ಆದಿ ಶಂಕರಾಚಾರ್ಯರು (Shankaracharya) ನಮ್ಮಲ್ಲಿರುವ ಮೋಹವನ್ನು ಹೋಗಲಾಡಿಸಲು ಆತ್ಮಜ್ಞಾನವೆಂಬ ಔಷಧವನ್ನು ಕೊಡುತ್ತಾರೆ. ಅದರ ಪೂರ್ಣಪ್ರಯೋಜನ ಪಡೆಯಲು ಸಹಕಾರಿಯಾಗಿ ಹಲವು ವಿಶೇಷ ಅಭ್ಯಾಸಗಳನ್ನು ಭಜಗೋವಿಂದಂ ಗ್ರಂಥದಲ್ಲಿ ತಿಳಿಸಿದ್ದಾರೆ. ಮೋಹವನ್ನು ಹೋಗಲಾಡಿಸಲು ಮುದ್ಗರಪ್ರಹಾರವನ್ನು ಮಾಡುತ್ತಿದ್ದಾರೆ. ಯಾವದ್ವಿತ್ತೋಪಾರ್ಜನಸಕ್ತಃ ತಾವನ್ನಿಜಪರಿವಾರೋ ರಕ್ತಃ ಪಶ್ಚಾಜ್ಜೀವತಿ ಜರ್ಜರದೇಹೇ ವಾರ್ತಾಂ ಕೋಽಪಿ ನ ಪೃಚ್ಛತಿ ಗೇಹೇ ಎಲ್ಲಿಯವರೆಗೆ ನೀವು ಇನ್ನೊಬ್ಬರಿಗೆ ಯಾವುದಾದರೂ ರೀತಿಯಲ್ಲಿ ಉಪಯೋಗವಾಗಿರುವಿರೋ, ಅಲ್ಲಿಯವರೆಗೆ ಅವರ ಪ್ರೀತಿಯಿರುತ್ತದೆ. ಏಕೆಂದರೆ – ಇದರಿಂದ ನನಗೇನು ಲಾಭ? (What’s in it for me?) ಅಥವಾ ನನಗೇನೂ ಸಿಗದಿದ್ದಾಗ ನಾನೇಕೆ ಏನಾದರೂ ಮಾಡಲಿ? (Why do anything for nothing?) ಎಂಬ ಅಪೇಕ್ಷೆಗಳ ಷರತ್ತುಗಳ ಮೇಲೆ ಎಲ್ಲಾ ಪ್ರಾಪಂಚಿಕ ಪ್ರೀತಿ ನಿಂತಿರುವುದು. ನಿಮ್ಮಿಂದಾಗುವ ಉಪಯೋಗ – ದೈಹಿಕ, ಮಾನಸಿಕ, ಆರ್ಥಿಕ ಅಥವಾ ಮತ್ತಾವುದೇ ರೀತಿಯಿರಬಹುದು. ಈ ಸಂದರ್ಭದಲ್ಲಿ ಯಾಜ್ಞವಲ್ಕ್ಯ ಮಹರ್ಷಿಗಳು ಮೈತ್ರೇಯಿಗೆ ಬೃಹದಾರಣ್ಯಕ ಉಪನಿಷತ್ತಿನಲ್ಲಿ ಆತ್ಮನಸ್ತು ಕಾಮಾಯ ಸರ್ವಂ ಪ್ರಿಯಂ ಭವತಿ ಎಂದು ಉಪದೇಶಿಸಿದ ಮಾತು ನೆನಪಿಸಿಕೊಳ್ಳಬಹುದು. ಯಾವತ್ ತಾವತ್ ಪರಿವಾರೋ ರಕ್ತ: ಎಲ್ಲಿಯವರೆಗೆ ವ್ಯಕ್ತಿ ಲಾಭದಾಯಕರಾಗಿರುವನೋ, ಅಲ್ಲಿಯವರೆಗೆ ಮಾತ್ರ ಪರಿವಾರದವರ ಪ್ರೀತಿಯಿರುತ್ತದೆ. ಇದನ್ನು ಕೇಳಿದ ಕ್ಷಣ ಈ ವಿಚಾರ ಸಮಂಜಸವಲ್ಲ ಎನ್ನಿಸಬಹುದು. ಆದರೆ, ಸ್ವಲ್ಪ ಯೋಚಿಸಿದಾಗ ಹಾಗೂ ಮನೆಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ ಸೂಕ್ಷ್ಮಗ್ರಾಹಿಗೆ ಇದೇ ಸತ್ಯವೆಂದೆನಿಸುತ್ತದೆ. ನಾವು ಎಷ್ಟು ಹೆಚ್ಚು ಉಪಯುಕ್ತರಾಗಿರುತ್ತಿವೋ ಅಷ್ಟು ಹೆಚ್ಚು ಪ್ರೀತಿಯನ್ನು ತೋರಿಸುತ್ತಾರೆ. ಹಾಗೂ ನಮ್ಮ ಉಪಯುಕ್ತತೆ ಅವರಿಗೆ ಕಡಿಮೆಯಾದಂತೆಲ್ಲಾ ಪ್ರೀತಿಯೂ ಕ್ಷೀಣವಾಗುವುದನ್ನು ಕಾಣುತ್ತೇವೆ. ಹೇಗೆ? ಇಷ್ಟು ದಿನ ಪ್ರೀತಿಸುತ್ತಿದ್ದ ಜನರೇ, ಈಗ ಬಳಸುವ ಭಾಷೆ, ಪದಗಳು, ನಮ್ಮೊಂದಿಗೆ ವರ್ತಿಸುವ ರೀತಿ, ಹಾವಭಾವ, ನಡವಳಿಕೆ, ಮುಂತಾದದ್ದನ್ನು ನಾವು ಗಮನಿಸಿಲ್ಲವೇ? ಯಾವತ್ ವಿತ್ತೋಪಾರ್ಜನಸಕ್ತ: ಎಲ್ಲಿಯವರೆಗೆ ಧನವನ್ನು ಸಂಪಾದಿಸುವ ಆಸಕ್ತಿ(ಶಕ್ತಿ)ಯನ್ನು ಹೊಂದಿರುತ್ತಾನೋ, ಅಲ್ಲಿಯವರೆಗೆ ಮನೆಯಲ್ಲಿ, ಸಮಾಜದಲ್ಲಿ, ಬಂಧುಬಳಗದಲ್ಲಿ ಅವನಿಗೆ ತೋರುವ ಪ್ರೀತಿ, ಗೌರವ, ಮನ್ನಣೆಗೇನೂ ಕೊರತೆಯಿರುವುದಿಲ್ಲ. ಕಾಲಕಳೆದಂತೆ ವಯೋವೃದ್ಧನಾಗಿ, ಕೆಲಸದಿಂದ ನಿವೃತ್ತನಾಗಿ, ಆರ್ಥಿಕವಾಗಿ ಅವಲಂಬಿತನಾದರೆ ಅವನಿಗೆ ತೋರುವ ಪ್ರೀತಿ, ಗೌರವಗಳು ಕಡಿಮೆಯಾಗುತ್ತಾ ಹೋಗುತ್ತದೆ. ಧನವೆಂಬುದು ಉಪಲಕ್ಷಣವಷ್ಟೇ. ಇದರ ಜಾಗದಲ್ಲಿ ನಮ್ಮ ಆರೋಗ್ಯವನ್ನು, ದೈಹಿಕ ಶಕ್ತಿಯನ್ನು, ಮಾನಸಿಕ ಸ್ಥಿರತೆಯನ್ನು, ಸಾಮಾಜಿಕ ಗೌರವವನ್ನು ಸೇರಿಸಿಕೊಳ್ಳಬಹುದು. ಪಶ್ಚಾಜ್ಜೀವತಿ ಜರ್ಜರದೇಹೇ: ಜೀವಿಯ ದೇಹವು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಾ ಜರ್ಜರ ಪರಿಸ್ಥಿತಿಗೆ ಬಂದ ನಂತರ, ಪ್ರಾಪಂಚಿಕ ಪ್ರೀತಿಯ ಕರಾಳ ಮುಖದರ್ಶನವಾಗುವುದು ಖಂಡಿತ. ದುಡಿಯದಿರುವ ವ್ಯಕ್ತಿ, ಅನಾರೋಗ್ಯದಿಂದ ಹಾಸಿಗೆ ಹಿಡಿದನೆಂದರೆ ಅವನಿಗೆ ತೋರಿಸುವ ಪ್ರೀತಿಯ ರೀತಿಯೇ ಬೇರೆ. ಅತ್ಯಂತ ಪ್ರೀತಿಮಾಡುತ್ತಿದ್ದ, ಆ ವ್ಯಕ್ತಿಯಿಲ್ಲದೇ ಬದುಕಿರಲಾರೆ ಎನ್ನುತ್ತಿದ್ದ ಮನೆಯವರೇ ಇವನನ್ನು ನೋಡಿಕೊಳ್ಳಲಾಗದೇ, “ದೇವರೇ, ಇವರನ್ನು ಬೇಗ ನಿನ್ನ ಬಳಿಗೆ ಕರೆದುಕೊ” ಎಂದು ಪ್ರಾರ್ಥನೆ ಮಾಡುವುದು, ಹರಕೆ ಹೊತ್ತುಕೊಳ್ಳುವುದನ್ನು ಕಂಡಾಗ ದುಃಖವಾಗುವುದಿಲ್ಲವೇ!! ವಾರ್ತಾಂ ಕೋಽಪಿ ನ ಪೃಚ್ಛತಿ ಗೇಹೇ – ಮನೆಯವರೇ ಅವನ ಸಮಾಚಾರವನ್ನು ಕೇಳುವುದಿಲ್ಲ. ಸಾಮಾನ್ಯವಾಗಿ ಯಾವುದೇ ವಯೋವೃದ್ಧರನ್ನು ವಿಚಾರಿಸಿ ನೋಡಿ. ಅವರೆಲ್ಲರ ಕಥೆಯೂ ಹೀಗೇ ಇರುತ್ತದೆ. ಮನೆಯಲ್ಲಿ ನಿರ್ಧಾರಗಳಿಗೆ ಪರಿಗಣಿಸದಿರುವುದು, ಅವರ ಸಲಹೆಗಳನ್ನು ಕಡೆಗಣಿಸುವುದು, ಯೋಗಕ್ಷೇಮವನ್ನು ವಿಚಾರಿಸದಿರುವುದು, ಮುಖಕೊಟ್ಟು ಮಾತನಾಡದಿರುವುದು ಹೀಗೆ ಅವರ ನೋವಿನಕಥೆಗಳು ಒಂದೇ ಎರಡೇ! ಇನ್ನೂ ಹಲವು, “ತಿಂಡಿ ಆಯಿತಾ, ಕಾಫಿ ಬೇಕಾ, ಬದುಕಿದ್ದೀಯಾ, ಸತ್ತೆಯಾ ಎಂದು ಕೂಡ ಕೇಳುವವರಿಲ್ಲ” ಎಂದಾಗ ಕರುಳು ಹಿಂಡಿದಂತಾಗುತ್ತದೆ. ಇದು ಇಂದಿನ ಪರಿಸ್ಥಿತಿಯಷ್ಟೇ ಅಲ್ಲ; ಶಂಕರಾಚಾರ್ಯರ ಕಾಲದಲ್ಲೂ ಹೀಗಿತ್ತು. ನಮಗೆ ಅರ್ಥವಾಗಬೇಕಾದ ವಾಸ್ತವಿಕ ಸತ್ಯವೆಂದರೆ : ಪ್ರಾಪಂಚಿಕ ಪ್ರೀತಿಯ ಮೇಲೆ ನಮಗಿರುವ ಮೋಹ – ಈ ಮೋಹದಿಂದ ನಮಗೆ ವಾಸ್ತವಕ್ಕೆ ದೂರವಾದ ಅಪೇಕ್ಷೆಗಳು. ಆ ಅಪೇಕ್ಷೆಗಳು ಪೂರೈಸದಿದ್ದಾಗ ನಿರಾಶೆ – ನಿರಾಶೆಯಿಂದ ಮಾನಸಿಕ ಖಿನ್ನತೆ ಮತ್ತು ದುಃಖ. ಇದೇ ನಮ್ಮೆಲ್ಲರ ಜನ್ಮಜನ್ಮಾಂತರದ ಸಂಸಾರಚಕ್ರವಾಗಿದೆ. ಪ್ರೀತಿಯ ಮೇಲಿನ ಮೋಹದಿಂದಲೇ ವಿವಾಹದಲ್ಲಿ ಅಪನಂಬಿಕೆ, ವಿಚ್ಚೇದನ ಮುಂತಾದ ವಿದ್ಯಮಾನಗಳು ಹೆಚ್ಚಾಗುತ್ತಿರುವುದು. ಆದ್ದರಿಂದ, ನಿಜವಾದ ಪ್ರೇಮವೆಂಬುದು ಭಗವಂತನಲ್ಲಿ, ಜ್ಞಾನಿಗಳಲ್ಲಿ, ಗುರುಗಳಲ್ಲಿ, ಸಂತರಲ್ಲಿ ಮಾತ್ರವಿರಲು ಸಾಧ್ಯವಾದ್ದರಿಂದ ನಮ್ಮ ಪ್ರೇಮದ ಹುಡುಕಾಟದ ದಿಕ್ಕನ್ನು ಬದಲಾಯಿಸುವುದು ಉತ್ತಮ. ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಭಜಗೋವಿಂದಂ ಶ್ಲೋಕ 4: ಭವ ಚಿಂತನೆಯನ್ನು ತೊರೆದು ಭಗವಂತನನ್ನು ಕಾಣುವ ದಾರಿ ಭಜಗೋವಿಂದಂ ಶ್ಲೋಕ – 6: ಸಂಬಂಧಗಳು ತಾತ್ಕಾಲಿಕ, ತ್ಯಜಿಸು ದೇಹದ ಮೇಲಿನ ಮೋಹ