ಆಯುರ್ವೇದ ಸಾವಿರಾರು ವರ್ಷಗಳಿಂದ ಆರೋಗ್ಯ ಕಾಪಾಡಿಕೊಳ್ಳಲು ಅನೇಕ ಉಪಾಯ ಮತ್ತು ಚರ್ಯಗಳನ್ನು ಅಂದರೆ ಪಾಲಿಸಬೇಕಾದ ನಿಯಮಗಳ ಬಗ್ಗೆ ಹೇಳುತ್ತಾ ಬಂದಿದೆ. ಈ ನಿಯಮಗಳು ಎರಡು ವಿಧದಲ್ಲಿ ಹೇಳಲಾಗಿದೆ. 1. ದಿನಚರ್ಯ 2. ಋತುಚರ್ಯ ಪ್ರತಿದಿನ ಏನೇನು ಪಾಲಿಸಬೇಕು ಅದರಿಂದ ಆಗುವ ಆರೋಗ್ಯದ ಲಾಭವೇನು? ದಿನದ ಆರಂಭದಿಂದ ಅಂತ್ಯದವರೆಗೆ ಅಂದರೆ ಸೂರ್ಯೋದಯದಿಂದ ಸೂರ್ಯಸ್ತದ ನಂತರ ಮಲಗುವವರೆಗೆ ಪಾಲಿಸಲೇಬೇಕಾದ ಚಟುವಟಿಕೆಗಳು ಇಲ್ಲಿವೆ. 1. ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದು ಬ್ರಾಹ್ಮೀ ಮುಹೂರ್ತ ಉತ್ತಿಷ್ಠೆ ಸ್ವಸ್ಥೊ ರಕ್ಷಾರ್ಥಂ ಆಯುಷಃ: ಬ್ರಾಹ್ಮೀ ಮುಹೂರ್ತ ಅಂದರೆ ಸೂರ್ಯೋದಯದ ಮುಂಚಿನ ಒಂದೂವರೆ ಗಂಟೆ ಮುಂಚೆ ಎದ್ದೇಳುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದರೆ ದೇಹದಲ್ಲಿ ಕ್ರಿಯಾಶೀಲತೆ ಹುಮ್ಮಸ್ಸು ಉತ್ಸಾಹ ಹೆಚ್ಚಾಗುತ್ತದೆ. ದೇಹದಲ್ಲಿನ ತ್ರಿದೋಷ (ವಾತ, ಪಿತ್ತ, ಕಫ) ಇವುಗಳ ಸಮತೋಲನದಲ್ಲಿರುತ್ತವೆ. 2. ನಿತ್ಯಕರ್ಮ ಮುಗಿಸಬೇಕು ಬ್ರಾಹ್ಮೀ ಮುಹೂರ್ತ ಉತ್ತಿಷ್ಠೆ ಜೀರ್ಣಾಜೀರ್ಣ ನಿರೂಪಯನ್: ಬ್ರಾಹ್ಮೀ ಮುಹೂರ್ತದಲ್ಲಿ ಎದ್ದಮೇಲೆ ಮೊದಲಿಗೆ ಮಲ-ಮೂತ್ರ ವಿಸರ್ಜನೆ ಮಾಡಬೇಕು. ಹಿಂದಿನ ದಿನ ಸೇವಿಸಿದ ಆಹಾರ ಪೂರ್ಣವಾಗಿ ಜೀರ್ಣವಾದ ಮೇಲೆಯೇ ಒಬ್ಬ ವ್ಯಕ್ತಿಯ ಮರುದಿನದ ದೈನಂದಿನ ಚಟುವಟಿಕೆ ಶುರುವಾಗಬೇಕು. ದೇಹದ ಮಲವು ಅಂದರೆ ಬರಿಯ ಸ್ಥೂಲ ಮಲವಲ್ಲ. ಕಿವಿ, ಕಣ್ಣು, ಮೂಗು ಮತ್ತು ಬಾಯಿ ಇವುಗಳಲ್ಲಿಯೂ ಕೂಡ ಇರುವ ಮಲವು ಸಹ ವಿಸರ್ಜನೆಯಾಗಬೇಕು. 3. ಹಲ್ಲುಗಳನ್ನು ಶುಚಿಗೊಳ್ಳಿಸುವುದು ದಂತಧಾವನ: ಹಲ್ಲುಗಳನ್ನ ಶುಚಿಗೊಳ್ಳಿಸುವುದು. ಪೇಸ್ಟ್, ಟೂಥ್ ಬ್ರಷ್ ಬಳಕೆಗಿಂತಗಿಂತ ಆಯುರ್ವೇದದಲ್ಲಿ ಮರಗಳ ಕಡ್ಡಿಯ ಬಳಕೆಯನ್ನು ಹೇಳಲಾಗಿದೆ. ಬೇವಿನ ಮರದ ಕಡ್ಡಿ ಅತಿ ಸುಲಭವಾಗಿ ಹಾಗೂ ಕಹಿ ಮತ್ತು ತಿಕ್ತ ರಸ ಹೊಂದಿರುವುದರಿಂದ ಹಲ್ಲುಗಳ ಶುಚಿ ಹಾಗೂ ಹೊಳಪು ಬರುತ್ತದೆ. ಹಲ್ಲುಗಳ ಸ್ವಚ್ಛತೆಯೊಂದಿಗೆ ನಾಲಿಗೆಯ ಹಾಗೂ ಬಾಯಿಯ ಸ್ವಚ್ಛವಾಗುತ್ತದೆ. 4. ಅಂಜನ ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳುವುದು. ಇದು ಕೇವಲ ಶೃಂಗಾರಕ್ಕೆ ಮಾತ್ರ ಸೀಮಿತವಲ್ಲ. ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳುವುದರಿಂದ ಕಣ್ಣಲ್ಲಿ ಶೇಖರಣೆಗೊಂಡ ಕಫದ ಲೇಪನ ಮತ್ತು ದೂಳಿನ ಕಣಗಳಿಂದ ಕಣಗಳಿಂದ ಕಣ್ಣನ್ನು ರಕ್ಷಿಸುತ್ತದೆ. ಕಾಡಿಗೆ ಹಚ್ಚುವಾಗ ಕಣ್ಣಿನ ಒಳಗಡೆ ಇಂದ ಹೊರಗಡೆ ಅಂದರೆ (ಇನ್ನರ್ ಕಾಂಥಸ್ to ಔಟರ್ ಕಾಂಥಸ್) ಹಚ್ಚಬೇಕು. ಇದರಿಂದ ಕಣ್ಣಿನ ಸೂಕ್ಷ್ಮ ದೃಷ್ಠಿ ಹೆಚ್ಚುತ್ತದೆ. 5. ನಸ್ಯ ಔಷಧೀಯ ಗುಣಗಳುಳ್ಳ ತೈಲವನ್ನು ಅಥವಾ ಕಷಾಯವನ್ನ ಮೂಗಿನ ಹೊಳ್ಳೆಗಳ ಮೂಲಕ ದೇಹದೊಳಗೆ ಆರೋಗ್ಯ ಕಾಪಾಡಿಕೊಳ್ಳುವ ಪರಿ. ಇದು ಮುಖ್ಯವಾಗಿ ಭುಜ ಕುತ್ತಿಗೆ ಮತ್ತು ಕಣ್ಣು ಕಿವಿ ತಲೆಗೆ ಸಂಬಂಧ ಪಟ್ಟ ರೋಗಕ್ಕೆ ರಾಮಬಾಣವಾಗಿದೆ. ಮೂಗಿನ ಹೊಳ್ಳೆಗಳ ಮೂಲಕ ನೀಡಿದ ಔಷಧ ನೇರ ಮೆದುಳಿಗೆ ತಲುಪುತ್ತದೆ ಇದರಿಂದ ನಸ್ಯ ಕರ್ಮವು ಊರ್ಧ್ವ ಅಂಗಗಳ ರೋಗದಲ್ಲಿ ಉಪಕಾರಿಯಾಗಿದೆ. ದಿನ ನಿತ್ಯ ನಸ್ಯ ಕರ್ಮ ಮಾಡಿಕೊಳ್ಳಲು ಅನು ತೈಲ ಬಳಸಬೇಕು. ತಲೆ ಕೆಳಗೆ ಮಾಡಿಕೊಂಡು ಮೂಗಿನ ಹೊಳ್ಳೆಗಳ ಮುಖಾಂತರ ತೈಲ ಅಥವಾ ಕಷಾಯ ಹಾಕಬೇಕು. ತೈಲ ಗಂಟಲಿನಲ್ಲಿ ಬಂದಾಗ ಉಗುಳಬೇಕು. ಹೀಗೆ ಮಾಡುವುದರಿಂದ ಬಿಳಿ ಕೂದಲು, ಕೂದಲು ಉದುರುವಿಕೆ, ಗಂಟಲಿನ ಸಮಸ್ಯೆ ಭುಜದ ನೋವು ಕುತ್ತಿಗೆ ನೋವು ಮಾಯವಾಗುತ್ತದೆ. 6. ಕವಲ ಮತ್ತು ಗಂಡೂಷ ಬಾಯಿಯಲ್ಲಿ ಔಷಧೀಯ ಕಷಾಯ ಅಥವಾ ಎಣ್ಣೆ ಅಥವಾ ಕಲ್ಕ ಅಂದರೆ ಔಷಧೀಯ ಪೇಸ್ಟ್ ಅನ್ನು ಬಾಯಿಯಲ್ಲಿಹಾಕಿ ಮುಕ್ಕಳಿಸಬೇಕು. ಇದರಿಂದ ಬಾಯಿಯಿಂದ ಹೊರಡುವ ದುರ್ನಾತ ಮತ್ತು ಹಲ್ಲುಗಳ ಮಧ್ಯೆ ಸಿಲುಕಿದ ಆಹಾರ ಹೊರಗೆ ಬರುತ್ತದೆ. ಮತ್ತು ಬಾಯಲ್ಲಿ ಹುಣ್ಣು ಆಗುವುದಿಲ್ಲ. 7. ಧೂಮಪಾನ ಹೆಸರು ನೋಡಿ ಏನಪ್ಪಾ ಇದು ಎಂದು ಆಶ್ಚರ್ಯ ಪಡಬೇಡಿ. ಇಲ್ಲಿ ಧೂಮಪಾನ ಅಂದರೆ ಗಿಡದ ಮರದ ಎಲೆ ಬಳಸಿ ನಿಯಮಿತವಾಗಿ ಸೇವಿಸುವುದು. ಇದರಲ್ಲಿ ಔಷಧೀಯ ಗುಣ ಇರುವ ವಸ್ತುಗಳ ಬಳಕೆ ಇರುತ್ತದೆ. ಇದರಿಂದ ಜತ್ರು ಊರ್ಧ್ವ ಅಂಗಾಂಗಳ ರೋಗಕ್ಕೆ ಪರಿಹಾರ ಸಿಗುತ್ತದೆ. 8. ತಾಂಬೂಲ ಸೇವನೆ ಇದು ಆಹಾರದ ರುಚಿ ಪ್ರರಿಗ್ರಹಿಸುವ ನಾಲಿಗೆ ಮೇಲಿರುವ ಟೇಸ್ಟ್ ಬಡ್ಸ್‌ಗಳಿಗೆ ಉತ್ತೇಜನ ನೀಡುತ್ತದೆ. ಬಾಯಿಯಿಂದ ಹೊರಡುವ ದುರ್ನಾತ ಪರಿಹರಿಸುತ್ತದೆ. 9. ಅಭ್ಯಂಗ ಉಗುರು ಬೆಚ್ಚಗಿನ ತೈಲವನ್ನ ಬಳಸಿ ತಲೆಗೆ ಪಾದಗಳಿಗೆ ಕಿವಿಗಳಿಗೆ ಮತ್ತು ದೇಹದ ಇನ್ನಿತರ ಭಾಗದಲ್ಲಿ ಹಚ್ಚುವುದರಿಂದ ವಾತ ಶಮನವಾಗಿ ದೇಹದ ಮಾಂಸ ಖಂಡಗಳಿಗೆ ಬಲ ಸದೃಢ ಮತ್ತು ದೇಹಕ್ಕೆ ಹೊಳಪು ಬರುತ್ತದೆ. ಕಣ್ಣಿಗೆ, ತಲೆಗೆ ಮತ್ತು ಮನಸಿಗೆ ಆಹ್ಲಾದವಾಗುವುದರಿಂದ ನಿದ್ದೆ ಹಾಗೂ ಕಣ್ಣಿನ ದೃಷ್ಠಿ ಚೆನ್ನಾಗಿ ಆಗುತ್ತದೆ. ಕೂದಲು ಉದುರುವುದು ಕಡಿಮೆಯಾಗುತ್ತದೆ. 10. ವ್ಯಾಯಾಮ ಬರಿಯ ದೇಹ ದಂಡಿಸಲು ಅಷ್ಟೇ ಅಲ್ಲ ದೇಹದ ಒಳಗಿರುವ ಕೆಲವೊಂದು ಫ್ರೀ ರಾಡಿಕಲ್ಸ್‌ಗಳನ್ನು ಹೊರ ಹಾಕಲು ಮತ್ತು ಸೂಕ್ಷ್ಮ ಮಲಗಳನ್ನು ಬೆವರಿನ ರಂಧ್ರಗಳ ಮೂಲಕ ಹೊರಹಾಕಲು ಉಪಯುಕ್ತವಾಗಿದೆ. ಒಬ್ಬ ವ್ಯಕ್ತಿ ಕನಿಷ್ಟ ದಿನದಲ್ಲಿ 30-40 ನಿಮಿಷ ವ್ಯಾಯಾಮ ಮಾಡಬೇಕು ದೇಹದ ತೂಕ ಇಳಿಸಲು ಅಥವಾ ಹೆಚ್ಚಿಸಲು ಮಾತ್ರವಲ್ಲ ದೇಹದ ಫ್ಲೆಕ್ಸಿಬಲಿಟಿ ಕೂಡ ಹೆಚ್ಚುತ್ತದೆ. 11. ಉದ್ವರ್ತನ ಔಷಧೀಯ ಚೂರ್ಣಗಳಿಂದ ಬಾಹ್ಯ ದೇಹವನ್ನ ಶುಚಿ ಮಾಡುವುದು. ಇದು ಮುಖ್ಯವಾಗಿ ಅತಿಯಾಗಿ ಶೇಖರಣೆಗೊಂಡ ಫಾಟ್ ಅಂದರೆ ಮೇದಸ್ ಅನ್ನು ಮತ್ತೆ ಕಫವನ್ನು ಕರಗಿಸಿ ದೇಹದ ಸ್ಥಿರತೆ ಮೈ ಕಟ್ಟು ಮತ್ತು ಉತ್ತಮ ಸ್ಕಿನ್ ಟೋನ್ ಅನ್ನು ನೀಡುತ್ತದೆ. 12. ಸ್ನಾನ ಸ್ನಾನದಿಂದ ದೇಹಕ್ಕೆ ಉತ್ಸಾಹ , ಹಸಿವಿನ ಶಕ್ತಿ ದೇಹದ ಬಲ ಮತ್ತು ವೃಷ್ಯ ವೃದ್ಧಿಸುತ್ತದೆ. ತಲೆ ಸ್ನಾನಕ್ಕೆ ಯವಾಗ್ಲೂ ರೂಂ ಟೆಂಪರೇಚರ್ ಇರುವ ನೀರನ್ನು ಬಳಸಬೇಕು. ಬಿಸಿ ನೀರು ದೇಹದ ಭಾಗಕ್ಕೆ ಬಳಿಸಬೇಕು. ಸ್ನಾನ ಮಾಡುವುದರಿಂದ ತುರಿಕೆ ದುರ್ವಾಸನೆ ಬೆವರು ಸುಸ್ತು ಬಾಯಾರಿಕೆ ನಿವಾರಣೆಯಾಗುತ್ತದೆ. 13. ಭೋಜನ ಬರಿಯ ಆಹಾರ ಸೇವನೆ ಮಾತ್ರವಲ್ಲದೆ ಯಾವ ಪ್ರಮಾಣದಲ್ಲಿ ಯಾವ ರೀತಿ, ಎಲ್ಲಿ ಹೇಗೆ ಮತ್ತು ಯಾವ ಸ್ಥಳದಲ್ಲಿ ಆಹಾರ ಸೇವಿಸಬೇಕು ಎಂಬ ಅರಿವಿರಬೇಕು. ಒಳ್ಳೆ ರೀತಿಯ ಯೋಚನೆಗಳ ಮೌನದಿಂದ ಆಹಾರ ಸೇವನೆ ಮತ್ತು ಆಹಾರಾದ ಬಗ್ಗೆ ಯೋಚಿಸಬೇಕು.ಮನ ಮತ್ತು ಬುದ್ಧಿಗೆ , ದೇಹಕ್ಕೆ ಪೋಷಣೆ ನೀಡುವ ಆಹಾರ ಸತ್ವಯುಕ್ತ ಇರಬೇಕು. 14. ಸದ್ ವೃತ್ತ ಪರಿಪಾಲನ ಸದಾ ಒಳ್ಳೆಯ ವಿಚಾರ ಕೇಳುತ್ತಾ ಹೇಳುತ್ತಾ ಇರುವ ಕೆಲಸದ ಬಗ್ಗೆ ಒಳ್ಳೆಯ ಅಭಿಪ್ರಾಯ ಬೆಳಿಸಿಕೊಳ್ಳುತ್ತಾ ಇರಬೇಕು.ಒಳ್ಳೆಯ ಗುಣಗಳ ಅಳವಡಿಸಿಕೊಳ್ಳತ್ತ ಕೆಟ್ಟ ಗುಣಗಳ ಬಿಟ್ಟುಬಿಡಬೇಕು. ಲೇಖಕರು: ಡಾ. ಸೌಜನ್ಯ. ಪ್ರತಿನಿಧಿ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation Ayurveda Health Tips: Life Style ಬದಲಾದ್ರೆ ಕೂದಲು ಉದುರುವಿಕೆ ನಿಲ್ಲುತ್ತೆ, ಮುಖದ ಕಾಂತಿ ಹೆಚ್ಚುತ್ತೆ ಆರೋಗ್ಯಕ್ಕೆ ಆಯುರ್ವೇದ: ಊಟ ಮಾಡಿದ ತಕ್ಷಣ ಈ ಕೆಲಸಗಳನ್ನು ಮಾಡಲೇಬೇಡಿ