ಇತ್ತೀಚಿನ ದಿನಗಳಲ್ಲಿ ಹಲವರಿಗೆ ಬರುವ ಯೋಚನೆಯೆಂದರೆ, “ನನಗೀಗ ಹಲವಾರು ಜವಾಬ್ದಾರಿಗಳಿವೆ. ಮುಂದೆ ಜೀವನದಲ್ಲಿ ಎಲ್ಲವೂ ಒಂದು ಮಟ್ಟಕ್ಕೆ ಬಂದನಂತರ ಮೋಕ್ಷದ ಬಗ್ಗೆ ಯೋಚಿಸೋಣ”. ಎಂದು ಹೇಳುತ್ತಾರೆ. ಈ ಕುರಿತು ಶ್ರೀ ಶಂಕರಾಚಾರ್ಯರು ಶ್ಲೋಕದಲ್ಲಿ ಈ ರೀತಿ ಹೇಳಿದ್ದಾರೆ. ನಲಿನೀದಲ-ಗತಜಲಮತಿತರಲಂ ತದ್ವಜ್ಜೀವಿತಮತಿಶಯ-ಚಪಲಮ್ । ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ ಲೋಕಂ ಶೋಕಹತಂ ಚ ಸಮಸ್ತಮ್ ಅರ್ಥ ನಳಿನೀದಲಗತಜಲವತ್: ಪದ್ಮಪತ್ರದ ಮೇಲಿರುವ ನೀರಿನ ಹನಿಯಂತೆ. ಕಮಲಕ್ಕೆ ಸನಾತನಧರ್ಮದಲ್ಲಿ ಉನ್ನತ ಸ್ಥಾನವಿದೆ. ಅದಕ್ಕೆ ಕಾರಣಗಳು – ಕೊಳಚೆನೀರಿನಲ್ಲಿದ್ದರೂ ಅರಳುವುದು, ಕೊಳಚೆಯ ಸಂಗದಲ್ಲಿದ್ದರೂ ನಿರ್ಲೇಪವಾಗಿರುವುದು. ಹೀಗೆ ನಮ್ಮ ಜೀವನದಲ್ಲಿ ಹೊರಗಿನ ಪರಿಸ್ಥಿತಿ ಏನೇ ಇದ್ದರೂ ಮನಸ್ಥಿತಿ ಕೆಡಿಸಿಕೊಳ್ಳದೇ ಅರಳುವುದು ಮತ್ತು ಎಂಥವರೊಂದಿಗಿದ್ದರೂ ನಮ್ಮ ಮನಸ್ಸು ಅದರಿಂದ ಮಲಿನಗೊಳ್ಳದಂತೆ ಅಸಂಗನಾಗಿರುವುದು ಮುಖ್ಯ. ಜಗತ್ತಿನಲ್ಲಿರುವ ಅನಂತ ವಸ್ತುಗಳಲ್ಲಿ ಜೀವನಕ್ಕೆ ಪದ್ಮಪತ್ರದ ಮೇಲಿರುವ ಹನಿಯ ಉಪಮೆ ಉಪಯೋಗಿಸಿರುವುದು ಜೀವನದ ಅನಿಶ್ಚಿತತೆ, ಸಮಂಜಸತೆಯ ಜೊತೆಗೆ ಆಚಾರ್ಯರ ಸೂಕ್ಷ್ಮದರ್ಶಿತ್ವವನ್ನು ತೋರಿಸುತ್ತದೆ. ತದ್ವತ್ ಜೀವಿತಮತಿಶಯ ಚಪಲಮ್: ಕೆರೆಯ ಒಂದು ಹನಿ ಪದ್ಮಪತ್ರದ ಮೇಲೆ ಬರುತ್ತದೆ, ಗಾಳಿಯ ಹೊಡೆತಕ್ಕೆ ಸಿಕ್ಕಿ ಕುಣಿದಾಡುತ್ತದೆ ಮತ್ತು ಆಕಸ್ಮಿಕವಾಗಿ ಕೆರೆಯಲ್ಲಿ ಲೀನವಾಗುತ್ತದೆ. ಹೀಗೆ ಅಲ್ಲವೇ ನಮ್ಮ ಜೀವನ. ಎಲ್ಲೋ ಜನನವಾಗಿ, ಕರ್ಮದ ಹೊಡೆತಕ್ಕೆ ಸಿಕ್ಕಿ ನೋವು-ನಲಿವು ಅನುಭವಿಸಿ, ಅಚಾನಕ್ಕಾಗಿ ಒಂದು ದಿನ ಕಣ್ಮರೆಯಾಗುತ್ತೇವೆ. ಕಣ್ಣಮುಂದೆಯೇ ಹಿಂದಿನ ದಿನ ಖುಷಿಯಾಗಿ ಮಾತಾಡಿದ ವ್ಯಕ್ತಿ ಮರುದಿನ ಮೃತಪಟ್ಟಾಗ ಈ ಜೀವನದ ಅನಿತ್ಯತೆ, ಚಂಚಲತೆ, ಅಸ್ಥಿರತೆಯನ್ನು ಗುರುತುಸುವುದು ಕಷ್ಟವೇನಲ್ಲ. ನೀರಿನ ಹನಿ ಕಮಲದ ಎಲೆಯ ಮೇಲಿದ್ದಾಗ ನೋಡಲು ಸುಂದರವಿದ್ದರೂ, ಅದರ ಮೇಲಿರುವ ಸಮಯ ಎಷ್ಟು ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಹಾಗೇ ಎಷ್ಟೇ ಸುಗಮವೆನಿಸಿದರೂ ಜೀವನ ಎಷ್ಟು ವರ್ಷ ಎಂಬುದು ಖಚಿತವಿಲ್ಲ. ವಿದ್ಧಿ ವ್ಯಾಧಿ ಅಭಿಮಾನ ಗ್ರಸ್ತಮ್: ಈ ಜೀವನ ದೈಹಿಕ ಮತ್ತು ಮಾನಸಿಕ ರೋಗದಿಂದ ನರಳುತ್ತಿದೆ ಎಂಬುದನ್ನು ಹೇಳಲಾಗಿದೆ. ಹಲವರಿಗೆ ಸಾವು ಹೇಳಿ – ಕೇಳಿ ಬರವುದಿಲ್ಲ. ಆದರೆ ಹೆಚ್ಚಿನವರಿಗೆ ಹಲವಾರು ಖಾಯಿಲೆಗಳ, ವೃದ್ಧಾಪ್ಯದ notice letter ನೊಂದಿಗೆ ಮೃತ್ಯು ಸಮೀಪಿಸುವುದು. ಪ್ರತಿ ದಿನವೂ ನಾವು ಮೃತ್ಯುವಿಗೆ ಸಮೀಪಿಸುತ್ತಿದ್ದೇವೆ ಎಂಬುದು ಸರ್ವವಿದಿತವಾದರೂ ಒಪ್ಪಿಕೊಳ್ಳಲು ಕಷ್ಟಸಾಧ್ಯವಾದ ಸತ್ಯ. ಒಂದು ಕಾಲದಲ್ಲಿ ಸಲೀಸಾಗಿ ಓಡಾಡುತ್ತಿದ್ದವರಿಗೆ ಮೈಕೈ- ನೋವು, ಕೂದಲು ಬೆಳ್ಳಗಾಗುವುದು, ಹಲ್ಲುಗಳು ಉದುರುವುದು, ಮುಖ ಸುಕ್ಕುಗಟ್ಟುವುದು, ಹಲವಾರು ರೋಗಗಳಿಗೆ ತುತ್ತಾಗುವುದೇ ಆ ಯಮ ನಮಗೆ ಕಳಿಸುತ್ತಿರುವ notice. ಜೀವನವಿಡೀ ಒಬ್ಬರು ಮಾತನಾಡಿಸಲಿಲ್ಲವೆಂದು ದುಃಖ, ಮತ್ತೊಬ್ಬರು ಸರಿಯಾಗಿ ಮಾತನಾಡಲಿಲ್ಲವೆಂದು, ಮಗದೊಬ್ಬರು ಹೆಚ್ಚು ಮಾತಾಡಿ ಸಮಯ ಹಾಳುಮಾಡಿದರೆಂದು ದುಃಖ. ಒಬ್ಬರು ನೋಡಿಯೂ ನಗಲಿಲ್ಲವೆಂದು ದುಃಖವಾದರೆ, ಮತ್ತೊಬ್ಬರು ನಮ್ಮನ್ನು ನೋಡಿ ನಕ್ಕರೆಂದು ದುಃಖ. ಕೆಲವರು ಸಹಾಯಕ್ಕೆ ಬರಲಿಲ್ಲವೆಂದು ಮತ್ತು ಕೆಲವರು ತೊಂದರೆ ಕೊಡುತ್ತಿದ್ದಾರೆಂದು ಹೀಗೆ ದುಃಖಕ್ಕೆ ಸಾವಿರ ಕಾರಣಗಳು. ಆದ್ದರಿಂದಲೇ ಅಭಿಮಾನ ಹೆಚ್ಚಿರುವ ಗರ್ವಿಯನ್ನು ಮೈಯೆಲ್ಲ ಹುಣ್ಣಾಗಿರುವ ವ್ಯಕ್ತಿಗೆ ಹೋಲಿಸುವುದು. ಎಲ್ಲಿ ಮುಟ್ಟಿದರೂ ನೋವು. ಹಾಗಾಗಿ ನಮ್ಮ ಜೀವನವೆಲ್ಲ ದೈಹಿಕ ಮತ್ತು ಮಾನಸಿಕ ರೋಗಗಳಿಗೆ ತುತ್ತಾಗಿರುತ್ತೇವೆ ಎನ್ನುತ್ತಾರೆ ಆಚಾರ್ಯರು. ಲೋಕಮ್ ಶೋಕಹತಮ್ ಸಮಸ್ತಮ್: ಎಲ್ಲ ಲೋಕಗಳೂ ಶೋಕದ ಹೊಡೆತಕ್ಕೆ ಸಿಲುಕಿವೆ. ಇಂದ್ರಾದಿ ದೇವತೆಗಳಿಗೆ ದೈಹಿಕ ದುಃಖವಿರದಿದ್ದರೂ ಅಭಿಮಾನ, ಗರ್ವ, ಕಾಮ, ಕ್ರೋಧ ಮುಂತಾದ ಮಾನಸಿಕ ಅಭದ್ರತೆಯನ್ನು ತೋರಿಸುವ ಪೌರಾಣಿಕ ಕಥೆಗಳು ಹಲವಾರು. ಇನ್ನು, ವೈಕುಂಟದಲ್ಲಿದ್ದ ಜಯ-ವಿಜಯರೂ ಆಂತರಿಕ ವೈರಿಗಳಿಗೆ ಸೋತು ರಾಕ್ಷಸರಾಗಿ ಜನಿಸಿದ ಕಥೆ ಜನಜನಿತವಾಗಿದೆ. ಆದ್ದರಿಂದ ಇಹಲೋಕ-ಪರಲೋಕಗಳಲ್ಲಿ ಎಲ್ಲೂ ಶೋಕವಿಲ್ಲದ, ಅತ್ಯಂತಿಕ ಸುಖವಿರುವ ಸ್ಥಾನವಿಲ್ಲ. ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಭಜಗೋವಿಂದಂ ಶ್ಲೋಕ 3: ಕಾಮ ನಿಗ್ರಹ ಸಾಧನೆಗೆ ಸರಳ ಮಾರ್ಗ ಭಜಗೋವಿಂದಂ ಶ್ಲೋಕ 5: ಪ್ರಾಪಂಚಿಕ ಮೋಹ ತೊರೆದು ಭಗವಂತನ ಮೇಲೆ ಪ್ರೀತಿ ಇಡು