ ಸಾಮರ್ಥ್ಯ ಗುರುತಿಸಿ ಅವರನ್ನು ಜಾಗತಿಕ ಮಟ್ಟಕ್ಕೆ ಸಜ್ಜುಗೊಳಿಸುತ್ತಿದ್ದಾರೆ. ಕಳೆದ ವರ್ಷ 2025ರಲ್ಲಿ ನಡೆದ ವಿಶ್ವ ಪ್ಯಾರಾಲಿಂಪಿಕ್ಸ್ ಚಾಂಪಿಯನ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ಶೀತಲ ದೇವಿಯವರಿಗೂ ಕೂಡ ಕುಲ್ದೀಪ್ ವೆದ್ವಾನ್ ತರಬೇತಿ ನೀಡಿದ್ದರು. ಇದೀಗ ಶೀತಲ್‌ರಂತೆ ಪಾಯಲ್‌ರನ್ನೂ ಚಾಂಪಿಯನ್ ಮಾಡಿದ್ದಾರೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation RCB vs SRH: ತವರು ನೆಲದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿಗೆ ಗೆಲವು