T20 World Cup 2026: india vs west indies match update and analysisಟೀಂ ಇಂಡಿಯಾ

T20 World Cupನ ಸೂಪರ್ 8 ಹಂತದಲ್ಲಿ ಇಂದು (ಮಾ.1) ಕೋಲ್ಕತ್ತಾದ ಈಡನ್‌ ಗಾರ್ಡನ್‌ (Eden Gardens) ಮೈದಾನದಲ್ಲಿ ಭಾರತ ಮತ್ತು ವೆಸ್ಟ್‌ ಇಂಡೀಸ್‌ (India vs West Indies) ಮುಖಾಮುಖಿಯಾಗಲಿವೆ. ರಾತ್ರಿ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಎರಡೂ ತಂಡಗಳಿಗೆ ಇಂದಿನ ಪಂದ್ಯ ಮಹತ್ವವಾಗಿದೆ. ಸೆಮಿಫೈನಲ್ ಪ್ರವೇಶಿಸುವ ನಾಕ್‌ಔಟ್ ಪಂದ್ಯವಾಗಿದ್ದು, ಎರಡೂ ತಂಡಗಳಿಗೆ ಸಮಾನ ಪಾಯಿಂಟ್ಸ್‌ ಹೊಂದಿವೆ.

ಭಾರತ ತಂಡ ಇತ್ತೀಚಿನ ಉತ್ತಮ ಪ್ರದರ್ಶನದ ಆತ್ಮವಿಶ್ವಾಸದೊಂದಿಗೆ ಮೈದಾನಕ್ಕಿಳಿಯುತ್ತಿದೆ. ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯರಂತಹ ಫಾರ್ಮ್‌ನಲ್ಲಿರುವ ಬ್ಯಾಟ್ಸ್‌ಮನ್‌ಗಳ ಬಲ ಭಾರತಕ್ಕಿದೆ. ಇವರು ಯಾವ ಹಂತದಲ್ಲಾದರೂ ರನ್‌ ಮಳೆಯನ್ನು ಸುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಮತ್ತೊಂದೆಡೆ, ಟಿ20 ಕ್ರಿಕೆಟ್‌ನಲ್ಲಿ ಸ್ಫೋಟಕ ಆಟಕ್ಕಾಗಿ ಪ್ರಸಿದ್ಧವಾಗಿರುವ ವೆಸ್ಟ್ ಇಂಡೀಸ್ ತಂಡ ಪವರ್‌ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬಿಗ್ ಹಿಟರ್‌ಗಳ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿದೆ.

ಇಡನ್ ಗಾರ್ಡನ್ಸ್ ಉತ್ತಮ ಪೇಸ್‌ ಮತ್ತು ಬೌನ್ಸ್‌ ಪಿಚ್ ಆಗಿದ್ದು, ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿರಲಿದೆ. ಹೀಗಾಗಿ, ಮೊದಲು ಬ್ಯಾಟ್‌ ಮಾಡುವ ತಂಡ ಹೈ ಸ್ಕೋರ್‌ ಟಾರ್ಗೆಟ್‌ ನೀಡುವ ಸಾಧ್ಯತೆ ಇದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಮಂಜು (ಡ್ಯೂ) ಬೀಳುವ ಸಾಧ್ಯತೆ ಇರುವುದರಿಂದ ಟಾಸ್ ಮಹತ್ವದ ಪಾತ್ರ ವಹಿಸುತ್ತದೆ. ಅಂತಿಮ ಓವರ್‌ಗಳಲ್ಲಿ ಉತ್ತಮ ರನ್‌ ಕಲೆಹಾಕುವ ತಂಡವೇ ಸೆಮಿಫೈನಲ್ ಪ್ರವೇಶಿಸಲಿದೆ ಎಂದು ವಿಶ್ಲೇಷಿಸಲಾಗಿದೆ.

ಬ್ಯಾಟಿಂಗ್ ವಿಭಾಗದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಮಧ್ಯಕ್ರಮವನ್ನು ಬಲಪಡಿಸುವ ಸಾಧ್ಯತೆ ಇದೆ. ಪಿಚ್ ಸಮತಟ್ಟಾಗಿ ಹೆಚ್ಚಿನ ರನ್ ನೀಡುವಂತಿದ್ದರೆ, ಆಕ್ರಮಣಕಾರಿ ಟಾಪ್ ಆರ್ಡರ್ ಉಳಿಸಿಕೊಂಡು ಹಾರ್ದಿಕ್ ಪಾಂಡ್ಯರನ್ನು ಫಿನಿಷರ್ ಪಾತ್ರದಲ್ಲೇ ಇರಿಸಬಹುದು. ಆದರೆ ಆರಂಭಿಕ ವಿಕೆಟ್‌ಗಳು ಬೇಗ ಬೀಳುವ ಆತಂಕ ಇದ್ದರೆ, ನಂ.3 ಸ್ಥಾನದಲ್ಲಿ ಸ್ಥಿರ ಆಟಗಾರರನ್ನು ಕಳಿಸಿ ಇನ್ನಿಂಗ್ಸ್‌ನ್ನು ಕಟ್ಟಿಕೊಡುವ ತಂತ್ರವನ್ನು ಅನುಸರಿಸಬಹುದು.
ಸೂರ್ಯಕುಮಾರ್ ಯಾದವ್ ಮಧ್ಯ ಓವರ್‌ಗಳಲ್ಲಿ ತನ್ನ ಸ್ವಾಭಾವಿಕ ಆಕ್ರಮಣಕಾರಿ ಆಟ ಮುಂದುವರಿಸಬಹುದು. ಭಾರತ ಮೊದಲು ಬ್ಯಾಟಿಂಗ್ ಮಾಡುತ್ತದೆಯೇ ಅಥವಾ ಡ್ಯೂ ಪರಿಣಾಮದಲ್ಲಿ ಚೇಸ್ ಮಾಡುತ್ತದೆಯೇ ಕಾದುನೋಡಬೇಕು.

ಬೌಲಿಂಗ್ ವಿಭಾಗದಲ್ಲಿ ಪಿಚ್ ಸ್ಪಿನ್‌ಗೆ ಸಹಕಾರ ನೀಡಿದರೆ ಹೆಚ್ಚು ಸ್ಪಿನ್ನರ್‌ಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಆದರೆ, ಡ್ಯೂ ಪರಿಣಾಮ ಹೆಚ್ಚು ಇದ್ದರೆ, ಡೆತ್ ಓವರ್‌ಗಳಲ್ಲಿ ಯಾರ್ಕರ್ ಹಾಗೂ ಸ್ಲೋಯರ್ ಬಾಲ್‌ಗಳನ್ನು ಪರಿಣಾಮಕಾರಿಯಾಗಿ ಹಾಕಬಲ್ಲ ಹೆಚ್ಚುವರಿ ವೇಗದ ಬೌಲರ್‌ ಅನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಪವರ್‌ಪ್ಲೇನಲ್ಲಿ ವಿಕೆಟ್ ಪಡೆಯುವುದು ಹಾಗೂ ಅಂತಿಮ ಐದು ಓವರ್‌ಗಳಲ್ಲಿ ರನ್‌ಗಳನ್ನು ನಿಯಂತ್ರಿಸುವುದು ಭಾರತ ತಂಡದ ಪ್ರಮುಖ ಗುರಿಯಾಗಿರಲಿದೆ.

ಈ ಪಂದ್ಯ ಗೆದ್ದ ತಂಡ ನೇರವಾಗಿ ಟಾಪ್-4ಗೆ ಪ್ರವೇಶಿಸಲಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ಎರಡೂ ತಂಡಗಳು ತಲಾ 2 ಪಂದ್ಯಗಳಿಂದ 2 ಅಂಕಗಳನ್ನು ಪಡೆದಿದ್ದರೂ, ಉತ್ತಮ ನೆಟ್ ರನ್ ರೇಟ್ (NRR) ಆಧಾರದ ಮೇಲೆ ವೆಸ್ಟ್ ಇಂಡೀಸ್ ಸ್ವಲ್ಪ ಮುಂದಿದೆ.
ಆದರೆ, ಮಳೆ ಅಥವಾ ಇತರೆ ಕಾರಣಗಳಿಂದ ಪಂದ್ಯ ರದ್ದಾದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಆ ಸಂದರ್ಭದಲ್ಲಿ ಉತ್ತಮ ನೆಟ್‌ ರನ್‌ ರೇಟ್‌ ಹೊಂದಿರುವ ವೆಸ್ಟ್ ಇಂಡೀಸ್ ಸೆಮಿಫೈನಲ್‌ಗೆ ಅರ್ಹವಾಗಲಿದೆ, ಭಾರತ ಟೂರ್ನಿಯಿಂದ ಹೊರಗುಳಿಯಲಿದೆ.

ಸೌತ್‌ ಆಫ್ರಿಕಾ ವಿರುದ್ಧದ ಸೋಲು ಭಾರತಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ಆದರೆ ಬಳಿಕ ಜಿಂಬಾಂಬ್ವೆ ವಿರುದ್ಧ ಗೆಲುವು ಸಾಧಿಸಿ ಸೂಪರ್ 8 ಹಂತದಲ್ಲಿ ಗಟ್ಟಿಯಾಗಿ ನಿಂತಿದೆ. ಇನ್ನೊಂದೆಡೆ, ವೆಸ್ಟ್ ಇಂಡೀಸ್ ತಂಡವು ಜಿಂಬಾಬ್ವೆ ವಿರುದ್ಧ ಗೆಲುವಿನಿಂದ ಶುಭಾರಂಭ ಮಾಡಿದ್ದರೂ, ದಕ್ಷಿಣ ಆಫ್ರಿಕಾ ವಿರುದ್ಧದ ಭಾರೀ ಸೋಲು ಅವರಿಗೆ ದೊಡ್ಡ ಹಿನ್ನಡೆಯಾಯಿತು.

ಇದೇ ವೇಳೆ, ದಕ್ಷಿಣ ಆಫ್ರಿಕಾ ತನ್ನ ಅಂತಿಮ ಸೂಪರ್ 8 ಪಂದ್ಯದಲ್ಲಿ ಜಿಂಬಾಬ್ವೆಯನ್ನು ಎದುರಿಸಲಿದೆ. ಆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭಾರೀ ಸೋಲು ಅನುಭವಿಸಿದರೆ, ಭಾರತ–ವೆಸ್ಟ್ ಇಂಡೀಸ್ ನಡುವಿನ ಪಂದ್ಯದ ವಿಜೇತ ತಂಡ ಗುಂಪಿನ ಅಗ್ರಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ. ಆ ತಂಡ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಗುಂಪಿನ ರನ್ನರ್-ಅಪ್ ತಂಡ ಇಂಗ್ಲೆಂಡ್‌ ವಿರುದ್ಧ ಕಣಕ್ಕಿಳಿಯಲಿದೆ.

ಎರಡೂ ತಂಡಗಳ ಪ್ಲೇಯಿಂಗ್ 11 (ಸಂಭಾವ್ಯ ಪಟ್ಟಿ)

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್.

ವೆಸ್ಟ್ ಇಂಡೀಸ್: ಬ್ರ್ಯಾಂಡನ್ ಕಿಂಗ್, ಶೈ ಹೋಪ್ (ನಾಯಕ/ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೈಯರ್, ರೋಸ್ಟನ್ ಚೇಸ್, ಶೆರ್ಫೇನ್ ರದರ್‌ಫೋರ್ಡ್, ರೋವ್ಮನ್ ಪವಲ್, ಜೇಸನ್ ಹೋಲ್ಡರ್, ರೋಮಾರಿಯೊ ಶೆಫರ್ಡ್, ಅಕೀಲ್ ಹೋಸೈನ್, ಗುಡಾಕೇಶ್ ಮೊಟಿ, ಶಮಾರ್ ಜೋಸೆಫ್, ಜಾನ್ಸನ್ ಚಾರ್ಲ್ಸ್, ಮ್ಯಾಥ್ಯೂ ಫೋರ್ಡ್, ಜೇಡನ್ ಸೀಲ್ಸ್, ಕ್ವೆಂಟಿನ್ ಸ್ಯಾಂಪ್ಸನ್.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *