Hindu Vedanta Part 2: The Meanings of Purusharthasಸಾಂದರ್ಭಿಕ ಚಿತ್ರ

ನಾವು ಹಿಂದಿನ ಅಂಕಣದಲ್ಲಿ ಪುರುಷಾರ್ಥಗಳ ನಿರ್ವಚನ ಮತ್ತು ಮೂರು ಪುರುಷಾರ್ಥಗಳ ವಿಶ್ಲೇಷಣೆ ಕಂಡಿದ್ದೆವು. ವೇದಾಂತ ಪರಿಚಯ ಭಾಗ 1: ಪುರುಷಾರ್ಥಗಳು

ಈ ಮೂರು ಪುರುಷಾರ್ಥಗಳಲ್ಲಿನ ಸ್ವಾಭಾವಿಕ ದೋಷಗಳು

ಜಗತ್ತಿನ ಬಹುಶಃ ಎಲ್ಲಾ ಮಾನವರು ತಮ್ಮ ಸಂಪೂರ್ಣ ಜೀವನವನ್ನು ಈ ಮೂರು ಪುರುಷಾರ್ಥಗಳ ಗಳಿಕೆಗಾಗಿ ವ್ಯಯಿಸುತ್ತಾರೆ. ಆದರೆ ವಿರಳವಾದ ವಿವೇಕಿಗಳು, ತಮ್ಮ ಅಥವಾ ಇತರರ ಜೀವನದ ಅನುಭವಗಳ ವಿಶ್ಲೇಷಣೆ ಮಾಡಿ, ಈ ಪುರುಷಾರ್ಥಗಳಲ್ಲಿನ ಪ್ರಮುಖ ಮೂರು (3) ಸ್ವಾಭಾವಿಕ ದೋಷಗಳನ್ನು ಕಾಣುತ್ತಾರೆ. ಅವೆಂದರೆ

  1. ದುಃಖಮಿಶ್ರಿತತ್ವಂ: ಈ ಮೂರು ಪುರುಷಾರ್ಥಗಳ ಉದ್ದೇಶ ದುಃಖನಿವೃತ್ತಿ ಹಾಗು ಸುಖಪ್ರಾಪ್ತಿ. ಆದರೆ ಅವನ್ನು ಗಳಿಸಲು ಪಡಬೇಕಾದ ದೈಹಿಕ ಮತ್ತು ಮಾನಸಿಕ ಶ್ರಮ, ಸಂರಕ್ಷಿಸಿಕೊಳ್ಳಲು ಪಡಬೇಕಾದ ಕಷ್ಟ ಹಾಗು ಗಳಿಸಿದ ವಸ್ತು ದೂರವಾದಾಗ ಆಗುವ ನೋವು ಸಾರ್ವತ್ರಿಕ ಅನುಭವವಾಗಿದೆ. ಈ ಸಂದರ್ಭಗಳಲ್ಲಿ ವಿವಿಧ ರೀತಿಯ ಸಂಪತ್ತಿನ ವ್ಯಯ ಹಾಗು ಆರೋಗ್ಯ ಹಾನಿಯಿಂದ ಜನರು ದುಃಖ ಪಡುವುದು ಕೂಡ ಸರ್ವೇ ಸಾಮಾನ್ಯ. ಹೀಗಾಗಿ ಪುರುಷಾರ್ಥ ಪ್ರಾಪ್ತಿಯ ಆನಂದದ ಜೊತೆಯಲ್ಲಿ ದುಃಖವೂ ಸದಾ ಸೇರಿರುವುದು, ಗಿಡದಲ್ಲಿರುವ ಗುಲಾಬಿಯೊಂದಿಗಿನ ಮುಳ್ಳುಗಳ ಹಾಗೆ!
  2. ಅತೃಪ್ತಿಕರತ್ವಂ: ಪುರುಷಾರ್ಥ ಪ್ರಾಪ್ತಿಯ ನಂತರ ಮಾನವನು ಮನಸ್ಸಿನಲ್ಲಿ ಪರಿಮಿತವಾದ ಆನಂದಪ್ರಾಪ್ತಿ ಅಥವಾ ದುಃಖನಿವೃತ್ತಿಯನ್ನು ಅನುಭವಿಸುತ್ತಾನೆ. ಆದರೆ ಮನಸ್ಸು ಅಷ್ಟಕ್ಕೇ ತೃಪ್ತಿಪಡದೆ ಪ್ರಾಪ್ತಿಯಾದ ವಿಷಯ ವಸ್ತುವನ್ನು ಇನ್ನಷ್ಟು, ಮತ್ತಷ್ಟು ಅನುಭವಿಸಲು ಹಂಬಲಿಸುತ್ತದೆ. ಇಲ್ಲವೇ ಅದರಿಂದ ವಿಮುಖವಾಗಿ ಮತ್ತೊಂದು ವಿಷಯವಸ್ತುವನ್ನು ಪಡೆಯುವ ಇಚ್ಛೆ ವ್ಯಕ್ತಪಡಿಸುತ್ತದೆ. ಇದು ವಿಷಯವಸ್ತುಗಳೆಂಬ ತುಪ್ಪವನ್ನು, ಮಾನವನ ಬಯಕೆಗಳೆಂಬ ಅಗ್ನಿಗೆ ಆಹುತಿ ನೀಡಿದರೆ ಇನ್ನೂ ಪ್ರಖರವಾಗುವ ಅತೃಪ್ತಿಯೆಂಬ ಜ್ವಾಲೆಯಂತೆಯೇ ಸರಿ!
  3. ಬಂಧಕತ್ವಮ್: ತನ್ನ ಇಚ್ಛೆಯ ವಿಷಯವಸ್ತು ಪ್ರಾಪ್ತಿಯಾದ ನಂತರ, ಮಾನವನು ಅದರೊಡನೆ ಮಮಕಾರವನ್ನು ಹೊಂದಿ, ಅದಕ್ಕೆ ಅವಲಂಬಿತನಾಗುತ್ತಾನೆ (dependency). ಇದು ಅವನ ಚಟವಾಗಿಯೂ ಬದಲಾಗಬಹುದು. ಅಲ್ಲದೆ ಅವನ ಮನಸ್ಸನ್ನು ತಲ್ಲಣಗೊಳಿಸಲು, ಪ್ರಾಪ್ತಿಯಾದ ವಿಷಯವಸ್ತುವನ್ನು ಕಳೆದುಕೊಳ್ಳುವ ಅಥವಾ ದೂರಮಾಡುವ ಯೋಚನೆಯಷ್ಟೇ ಸಾಕು! ಹೀಗಾಗಿ ಮಾನವನು ತನ್ನ ಸ್ವಾಧೀನತೆಯನ್ನು ಕಳೆದುಕೊಳ್ಳುವಂತೆ ಮಾಡಿ ಬದ್ಧನನ್ನಾಗಿಸುವ, ಈ ವಿಷಯಸುಖಗಳು ಬಂಧಕವಲ್ಲದೆ ಮತ್ತೇನು ?! ಅರ್ಥ,ಕಾಮ ಹಾಗು ಧರ್ಮ ಪುರುಷಾರ್ಥಗಳಲ್ಲಿ, ಈ ಮೇಲಿನ ಹಲವು ದೋಷಗಳಿದ್ದರೂ, ಜನರು ಮತ್ತೇಕೆ ಇವುಗಳ ಬೆನ್ನು ಹತ್ತಿ ಹೋಗುತ್ತಾರೆ? ಎಂದು ಪ್ರಶ್ನೆ ಮೂಡಬಹುದು. ಈ ಪುರುಷಾರ್ಥಗಳ ಪ್ರಾಪ್ತಿಯಿಂದ ಅಪೂರ್ಣನಾದ ತಾನು ಪರಿಪೂರ್ಣನಾಗುತ್ತೇನೆ, ದುಃಖಿಯಾದ ತಾನು ಸುಖಿಯಾಗುತ್ತೇನೆ, ಅಸುರಕ್ಷಿತನಾದ ತಾನು ಸುರಕ್ಷತೆಯಿಂದ ಜೀವನವನ್ನು ನಡೆಸಬಹುದೆಂಬ ತನ್ನ ಭ್ರಾಂತಿಯೇ ಕಾರಣ. ಈ ಭ್ರಾಂತಿಗೆ ಮೂಲಕಾರಣ ಸತ್ಯಾಸತ್ಯತೆಯ ವಿಚಾರ ಮಾಡದ ಅವಿವೇಕ ಬುದ್ಧಿ.

ಮೋಕ್ಷ ಪುರುಷಾರ್ಥ:

ಮೋಕ್ಷವೆಂದರೆ ಬಿಡುಗಡೆ, ಸ್ವಾತಂತ್ರ್ಯ ಅಥವಾ ಮುಕ್ತಿ. ವ್ಯಕ್ತಿಯು ವಿವೇಕವನ್ನು ಉಪಯೋಗಿಸಿ ತಾನು ಅಪೂರ್ಣ,ದುಃಖಿ, ಬದ್ಧ, ಅಸುರಕ್ಷಿತನೆಂಬ ಭ್ರಾಂತಿಯಿಂದ ಮುಕ್ತನಾಗುವುದು. ತನ್ನ ಸುರಕ್ಷೆ, ಆನಂದ, ಪರಿಪೂರ್ಣತೆ, ಮನಶ್ಯಾಂತಿಯನ್ನು ಬಾಹ್ಯವಸ್ತುಗಳಲ್ಲಿ, ವ್ಯಕ್ತಿಗಳಲ್ಲಿ ಅಥವಾ ಸಂದರ್ಭಗಳಲ್ಲಿ ಅರಸದೇ, ಅವುಗಳನ್ನು ತನ್ನಲ್ಲಿಯೇ ಕಂಡುಕೊಳ್ಳುವುದು. ತಾನು ಚೈತನ್ಯ ಸ್ವರೂಪಿ, ಪರಿಪೂರ್ಣ ಹಾಗು ಪರಮಾನಂದ ಸ್ವರೂಪಿ ಎಂಬ ಜ್ಞಾನಪ್ರಾಪ್ತಿಯ ಮೂಲಕ ಆಂತರಿಕ ಸ್ವಾತಂತ್ರ್ಯವನ್ನು ಕಂಡುಕೊಳ್ಳುವುದೇ ಮೋಕ್ಷ (ಆತ್ಮಜ್ಞಾನ). ಆತ್ಮಜ್ಞಾನವನ್ನು ಪಡೆಯುವ ಮಾರ್ಗವೊಂದೇ: ಮೋಕ್ಷಾರ್ಥಿಯು ವೇದಾಂತ ಶಾಸ್ತ್ರವನ್ನು ಗುರುವಿನ ಉಪದೇಶದ ಮೂಲಕ ಶ್ರವಣ ಮಾಡಿ, ತನ್ನಲ್ಲಿ ಮೂಡುವ ಸಂಶಯಗಳನ್ನು ಪರಿಹರಿಸಿಕೊಂಡು, ನಿಶ್ಚಯಜ್ಞಾನದಲ್ಲಿ ನೆಲೆನಿಲ್ಲುವುದು.

ಈ ಪುರುಷಾರ್ಥ ಪ್ರಾಪ್ತಿಯ ನಂತರ ಜ್ಞಾನಿಗೆ ಇನ್ನಾವುದೇ ಪುರುಷಾರ್ಥದ ಅವಶ್ಯಕತೆ ಉಳಿಯದೆ, ಅಂತಿಮವಾಗಿ ಜನನ-ಮರಣ ಸಂಸಾರಚಕ್ರದಿಂದ ಮುಕ್ತಿಹೊಂದುವ ಕಾರಣದಿಂದ, ಇದನ್ನು ’ಪರಮ ಪುರುಷಾರ್ಥ’ ಎಂದು ಕರೆಯುತ್ತಾರೆ.

ನಾವೇನು ಮಾಡಬಹುದು?

ಧರ್ಮ-ಅರ್ಥ-ಕಾಮ ಪುರುಷಾರ್ಥಗಳನ್ನು ತೊರೆಯದೇ, ಅವುಗಳ ಸ್ವಾಭಾವಿಕ ದೋಷಗಳನ್ನು ಅರಿತು, ಈ ಪುರುಷಾರ್ಥಗಳನ್ನು ಸಾಧನವಾಗಿ, ಸಂಧರ್ಬೋಚಿತವಾಗಿ, ಹಿತ-ಮಿತ-ಅವಶ್ಯಕತೆಗಳಿಗಾಗಿ ಆರ್ಜಿಸುವುದು ಮೋಕ್ಷಾರ್ಥಿಯ ಅಥವಾ ವಿವೇಕಿಯ ಲಕ್ಷಣ. ’ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ನಿಬೋಧತಾ’ ಎಂಬ ಕಠೋಪನಿಷತ್ತಿನ ವಾಕ್ಯಾರ್ಥವನ್ನೇ ಸ್ವಾಮಿ ವಿವೇಕಾನಂದರು ’ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂದು ಪುನರುಚ್ಚರಿಸಿದ್ದಾರೆ. ಹೀಗಾಗಿ ಮೋಕ್ಷವನ್ನು ನಮ್ಮ ಜೀವನದ ಧ್ಯೇಯೋದ್ದೇಶವಾಗಿಸಿಕೊಂಡು, ಉಚಿತ ಮಾರ್ಗದಲ್ಲಿ ಅರ್ಥಕಾಮಗಳನ್ನು ಸಿದ್ಧಿಸಿಕೊಳ್ಳುತ್ತಾ, ಧರ್ಮಾಚರಣೆಯಲ್ಲಿ ತೊಡಗಿಸಿಕೊಂಡು, ಪರಮ ಪುರುಷಾರ್ಥವಾದ ಮೋಕ್ಷವನ್ನು ಈ ಜನ್ಮದಲ್ಲಿಯೇ ಪ್ರಾಪ್ತಿಸಿಕೊಳ್ಳೋಣವೇ?

ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *