Bhaja Govindam Sloka 8: Why Attachment to Wife and Children is Temporary in Life’s Journeyಸಾಂದರ್ಭಿಕ ಚಿತ್ರ

ಕೆಲವರು ಅಧ್ಯಾತ್ಮ ಜೀವನವನ್ನು ನಡೆಸಲು ಸಿದ್ಧರಾಗಲು ಏನು ಮಾಡಬೇಕೆಂದು ಯೋಚಿಸುತ್ತಿರುವಾಗ ಮುಂದಿನ ಶ್ಲೋಕ ನಮ್ಮ ಸಹಾಯಕ್ಕೆ ಬರುತ್ತದೆ

ಕಾತೇ ಕಾಂತಾ ಕಸ್ತೇ ಪುತ್ರಃ

ಸಂಸಾರೋಽಯಮತೀವ ವಿಚಿತ್ರಃ

ಕಸ್ಯ ತ್ವಂ ಕಃ ಕುತ ಆಯಾತಃ

ತತ್ತ್ವಂ ಚಿಂತಯ ತದಿಹ ಭ್ರಾತಃ

ಹೇ ಭ್ರಾತಃ – ವಿವೇಕಿಯಾದ ಅಣ್ಣ, ತಪ್ಪುಮಾರ್ಗದಲ್ಲಿ ನಡೆಯುತ್ತಿರುವ ತಮ್ಮನಿಗೆ ಪ್ರೀತಿಯಿಂದ ಧರ್ಮಮಾರ್ಗವನ್ನು ತಿಳಿಸುತ್ತಾನೆ. ಹಾಗೇ, ಎಲೈ ಸಹೋದರ! ಎಂದು ಆಚಾರ್ಯರು ತಮ್ಮನಂತೆ ನಮ್ಮನ್ನು ಸಂಬೋಧಿಸಿ ಸಾಧನಾಮಾರ್ಗಕ್ಕೆ ಹಚ್ಚುತ್ತಿದ್ದಾರೆ. ಭ್ರಾಂತಃ ಎಂಬ ಪಾಠಾಂತರವೂ ಇದೆ. ಜನ್ಮಜನ್ಮಾತರದಿಂದ ಮಾಡಿದ ತಪ್ಪನ್ನೇ ಮಾಡಿ ಮತ್ತೂ ಅದೇ ಜಾಡನ್ನು ಹಿಡಿದ ನಮ್ಮನ್ನು ಎಚ್ಚರಿಸಲು, “ಹೇ ಮೂರ್ಖ!” ಎಂದು ಸಂಬೋಧಿಸಿದ್ದಾರೆ ಎಂದೂ ಅರ್ಥೈಸಬಹುದು.

ಕಾ ತೇ ಕಾಂತಾ – ‘ಯಾರು ನಿನ್ನ ಈ ಮಡದಿ?’ ಎಂದು ವಿಚಾರಮಾಡು. ಕಾಂತಾ ಎಂದರೆ ಆಕರ್ಷಣೆ. ಅಯಸ್ಕಾಂತ ಎಂಬ ಪದವೂ ಇದೇ ಅರ್ಥವನ್ನು ಹೊಂದಿದ್ದು, ಮಡದಿ ಎಂಬುದು ಇಲ್ಲಿ ಉಪಲಕ್ಷಣ. ಇದು ಸತಿಪತಿಯರಿಬ್ಬರಿಗೂ ಅನ್ವಯ.

ತಮ್ಮ ಇಚ್ಛೆಯಂತೆ ನಡೆಯದಿದ್ದಾಗ ಒಬ್ಬರಿಗೊಬ್ಬರು ಹೇಳುವ ಹತಾಶೆಯ ಮಾತಲ್ಲ ಇವು. ಇಲ್ಲಿ ಸ್ವಲ್ಪ ಆಳವಾಗಿ ವಿಚಾರ ಮಾಡಬೇಕು. ಇಬ್ಬರು ವ್ಯಕ್ತಿಗಳು ತಮ್ಮದೇ ಜೀವನವನ್ನು ಸಂತಸದಿಂದ ಸಾಗಿಸುತ್ತಿದ್ದು, ಹೇಗೋ ಒಬ್ಬರಿಗೊಬ್ಬರು ಪರಿಚಯವಾಗಿ, ಮದುವೆ ಎಂಬ ಸಮಾರಂಭದ ನಂತರ ಪತಿ-ಪತ್ನಿಯರಾಗಿ ಒಬ್ಬರಿಗಾಗಿ ಮತ್ತೊಬ್ಬರು ಎಂಬ ನಿರ್ಧಾರಕ್ಕೆ ಬರುತ್ತಾರೆ. ನಂತರ ಆ ವ್ಯಕ್ತಿಯ ಜೀವನದ ಉದ್ದೇಶ ಮತ್ತು ಪ್ರೀತಿಯ ಕೇಂದ್ರವೇ ಬದಲಾಗಿಸುವ, ಒಬ್ಬರಿಲ್ಲದಿದ್ದರೆ ಮತ್ತೊಬ್ಬರು ಬದುಕುವ ಆಸೆಯನ್ನೇ ಕಳೆದುಕೊಳ್ಳುವ ಈ ಸಂಬಂಧ ಸಮ್ಯಕ್ ಬಂಧನವೇನು? ಎಂದು ವಿಚಾರಮಾಡಬೇಕು.

ಯಾವುದೋ ಬೆಟ್ಟದ ಮೇಲಿರುವ ಮಾವಿನ ಮರದ ಹಣ್ಣು ಮತ್ತು ಯಾವುದೋ ಸಮುದ್ರದಲ್ಲಿದ್ದ ಉಪ್ಪು ಸೇರಿ ಒಳ್ಳೆಯ ಉಪ್ಪಿನಕಾಯಿಯಾಗಿ ರುಚಿಯಾಗುತ್ತದೆ. ಆದರೆ, ಉಪ್ಪಿಲ್ಲದೇ ಮಾವು ಹಾಗೂ ಮಾವಿಲ್ಲದೇ ಉಪ್ಪು ಮುಂಚೆಯೂ ಇತ್ತು, ಮುಂದೆಯೂ ಇರಬಹುದು ಮತ್ತು ತಮ್ಮ ಅಸ್ತಿತ್ವದ ಪ್ರಯೋಜನವನ್ನು ಮಾಡಿಕೊಳ್ಳಬಹುದು. ಯಾವುದೋ ಪ್ರದೇಶದ ಹೆಣ್ಣು, ಇನ್ಯಾವುದೋ ಪ್ರದೇಶದ ಗಂಡು ಸೇರಿ, ಗೃಹಸ್ಥಾಶ್ರಮವನ್ನು ಪ್ರವೇಶಿಸಿ, ಸತಿ-ಪತಿಯರಾಗಿ ಜೀವನದ ರುಚಿಯನ್ನು ಸವಿಯುವುದು ಸರಿ. ಆದರೆ ಅದರಲ್ಲೇ ಮಗ್ನರಾಗಿ, ತಮ್ಮತಮ್ಮ ಜೀವನದ ಸಾರ್ಥಕ್ಯವನ್ನು ಮಾಡಿಕೊಳ್ಳದಿದ್ದರೆ ಗೃಹಸ್ಥಾಶ್ರಮವನ್ನು ಪ್ರವೇಶಿಸಿದ ಉದ್ದೇಶ ವಿಫಲವಾದಂತೆ.

ಕಸ್ತೇ ಪುತ್ರಃ – ‘ನಿನ್ನ ಈ ಮಗ ಯಾರು?’ ಎಂದು ವಿಚಾರಮಾಡು. ಮಕ್ಕಳು ತಪ್ಪು ಮಾಡಿದಾಗ ಅಥವಾ ಅವಮಾನಕರವಾಗಿ ನಡೆದಾಗ ಹೇಳುವ ಬೇಸರದ ಮಾತಲ್ಲ ಇವು. ಆದರೆ ಇಲ್ಲೂ ಕೂಡಾ ಒಳಹೊಕ್ಕಿ ವಿಚಾರಮಾಡಬೇಕೆನ್ನುವುದು ಲಕ್ಷ್ಯ. ಸತಿ-ಪತಿಯರಾದರೂ ಎಲ್ಲಿಂದಲೋ ಬಂದು ಸೇರಿದ ಸಂಬಂಧ, ಆದರೆ ಮಕ್ಕಳು ನಮ್ಮವೇ. ನಾವೇ ಜನ್ಮವಿತ್ತ ಕೂಸು ಎಂದು ಮಕ್ಕಳ ಮೇಲೆ ನಮ್ಮ ಜೀವನದ ಬಹುಪಾಲು ಶ್ರಮ-ಧನ-ಪ್ರೀತಿಯನ್ನು ಧಾರೆಯೆರೆಯುತ್ತೇವೆ. ಆದರೆ ಸ್ವಲ್ಪ ಯೋಚಿಸಿ – ನಾವು ಯಾವುದಕ್ಕೆ ಜನ್ಮ ನೀಡಿದ್ದು? ಜೀವಕ್ಕೋ ಅಥವಾ ಶರೀರಕ್ಕೋ?

ಒಂದು ದೃಷ್ಟಿಯಿಂದ ಜೀವಕ್ಕೆ ಯಾವ ತಂದೆ, ತಾಯಿಯರಿಲ್ಲ. ಜೀವ ಅನಾದಿ. ಇನ್ನೊಂದು ದೃಷ್ಟಿಯಿಂದ ಜೀವ ಕೋಟ್ಯಂತರ ದೇಹಗಳನ್ನು ಪಡೆದು, ಹಲವಾರು ಯೋನಿಗಳ  ತಂದೆ, ತಾಯಿಗಳು ಆ ಜೀವಕ್ಕೆ ಆಗಿಹೋಗಿದ್ದಾರೆ.

ಹಾಗಿದ್ದರೆ ನಾವು ಮಕ್ಕಳಿಗೆ ಏನು? ಅನಾದಿಯಿಂದ ಸದಾ ಇರುವ ಜೀವ, ಅವ್ಯಕ್ತವಾಗಿದ್ದಾಗ, ತನ್ನ ಕರ್ಮಾನುಸಾರ ವ್ಯಕ್ತವಾಗಲು (ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ – ಗೀತೆ ) ಒಂದು ತಾತ್ಕಾಲಿಕ ಆಶ್ರಯಸ್ಥಾನವನ್ನು ಹುಡುಕುತ್ತಿತ್ತು. ಆ ತಾತ್ಕಾಲಿಕ ನಿವಾಸವನ್ನು ಪಡೆಯಲು ತಂದೆ-ತಾಯಿ ಮಾಧ್ಯಮರಷ್ಟೇ. ಆ ಜೀವ ತನ್ನ ಕೆಲಸವನ್ನು ಮುಗಿಸಿದ ನಂತರ, ಈ ದೇಹವೆಂಬ ಮನೆಯನ್ನು ತೊರೆದು ಮತ್ತೊಂದು ಆಶ್ರಯ ಸ್ಥಾನವನ್ನು ಪಡೆಯಲು ಮರಣವೆಂಬ ಪ್ರಕ್ರಿಯೆಯ ಮೂಲಕ ತೆರಳುತ್ತದೆ.

ಸಂಸಾರೋಽಯಮತೀವ ವಿಚಿತ್ರಃ – ಇಷ್ಟಾದರೂ ನಮ್ಮನ್ನು ಈ ಸಂಸಾರಚಕ್ರದಲ್ಲಿ ಚೆನ್ನಾಗಿ ಸುತ್ತಿಸುವ ಈ ಸಂಬಂಧಗಳು ಎಷ್ಟು ವಿಚಿತ್ರವಲ್ಲವೇ? ಈ ಸಂಬಂಧಗಳೆಲ್ಲವೂ ದೇಹಾಭಿಮಾನವನ್ನು ಆಶ್ರಯಿಸಿದ್ದು, ಜನ್ಮಮರಣದ ಚಕ್ರದಲ್ಲಿ ನಮ್ಮನ್ನು ಭ್ರಾಂತಿಗೊಳಿಸುತ್ತವೆ.

ಕಸ್ಯ ತ್ವಂ ಕಃ ಕುತ ಆಯಾತಃ – ‘ನೀನು ಯಾರು? ಎಲ್ಲಿಂದ ಬಂದಿದ್ದೀಯಾ?’ ಎಂದು ವಿಚಾರ ಮಾಡಬೇಕು. ನಮ್ಮ ಎಲ್ಲಾ ವ್ಯವಹಾರಗಳ ಕೇಂದ್ರಬಿಂದು ‘ನಾನು’. ಈ ‘ನಾನು’ ಎಂಬುದರ ಸತ್ಯ ಏನು? ದೇಹವೇ? ಇಂದ್ರಿಯಗಳೇ? ಮನಸ್ಸೇ? ಅಹಂಕಾರವೇ? ವ್ಯಕ್ತಿತ್ವವೇ?. ಇವೆಲ್ಲವೂ ಬದಲಾಗುತ್ತಿದ್ದರೂ ‘ನಾನು’ ಎಂಬುದು ಬದಲಾಗದೇ ಶಾಶ್ವತವಾಗಿದೆಯಲ್ಲ.

ನಾನು ಈ ಜನ್ಮಕ್ಕಿಂತ ಮುಂಚೆ ಎಲ್ಲಿದ್ದೆ, ಎಲ್ಲಿಂದ ಬಂದೆ, ಎಲ್ಲಿಗೆ ಮರಳುವೆ? ಎಂಬ ಮೂಲಭೂತ ಪ್ರಶ್ನೆಗಳು ನಮ್ಮನ್ನು ಕಾಡದಿದ್ದರೆ ನಾವು ಜೀವನವನ್ನು ಸರಿಯಾಗಿ ಜೀವಿಸೇ ಇಲ್ಲವೆಂಬಂತೆ.

ತತ್ತ್ವಂ ಚಿಂತಯ ತದಿಹ – ಈಗಲೇ ಈ ತತ್ತ್ವವನ್ನು ಚಿಂತಿಸು. ರಮಣ ಮಹರ್ಷಿಗಳ ಉಪದೇಶ ಸಾರವೇ “who am I?” enquiry. ನನ್ನ ನಿಜಸ್ವರೂಪ ದೇಹೇಂದ್ರಿಯಮನೋಬುದ್ಧಿಗಳಿಗೆ ವ್ಯತಿರಿಕ್ತವಾದ ಆತ್ಮಚೈತನ್ಯವೆಂದು ತಿಳಿಯಬೇಕು. ನನ್ನ ಸ್ವರೂಪ ಚೈತನ್ಯವಾದರೆ, ನನ್ನ ಮಡದಿ, ಪುತ್ರ, ಸಂಬಂಧಿಕರ ಸ್ವರೂಪವೂ ಅದೇ ಚೈತನ್ಯವೇ ಅಲ್ಲವೇ. ಹೀಗೇ ಜೀವ-ಜಗತ್ತಿನ ತತ್ತ್ವವಾದ ಬ್ರಹ್ಮವಸ್ತುವನ್ನು ಗುರುಶಾಸ್ತ್ರದ ಸಹಾಯದಿಂದ ಸದಾ ಚಿಂತಿಸು ಎಂದು ಶಂಕರಾಚಾರ್ಯರು ಉಪದೇಶಿಸಿದ್ದಾರೆ.

ಸಾರಾಂಶ: ಪಾರಮಾರ್ಥಿಕ ಸತ್ಯವನ್ನರಿಯಲು ವ್ಯಾವಹಾರಿಕವಾಗಿ ಬಂದೊದಗಿರುವ ಜವಾಬ್ದಾರಿಗಳನ್ನು ನಿರ್ಲಿಪ್ತತೆಯಿಂದ ಕರ್ತವ್ಯದೃಷ್ಟಿಯಿಂದ ಮಾಡಬೇಕೆಂಬುದು ಅಧ್ಯಾತ್ಮಜೀವನ. ನಾಟಕದಲ್ಲಿ ನಮ್ಮ ಪಾತ್ರದಲ್ಲೇ ಮುಳುಗಿ, ಮಗ್ನರಾಗದೇ, ಪಾತ್ರವನ್ನು ಮೀರಿದ ಸತ್ಯವನ್ನು ತಿಳಿದು ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸುವಂತೆ, ನಮ್ಮ ನಿಜಸ್ವರೂಪಜ್ಞಾನವನ್ನು ಪಡೆದು, ಜಗನ್ನಾಟಕದಲ್ಲಿ ಧರ್ಮಮಾರ್ಗದಲ್ಲಿ ನಡೆಯುತ್ತಾ, ಸಮರ್ಪಕವಾಗಿ ಬಹುಜನ ಹಿತಾಯ ಬಹುಜನ ಸುಖಾಯ ಎಂಬಂತೆ ಸಮರ್ಥವಾಗಿ ಪಾತ್ರವಹಿಸುವುದು. ಕೋಽಹಂ(ನಾನು ಯಾರು?) ಎಂಬ ವಿಚಾರದಿಂದ ಸೋಽಹಂ(ಅವನೇ ನಾನು) ಎಂಬ ನಿಶ್ಚಿತ ಜ್ಞಾನವನ್ನು ಸಂಪಾದಿಸಿಕೊಳ್ಳಲು ಪ್ರಾರ್ಥಿಸೋಣ – ಭಜಗೋವಿಂದಂ.

ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *