Bhaja Govindam Shloka: Wisdom Teachings by Adi ShankaracharyaAI ಚಿತ್ರ

ಕಮ್ಮಾರ ಕಬ್ಬಿಣದ ತುಂಡುಗಳನ್ನು ಚೆನ್ನಾಗಿ ಕಾಯಿಸಿ, ಒಂದು ದೊಡ್ಡ ಅಡಿಗಲ್ಲಿನ ಮೇಲೆ ಇರಿಸಿ, ಸುತ್ತಿಗೆಯಿಂದ ಚೆನ್ನಾಗಿ ಬಾರಿಸುವ ಮೂಲಕ ಕಬ್ಬಿಣಕ್ಕೆ ಒಂದು ಸೂಕ್ತ ಆಕಾರವನ್ನು ಕೊಡುವುದು ನಮಗೆಲ್ಲಾ ತಿಳಿದೇ ಇದೆ. ಅದೇ ರೀತಿಯಲ್ಲಿ ಆದಿ ಶಂಕರಾಚಾರ್ಯರು ನಮ್ಮಲ್ಲಿರುವ ಮೋಹಗಳನ್ನೆಲ್ಲಾ ಮುದ್ಗರ ಪ್ರಹಾರರಿಂದ ತುಂಡರಿಸಿ ನಮ್ಮನ್ನು ಅಧ್ಯಾತ್ಮ ಸಾಧಕರನ್ನಾಗಿ ರೂಪಿಸುತ್ತಿದ್ದಾರೆ.

ನಮ್ಮ ಸುತ್ತಲಿನ ಹಲವರು ವಾಡಿಕೆಗೆ ಭಗವಂತ ಬೇಕು, ಅಧ್ಯಾತ್ಮ ಜೀವನವೂ ಬೇಕು ಎಂದರೂ, ಹೃದಯಾಂತರಾಳವನ್ನು ಪರೀಕ್ಷಿಸಿದಾಗ ಇವೆಲ್ಲಾ ಹುರುಳಿಲ್ಲದ ಮಾತು ಎಂದು ತಿಳಿದುಬರುತ್ತದೆ. ಭಗವಂತನೇ ಬರುತ್ತೇನೆಂದರೂ ನಮ್ಮಲ್ಲಿ ಹಲವರು ಸಿದ್ಧರಿರದ ಕಾರಣ “ನಾಳೆ ಬಾ!” ಎಂಬ ಫಲಕವನ್ನು ಭಗವಂತನ ಮುಂದೆ ಹಿಡಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಹಾಗಾದರೆ ನಮ್ಮನ್ನು ಅಧ್ಯಾತ್ಮ ಜೀವನದಿಂದ ತಡೆಯುತ್ತಿರುವುದಾದರೂ ಏನು ಎಂದರೆ –

ಬಾಲಸ್ತಾವತ್ಕ್ರೀಡಾಸಕ್ತಃ

ತರುಣಸ್ತಾವತ್ತರುಣೀಸಕ್ತಃ

ವೃದ್ಧಸ್ತಾವಚ್ಚಿಂತಾಸಕ್ತಃ

ಪರಮೇ ಬ್ರಹ್ಮಣಿ ಕೋಽಪಿ ಸಕ್ತಃ  

ಬಾಲಸ್ತಾವತ್ಕ್ರೀಡಾಸಕ್ತಃ – ಬಾಲಕರಾಗಿದ್ದಾಗ ಆಸಕ್ತಿ ಕ್ರೀಡೆಗಳಲ್ಲಿ. ಮಕ್ಕಳು ಸಂತೋಷಕ್ಕಾಗಿ ಆಟಿಕೆಗಳನ್ನು ಉಪಯೋಗಿಸುವುದು, ಅದಿಲ್ಲದಿದ್ದಾಗ ಚೀರಾಡುವುದು, ಅಳುತ್ತವೆ. ಸ್ವಲ್ಪ ದೊಡ್ಡವರಾದಂತೆ ಆಟಿಕೆಗಳ ಬದಲು ಕ್ರೀಡಾ ಉಪಕರಣಗಳು, ವಿಡಿಯೋ ಗೇಮ್, ಕಂಪ್ಯೂಟರ್ ಮುಂತಾದವುಗಳ ಮೇಲೆ ಆಸಕ್ತಿ ಬದಲಾಯಿಸಿ, ಅದರಲ್ಲೇ ಸಂತೋಷ ಪಡೆಯುತ್ತವೆ. ಅದಿಲ್ಲದಿದ್ದಾಗ ಮನೆಯವರ  ಮೇಲೆ ಮುನಿಸಿಕೊಂಡ ದಿನಗಳೆಷ್ಟೋ, ಹಠ ಮಾಡಿ ಊಟ ಮಾಡದೇ ಮಲಗಿದ ದಿನಗಳೆಷ್ಟೋ, ಸಮಯ ಕಳೆದಂತೆ ಸ್ನೇಹಿತರೇ ಜೀವನದ ಕೇಂದ್ರವಾಗಿ ಅವರೊಡನೆ ಅಡ್ಡಾಡುವುದು, ಆಟವಾಡಲು ಶುರುಮಾಡಿದರೆ ಕುಟುಂಬದ ಬಗ್ಗೆಯಾಗಲಿ, ಜೀವನದ ಬಗ್ಗೆಯಾಗಲಿ ಯೋಚನೆಯೇ ಇರುವುದಿಲ್ಲ ಅಲ್ಲವೇ?

ತರುಣಸ್ತಾವತ್ತರುಣೀಸಕ್ತಃ – ಯೌವ್ವನಕ್ಕೆ ಕಾಲಿಟ್ಟನಂತರ ತರುಣಿಯ ಮೇಲೆ ಆಸಕ್ತಿ. ದೇಹದಲ್ಲಾಗುವ ವಯೋಸಹಜ ಬದಲಾವಣೆಯಿಂದಲೋ, ಮಾನಸಿಕ ದೌರ್ಬಲ್ಯದಿಂದಲೋ, ಸಾಮಾಜಿಕ ಒತ್ತಡದಿಂದಲೋ ತರುಣ-ತರುಣಿಯರಲ್ಲಿ ಪರಸ್ಪರ ಆಕರ್ಷಣೆ ಉಂಟಾಗುತ್ತದೆ. ಈಗಿನ ಕಾಲದಲ್ಲಂತೂ ಶಾಲೆಯಲ್ಲೇ boyfriend/girlfriend ಇಲ್ಲದಿದ್ದರೆ ಏನೋ ಕೊರತೆಯಿರಬಹುದು ಎಂಬಂತೆ ನೋಡುವ ರೂಢಿಯೂ ಬೆಳೆಯುತ್ತಿದೆ. ಆ ವಯಸ್ಸಿನಲ್ಲಿ ಅವರು ಉಡುವ ಉಡುಗೆಯಿಂದ ಹಿಡಿದು, ಆಹಾರ, ಬಳಸುವ ಪ್ರತಿಯೊಂದು ವಸ್ತುವೂ ಇನ್ನೊಬ್ಬರನ್ನು impress ಮಾಡಲೆಂದೇ ಇರುತ್ತದೆ. ಪೋಷಕರೋ, ಶಿಕ್ಷಕರೋ ತರುಣರಿಗೆ ತಿಳಿವಳಿಕೆ ನೀಡಲು ಹೋದರೆ, “ನಿಮಗೆ ಇಂದಿನ generation ಬಗ್ಗೆ ತಿಳಿದಿಲ್ಲ. ನೀವು outdated ಆಗಿದ್ದೀರಿ. ನಾನು ಪ್ರೌಢಾವಸ್ಥೆಯನ್ನು ತಲುಪಿದ್ದೇನೆ. ನನಗೆ ಜವಾಬ್ದಾರಿಯಿದೆ ಮತ್ತು ನಾನು ಮಾಡುತ್ತಿರುವುದು ಸರಿಯಾಗಿದೆ” ಎಂಬ ಉತ್ತರ ಸರ್ವೇ ಸಾಮಾನ್ಯ.

ಇನ್ನೂ ಮುಂದೆ ಹೋಗಿ ಹಿರಿಯರು ಅವರನ್ನು ಈ ಪ್ರವೃತ್ತಿಯಿಂದ ತಡೆದರೆ ಮಾನಸಿಕ ಖಿನ್ನತೆ, ಒಂಟಿತನ, ಎದುರುವಾದಿಸುವುದು ಮತ್ತು ಜೀವನವನ್ನೇ ಅಂತ್ಯಮಾಡಿಕೊಳ್ಳುವ ವಿಚಾರವನ್ನೂ ಮಾಡುವ ತರುಣರು ಇದ್ದಾರೆ. ಬಾಲ್ಯಾವಸ್ಥೆಯಲ್ಲಿದ್ದ ಆಟಿಕೆಗಳ ಮೇಲಿನ ಆಸಕ್ತಿ/ಅವಲಂಬನೆ ಹೋದರೂ, ಹೊಸ ಅವಲಂಬನೆಗೆ ದಾಸರಾಗಿದ್ದಾರೆ ಅಷ್ಟೇ.

ವೃದ್ಧಸ್ತಾವಚ್ಚಿಂತಾಸಕ್ತಃ – ವೃದ್ಧರಾದ ನಂತರ ಸದಾ ಚಿಂತೆಯಲ್ಲೇ ಮಗ್ನರಾಗಿರುತ್ತಾರೆ. ಜೀವನದ ಕಷ್ಟ-ಸುಖಗಳನ್ನು, ನೋವು-ನಲಿವುಗಳನ್ನು ಅನುಭವಿಸಿಯಾದ ನಂತರವಾದರೂ ಜನಸಾಮಾನ್ಯರ ಜೀವನ ಹೇಗಿರುತ್ತದೆ ಎಂದರೆ – ಸದಾ ಚಿಂತೆ. ಮಕ್ಕಳಿಲ್ಲದವರಿಗೆ ಒಂದು ಚಿಂತೆಯಾದರೆ ಮಕ್ಕಳಿರುವವರಿಗೆ ಹತ್ತಾರು ಚಿಂತೆ. ವೃದ್ಧಾಪ್ಯದಲ್ಲಿ ವಿಚಾರಿಸುವವರಾರೂ ಇಲ್ಲವೆಂಬ ಚಿಂತೆಯೊಂದು ಕಡೆ, ಮಕ್ಕಳ ಜೀವನವನ್ನು ಸುಭದ್ರವಾಗಿಸುವ ಚಿಂತೆ ಇನ್ನೊಂದು ಕಡೆ ಮೊಮ್ಮಕ್ಕಳ ವಿದ್ಯಾಭ್ಯಾಸ-ಸಂಸ್ಕಾರದ ಚಿಂತೆಯೊಂದಾದರೆ, ಬಂಧು ಬಳಗದವರನ್ನು ಖುಷಿಪಡಿಸುವ ಚಿಂತೆ ಇನ್ನೊಂದು. ಇವೆಲ್ಲದರ ಮಧ್ಯೆ ತಮ್ಮ ಆರೋಗ್ಯದ ಚಿಂತೆ ಮತ್ತು ಮೃತ್ಯುವಿಗೆ ಸಮೀಪವಾಗುತ್ತಿರುವೆನೆಂಬ ಮಹಾಚಿಂತೆ. ವೃದ್ಧರೊಂದಿಗೆ ಸ್ವಲ್ಪಕಾಲ ಸಂಭಾಷಣೆ ಮಾಡಿನೋಡಿ. ಅವರು

1) ತಮ್ಮ ಗತಕಾಲದ ಯಾವುದೋ ವೈಭವವನ್ನು ಪುನರಾವರ್ತಿಸಿ ಹೇಳುತ್ತಾರೆ

2) ಹಿಂದಿನ ತಪ್ಪುಗಳ ಬಗ್ಗೆ ಬೇಸರ ಮಾಡಿಕೊಂಡು ಪಶ್ಚತ್ತಾಪದ ವಿಚಾರ ಹೇಳುತ್ತಾರೆ ಅಥವಾ

3) ತಮ್ಮ ಮುಂದಿನ ದಿನಗಳು ಕರಾಳವಾಗಿರಬಹುದೆಂಬ ಆತಂಕ ವ್ಯಕ್ತಪಡಿಸುತ್ತಾರೆ. ಈ ಚಿಂತೆಗಳಿಂದ ಬಳಲುತ್ತಿರುವವರನ್ನು ಉದ್ದೇಶಿಸಿರುವ ಸುಭಾಷಿತ, “ಚಿತೆಗೂ ಚಿಂತೆಗೂ ವ್ಯತ್ಯಾಸವಿರುವುದು ಕೇವಲ ಒಂದು ಬಿಂದುವಿನಷ್ಟು. ಚಿತೆ ಸತ್ತಶವವನ್ನು ಸುಟ್ಟರೆ, ಚಿಂತೆ ಬದುಕಿರುವ ಜೀವಿಯನ್ನೇ ಸುಡುತ್ತದೆ” ಸರ್ವವಿದಿತವಾಗಿದೆ.

ಪರಮೇ ಬ್ರಹ್ಮಣಿ ಕೋಽಪಿ ಸಕ್ತಃ – ಪರಬ್ರಹ್ಮ ತತ್ತ್ವದಲ್ಲಿ ಯಾರಿಗೂ ಆಸಕ್ತಿಯಿಲ್ಲ!! ಬಾಲ್ಯಾವಸ್ಥೆಯಲ್ಲಿ ಕ್ರೀಡೆಯಲ್ಲಿ, ತರುಣಾವಸ್ಥೆಯಲ್ಲಿ ತರುಣಿಯಲ್ಲಿ, ಮುಂದೆ ಹಣ-ನೌಕರಿ-ಕುಟುಂಬದಲ್ಲಿ, ವೃದ್ಧಾಪ್ಯದಲ್ಲಿ ಚಿಂತೆಯಲ್ಲೇ ಮಗ್ನರಾಗಿರುವ ಬಹುಪಾಲು ಜನರನ್ನು ಕಂಡ ಶಂಕರರು ಈ ವಾಕ್ಯವನ್ನು ಹೇಳುವಾಗ ಎಷ್ಟು ನೋವಾಗಿರಬಹುದೆಂದು ಊಹಿಸಿ. ಮಾನವಜನ್ಮ ದೊಡ್ಡದು. ಅದನ್ನು ಹಾಳುಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂಬ ದಾಸೋಕ್ತಿಯೂ ಇದೇ ವಿಷಯವನ್ನು ತಿಳಿಸುತ್ತದೆ.

ಈ ಶ್ಲೋಕದಲ್ಲಿ ವೈದಿಕ ಆಶ್ರಮವ್ಯವಸ್ಥೆಯನ್ನು( ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಗು ಸಂನ್ಯಾಸ ) ಸೂಚಿಸಿರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು. ಪ್ರತಿಯೊಂದು ಆಶ್ರಮದ ಉದ್ದೇಶವಿರುವುದು ನಮ್ಮನ್ನು ಪ್ರಬುದ್ಧರನ್ನಾಗಿ ಮಾಡಿ, ಜೀವನದ ಪರಮಧ್ಯೇಯವಾದ ಮೋಕ್ಷಸಂಪಾದನೆಗೆ ಯೋಗ್ಯರನ್ನಾಗಿಸಲು.  

ನಮ್ಮ ಜೀವನ ನಿರ್ವಹಣೆಗೆ ಭೌತಿಕವಾಗಿ ನಾವು ಸುತ್ತಮುತ್ತಲಿನ ಜನರ ಮತ್ತು ವಸ್ತುಗಳ ಮೇಲೆ ಅವಲಂಬಿಸುವುದು ಸಹಜವೇ ಸರಿ. ಆದರೆ ಮಾನಸಿಕವಾಗಿ ನಾವು ಆ ಅವಲಂಬನೆಗಳ ಸಂಕೋಲೆಯಲ್ಲಿ ಬಂಧಿಯಾಗಿದ್ದೇವೆಯೇ ಎಂಬುದು ನಾವೇ ಯೋಚಿಸಬೇಕು. ಕಾಫಿ ಬೇಕು ಎನ್ನುವುದು ಪರವಾಗಿಲ್ಲ. ಕಾಫಿಯಿಲ್ಲದಿದ್ದರೆ ನನ್ನ ದಿನವೇ ನಡೆಯುವುದಿಲ್ಲ ಎನ್ನುವುದು ಮಾನಸಿಕ ಅವಲಂಬನೆ. ಓಡಾಡಲು ಕಾರ್ ಬೇಕು. ಸರಿ. ಅದಿಲ್ಲದಿದ್ದರೆ ನನಗೆ ಗೌರವ ಸಿಗುವುದಿಲ್ಲ ಎನ್ನುವುದು ಮಾನಸಿಕ ಅವಲಂಬನೆ.

ಜೀವನ ನಿರ್ವಹಣೆಗೆ ಹಣ ಅಗತ್ಯ. ಆದರೆ ಜೀವನವಿರುವುದೇ ಹಣಕ್ಕಾಗಿ ಎನ್ನುವುದು ಮಾನಸಿಕ ಅವಲಂಬನೆ. ಕೌಟುಂಬಿಕ ಸಂಬಂಧಗಳು ಮುಖ್ಯ. ಅವರಲ್ಲಿ ಯಾರಾದರೂ ಇಲ್ಲದಿದ್ದರೆ ನನ್ನ ಜೀವನವೇ ಇಲ್ಲ ಎನ್ನುವುದು ಮಾನಸಿಕ ಅವಲಂಬನೆ. ಹೀಗೆ ಯಾವುದರ ಇರುವಿಕೆ ಅಥವಾ ಇಲ್ಲದಿರುವಿಕೆಯಿಂದ ಮನಸ್ಸು ಶಾಂತಿಯನ್ನು , ಸಮತೋಲನವನ್ನು ಕಳೆದುಕೊಳ್ಳುತ್ತದೋ, ಚಿಂತೆಯಲ್ಲೇ ಮಗ್ನರನ್ನಾಗಿಸುತ್ತದೋ ಅವನ್ನೆಲ್ಲ ಗುರುತುಮಾಡಿ ಒಂದೊಂದಾಗಿ ಅದರ ಮೇಲಿನ ಮಾನಸಿಕ ಅವಲಂಬನೆಯನ್ನು ಸಡಿಲಮಾಡಿಕೊಳ್ಳುವುದೇ ಬುದ್ಧಿವಂತರ ಲಕ್ಷಣ.

ಬಾಲಸ್ತಾವತ್ ಶಿಕ್ಷಾಸಕ್ತಃ

ತರುಣಸ್ತಾವತ್ ಧರ್ಮನಿಷ್ಠ:

ವೃದ್ಧಸ್ತಾವತ್ ಭಜನಾಸಕ್ತ:

ಪರಮೇ ಬ್ರಹ್ಮಣಿ ಸದಾ ಅನುರಕ್ತಃ

ಬಾಲ್ಯಾವಸ್ಥೆಯಲ್ಲಿ ಅಧ್ಯಯನಶೀಲರಾಗಿ ಮೌಲ್ಯಗಳನ್ನು ರೂಢಿಸಿಕೊಳ್ಳುವುದು. ತರುಣಾವಸ್ಥೆಯಲ್ಲಿ ಕೆಲಸ-ಕುಟುಂಬ ನಿರ್ವಹಣೆಯೊಂದಿಗೆ ಧರ್ಮಾನುಷ್ಠಾನದಲ್ಲಿ ನಿರತರಾಗಿರುವುದು ಮತ್ತು ವೃದ್ಧಾಪ್ಯದಲ್ಲಿ ಭಗವದ್ಭಜನೆ, ನಾಮದಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದು. ಹೀಗೆ ಜೀವನದ ಪ್ರತಿಯೊಂದು ಕ್ಷಣವೂ ಬ್ರಹ್ಮಾತ್ಮ ಐಕ್ಯವನ್ನು ಸಾಕ್ಷಾತ್ಕಾರಿಸಿಕೊಳ್ಳುವ ಪರಮೋದ್ದೇಶದೆಡೆಗೆ ವಿನಿಯೋಗವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ – ಭಜಗೋವಿಂದಂ.

ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *