ನವದೆಹಲಿ, ಮಾರ್ಚ್ 29: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದ (West Asia War) ಉಂಟಾಗುತ್ತಿರುವ ಸವಾಲುಗಳನ್ನು ಎದುರಿಸಲು ಎಲ್ಲ ನಾಗರಿಕರು ಒಗ್ಗೂಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಕರೆ ಕೊಟ್ಟರು. 132ನೇ ಮನ್ ಕಿ ಬಾತ್ ಸಂಚಿಕೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಯುದ್ಧ ನಡೆಯುತ್ತಿರುವ ಪ್ರದೇಶವು ನಮ್ಮ ಇಂಧನ ಅಗತ್ಯಗಳ ಪ್ರಮುಖ ಕೇಂದ್ರವಾಗಿದೆ. ಪರಿಣಾಮವಾಗಿ, ಪ್ರಪಂಚದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಗೆ ಸಂಬಂಧಿಸಿದಂತೆ ಬಿಕ್ಕಟ್ಟಿನ ಪರಿಸ್ಥಿತಿ ವೃಧ್ಧಿಸುತ್ತಿದೆ ಎಂದು ತಿಳಿಸಿದರು. ನಮ್ಮ ಜಾಗತಿಕ ರಾಜತಾಂತ್ರಿಕ ಸಂಬಂಧಗಳು, ವಿವಿಧ ರಾಷ್ಟ್ರಗಳಿಂದ ನಾವು ಪಡೆಯುತ್ತಿರುವ ಸಹಕಾರ ಮತ್ತು ಕಳೆದ ದಶಕದಲ್ಲಿ ನಾವು ನಿರ್ಮಿಸಿರುವ ರಾಷ್ಟ್ರೀಯ ಸಾಮರ್ಥ್ಯದಿಂದಾಗಿ, ಭಾರತವು ಈ ಸಂದರ್ಭಗಳನ್ನು ಅತ್ಯಂತ ದಿಟ್ಟತನದಿಂದ ಎದುರಿಸುತ್ತಿದೆ ಎಂದು ಹೇಳಿದರು. ನಿಸ್ಸಂದೇಹವಾಗಿ ಇದೊಂದು ಸವಾಲಿನ ಸಮಯ. ನಾನು ಮತ್ತೊಮ್ಮೆ ಎಲ್ಲಾ ದೇಶಬಾಂಧವರಲ್ಲಿ ಈ ಬಿಕ್ಕಟ್ಟನ್ನು ಜಯಿಸಲು ಒಗ್ಗಟ್ಟಿನಿಂದ ಜೊತೆಗೂಡಬೇಕೆಂದು ಆಗ್ರಹಿಸುತ್ತೇನೆ. ಈ ವಿಷಯವನ್ನು ಕೂಡ ರಾಜಕೀಯಗೊಳಿಸಲು ಪ್ರಯತ್ನಿಸುತ್ತಿರುವವರು ಅದನ್ನು ನಿಲ್ಲಿಸಬೇಕು ಎಂದರು. ಈ ವಿಷಯವು ಈ ದೇಶದ 140 ಕೋಟಿ ನಾಗರಿಕರ ಹಿತಾಸಕ್ತಿಗಳಿಗೆ ಸಂಬಂಧಿಸಿದ್ದಾಗಿದೆ, ಇಂಥ ಸಂದರ್ಭದಲ್ಲಿ ಸ್ವಾರ್ಥಪರ ರಾಜಕೀಯ ಸಲ್ಲದು. ಇಂತಹ ಸಮಯದಲ್ಲಿ, ವದಂತಿಗಳನ್ನು ಹರಡುತ್ತಿರುವವರು ರಾಷ್ಟ್ರಕ್ಕೆ ಅಪಾರ ಹಾನಿಯನ್ನುಂಟುಮಾಡುತ್ತಿದ್ದಾರೆ. ಎಲ್ಲಾ ನಾಗರಿಕರು ಜಾಗರೂಕರಾಗಿರಿ ಮತ್ತು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು. ದಯವಿಟ್ಟು ಸರ್ಕಾರವು ನಿಮಗೆ ನಿರಂತರವಾಗಿ ಒದಗಿಸುತ್ತಿರುವ ಮಾಹಿತಿಯ ಮೇಲೆ ನಂಬಿಕೆಯಿರಿಸಿ ಮತ್ತು ಆ ಅಧಿಕೃತ ಮಾಹಿತಿಯನ್ನಾಧಿರಿಸಿಯೇ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿ. ಹಿಂದೆಂದಿನಂತೆ, ಈ ಬಾರಿಯೂ ಸಹ 140 ಕೋಟಿ ದೇಶವಾಸಿಗಳ ಸಾಮೂಹಿಕ ಶಕ್ತಿಯ ಮೂಲಕ ಈ ಹಿಂದೆ ನಾವು ಬಿಕ್ಕಟ್ಟುಗಳನ್ನು ಜಯಿಸಿದಂತೆಯೇ, ಈ ಕಠಿಣ ಪರಿಸ್ಥಿತಿಯಿಂದಲೂ ಯಶಸ್ವಿಯಾಗಿ ಹೊರಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಸ್ತುತ, ಕಳೆದ ಒಂದು ತಿಂಗಳಿನಿಂದ ನಮ್ಮ ನೆರೆಹೊರೆಯಲ್ಲಿ ಭೀಕರ ಯುದ್ಧ ನಡೆಯುತ್ತಿದೆ. ನಮ್ಮ ಲಕ್ಷಾಂತರ ಕುಟುಂಬಗಳ ಸಂಬಂಧಿಕರು ಈ ದೇಶಗಳಲ್ಲಿ – ವಿಶೇಷವಾಗಿ ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ, ಕೆಲಸ ಮಾಡುತ್ತಿದ್ದಾರೆ. ಅವರು ಅಲ್ಲಿ ವಾಸಿಸುವ ಹತ್ತು ದಶಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಸಾಧ್ಯವಿರುವ ಎಲ್ಲ ರೀತಿಯ ಸಹಾಯವನ್ನು ನೀಡುತ್ತಿದ್ದಾರೆ. ಹಾಗಾಗಿ ನಾನು ಗಲ್ಫ್ ರಾಷ್ಟ್ರಗಳಿಗೆ ತುಂಬಾ ಕೃತಜ್ಞನಾಗಿದ್ದೇನೆ ಎಂದರು. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಒಂದು ನಿಲ್ದಾಣ ಒಂದು ಉತ್ಪನ್ನ: ಭಾರತದ ಸ್ಥಳೀಯ ಪ್ರತಿಭೆಗಳಿಗೆ ಒಂದು ವೇದಿಕೆ ಐಎಸ್ಐ ಜೊತೆ ನಂಟು ಹೊಂದಿದ್ದ ಉಗ್ರ ದೆಹಲಿಯಲ್ಲಿ ಬಂಧನ