23rd Commonwealth Games 2026: Mysuru’s para-athlete Shilpa K Shyla won a bronze medal in the women’s F57 shot putಶಿಲ್ಪಾ ಶೈಲಾ

ಆಕೆಯ ಮುಖದಲ್ಲಿ ಮೂಡಿದ್ದವು ವರ್ಣನೆಗೆ ನಿಲುಕದ ಭಾವತರಂಗಗಳು. ಪದಕದ  ಮೆಟ್ಟಿಲೇರಿದಾಗ ಆಕೆಯ ಕಣ್ಣಂಚಿನಲ್ಲಿ ಧಾರೆಯಾಗಿ ಸುರಿಯುತ್ತಿತ್ತು ಆನಂದಬಾಷ್ಪ. ಕೊರಳಿಗೆ ಹಾರವಾಗಿ ಮಿನುಗುತ್ತಿತ್ತು ಆಕೆ ಗೆದ್ದ ಕಂಚಿನ ಪದಕ. ಆಕೆಯ ಹೆಗಲಿನ ಮೇಲೆ ಕಂಗೊಳಿಸುತ್ತಿತ್ತು ಭಾರತದ ರಾಷ್ಟ್ರ ಧ್ವಜ. ಇವು ಕರುನಾಡಿನ ರೈತನ ಮಗಳು ಕಾಮನ್‍ವೆಲ್ತ್ ಗೇಮ್ಸ್ ನ ಪೋಡಿಯಂ ಮೇಲೆ ನಿಂತಾಗ ಕಂಡ ಅದ್ಭುತ ಕ್ಷಣಗಳು.

ಹೌದು, ಆ ಕ್ಷಣವನ್ನು ವರ್ಣಿಸಲು ಅಸಾಧ್ಯ. ಯಾಕಂದ್ರೆ ಅದು ವರ್ಣಮಾಲೆಗಳಿಗೂ ನಿಲುಕದ ಸಂತೋಷದ ಸಮಯ. ಸ್ವತಃ ಅನುಭವಿಸಿದವರಿಗೂ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದ ಅಪರೂಪದ ಘಳಿಗೆ. ಇಂತಹ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದವರು ನಮ್ಮ ಕರ್ನಾಟಕದ ಹೆಮ್ಮೆಯ ಹುಡುಗಿ.

ಆಕೆಯ ಹೆಸರು – ಶಿಲ್ಪಾ ಶೈಲಾ.

ಹುಟ್ಟೂರು – ಮೈಸೂರು ಜಿಲ್ಲೆಯ ಕೆ.ಆರ್.ನಗರದ ಕಂಚು ಗಾರನ ಕೊಪ್ಪಲು ಗ್ರಾಮ.

ಗ್ಲಾಸ್ಗೋ ಕಾಮನ್‍ವೆಲ್ಸ್ ಗೇಮ್ಸ್‌ನ ಪ್ಯಾರಾ ಅಥ್ಲೇಟಿಕ್ಸ್‌ನ ಮಹಿಳೆಯರ ಎಫ್-57 ವಿಭಾಗದ ಶಾಟ್‍ಪುಟ್‍ನಲ್ಲಿ ಕಂಚು ಗೆದ್ದ ಅಥ್ಲೀಟ್.

ಹಾಗೇ ನೋಡಿದ್ರೆ ನಿಯಮಾನುಸಾರವಾಗಿಯೇ ಶಿಲ್ಪಾ ಶೈಲಾಗೆ ಒಲಿದಿರುವ ಕಂಚಿನ ಪದಕ. 7.26 ಮೀಟರ್ ದೂರ ಎಸೆದು ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಳು. ಆದ್ರೆ ನೈಜಿರಿಯಾದ ಯುಚರಿಯಾ ಇಯಾಜಿ ಸ್ಪರ್ಧೆಯಲ್ಲಿ ಅನರ್ಹಗೊಂಡಿದ್ದರಿಂದ ಶಿಲ್ಪಾರಿಗೆ ಕಂಚಿನ ಪದಕ ಲಭಿಸಿತ್ತು.

ಐಸ್‍ಕ್ರೀಮ್ ಆಸೆ.. ಎಡಗಾಲನ್ನೇ ಕಿತ್ತುಕೊಂಡ ಯಮದೂತ ಲಾರಿ..!

ನಾಲ್ಕನೇ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಶಿಲ್ಪಾ ಎಡಗಾಲನ್ನು ಕಳೆದುಕೊಂಡಿದ್ದರು. ಆದ್ರೂ ಎದೆಗುಂದಲಿಲ್ಲ. ಛಲ ಬಿಡಲಿಲ್ಲ. ಕೃತಕ ಕಾಲಿನ ಸಹಾಯದಿಂದ ಆತ್ಮವಿಶ್ವಾಸದಿಂದಲೇ  ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕಿದ್ದರು. ಓದಿನಲ್ಲೂ ಬುದ್ಧಿವಂತೆಯಾಗಿದ್ದ ಶೈಲಾ ಡಬಲ್ ಡಿಗ್ರಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಮೈಸೂರಿನಲ್ಲಿ  ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದರು.

ಆರಂಭದಲ್ಲಿ ಸಿಟ್ಟಿಂಗ್ ವಾಲಿಬಾಲ್ ಆಡುತ್ತಿದ್ದ ಶಿಲ್ಪಾ, ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಬಳಿಕ ಕೋಚ್‍ಗಳ ಸಲಹೆಯಂತೆ ಶಾಟ್‍ಪುಟ್, ಜಾವೆಲಿನ್, ಡಿಸ್ಕಸ್ ತ್ರೋ ಕಡೆಗೆ ಗಮನ ಹರಿಸಿದ್ದಳು. ಹೆಚ್ಚಿನ ತರಬೇತಿಗಾಗಿ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು  ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಹಾಗೇ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ಯಾರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದುಕೊಂಡಿದ್ದರು. ಇದೀಗ ಚೊಚ್ಚಲ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ನಗೆ ಬೀರಿದ್ದಾರೆ.

“ನನ್ನ ಖುಷಿಗೆ ಇತಿಮಿತಿಯೇ ಇಲ್ಲ. ನನಗೆ ಹೇಗೆ ಅನ್ನಿಸುತ್ತಿದೆ ಎಂಬುದನ್ನು ವರ್ಣಿಸಲು ಸಾಧ್ಯವಿಲ್ಲ. ಇದು ನನ್ನ ಮೊದಲ ಕಾಮನ್‍ವೆಲ್ತ್ ಗೇಮ್ಸ್.. ಮೊದಲ ಸ್ಪರ್ಧೆಯಲ್ಲಿ ಕಂಚಿನ ಪದಕ ಸಿಕ್ಕಿದೆ. ಈ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದು ಶಿಲ್ಪಾ ಭಾವುಕರಾಗಿ ಹೇಳಿದ್ದಾರೆ.

“ನನಗೆ ಸಹಕರಿಸಿದ ಹಾಗೂ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಪ್ಯಾರಾ ಕ್ರೀಡೆಗೆ ಪರಿಚಯಿಸಿ ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿದ್ದು ಸ್ನೇಹಿತೆ ಗೀತಾ. ಅವಳ ಬೆಂಬಲ, ಪ್ರೋತ್ಸಾಹಕ್ಕೆ ಚಿರಋಣಿಯಾಗಿದ್ದೇನೆ. ಇನ್ನು, ಸತ್ಯಪಾಲ್ ಸರ್ ನನಗೆ ಬಹಳಷ್ಟು ಸಹಾಯ ಮಾಡಿದ್ದಾರೆ. ಹಾಗೇ ತರಬೇತುದಾರರಾದ ಎಸ್.ಡಿ.ಈಶನ್ ಸರ್, ರಾಘವೇಂದ್ರ ಸರ್ ಹಾಗೂ ಮುಖ್ಯ ತರಬೇತುದಾರರಾದ ಸತ್ಯನಾರಾಯಣ ಸರ್, ಪುಷ್ಪಾ ಮೇಡಮ್ ಅವರ ಮಾರ್ಗದರ್ಶನ, ಪ್ರೇರಣೆ, ಸ್ಪೂರ್ತಿ ನೀಡಿರುವುದನ್ನು  ಮರೆಯಲು ಸಾಧ್ಯವಿಲ್ಲ ಅಂತಾರೆ ಶಿಲ್ಪಾ ಶೈಲಾ.

“ಅದು 1993. ಅಂಗಡಿಯಿಂದ ಐಸ್ ಕ್ರೀಮ್ ಪಡೆದು  ಮನೆಯ ಕಡೆಗೆ ಓಡುತ್ತಿದ್ದಾಗ, ಯಮದೂತನಂತೆ ಬಂದ ಲಾರಿಯೊಂದು ಆಕೆಯ ಎಡಗಾಲನ್ನು ಜಖಂಗೊಳಿಸಿತ್ತು.”

“ಕಾಲನ್ನು ಕಳೆದುಕೊಂಡ ನಂತರ  ಅವರು ಪಡುತ್ತಿದ್ದ ನೋವು, ವೇದನೆಯನ್ನು ನಮ್ಮ ಕಣ್ಣಿಂದ ನೋಡಲು ಆಗುತ್ತಿರಲಿಲ್ಲ. 4-5 ವರ್ಷದ ಪುಟಾಣಿ ಬಾಲೆ ಆ ನೋವನ್ನು ಹೇಗೆ ಸಹಿಸಿಕೊಂಡಿತ್ತೋ ಗೊತ್ತಿಲ್ಲ. ಕೆಲವೊಂದು ಬಾರಿ ಅನ್ನಿಸುತ್ತಿತ್ತು. ಈ ನರಕಯಾತನೆ ಅನುಭವಿಸುವ ಬದಲು ಸತ್ತಿದ್ದರೆ ಒಳ್ಳೆಯದಿತ್ತು ಅಂತ.”

“ನಾವು ರೈತರು. ಆಕೆಯ ವೈದ್ಯಕೀಯ ವೆಚ್ಚವನ್ನು ಭರಿಸಲು ಸಾಕಷ್ಟು ಪರದಾಟ ನಡೆಸಿದ್ದೇವು. ಅಲ್ಲದೆ ಶಾಲೆಗೆ ಎತ್ತಿಕೊಂಡು ಹೋಗುತ್ತಿದ್ದೇವು. ಅವಳ ಸಂಕಟ ಮನಸ್ಸಿಗೆ ಘಾಸಿಯನ್ನುಂಟು ಮಾಡುತ್ತಿತ್ತು.  ಆದರೆ ಅವಳು ನಮಗೆ ಯಾವತ್ತೂ ಭಾರ ಆಗಿರಲಿಲ್ಲ. ಹಠಮಾರಿಯಾಗಿದ್ದ ಶಿಲ್ಪಾ ತುಂಬಾ ಧೈರ್ಯವಂತೆ. ತಾನು ಅಂದುಕೊಂಡಿರುವುದನ್ನು ಸಾಧಿಸುವ ಛಲ ಆಕೆಯಲ್ಲಿತ್ತು. ಹಾಗಾಗಿಯೇ ಇವತ್ತು ಅವಳು ಈ ಮಟ್ಟಕ್ಕೆ ಏರಿದ್ದಾಳೆ” ಅಂತ ಹೆಮ್ಮೆಯಿಂದ ಹೇಳ್ತಾರೆ ಶಿಲ್ಪಾ ತಾಯಿ ಶಾಂತ.

ಇನ್ನು ಶಿಲ್ಪಾ ಕೃತಕ ಕಾಲಿನ ನೆರವಿನಿಂದ ಅಭ್ಯಾಸ ನಡೆಸುತ್ತಿದ್ದಾರೆ. ಎಡಗಾಲಿಗೆ ಶಕ್ತಿ ನೀಡುತ್ತಿರುವುದು ಜೈಪುರ ಫುಟ್. ಸಾಮಾನ್ಯವಾಗಿ ಪ್ಯಾರ ಅಥ್ಲೀಟ್‍ಗಳು ದುಬಾರಿ ಮೊತ್ತದ ಕೃತಕ ಕಾಲುಗಳನ್ನು ಬಳಸಿಕೊಂಡು ಸ್ಪರ್ಧೆ ಮಾಡುತ್ತಾರೆ. ಆದ್ರೆ ಆರ್ಥಿಕ ತೊಂದರೆಯಿಂದ ಶಿಲ್ಪಾರಿಗೆ ಯಾವುದೇ ರೀತಿ ಅತ್ಯಾಧುನಿಕ ಮಾದರಿಯ ಸೌಲಭ್ಯಗಳು ಸಿಗಲಿಲ್ಲ. ಗುಣಮಟ್ಟದ ಕೃತಕ ಕಾಲನ್ನ ಪಡೆಯಲು ಸಾಧ್ಯವಾಗಲಿಲ್ಲ.  ಆದ್ರೆ ಇವತ್ತು ಜೈಪುರ ಫುಟ್‍ನಲ್ಲೇ ಅಂತಾರಾಷ್ಟ್ರೀಯ ಸ್ಪರ್ಧಿಯಾಗಿ ಹಲವು ಪದಕಗಳನ್ನು ಗೆದ್ದಿದ್ದಾರೆ.

ಒಟ್ಟಿನಲ್ಲಿ ಶಿಲ್ಪಾ ಶೈಲಾ ಅವರ ನೈಜ ಕಥೆ ಕೇವಲ ಕಂಚಿನ ಪದಕದ ಕಥೆಯಲ್ಲ. ಸಾವು -ನೋವನ್ನು ಗೆದ್ದ ಹೋರಾಟದ ಕಥೆ. ರೈತನ ಮಗಳಾಗಿ, ಶಿಕ್ಷಕಿಯಾಗಿ, ಪ್ಯಾರಾ ಅಥ್ಲೀಟ್ ಆಗಿ ತನ್ನ ಬದುಕನ್ನು ತಾನೇ ರೂಪಿಸಿಕೊಂಡ ಗಟ್ಟಿಗಿತ್ತಿಯ ಕಥೆ. ಕಾಲು ಕಳೆದುಕೊಂಡರೂ ಕನಸುಗಳನ್ನು ಕಳೆದುಕೊಳ್ಳಲಿಲ್ಲ. ಸೌಲಭ್ಯಗಳು ಇಲ್ಲದಿದ್ರೂ ಸಾಧಿಸುವ ಹಠ, ಛಲವನ್ನು ಕೈಬಿಡಲಿಲ್ಲ. ಶಿಲ್ಪಾ ಸಾಧನೆಗೆ ಒಂದು ಸಲಾಂ..!

ಲೇಖಕರು: ಸನತ್‌ ರೈ, ಹಿರಿಯ ಕ್ರೀಡಾ ಬರಹಗಾರರು

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *