Upanishad Stories: Narada Maharshi Seeking Bhuma Vidya from Sanatkumaraಮಹರ್ಷಿ ನಾರದ

ತ್ರಿಲೋಕಸಂಚಾರಿಯಾದ ನಾರದ ಮಹರ್ಷಿಗಳು ಒಮ್ಮೆ ವೇದಾಂತ ವಿಜ್ಞಾನದ ವಿಷಯವಾಗಿ ಚರ್ಚೆ ಮಾಡುತ್ತಿದ್ದ ಋಷಿಗಳ ಗುಂಪೊಂದನ್ನು ಕಂಡು, ತಮಗೂ ವೇದಾಂತದಲ್ಲಿ ಉಪದಿಷ್ಟವಾದ ಜ್ಞಾನವನ್ನು ನೀಡಬೇಕೆಂದು ಕೇಳಿದರು. ನಾರದರಂತಹ ಮೇಧಾವಿ ಶಿಷ್ಯನಿಗೆ ಉಪದೇಶಿಸಲು ತಾವು ಸಮರ್ಥರಲ್ಲವೆಂದು ಮತ್ತು ನಾರದರ ಜ್ಞಾನದಾಹವನ್ನು ಪರಿಹಾರ ಮಾಡಲು ಸನತ್ಕುಮಾರರೇ ಯೋಗ್ಯರೆಂದು ಋಷಿಗಳು ತಿಳಿಸಿದರು.

ತಕ್ಷಣವೇ ನಾರದರು ವಿಧಿವತ್ತಾಗಿ ಸನತ್ಕುಮಾರರ ಬಳಿ ಬಂದು, “ದಯಮಾಡಿ ನನ್ನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ, ವಿದ್ಯಾಭಿಕ್ಷೆಯನ್ನು ನೀಡುವಂಥವರಾಗಿ”, ಎಂದು ತಮ್ಮ ಬೇಡಿಕೆಯನ್ನು ಮುಂದಿಟ್ಟರು. ಸನತ್ಕುಮಾರರು ತತಕ್ಷಣಕ್ಕೆ ಉಪದೇಶ ನೀಡದೆ, ‘ನಿನಗೆ ಉಪದೇಶಿಸುವ ಮೊದಲು ನಿನ್ನ ಜ್ಞಾನದ ಹಂತವನ್ನು ತಿಳಿಯಬಯಸುವೆ. ಹಾಗಾಗಿ, ನಿನಗೆ ಯಾವ ಯಾವ ವಿಷಯಗಳಲ್ಲಿ ಪರಿಣತಿ ಇರುವುದೋ ಅವೆಲ್ಲವನ್ನೂ ಪಟ್ಟಿಮಾಡಿಕೊಂಡು ಬಾ. ಅದರ ಆಧಾರದ ಮೇಲೆ, ನಿನ್ನ ಮುಂದಿನ ವ್ಯಾಸಂಗವನ್ನು ಯೋಚಿಸೋಣ”, ಎಂದರು.

ನಾರದರು ತಮಗೆ ತಿಳಿದಿದ್ದ ಪಾಂಡಿತ್ಯ ಹೊಂದಿದ್ದ ಎಲ್ಲ ವಿಷಯಗಳ ಪಟ್ಟಿಯನ್ನು ಮಾಡಿಕೊಂಡು ಮರುದಿನ ಸನತ್ಕುಮಾರರ ಬಳಿ ಬರುತ್ತಾರೆ. ‘ನೀವು ತಿಳಿಸಿದಂತೆ ಸಿದ್ಧನಾಗಿ ಬಂದಿದ್ದೇನೆ. ದಯಮಾಡಿ ವಿದ್ಯೆಯನ್ನು ಕರುಣಿಸಿ” ಎಂದು ಕೇಳುತ್ತಾರೆ. ಸನತ್ಕುಮಾರರು, “ನೀನು ಯಾವ ಯಾವ ವಿದ್ಯಾಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವೆ? ಎಂದು ಪುನಃ ಪ್ರಶ್ನಿಸಿದರು.

ಅದಕ್ಕೆ ಉತ್ತರವಾಗಿ ನಾರದರು, “ಗುರುವರ್ಯ! ನನಗೆ ಹೆಚ್ಚೇನು ತಿಳಿಯದು. ಚತುರ್ವೇದಗಳಾದ ಋಕ್, ಯಜುಸ್, ಸಾಮ ಮತ್ತು ಅಥರ್ವಗಳನ್ನು ಅಭ್ಯಾಸಮಾಡಿರುವೆ. ವೇದಾಂಗಾಗಳಾದ ನಿರುಕ್ತ, ಜ್ಯೋತಿಷ, ವ್ಯಾಕರಣ, ಕಲ್ಪ ಶಿಕ್ಷಾ, ಛಂದಸ್ಸು ಶಾಸ್ತ್ರವನ್ನು ಬಲ್ಲವನಾಗಿದ್ದೇನೆ. ಗಂಧರ್ವ ವಿದ್ಯೆಗಳಾದ ಗಾಯನ, ನೃತ್ಯ, ಕಲೆ ಮುಂತಾದವುಗಳಲ್ಲಿ ಪರಿಣಿತಿ ಇದೆ. ವೈಜ್ಞಾನಿಕ ಕ್ಷೇತ್ರವಾದ ಪಂಚಮಹಾಭೂತ ವಿದ್ಯೆ, ತರ್ಕಬದ್ಧವಾದ ನ್ಯಾಯಶಾಸ್ತ್ರ, ಜೀವನಕೌಶಲಕ್ಕೆ ನೀತಿಶಾಸ್ತ್ರ ವೈದ್ಯಕೀಯ ಕ್ಷೇತ್ರದ ಸರ್ಪವಿದ್ಯೆ (ವಿಷವನ್ನು ತೆಗೆಯುವ ವಿದ್ಯೆ) ನಿಧಿಶೋಧನ ವಿದ್ಯೆ, ಪುರಾಣ, ಇತಿಹಾಸಗಳ ವಿಷಯವನ್ನು ತಿಳಿದಿದ್ದೇನೆ  ಎಂದು ತಿಳಿಸುತ್ತಾರೆ.

ಸನತ್ಕುಮಾರರು, ‘ಇಷ್ಟೆಲ್ಲ ತಿಳಿದ ನೀನು, ಇನ್ನಾವ ಜ್ಞಾನವನ್ನು ಅರಸಿ ಬಂದಿರುವೆ? ಎಂದು ಕೇಳಲು, ನಾರದರು, ಇಷ್ಟೆಲ್ಲ ತಿಳಿದಿದ್ದರೂ ನನ್ನ ಶೋಕವು ಪರಿಪೂರ್ಣವಾಗಿ ಹೋಗಿ ನನ್ನ ಪೂರ್ಣತೆಯನ್ನು ತಿಳಿಯದೆ, ನನಗಾಗುತ್ತಿರುವ ಮಾನಸಿಕ ಬೇನೆಯ ಪ್ರಮಾಣವನ್ನು ವಿವರಿಸಲಾರೆ.

ಇದನ್ನೂ ಓದಿ: ಉಪನಿಷತ್ತಿನ ಕಥೆಗಳು: ರಾಜರ್ಷಿಯ ವಿದ್ಯಾಗರ್ವ ಭಂಗ ಮಾಡಿದ ರಾಜ

ಹಲವಾರು ಋಷಿಸಮೂಹಗಳಲ್ಲಿ ಕೇಳಿರುವ ವಿಷಯವೇನೆಂದರೆ, ತರತಿ ಶೋಕಮ್ ಅತ್ಯವಿತ್. ಹಾಗಾಗಿ, ಶೋಕದಿಂದ ಆತ್ಯಂತಿಕವಾಗಿ ಪಾರುಮಾಡುವ ಆತ್ಮಜ್ಞಾನವನ್ನು ಅರಸಿ ನಿಮ್ಮಪಾದಾರವಿಂದಗಳಿಗೆ ಶರಣಾಗಿದ್ದೇನೆ. ಕೃಪೆಮಾಡಿ ನನಗೆ ಆತ್ಮವಿದ್ಯೆಯನ್ನು ತಿಳಿಸಿಕೊಡಬೇಕು’, ಎಂದು ಪ್ರಾರ್ಥಿಸಿದರು.

 ಬ್ರಹ್ಮವಿದ್ಯೆಗೆ ಬೇಕಾದ ಅಧಿಕಾರಿತ್ವ ಗುಣಗಳು ನಾರಾದರಲ್ಲಿರುವುದನ್ನು ಗಮನಿಸಿ, ಸನತ್ಕುಮಾರರು ನಾರಾದರನ್ನು ಶಿಷ್ಯರನ್ನಾಗಿ ಸ್ವೀಕರಿಸುತ್ತಾರೆ ಹಾಗೂ ತಮ್ಮದೇ ಆದ ರೀತಿಯಲ್ಲಿ ಬ್ರಹ್ಮವನ್ನು ತಿಳಿಸುವುದಕ್ಕೆ ಮುಂದಾಗುತ್ತಾರೆ.

ಸನತ್ಯುಮಾರರು ನಾರದರನ್ನುದ್ದೇಶಿಸಿ, ‘ಹೇ ನಾರದ! ನೀನು ತಿಳಿದಿರುವ ವಿಷಯಗಳೆಲ್ಲವೂ ಮಹತ್ತರವಾದವುಗಳೇ. ಆದರೆ ಅವೆಲ್ಲವೂ ಕೇವಲ ನಾಮವಷ್ಟೇ (ಶಬ್ಬಜಾಲ ಅಪರಾ ವಿದ್ಯೆ). ಈ ಶಬ್ಬಗಳಿಂದ ಆನಂತತೆಯನ್ನು ಗಳಿಸಲುಸಾಧ್ಯ. ನಾಮಕ್ಕಿಂತಲು ವ್ಯಾಪ್ತವಾದ ಮತ್ತು ಸೂಕ್ಷ್ಮವಾದ ವಿಷಯವನ್ನು ತಿಳಿಯಬೇಕು”, ಎಂದು ಉಪದೇಶಿಸುತ್ತಾರೆ.

ನಾರದ ಮತ್ತು ಸನತ್ಯುಮಾರರ ಸಂವಾದ ‘ವಾಕ್, ‘ಮನಸ್ಸು’, ‘ಸಂಕಲ್ಪ’ ‘ಚಿತ್ತೆ’, ಮುಂತಾದ ಸೂಕ್ಷತರ, ಸೂಕ್ಷ್ಮತಮ ವಿಷಯಗಳನ್ನು ಭೇದಿಸಿ ‘ಪ್ರಾಣ’ಕ್ಕೆ ಬಂದು ನಿಲ್ಲುತ್ತದೆ. 16 ಹಂತಗಳಲ್ಲಿ ವಿವರಿಸಿ, ಕೊನೆಯಲ್ಲಿ ಪ್ರಾಣವನ್ನೂ ಮೀರಿದ, ನಿತ್ಯವಾದ ಮತ್ತು ಪರಿಪೂರ್ಣವಾದ ತತ್ತ್ವವೇ ಬ್ರಹ್ಮವಸ್ತುವೆಂದು ಉಪದೇಶಿಸುತ್ತಾರೆ.

‘ಬ್ರಹ್ಮವೆಂದರೆ ಅನಂತ ಆನಂದ, ‘ಯೋ ವೈ ಭೂಮಾ ತತ್ ಸುಖಂ ನ ಅಲ್ಲೇ ಸುಖಮಸ್ತಿ’ ಎಂದು ಬ್ರಹ್ಮವಸ್ತುವೊಂದೇ ನಿಜವಾದ ಆನಂದಕ್ಕೆ ಕಾರಣ. ಅಲ್ಪವಾದ ಈ ನಾಮರೂಪಾತ್ಮಕ ಜಗತ್ತಿನಲ್ಲಿ ಸುಖವಿಲ್ಲ ಆ ನಿತ್ಯವಾದ, ನಿರತಿಶಯವಾದ, ಪರಿಪೂರ್ಣವಾದ, ಅನಂತ ಆನಂದ ಸ್ವರೂಪವಾದ ಬ್ರಹ್ಮವೇ ನೀನಾಗಿರುವೆ”, ಎಂದು ಬ್ರಹ್ಮಾತ್ಮಣಕ್ಯ ವಿಚಾರವನ್ನು ಉಪದೇಶಿಸಿದರು. ಇದರಿಂದ ನಾರದರು ತಮ್ಮ ಸ್ವರೂಪವನ್ನು ತಿಳಿದು ಶೋಕಸಾಗರವನ್ನು ದಾಟಿದರು ಎಂಬುದರೊಂದಿಗೆ ಆಖ್ಯಾಯಿಕೆ ಸಮಾಪ್ತಿಯಾಗುತ್ತದೆ.

ಸನತ್ಕುಮಾರರು ಭೂಮಾವಿದ್ಯೆಯನ್ನು (ಸತ್ಯ ವೈ ಭೂಮಾ – Reality is Infinite) ಹಂತಹಂತವಾಗಿ ಹೀಗೆ ತಿಳಿಸುತ್ತಾರೆ.

  1. ಶುಶ್ರೂಷಾ ಸೇವಾ, ಶಮ, ದಮ ಮತ್ತು ಕರ್ಮೋಪಪಾಸನೆಗಳ ಮೂಲಕ ಚಿತ್ತಶುದ್ಧಿ
  2. ಸತ್ಯ ಶ್ರದ್ಧಾ- ಪರಮಸತ್ಯವನ್ನು ಅರಿಯಲು ಗುರು, ಶಾಸ್ತ್ರದ ಮೇಲೆ ಪ್ರಮಾಣಬುದ್ಧಿ-ಶ್ರವಣದ ಅವಶ್ಯಕತೆ
  3. ಸತ್ಯ ಮತಿ – ಗುರುವಾಕ್ಯದಿಂದ ತಿಳಿದ ಆತ್ಮಜ್ಞಾನವನ್ನು ಮನನ, ನಿದಿಧ್ಯಾಸನದಿಂದ ತನ್ನದಾಗಿಸಿಕೊಳ್ಳುವುದು
  4. ಸತ್ಯ ವಿಜ್ಞಾಯ ಹೀಗೆ ತಿಳಿದ ಅಪರೋಕ್ಷ ಜ್ಞಾನವೇ ಮೋಕ್ಷಕ್ಕೆ ಏಕೈಕ ಸಾಧನ.

ಕಥೆಯ ನೀತಿ

  1. ಅಪರಾವಿದ್ಯೆಯ ಮಿತಿ ಮತ್ತು ಅದು ನಮಗೆ ಪರಿಪೂರ್ಣ ಆನಂದವನ್ನು ನೀಡಲಾರದೆಂಬ ಅರಿವು
  2. ಸಕಲವಿದ್ಯಾಪಾರಂಗತರಾಗಿದ್ದರೂ ನಾರದರ ಮನಸ್ಸು ತೃಪ್ತಿಯಿರದೆ, ಶೋಕದಿಂದ ಕೂಡಿದ್ದು ಅದರಿಂದ ಹೊರಬರಲು ಗುರುವಿನ ಬಳಿಸಾರಿ ಆತ್ಯವಿದ್ಯೆಯನ್ನು ಪಡೆದರೆಂದ ಮೇಲೆ, ನಾವು ನಮ್ಮ ಮೋಕ್ಷಸಾಧನೆಗೆ ಗುರುವಿನ ಅವಶ್ಯಕತೆ ಇದೆಯೇ? ಎಂದು ಕೇಳಿದರೆ ಹಾಸ್ಯಾಸ್ಪದವಾಗುತ್ತದೆ.
  3. ನಾರದರಿಗೆ ತಮಗೆ ಯಾವ ವಿಷಯ ತಿಳಿದಿದೆ ಹಾಗೂ ಯಾವ ವಿಷಯ ತಿಳಿದಿಲ್ಲ (what I know and what I don’t know)
  4. ತಿಳಿದ ಸ್ಕೂಲವಾದ ವಿಷಯವನ್ನು ಹಿಡಿದು ತಿಳಿಯಬೇಕಿರುವ ಸೂಕ್ಷ್ಮವಿಷಯದೆಡೆಗೆ ಸನತ್ಕುಮಾರರ ಉಪದೇಶಕ್ರಮ ಮತ್ತು ಹಂತ ಹಂತವಾಗಿ ನಾರದರನ್ನು ಕೈಹಿಡಿದು ತತ್ತ್ವದೆಡೆಗೆ ನಡೆಸಿದ ರೀತಿ ಅನುಪಮವಾದದ್ದು

(ಛಾಂದೋಗ್ಯ ಉಪನಿಷತ್ತು 7ನೇ ಅಧ್ಯಾಯ)

ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *