ಶಿವ

ಮಾನವನ ದೇಹದ ಸಂಬಂಧವು ಪ್ರಾಣ ಇರುವವರೆಗೆ ಮಾತ್ರ ಸೀಮಿತ. ಆದರೆ ಭಗವಂತನೊಂದಿಗೆ ಇರುವ ಭಕ್ತಿಯ ಸಂಬಂಧವು ಶಾಶ್ವತ ಮತ್ತು ನಿತ್ಯವಾಗಿರುತ್ತದೆ. ಜೀವನದ ಅರ್ಥವನ್ನು ಅರಿಯಲು ಮತ್ತು ಆತ್ಮಶಾಂತಿಯನ್ನು ಪಡೆಯಲು ಭಕ್ತಿ ಮಾರ್ಗವೇ ಅತ್ಯುತ್ತಮ ದಾರಿ.

ನಮ್ಮಲ್ಲಿ ಹಲವರು ತಾವು ಅದೃಷ್ಟವಂತರೆಂದು, ತಮ್ಮ ಕುಟುಂಬದವರು ಹಾಗಿಲ್ಲವೆಂದು ಭಾವಿಸಬಹುದು. ಅಂಥವರಿಗೆ high dosage ಔಷಧವನ್ನು ಕೊಡಲು ಆದಿ ಶಂಕರಾಚಾರ್ಯರು ಈ ಶ್ಲೋಕದಲ್ಲಿ ಪ್ರತಿಪಾದಿಸಿದ್ದಾರೆ.

ಯಾವತ್ಪವನೋ ನಿವಸತಿ ದೇಹೇ

ತಾವತ್ಪೃಚ್ಛತಿ ಕುಶಲಂ ಗೇಹೇ ।

ಗತವತಿ ವಾಯೌ ದೇಹಾಪಾಯೇ

ಭಾರ್ಯಾ ಬಿಭ್ಯತಿ ತಸ್ಮಿನ್ಕಾಯೇ

ಯಾವತ್ಪವನೋ ನಿವಸತಿ ದೇಹೇ ತಾವತ್ಪೃಚ್ಛತಿ ಕುಶಲಂ ಗೇಹೇ:  ಎಲ್ಲಿಯವರೆಗೆ ದೇಹದಲ್ಲಿ ಪ್ರಾಣತತ್ತ್ವವು ಇರುವುದೋ, ಅಲ್ಲಿಯವರೆಗೆ ಮನೆಯಲ್ಲಿ ಕುಶಲಸಮಾಚಾರಗಳನ್ನು ವಿಚಾರಿಸುತ್ತಾರೆ. ಹೌದಲ್ಲವೇ!! ಮನೆಯವರ ಪ್ರೀತಿ, ಅಕ್ಕರೆ, ಸೇವೆ ಎಲ್ಲವೂ ದೇಹದಲ್ಲಿ ಪ್ರಾಣವಿರುವವರೆಗೆ ಮಾತ್ರ. ಅಲ್ಲಿಯವರೆಗೆ ಈ ದೇಹವೇ ಸರ್ವಸ್ವವೆಂದು ತಿಳಿದು ಪ್ರೀತಿಸುವುದೇನು, ಗೌರವಿಸುವುದೇನು, ಸಂರಕ್ಷಣೆಗೆ ತೋರಿಸುವ ಕಾಳಜಿಯು ನಮಗೆಲ್ಲಾ ತಿಳಿದೇ ಇದೆ.

ಗತವತಿ ವಾಯೌ ದೇಹಾಪಾಯೇ: ದೇಹದಿಂದ ಪ್ರಾಣಪಕ್ಷಿಯು (ಜೀವ) ಹೊರಟುಹೋದಾಗ, ಸುಂದರ, ಶ್ರೇಷ್ಠ, ಅತ್ಯುತ್ತಮವೆಂದು, ದಿವ್ಯವೆಂದು ಪರಿಗಣಿಸಲ್ಪಿಟ್ಟಿದ್ದ ಶರೀರ, ಕುರೂಪವಾಗಿ, ನಿಕೃಷ್ಟವಾಗಿ, ಅಶೌಚವಾಗಿ, ಹೆಣವಾಗಿ ಬಿದ್ದಿರುತ್ತದೆ. ಇಲ್ಲಿಯವರೆಗೆ ಅವನು/ಅವಳು ಎಂದು ಸಂಬೋಧಿಸುತ್ತಿದ್ದ ದೇಹವನ್ನು ಅದು/ಇದು ಎಂದು ಕರೆಯುತ್ತಾರೆ. ಹಲವಾರು ವಸ್ತುಗಳಿಂದ, ಸುಗಂಧ ದ್ರವ್ಯಗಳಿಂದ ಅಲಂಕರಿಸುತ್ತಿದ್ದ ದೇಹವನ್ನು ice pack ಮಾಡಿ, ದುರ್ವಾಸನೆ ಹರಡದಂತೆ ಸಾಮ್ರಾಣಿ ಹೊಗೆ ಹಾಕುತ್ತಾರೆ. ಜೀವಂತವಿದ್ದ ಮಹಾವ್ಯಕ್ತಿಯನ್ನು ಭೇಟಿಮಾಡಲು ಹೋಗುವಾಗ ಸ್ನಾನಮಾಡಿ ಹೋಗುತ್ತಿದ್ದ ಜನ, ಈಗ ‘ಇದನ್ನು’ ನೋಡಿ, ಮನೆಗೆ ಹೋಗಿ ಸ್ನಾನಮಾಡುತ್ತಾರೆ! ಹೀಗಾದಾಗ ಅಚ್ಚುಮೆಚ್ಚಿನ ಹತ್ತಿರದ ಸಂಬಂಧಿಕರು ಹೇಗೆ ಪ್ರತಿಕ್ರಿಯಿಸುತ್ತಾರೆ?

ಭಾರ್ಯಾ ಬಿಭ್ಯತಿ ತಸ್ಮಿನ್ಕಾಯೇ: ಆ ವ್ಯಕ್ತಿಯ ದೇಹವನ್ನು ಕಂಡು ಮಡದಿಯೂ ಕೂಡ ಭಯಭೀತಿ ಹೊಂದುತ್ತಾಳೆ. ಇದನ್ನು ತಿಳಿಸಲು ರಾಮಕೃಷ್ಣ ಪರಮಹಂಸರು ಒಂದು ಕಥೆ ಹೇಳುತ್ತಾರೆ – ಒಬ್ಬ ವ್ಯಕ್ತಿ ತನ್ನ ಕುಟುಂಬಕ್ಕೆ ಅತಿಯಾಗಿ ಅಂಟಿಕೊಂಡಿರುವುದನ್ನು ಕಂಡು ಗುರುಗಳು ಅವನಿಗೆ ಪ್ರಾಪಂಚಿಕ ಪ್ರೀತಿಯ ಸತ್ಯವನ್ನು ತಿಳಿಸಿದರು. ಆ ವ್ಯಕ್ತಿ ನಂಬಲಿಲ್ಲ. ಗುರುಗಳು ಒಂದು ಮೂಲಿಕೆಯನ್ನು ಶಿಷ್ಯನಿಗೆ ಸೇವಿಸಲು ಹೇಳಿದರು. ಮೂಲಿಕೆ ಸೇವಿಸಿದ ವ್ಯಕ್ತಿ ಜಗತ್ತಿಗೆ ಸತ್ತವನಂತೆ ಕಂಡರೂ, ಅವನಿಗೆ ಸುತ್ತಮುತ್ತ ನಡೆಯುವ ವಿಚಾರಗಳು ತಿಳಿಯುತ್ತಿತ್ತು. ಸತ್ತಂತಿದ್ದ ವ್ಯಕ್ತಿಯನ್ನು ಕಂಡು, “ಇವರಿಲ್ಲದ ಬದುಕು ಬದುಕೇ ಅಲ್ಲ. ದೇವರು ನನ್ನನ್ನಾದರೂ ಕರೆದುಕೊಳ್ಳಬಾರದಿತ್ತೆ” ಎಂಬ ಮಡದಿಯ ಆಕ್ರಂದನ ಮುಗಿಲನ್ನು ಮುಟ್ಟಿತ್ತು. ಅವಳ ಪ್ರೀತಿಯ ಮಾತುಗಳನ್ನು ಆಲಿಸುತ್ತಿದ್ದ ವ್ಯಕ್ತಿ ಒಳಗೊಳಗೆ ಖುಷಿಪಡುತ್ತಿದ್ದ. ಆಗ ಗುರುಗಳು ಮನೆಗೆ ಆಗಮಿಸಿದರು. ವ್ಯಕ್ತಿಯ ಮಡದಿ ಓಡಿ ಹೋಗಿ ಗುರುಗಳಿಗೆ ನಮಿಸಿ ತನ್ನ ದುಃಸ್ಥಿತಿಯನ್ನು ವಿವರಿಸಿದಳು. ಗುರುಗಳು ಯೋಚಿಸಿದಂತೆ ಮಾಡಿ, “ನಿನ್ನ ಆಯಸ್ಸನ್ನು ಕೊಡುವುದಾದರೆ, ಇವನನ್ನು ಉಳಿಸಬಲ್ಲೆ” ಎಂದರು.

ಆಗ ಮಡದಿ ಭಯಭೀತಳಾಗಿ, ಹಿಂಜರಿದು, ಅಳುತ್ತಲೇ, “ಗುರುಗಳೇ, ನಾನು ನನ್ನ ಪ್ರಾಣವನ್ನು ಕೊಡಲಾರೆ. ಮಕ್ಕಳಿಗೆ ತಾಯಿಪ್ರೀತಿ ಮುಖ್ಯವಲ್ಲವೇ!” ಎಂದು ನಿರಾಕರಿಸಿದಳು. ಆಗಲೇ ವ್ಯಕ್ತಿಗೆ ಸತ್ಯದ ದರ್ಶನವಾಯಿತು. ಸತ್ತಂತಿದ್ದ ಆ ವ್ಯಕ್ತಿಯ ದೇಹದ ಕೈಕಾಲುಗಳು ಹರಡಿಕೊಂಡಿದ್ದವು. ಮಡದಿ, “ಹೆಚ್ಚು ಕಾಲ ಹೆಣವಿದ್ದರೆ ಮಕ್ಕಳು ಭಯಪಡುತ್ತಾರೆ. ಮುಂದಿನ ಕಾರ್ಯವನ್ನು ಮಾಡೋಣ” ಎಂದಳು.  ‘ಅದನ್ನು’ ಹೊರಗೆ ತೆಗೆದುಕೊಂಡು ಹೋಗಲು ಹೊರಟಾಗ, ಬಾಗಿಲು ಸಣ್ಣದಾಗಿದ್ದರಿಂದ ಗುರುಗಳು, “ಬಾಗಿಲ ಬಳಿಯಿರುವ ಗೋಡೆಯನ್ನು ಒಡೆದರೆ ಸೂಕ್ತ” ಎಂದರು.

ಅದಕ್ಕೆ ಮಡದಿ ಓಡಿಬಂದು, “ಪತಿಯನ್ನೇನೋ ಕಳೆದುಕೊಂಡೆ. ಈಗ ಮನೆಯನ್ನೂ ಕಳೆದುಕೋ ಎನ್ನುವಿರಾ? ಶವದ ಕೈಕಾಲುಗಳನ್ನು ನಿಧಾನವಾಗಿ ಕಡಿದು ಸ್ಮಶಾನಕ್ಕೆ ಕೊಂಡೊಯ್ಯಿರಿ” ಎಂದಾಗ ಸತ್ತಂತಿದ್ದ ವ್ಯಕ್ತಿ ಎದ್ದು ಈ ಪ್ರಾಪಂಚಿಕ ಪ್ರೀತಿಯ ಸತ್ಯತೆ ತಿಳಿದು ವೈರಾಗ್ಯವನ್ನು ಹೊಂದಿದ.

ನಮಗೆ ದೇಹದ ಬಗ್ಗೆ ಇರುವ ತಪ್ಪುತಿಳಿವಳಿಕೆ ಮತ್ತು ಮೋಹ

1) ದೇಹವೇ ನಾನು ಮತ್ತು ದೇಹವೇ ಸರ್ವಸ್ವವೆಂದು ಭಾವಿಸಿ ಜೀವನದ ಪರಮೋನ್ನತ ಗುರಿ ದೇಹಪೋಷಣೆ, ಪಾಲನೆ ಮತ್ತು ದೇಹದ ಪೂಜೆ ಮಾಡುವ ರಾಕ್ಷಸೀಪ್ರವೃತ್ತಿ

2) ದೇಹವನ್ನು ಉಪಯೋಗಕ್ಕಿಲ್ಲದ್ದೆಂದು ನಿಕೃಷ್ಟವಾಗಿ ಕಂಡು, ಆಧ್ಯಾತ್ಮಿಕತೆಯ ಹೆಸರಲ್ಲಿ ದೇಹವನ್ನು ಚಿತ್ರಹಿಂಸೆಗೆ ಒಳಪಡಿಸುವುದು (*ಕರ್ಷಯಂತ: ಶರೀರಸ್ಥಮ್.. ಭಗವದ್ಗೀತೆ*)

3) ಸಂಬಂಧಗಳನ್ನು ದೈಹಿಕ ಸ್ತರಕ್ಕಷ್ಟೇ ಮುಡಿಪಾಗಿಡುವುದು

ಹಾಗಾದರೆ ನಾವೇನು ಮಾಡಬೇಕು?

‌ಸಂಬಂಧಗಳನ್ನು ದೈಹಿಕ ಸ್ತರದಿಂದ ಆಧ್ಯಾತ್ಮಿಕ ಸ್ತರಕ್ಕೆ ಏರಿಸುವುದು

‌ಸತ್ತನಂತರ ನಮ್ಮೊಂದಿಗೆ ಯಾವ ವಸ್ತುಗಳಾಗಲೀ, ಸಂಬಂಧಿಕರಾಗಲೀ ಬರುವುದಿಲ್ಲ. ಆದರೆ ನಮ್ಮೊಂದಿಗೆ ನಮ್ಮ ಧರ್ಮಾಧರ್ಮಗಳೇ ಬರುವುದು ಎಂಬುದನ್ನು ಅರಿತು, ನಮ್ಮ ಜೀವನವನ್ನು ವಿವೇಕದಿಂದ ನಡೆಸುವುದು.

‌ದೇಹದ ಮೇಲೆ ಅತೀ ಮೋಹವನ್ನೂ ಇಡದೆ, ತಾತ್ಸಾರವನ್ನೂ ಮಾಡದೆ ಮಧ್ಯಪಂಥವನ್ನು ಅನುಸರಿಸುವುದು.

‌ದೇಹ ಒಂದು ಅತ್ಯುತ್ಕೃಷ್ಟವಾದ ಉಪಕರಣ. ದೇಹವೆಂಬುದು ದೇವರು ನಮಗೆ ಕೊಟ್ಟಿರುವ ಅದ್ಭುತ ಕೊಡುಗೆ. ಅದರ ಪಾಲನೆ, ಪೋಷಣೆ, ಧಾರಣೆಯ ಉದ್ದೇಶವಿರುವುದು ಧರ್ಮಾಚರಣೆ (ಶರೀರಮಾದ್ಯಮ್ ಖಲು ಧರ್ಮಸಾಧನಂ – ಕುಮಾರಸಂಭವ ) ಮತ್ತು ಮೋಕ್ಷಸಾಧನೆಗೆ ಎಂದು ಅರಿತು ಜೀವನವನ್ನು ನಡೆಸುವುದು.

ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *