15ನೇ ಯುರೋಪಿಯನ್ ಗರ್ಲ್ಸ್ ಮ್ಯಾಥಮ್ಯಾಟಿಕಲ್ ಒಲಿಂಪಿಯಾಡ್ (EGMO) 2026ರಲ್ಲಿ ಭಾರತೀಯ ತಂಡವು ಅದ್ಭುತ ಸಾಧನೆ ಮಾಡಿದೆ. ಭಾರತಕ್ಕೆ ಮೊದಲ ಚಿನ್ನದ ಪದಕ ಮುಡಿಗೇರಿದೆ. ಫ್ರಾನ್ಸ್‌ನ ಬೋರ್ಡೋ ನಗರದಲ್ಲಿ ಏಪ್ರಿಲ್ 9ರಿಂದ ಏಪ್ರಿಲ್ 15 ಸ್ಪರ್ಧೆ ನಡೆಯಿತು. ಭಾರತದ ನಾಲ್ವರ ನಾರಿಯರ ಯುವ ತಂಡ ಅದ್ಭುತ ಪ್ರದರ್ಶನ ನೀಡಿದೆ. ತಂಡವು ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದೆ. ಇದು ಐತಿಹಾಸಿಕ ಸಾಧನೆಯಾಗಿದ್ದು, EGMO ಸ್ಪರ್ಧೆಯಲ್ಲಿ ಭಾರತೀಯ ಸ್ಪರ್ಧಾರ್ಥಿಯೊಬ್ಬರು ಗೆದ್ದ ಮೊದಲ ಚಿನ್ನದ ಪದಕ ಇದಾಗಿದೆ. ಜೊತೆಗೆ, ಸ್ಪರ್ಧೆಯ ಇತಿಹಾಸದಲ್ಲೇ ಭಾರತ ತಂಡವು ಅತ್ಯುತ್ತಮ ತಂಡವಾಗಿ ಹೊರಹೊಮ್ಮಿದೆ. 67 ದೇಶಗಳ ಪೈಕಿ ಭಾರತವು 6ನೇ ಸ್ಥಾನ ಪಡೆದಿದೆ. 2015ರಲ್ಲಿ ಮೊದಲ ಬಾರಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಬಳಿಕ ಇದುವರೆಗೆ ಪಡೆದ ಅತ್ಯುನ್ನತ ಶ್ರೇಯಾಂಕ ಇದಾಗಿದೆ. ಮುಂಬೈನ ಶ್ರೇಯಾ ಶಾಂತನು ಮುಂಡಾಡ ಚಿನ್ನದ ಪದಕ ಗೆದ್ದಿದ್ದಾರೆ. ಕೇರಳದ ಸಂಜನಾ ಫಿಲೋ ಚಾಸಿಕೊ ಬೆಳ್ಳಿ ಪದಕ ಗೆದ್ದಿದ್ದಾರೆ. ಚೆನ್ನೈನ ಶಿವಾನಿ ಭರತ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. ಡಾ. ವೈದೇಹಿ ಥಟ್ಟೆ (ತಂಡದ ನಾಯಕಿ), ಡಾ. ಮೃದೂಲ್ ಥಟ್ಟೆ (ಉಪನಾಯಕಿ), ಹಾಗೂ ಸ್ಪರ್ಧಾರ್ಥಿಗಳೊಂದಿಗೆ ವೀಕ್ಷಕರಾಗಿ ಅದಿತಿ ಮುತ್ತಖೋಡ್ ಅವರು ನೇಮಕಗೊಂಡಿದ್ದರು. ಭಾರತವು ಸಂಪೂರ್ಣ ಮಹಿಳಾ ತಂಡವನ್ನು EGMOಗೆ ಕಳುಹಿಸಿರುವುದು ಇದು ಎರಡನೇ ಬಾರಿ ಎಂಬುದು ಗಮನಾರ್ಹವಾಗಿದೆ. 2026ರ EGMO ಸ್ಪರ್ಧೆಯಲ್ಲಿ 67 ದೇಶಗಳಿಂದ 260 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಲ್ಲಿ 41 ಯುರೋಪಿಯನ್ ರಾಷ್ಟ್ರಗಳಿಂದ 161 ಸ್ಪರ್ಧಾರ್ಥಿಗಳು ಸೇರಿದ್ದರು. ಭಾರತವು 2015ರಿಂದ ಅತಿಥಿ ರಾಷ್ಟ್ರವಾಗಿ ಈ ಒಲಿಂಪಿಯಾಡ್‌ನಲ್ಲಿ ಭಾಗವಹಿಸುತ್ತಿದೆ. ಈ ಗಮನಾರ್ಹ ಯಶಸ್ಸಿಗೆ EGMO ತರಬೇತಿ ಶಿಬಿರ ಮೂಲಕ ನೀಡಲಾದ ನಿರಂತರ ಶ್ರಮ ಮತ್ತು ಕಠಿಣ ತರಬೇತಿ ಪ್ರಮುಖ ಕಾರಣವಾಗಿದೆ. ಈ ಕಾರ್ಯಕ್ರಮಕ್ಕೆ ಮಾಜಿ ಒಲಿಂಪಿಯಾಡ್ ವಿಜೇತರು, ಪ್ರಮುಖ ಸಂಶೋಧನಾ ಸಂಸ್ಥೆಗಳ ತಜ್ಞರು ಹಾಗೂ ಹೋಮಿ ಭಾಭಾ ವಿಜ್ಞಾನ ಶಿಕ್ಷಣ ಕೇಂದ್ರ (HBCSE) ಸಹಕಾರ ನೀಡುತ್ತಿವೆ. ಜೊತೆಗೆ, ಭಾರತ ಸರ್ಕಾರದ ಅಣುಶಕ್ತಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಉನ್ನತ ಗಣಿತ ಮಂಡಳಿ (NBHM) ಯಿಂದ ನಿರಂತರ ಬೆಂಬಲ ಲಭಿಸಿದೆ. ಹೋಮಿ ಭಾಭಾ ವಿಜ್ಞಾನ ಶಿಕ್ಷಣ ಕೇಂದ್ರ (HBCSE-TIFR) ಅಣುಶಕ್ತಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಸ್ವಾಯತ್ತ ಸಂಸ್ಥೆಯಾಗಿದ್ದು, ದೇಶದಾದ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಿದೆ. ಈ ಸಂಸ್ಥೆ ರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಗಳನ್ನು ನಡೆಸುವುದರ ಜೊತೆಗೆ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಖಗೋಳಶಾಸ್ತ್ರ ವಿಷಯಗಳಲ್ಲಿ ಅಂತರರಾಷ್ಟ್ರೀಯ ಒಲಿಂಪಿಯಾಡ್‌ಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲು ವ್ಯವಸ್ಥಿತ ತರಬೇತಿ ನೀಡುತ್ತಿದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಭಾರತದಲ್ಲಿ ವಿಶ್ವದ ಅತಿ ದೊಡ್ಡ ಕಚ್ಚಾ ತೈಲ ಸಂಗ್ರಹಣಾ ಘಟಕ ನಿರ್ಮಾಣ Mann Ki Baat: ಭಾರತೀಯ ಚೀಸ್ಗೆ ಜಾಗತಿಕ ಮನ್ನಣೆ, ಪ್ರಧಾನಿ ಮೋದಿ ಹರ್ಷ