22 lakh cases pending in Karnataka Courtsಸಾಂದರ್ಭಿಕ ಚಿತ್ರ

ಬೆಂಗಳೂರು, ಮಾರ್ಚ್‌ 29: ಕರ್ನಾಟಕದ ಅಧೀನ ನ್ಯಾಯಾಲಯಗಳಲ್ಲಿ (Karnataka Courts) ಒಟ್ಟು 22,61,280 ಪ್ರಕರಣಗಳು (Cases) ಬಾಕಿ ಇದ್ದು, ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ (Karnataka) ಆರನೇ ಸ್ಥಾನದಲ್ಲಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ 3,31,468 ಪ್ರಕರಣಗಳು ಬಾಕಿಯಿದ್ದು, ಇದು ಭಾರತದ ಏಳನೇ ಅತಿ ಹೆಚ್ಚು ಪ್ರಕರಣ ಬಾಕಿ ಇರುವ ನ್ಯಾಯಾಲಯವಾಗಿದೆ.

ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲೋಕಸಭೆಯಲ್ಲಿ ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಅರ್ಜುನ್‌ ರಾಮ್‌ ಮೇಘವಾಲ್‌ ಉತ್ತರ ನೀಡಿದರು.

ರಾಷ್ಟ್ರೀಯ ಮಟ್ಟದಲ್ಲಿ ಅಧೀನ ನ್ಯಾಯಾಲಯಗಳಲ್ಲಿ ಒಟ್ಟು 4.86 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ದೇಶದ ಹೈಕೋರ್ಟ್‌ಗಳಲ್ಲಿ ಒಟ್ಟು 63,95,572 ಪ್ರಕರಣಗಳು ಬಾಕಿಯಿದ್ದು, ಸುಪ್ರೀಂ ಕೋರ್ಟ್‌ನಲ್ಲಿ 92,782 ಪ್ರಕರಣಗಳು ಬಾಕಿ ಇವೆ.

ಯಾವ ರಾಜ್ಯದಲ್ಲಿ ಎಷ್ಟು ಪ್ರಕರಣಗಳು ಬಾಕಿ?

ಉತ್ತರ ಪ್ರದೇಶ ರಾಜ್ಯದಲ್ಲಿನ ಅಧಿನ ನ್ಯಾಯಾಲಯಗಳಲ್ಲಿ1.19 ಕೋಟಿಗೂ ಹೆಚ್ಚು ಬಾಕಿ ಪ್ರಕರಣಗಳು ಬಾಕಿ ಇದ್ದು, ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 59.61 ಲಕ್ಷ, ಪಶ್ಚಿಮ ಬಂಗಾಳದಲ್ಲಿ 39.22 ಲಕ್ಷ, ಬಿಹಾರದಲ್ಲಿ 37.09 ಲಕ್ಷ ಮತ್ತು ರಾಜಸ್ಥಾನದಲ್ಲಿ 25.96 ಲಕ್ಷ ಇವು ಕರ್ನಾಟಕಕ್ಕಿಂತ ಹೆಚ್ಚಿನ ಬಾಕಿ ಪ್ರಕರಣಗಳನ್ನು ಹೊಂದಿವೆ.  

ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ 2023ರಿಂದ 2027ರವರೆಗೆ ಜಾರಿಯಲ್ಲಿರುವ e-Courts Mission Mode Project (Phase III) ಯೋಜನೆಯನ್ನು ಪ್ರಮುಖವಾಗಿ ಕೈಗೊಂಡಿದೆ. ಇದಕ್ಕಾಗಿ 7,210 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಈ ಯೋಜನೆಯಡಿ 660 ಕೋಟಿಗೂ ಹೆಚ್ಚು ಪುಟಗಳ ನ್ಯಾಯಾಲಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 2,444 eSewa ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 3.97 ಕೋಟಿಗೂ ಹೆಚ್ಚು ವಿಚಾರಣೆಗಳು ವಿಡಿಯೋ ಸಂವಾದದ ಮೂಲಕ ನಡೆಸಲಾಗಿದೆ. ಸುಮಾರು 1.07 ಕೋಟಿ ಪ್ರಕರಣಗಳನ್ನು e-Filing ಮೂಲಕ ದಾಖಲಿಸಲಾಗಿದೆ.

ಇದಲ್ಲದೆ, 11 ಹೈಕೋರ್ಟ್‌ಗಳಲ್ಲಿ ವಿಚಾರಣೆಗಳ ನೇರ ಪ್ರಸಾರವನ್ನು (Live Streaming) ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಕೇಸುಗಳ ವಿಶ್ಲೇಷಣೆ ಮತ್ತು ಮುನ್ಸೂಚನೆಗಾಗಿ ಕೃತಕ ಬುದ್ಧಿಮತ್ತೆ (AI) ಹಾಗೂ Optical Character Recognition (OCR) ತಂತ್ರಜ್ಞಾನಗಳನ್ನು ಬಳಸುವ ಯೋಜನೆ ಇದೆ ಎಂದು ಸಚಿವರು ಹೇಳಿದರು.

ನ್ಯಾಯಾಧೀಶರ ನೇಮಕಾತಿಯ ಬಗ್ಗೆ ಮಾತನಾಡಿದ ಅವರು, ಮೇ 2014ರಿಂದ ಫೆಬ್ರವರಿ 2026ರವರೆಗೆ ಸುಪ್ರೀಂ ಕೋರ್ಟ್‌ಗೆ 72 ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ. ಇದೇ ಅವಧಿಯಲ್ಲಿ ಹೈಕೋರ್ಟ್‌ಗಳಿಗೆ 1,164 ಹೊಸ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದ್ದು, 820 ಹೆಚ್ಚುವರಿ ನ್ಯಾಯಾಧೀಶರನ್ನು ಕಾಯಂ ಮಾಡಲಾಗಿದೆ. ಹೈಕೋರ್ಟ್ ನ್ಯಾಯಾಧೀಶರ ಮಂಜೂರಾದ ಸಂಖ್ಯೆ 2014ರಲ್ಲಿ 906 ಇಂದ 1,122ಕ್ಕೆ ಏರಿಕೆಯಾಗಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *