Vedanta: Purusharthas four goals of human lifeಪುರುಷಾರ್ಥಗಳು

ಮಾನವ ಜನ್ಮದ ವೈಶಿಷ್ಟ್ಯತೆಯನ್ನು ತಿಳಿಸುವುದರೊಂದಿಗೆ, ಪ್ರಾಣಿಗಳ ಜೊತೆಗಿನ ಸಾಧರ್ಮ್ಯತೆ ಹಾಗು ವೈಧರ್ಮ್ಯತೆಯನ್ನು ತೋರಿಸುವ ಸಂಸ್ಕೃತ ಸುಭಾಷಿತ ಹೀಗಿದೆ:

ಆಹಾರ ನಿದ್ರಾ ಭಯ ಮೈಥುನಂ ಚ ಸಮಾನ್ಯಮೇತತ್ಪಶುಭಿರ್ನರಾಣಾಮ್ ।

ಬುದ್ಧಿರ್ಹಿ ತೇಷಾಮಧಿಕೋ ವಿಶೇಷೋ ಬುದ್ಧ್ಯಾ ವಿಹೀನಾಃ ಪಶುಭಿಃ ಸಮಾನಃ ||

ಸಾಧರ್ಮ್ಯತೆ (ಸಾಮಾನ್ಯ ಅಂಶಗಳು):

1. ಜೀವನ ನಿರ್ವಹಣೆಯ ಸಲುವಾಗಿ ಆಹಾರ ಸೇವನೆ

2. ಶಾರೀರಿಕ ಹಾಗು ಮಾನಸಿಕ ವಿಶ್ರಾಂತಿಯ ಸಲುವಾಗಿ ನಿದ್ರೆ

3. ಉಳಿವು-ಅಳಿವಿಗೆ ಚ್ಯುತಿ ಬಂದಾಗ, ಅನಿರೀಕ್ಷಿತ/ಹಠಾತ್ ಪ್ರಚೋದನೆಗಳಾದಾಗ,‌ ಆಘಾತಕಾರಿ ಘಟನೆಗಳು ಸಂಭವಿಸಿದಾಗ, ಇನ್ನಿತರೆ ಸಂದರ್ಭಗಳಲ್ಲಿ ಭಯ ಪಡುವುದು.

4. ತಮ್ಮೊಳಗಿರುವ ನೈಸರ್ಗಿಕ ವಿಕಸನೀಯ ಚಾಲನೆಗಳ (Natural Evolutionary Drive) ಅಥವಾ ಸಂತಾನ ಮುಂದುವರೆಸುವ ಕಾರಣದಿಂದ ಸಂಭೋಗ (ಮೈಥುನ) ಮಾಡುವುದು.

ವೈಧರ್ಮ್ಯತೆ – ಮಾನವರನ್ನು ಎಲ್ಲಾ ಪಶುಪಕ್ಷಿಗಳಿಗಿಂತ ಉನ್ನತ ಮತ್ತು ಅಸಾಮಾನ್ಯ ಮಾಡುವ ಮುಖ್ಯವಾದ ಅಂಶವೆಂದರೆ ತೀಕ್ಷ್ಣ ಬುದ್ಧಿಶಕ್ತಿ.

ತೀಕ್ಷ್ಣ ಬುದ್ಧಿಶಕ್ತಿ:  ಪ್ರಾಣಿಗಳಲ್ಲಿ ಬುದ್ಧಿಶಕ್ತಿಯು ಇರುವುದಾದರೂ, ಅದು ನಿಯಮಿತವಾಗಿದ್ದು, ಪ್ರಾಣಿಗಳು ಅದನ್ನು ಬಹುಶಃ ಪೂರ್ವ ನಿಯೋಜಿತ (Programmed) ರೀತಿಯಲ್ಲಿ ಮತ್ತು ಸಹಜ ಪ್ರವೃತ್ತಿಯಂತೆ (Instinctive) ಉಪಯೋಗಿಸುತ್ತವೆ. ತದ್ವ್ಯತಿರಿಕ್ತವಾಗಿ ಮಾನವನ ಬುದ್ಧಿಶಕ್ತಿಯು ಅತಿತೀಕ್ಷ್ಣವಾಗಿಯೂ, ಅತ್ಯುನ್ನತವಾಗಿಯೂ ಇದ್ದು, ಅದು ಸಂದರ್ಭೋಚಿತ ತಿಳುವಳಿಕೆ (Contextual understanding), ವಿಮರ್ಶಾತ್ಮಕ ಚಿಂತನೆ (Critical Thinking), ಸಮಸ್ಯೆ ಪರಿಹಾರ (Problem solving), ಸೃಜನಶೀಲತೆ (Creativity), ಭಾವನಾತ್ಮಕ ನಿರ್ವಹಣೆ (Emotional Management), ವಿವೇಕ (Discrimination) ಮುಂತಾದ ಆಯಾಮಗಳಲ್ಲಿ ವ್ಯಕ್ತವಾಗುತ್ತದೆ.

ಪುರುಷಾರ್ಥಗಳು:

ಮಾನವನು ವಿವೇಕಯುಕ್ತ ಬುದ್ಧಿಶಕ್ತಿಯೊಂದಿಗೆ, ಇಚ್ಛಾಶಕ್ತಿ ಹಾಗು ಕ್ರಿಯಾಶಕ್ತಿಯನ್ನು ಉಪಯೋಗಿಸಿಕೊಂಡು, ಜೀವನದ ಪ್ರತಿಯೊಂದು ಹಂತದಲ್ಲಿಯೂ ಒಂದಾದರೊಂದು ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತಾನೆ. ಇದನ್ನೇ ಪುರುಷಾರ್ಥ ಎಂದು ಕರೆಯುತ್ತಾರೆ.

 ಇಲ್ಲಿ ’ಪುರುಷ’ ಎಂಬ ಪದವು, ಗಂಡಸರಿಗಷ್ಟೇ ಅನ್ವಯವಾಗುವುದೆಂದು ತಪ್ಪು ತಿಳಿಯದೆ,  ಸಮಸ್ತ ಮಾನವ ಜೀವರಾಶಿಗಳಿಗೆಂದು ಅರ್ಥೈಸಬೇಕು. ಹೀಗಾಗಿ ಪುರುಷಾರ್ಥವೆಂದರೆ “ಸಮಸ್ತ ಮಾನವರು ಸಾಧಿಸಲು ಬಯಸುವ ಗುರಿಗಳು” ಎಂದು ಅರ್ಥ (‘ಸರ್ವೈಃ ಮನುಷ್ಯೈಃ ಪ್ರಾರ್ಥ್ಯತೇ ಇತಿ  ಪುರುಷಾರ್ಥಃ’).

ಜಗತ್ತಿನ ಮಾನವರೆಲ್ಲರ ಗುರಿಗಳು ವಿಭಿನ್ನ ಹಾಗು ಅಸಂಖ್ಯವಾಗಿವೆ. ಇನ್ನು ಪ್ರತಿಯೊಬ್ಬನೂ, ತನ್ನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಒಂದಾದರೊಂದು ಗುರಿಯನ್ನು ಇಟ್ಟುಕೊಳ್ಳುವುದು ಸಾಮಾನ್ಯ‌. ಇದು ಹೇಗೆಂದರೆ ಬಾಲ್ಯದಲ್ಲಿ ಆಟಿಕೆಗಳಿಂದ ಮೊದಲುಮಾಡಿ, ನಂತರ ಸ್ನೇಹಿತರು,  ವಿದ್ಯಾಭ್ಯಾಸ, ಕೆಲಸ, ಮಡದಿ, ಮಕ್ಕಳು, ಮನೆ, ಕಾರು, ಆರೋಗ್ಯ… ಹೀಗೆ ಮಾನವನ ಅನ್ವೇಷಣೆಗೆ ಕೊನೆಯೆಲ್ಲಿ?!   ವೇದವು ಈ ಎಲ್ಲಾ ಗುರಿಗಳನ್ನು ಕ್ರೋಢೀಕರಿಸಿ, ಅವುಗಳನ್ನು ಮೂಲಭೂತ ನಾಲ್ಕು ಪುರುಷಾರ್ಥಗಳನ್ನಾಗಿ (Fundamental goals of humanity) ವಿಂಗಡಿಸಿದೆ.

ನಾಲ್ಕು ಪುರುಷಾರ್ಥಗಳು

  1. ಅರ್ಥ
  2. ಕಾಮ
  3. ಧರ್ಮ
  4. ಮೋಕ್ಷ
  1. ಅರ್ಥ ಪುರುಷಾರ್ಥ: ಮಾನವನು ಗಳಿಸುವ ಮತ್ತು ಗಳಿಸಲೆತ್ನಿಸುವ ಎಲ್ಲಾ ರೀತಿಯ ಚರ ಹಾಗು ಅಚರಾತ್ಮಕ ಸಂಪತ್ತು. ಅರ್ಥ ಪುರುಷಾರ್ಥವನ್ನು ಮಾನವನು ಹಸಿವು, ನೋವು, ಅನಾರೋಗ್ಯ, ದುಃಖ  ಇತ್ಯಾದಿಗಳಿಂದ ಉಂಟಾಗುವ ಅಸುರಕ್ಷತೆಯಿಂದ ತಪ್ಪಿಸಿಕೊಳ್ಳಲು ಉಪಯೊಗಿಸುತ್ತಾನೆ. ಅರ್ಥವೆಂದರೆ ಧನ ಸಂಪಾದನೆಯಷ್ಟೇ ಅಲ್ಲದೆ ವಿದ್ಯೆ, ಚಿನ್ನ, ವಾಹನ, ಮನೆ, ಕೀರ್ತಿ ಇತ್ಯಾದಿಗಳನ್ನು ಗಳಿಸುವುದೂ ಆಗಿದೆ.
  2. ಕಾಮ ಪುರುಷಾರ್ಥ: ಮಾನವನು ಜೀವನದಲ್ಲಿ ಸುಖಪ್ರಾಪ್ತಿಗಾಗಿ ಬಯಸುವ ಆಸೆಗಳು, ಕಾಮನೆಗಳೇ ಕಾಮ ಪುರುಷಾರ್ಥ. ಜೀವನದ ಮೂಲಭೂತ ಸೌಕರ್ಯಗಳ ಪ್ರಾಪ್ತಿಯ ನಂತರ ಮಾನವನು ಸುಖ, ಸಂತೋಷ ಪ್ರಾಪ್ತಿಗೆ (pleasure)  ಕಾಮ ಪುರುಷಾರ್ಥದ ಬೆನ್ನುಹತ್ತಿ ಹೋಗುತ್ತಾನೆ. ಸಂಬಂಧಗಳನ್ನು ಬೆಳೆಸುವುದು, ದೂರದರ್ಶನ ವೀಕ್ಷಿಸುವುದು, ಸಾಮಾಜಿಕ ಜಾಲತಾಣದಲ್ಲಿ ಸಮಯ ಕಳೆಯುವುದು, ಹವ್ಯಾಸಗಳಲ್ಲಿ ತೊಡಗುವುದು, ವಿಹಾರಕ್ಕೆ ಹೋಗುವುದು ಇತ್ಯಾದಿಗಳೆಲ್ಲವೂ ಕಾಮ ಪುರುಷಾರ್ಥವೇ. ಕೆಲವು ಕಾಮನೆಗಳನ್ನು ಸಿದ್ಧಿಸಿಕೊಳ್ಳಲು ಅರ್ಥವು ಅವಶ್ಯಕವಾಗುತ್ತದೆ.
  3. ಧರ್ಮ ಪುರುಷಾರ್ಥ: ‘ಧರ್ಮ’ ಎಂಬ ಪದಕ್ಕೆ ಹಲವಾರು ವ್ಯಾಖ್ಯಾನಗಳಿದ್ದರೂ, ಸಂದರ್ಭೋಚಿತವಾಗಿ, ಪುರುಷಾರ್ಥ ವಿಷಯದ ಹಿನ್ನಲೆಯಲ್ಲಿ ಅದನ್ನು ’ಪುಣ್ಯ’ ಎಂದು ಕರೆಯುತ್ತಾರೆ. ಇದಕ್ಕೆ ಬುನಾದಿಯು ವೈದಿಕ ಸಂಸ್ಕೃತಿಯ ಪ್ರಮುಖ ವಿಷಯಗಳಾದ ಕರ್ಮಸಿದ್ಧಾಂತ ಹಾಗು ಪುನರ್ಜನ್ಮ. ಈ ವಿಷಯಗಳು  ಇಂದ್ರಿಯ ಅಗೋಚರವಾಗಿದ್ದು, ಶ್ರದ್ಧಾವಿಷಯವಾದ ಕಾರಣ ಪುಣ್ಯವನ್ನು ’ಅದೃಷ್ಟʼ ವೆಂದು ಕರೆಯುತ್ತಾರೆ.

ಮಾನವನು ಗಳಿಸುವ ಎಲ್ಲಾ ರೀತಿಯ ಸಂಪತ್ತು ಹಾಗು ಸಂಬಂಧಗಳು ಅಶಾಶ್ವತವೆಂಬುದೆಂದು ತಿಳಿದಿರುವ ವಿಷಯವೇ. ಜೀವಿಯ ಮರಣಾನಂತರ ಕೇವಲ ಕರ್ಮರಾಶಿಯಷ್ಟೇ ಜೀವಾತ್ಮದೊಡನೆ ಇತರ ಲೋಕಗಳಿಗೆ ಅಥವಾ ಮುಂದಿನ ಜನ್ಮಕ್ಕೆ ಸಾಗುತ್ತದೆ. ಕರ್ಮರಾಶಿಯೆಂದರೆ ಅನಾದಿ ಜನ್ಮಗಳಿಂದ ಜೀವ ಸಂಪಾದಿಸಿರುವ ಪುಣ್ಯ-ಪಾಪಗಳ ರಾಶಿ.

ಮಾನವನು ವರ್ತಮಾನದಲ್ಲಿ ಕಾಯಾ-ವಾಚಾ-ಮನಸಾ ಮಾಡುವ ಸತ್ಕರ್ಮ, ಸಚ್ಚಿಂತನೆಗಳಿಗೆ  ಪುಣ್ಯಫಲವು ದೊರಕುತ್ತದೆ. ಅದು ಜೀವಿಗೆ ಭವಿಷ್ಯದಲ್ಲಿ (ಈ ಜನ್ಮ ಅಥವಾ ಯಾವುದೇ ಮುಂದಿನ ಜನ್ಮದಲ್ಲಿ) ಸದೃಢ ದೇಹೇಂದ್ರಿಯಗಳನ್ನು (ಭೋಗ ಸಾಧನ), ಸುಖಪ್ರದವಾದ ವಿಷಯವಸ್ತುಗಳನ್ನು (ಭೋಗ ವಸ್ತು) ಮತ್ತು ಸುಖಕರವಾದ ಸನ್ನಿವೇಶ ಅಥವಾ ಸ್ವರ್ಗಾದಿ ಊರ್ಧ್ವ ಲೋಕವನ್ನು (ಭೋಗ ಲೋಕ)  ನೀಡುವಲ್ಲಿ ಕಾರಣವಾಗುತ್ತದೆ.

ಹಾಗೆಯೇ ಮಾನವನು ಕಾಯಾ-ವಾಚಾ-ಮನಸಾ ಮಾಡುವ  ದುಷ್ಕರ್ಮ, ದುಶ್ಚಿಂತನೆಗಳಿಗೆ ಪಾಪಫಲವು ಗಳಿಕೆಯಾಗುತ್ತದೆ. ಅದು ಜೀವಿಗೆ ಭವಿಷ್ಯದಲ್ಲಿ ದೋಷಸಹಿತ ದೇಹೇಂದ್ರಿಯಗಳನ್ನು, ದುಃಖಪ್ರದವಾದ ವಿಷಯವಸ್ತುಗಳನ್ನು ಮತ್ತು ದುಃಖಕರವಾದ ಸನ್ನಿವೇಶ ಅಥವ ನರಕಾದಿ ಅಧೋಲೋಕವನ್ನು ನೀಡುವಲ್ಲಿ ಕಾರಣವಾಗುತ್ತದೆ.  ಹೀಗಾಗಿ ಧರ್ಮಾರ್ಜನೆಗೆ ಪ್ರಾಮುಖ್ಯತೆ ಕೊಡುವ ಸುಸಂಸ್ಕೃತನು ಪುಣ್ಯಪ್ರಧಾನ ಜೀವನ ನಡೆಸಲು ಪ್ರಯತ್ನಿಸುತ್ತಾನೆ.

ಎಲ್ಲರೂ ಈ ಮೂರು ಪುರುಷಾರ್ಥಗಳಲ್ಲೇ ನಿರತರಾಗಿರುವುದು ಸಾಕೆನಿಸಿದರೆ, ಮೋಕ್ಷ ಪುರುಷಾರ್ಥದ ಪ್ರಸ್ತುತತೆ ಏನು? ಈ ಮೂರು ಪುರುಷಾರ್ಥಗಳಲ್ಲಿ (ತ್ರಿವರ್ಗದಲ್ಲಿ) ಏನಾದರೂ ಪರಿಮಿತಿಗಳಿವೆಯೇ?

ಅದನ್ನು ಮುಂದಿನ ಅಂಕಣದಲ್ಲಿ ನೋಡೋಣ.

ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *