ಶಂಕರಾಚಾರ್ಯರು ತಮ್ಮ ಉಪದೇಶವನ್ನು ನಿಷ್ಠೆಯಿಂದ ಪಾಲಿಸುವ ನಮ್ಮೆಲ್ಲರಿಗೂ ಖಚಿತವಾಗಿ ಗಮ್ಯವನ್ನು ತಲುಪುವ ಉಪಾಯವನ್ನು ಈ ಶ್ಲೋಕದಲ್ಲಿ ತಿಳಿಸುತ್ತಿದ್ದಾರೆ. ಸತ್ಸಂಗತ್ವೇ ನಿಸ್ಸಂಗತ್ವಂ ನಿಸ್ಸಂಗತ್ವೇ ನಿರ್ಮೋಹತ್ವಮ್ । ನಿರ್ಮೋಹತ್ವೇ ನಿಶ್ಚಲತತ್ತ್ವಂ ನಿಶ್ಚಲತತ್ತ್ವೇ ಜೀವನ್ಮುಕ್ತಿಃ ಸತ್ಸಂಗತ್ವೇ: ಸತ್ಸಂಗದಿಂದ. ಹಾಗಾದರೆ ದುಸ್ಸಂಗವೆಂಬುದಿದೆಯೇ? ದುಸ್ಸಂಗವೆಂದರೇನು? ಪ್ರಾಪಂಚಿಕತೆಯೇ ಜೀವನವೆಂದು ನಂಬಿದವರೊಡನೆ ಒಡನಾಟ. ಅವರೊಡನೆ ಸಮಯಕಳೆದಷ್ಟೂ ನಮ್ಮ ಆಧ್ಯಾತ್ಮಿಕತೆಗೆ ಪೆಟ್ಟುಬೀಳುವುದು ಖಚಿತ. ಹಾಗಾಗಿ ಮೊದಲು ದುಸ್ಸಂಗತ್ಯಾಗ, ನಂತರ ಸತ್ಸಂಗಪ್ರಾಪ್ತಿ. ‘ಸತ್’ ಎಂದರೆ ಪರಮಾತ್ಮ. ಅವನೊಡನೆ ಸಂಯೋಗವಾಗುವುದೇ ನಿಜವಾದ ಸತ್ಸಂಗ. ಇಲ್ಲಿ ಸತ್ಸಂಗವೆಂದರೆ ಸದ್ಗುರುಗಳ, ಸಾಧು-ಸಂತರ, ಜ್ಞಾನಿಗಳ ಸಾನ್ನಿಧ್ಯವೆಂದು ತಿಳಿಯಬಹುದು. ಸಂಗವೆಂದರೆ ಸುಮ್ಮನೆ ಜೊತೆಯಿರುವುದಲ್ಲ. ಅವರ ಒಡನಾಟದಲ್ಲಿದ್ದು, ಅವರ ಉಪದೇಶವನ್ನು ನಮ್ಮ ಜೀವನದಲ್ಲಿ ತರುವುದು. ಇಂಥ ಸತ್ಸಂಗ ದೊರೆಯುವುದು ಪೂರ್ವಜನ್ಮ ಸುಕೃತವೇ ಸರಿ. ನಿಸ್ಸಂಗತ್ವಂ: ಸತ್ಸಂಗದಿಂದ ನಿಸ್ಸಂಗ ದೊರೆಯುತ್ತದೆ. ನಿಸ್ಸಂಗವೆಂದರೆ ವಿವೇಕದಿಂದ ಬೆಳೆದ ವೈರಾಗ್ಯ. ಸತ್ಸಂಗವೆಂಬುದು ಆತ್ಮವಿಚಾರಕ್ಕೆ ಬೇಕಾದ ಪ್ರೇರಣೆಯನ್ನು ಕೊಡುವುದಷ್ಟೇ ಅಲ್ಲದೆ, ನಮ್ಮ ಅಧ್ಯಾತ್ಮಮಾರ್ಗನಿಷ್ಠೆಯನ್ನು ದೃಢಗೊಳಿಸುತ್ತದೆ. ಈ ಮಾರ್ಗದಲ್ಲಿ ಮುಂದುವರಿದಂತೆ ಪ್ರಾಪಂಚಿಕ ವಿಚಾರಗಳ ಮತ್ತು ಪ್ರಾಪಂಚಿಕ ಗಳಿಕೆಗಳ ಹಣೆಬರಹ(ಅನಿತ್ಯತೆ) ತಿಳಿದು ವೈರಾಗ್ಯ ಉತ್ಪತ್ತಿಯಾಗುವುದು ಸಹಜವಲ್ಲವೇ? ಈ ವೈರಾಗ್ಯ ಸ್ಮಶಾನವೈರಾಗ್ಯವೋ ಅಥವಾ ಜವಾಬ್ದಾರಿಯಿಂದ ಓಡಿಹೋಗುವ ಪಲಾಯನವಾದವೋ ಅಲ್ಲ. ಧರ್ಮಾಚರಣೆ, ಭಕ್ತಿ ಮತ್ತು ವಿವೇಕದಿಂದ ಸ್ವಾಭಾವಿಕವಾಗಿ ಬೆಳೆದ ಪ್ರಬುದ್ಧತೆ. ನಿಸ್ಸಂಗತ್ವೇ ನಿರ್ಮೋಹತ್ವಮ್: ನಿಸ್ಸಂಗದಿಂದ ನಿರ್ಮೋಹತ್ವವು ಉಂಟಾಗುತ್ತದೆ. ಮೋಹವೆಂದರೆ ನಮ್ಮ ಬಗ್ಗೆ, ಸಂಬಂಧಗಳ ಬಗ್ಗೆ, ಜೀವನದ ಗುರಿಯ ಬಗ್ಗೆ ಇರುವ ತಪ್ಪುತಿಳುವಳಿಕೆ. ಆಚಾರ್ಯರು ಪ್ರಸ್ತುತ ಗ್ರಂಥದ ಒಂದನೇ ಶ್ಲೋಕದಿಂದ ಏಳನೇ ಶ್ಲೋಕದವರೆಗೆ ಮೋಹಗಳ ಪಟ್ಟಿಯನ್ನು ನೀಡುವುದಲ್ಲದೇ, ಆ ಮೋಹಗಳನ್ನು ಮುದ್ಗರದಿಂದ ನಾಶಮಾಡುವ ವಿಧಾನವನ್ನೂ ತಿಳಿಸಿದ್ದಾರೆ. ನಿರ್ಮೋಹವೆಂದರೆ ವಿವೇಕ-ವೈರಾಗ್ಯದಿಂದ ತಿಳಿದುಬಂದ ಸಾಧ್ಯ-ಸಾಧನಗಳ ಯಥಾರ್ಥಜ್ಞಾನ. ಅಪರಾವಿದ್ಯೆ ಪರಾವಿದ್ಯೆಯ ಸಾಧನವಾಗಬೇಕು. ಅರ್ಥಪುರುಷಾರ್ಥ ಧರ್ಮಕ್ಕಾಗಿ ವಿನಿಯೋಗಿಸಬೇಕು. ಮನುಷ್ಯಜನ್ಮ ದೊರೆತಿರುವುದು ಮೋಕ್ಷಸಾಧನೆಗಾಗಿ ಎಂಬ ವಿಚಾರ ಮನದಟ್ಟಾಗುವುದು ಮುಖ್ಯ. ಅಧ್ಯಾತ್ಮ ಮಾರ್ಗದಲ್ಲಿ ಬರುವ ಸರ್ವಮೋಹಗಳಿಂದ ನಿರ್ಮೋಹನಾಗಲು ಸತ್ಸಂಗ(ವಿವೇಕ) ಮತ್ತು ನಿಸ್ಸಂಗ(ವೈರಾಗ್ಯ) ಸಾಧನವಾಗುತ್ತದೆ. ನಿರ್ಮೋಹತ್ವೇ ನಿಶ್ಚಲತತ್ತ್ವಂ: ಈ ಮೋಹಗಳಿಂದ ಹೊರಬರುವುದು ಸುಲಭವಲ್ಲ. ಅಧ್ಯಾತ್ಮಜ್ಞಾನವನ್ನು ಪಡೆಯುವ ಹಾದಿಯಲ್ಲಿ ಹಲವಾರು ಸಂಶಯಗಳು ಬುದ್ಧಿಯಲ್ಲಿ ಏಳುತ್ತವೆ. ಆ ಸಂಶಯಗಳಿಗೆಲ್ಲಾ ಉತ್ತರವನ್ನು ಹುಡುಕಬೇಕು. ಆತ್ಮವಿಷಯದಲ್ಲಿ ಸಂಶಯರಹಿತವಾದ ನಿಶ್ಚಯಜ್ಞಾನವನ್ನು ಮನನದಿಂದ ಮತ್ತು ಗುರುಗಳೊಡನೆ ಸಂವಾದದಿಂದ ಸಿದ್ಧಿಸಿಕೊಳ್ಳಬೇಕು (ಛಿದ್ಯಂತೆ ಸರ್ವಸಂಶಯಾ: – ಮುಂಡಕ ಉಪನಿಷತ್ತು). ಆಗ ಮನಸ್ಸು ಪೂರ್ಣ ಶಾಂತಿಯಲ್ಲಿರುತ್ತದೆ. ಹೀಗೆ ನಿಶ್ಚಲಚಿತ್ತಮ್ ಎಂಬ ಪಾಠಾಂತರವೂ ಇಲ್ಲಿ ಸೂಕ್ತವಾಗುತ್ತದೆ. ‘ಆತ್ಮಚೈತನ್ಯವೇ ನಾನು’ ಎಂಬ ತತ್ತ್ವದಲ್ಲಿ ನಿಶ್ಚಯಹೊಂದುವುದನ್ನು ನಿಶ್ಚಲತತ್ತ್ವ ಎಂದಿರುವುದು. ನಿಶ್ಚಲತತ್ತ್ವೇ ಜೀವನ್ಮುಕ್ತಿಃ : ತತ್ತ್ವನಿಶ್ಚಯದಿಂದಲೇ ಜೀವನ್ಮುಕ್ತಿ. ಪಡೆದಿರುವಂತಹ ಆತ್ಮಜ್ಞಾನವನ್ನು ಸ್ಥಿರವಾಗಿಸುವುದು ಜೀವನ್ಮುಕ್ತಿ. ಗೀತೆಯಲ್ಲಿ ತಿಳಿಸಿರುವ ಸ್ಥಿತಪ್ರಜ್ಞನ( ಏಷಾ ಬ್ರಾಹ್ಮಿಸ್ಥಿತಿ ಪಾರ್ಥ…), ಪರಾಭಕ್ತನ, ಗುಣಾತೀತನ ಲಕ್ಷಣ, ಜೀವನಚರ್ಯೆಯನ್ನು ನೆನಪುಮಾಡಿಕೊಳ್ಳುವುದು ಪ್ರಸ್ತುತವಿಷಯಕ್ಕೆ ಸಮಂಜಸವಾಗುತ್ತದೆ. ಯಾವ ಯಾವ ಗುಣಗಳನ್ನು ಸಾಧಕನು ಪ್ರಯತ್ನಪೂರ್ವಕವಾಗಿ ಸಿದ್ಧಿಸಿಕೊಳ್ಳಬೇಕೋ(ಸರ್ವಭೂತದಯೆ, ನಿಷ್ಕಾಮಭಾವ, ಸಂತುಷ್ಟಿ ಮುಂತಾದವು) , ಅವೆಲ್ಲವೂ ಜೀವನ್ಮುಕ್ತನಲ್ಲಿ ಅನಾಯಾಸವಾಗಿ ಹಾಗೂ ಸ್ವಾಭಾವಿಕವಾಗಿ ಕಂಡುಬರುತ್ತವೆ. ಈ ಜೀವನ್ಮುಕ್ತಿಯನ್ನು ಸಿದ್ಧಿಸಿಕೊಳ್ಳುವುದೇ ಮಾನವಜೀವನದ ಪರಮಗುರಿ. ಜಗತ್ತಿನ ಎಲ್ಲ ಅಧ್ಯಾತ್ಮ ಮಾರ್ಗಗಳೂ ಮುಕ್ತಿಯನ್ನೇ ಗುರಿಯಾಗಿ ಹೊಂದಿವೆ. ಕೆಲವು ಮಾರ್ಗಗಳು ಸತ್ತ ನಂತರ ಹೋಗಿ ಪಡೆಯುವ ಸ್ವರ್ಗ, ವೈಕುಂಠ ಮುಂತಾದ ಸ್ಥಳವನ್ನು ಸೇರುವುದೇ ಮುಕ್ತಿಯೆಂದರೆ, ಮತ್ತೆ ಕೆಲವು ಸಮಾಧಿ, ಬೋಧಿಯೆಂಬ ವಿಶೇಷಾನುಭವವನ್ನು ಮುಕ್ತಿಯೆನ್ನುತ್ತವೆ. ಆದರೆ, ವೇದಾಂತವು ಸಾರ್ವತ್ರಿಕವಾಗಿರುವ, ದಿನನಿತ್ಯದ ಅನುಭವವನ್ನೇ ವಿಚಾರಕ್ಕೊಳಪಡಿಸಿ, ಈ ಅನುಭವಕ್ಕೆಲ್ಲಾ ಸಾಕ್ಷಿಯಾದ ಚೈತನ್ಯದ ಅಪರೋಕ್ಷಜ್ಞಾನದಿಂದ ಮುಕ್ತಿಯನ್ನು ಇಲ್ಲೇ ಉಂಟುಮಾಡಿಸುತ್ತದೆ (here and now). ಇದೇ ಅದ್ವೈತವೇದಾಂತದ ವೈಶಿಷ್ಟ್ಯ. ಕೇನೋಪನಿಷತ್ತು – ಇಹ ಚೇದವೇದೀದಥ ಸತ್ಯಮಸ್ತಿ ನ ಚೇದಿಹಾವೇದೀನ್ ಮಹತೀ ವಿನಷ್ಟಿ – ಎಂದು ಜೀವನ್ಮುಕ್ತಿಯೇ ಸತ್ಯವೆಂದು ಎತ್ತಿ ಹಿಡಿದಿದೆ. ಈ ಶ್ಲೋಕದಲ್ಲಿ ಜ್ಞಾನಯೋಗದ ಹಂತಗಳಾದ ಶಾಸ್ತ್ರಶ್ರವಣ (ಸತ್ಸಂಗ), ಮನನ (ನಿಶ್ಚಲತತ್ತ್ವ) ಮತ್ತು ನಿದಿಧ್ಯಾಸನದ ಮೂಲಕ ಜೀವನ್ಮುಕ್ತಿಯನ್ನು ಸೂಕ್ಷ್ಮವಾಗಿ ಸೂಚಿಸಿರುವುದನ್ನು ಗಮನಿಸಬಹುದು. ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಭಜಗೋವಿಂದಂ ಶ್ಲೋಕ – 8: ಪ್ರಯಾಣದ ಮಧ್ಯೆ ಬಂದು ಹೋಗುವ ಮಡದಿ, ಮಕ್ಕಳ ಮೇಲೆ ಮೋಹವೇಕೆ? ಭಜಗೋವಿಂದಂ ಶ್ಲೋಕ – 10: ಜೀವನದ ಎಲ್ಲಾ ದುಃಖಗಳಿಗೆ ಆತ್ಮಜ್ಞಾನವೇ ಮದ್ದು