Summer: 37°C temperature in Karnataka yellow alert for 3 districtsಸಾಂದರ್ಭಿಕ ಚಿತ್ರ

ಬೆಂಗಳೂರು, ಮಾರ್ಚ್‌ 12: ಬೇಸಿಗೆ (Summer) ಆರಂಭವಾಗಿದ್ದು, ಸೂರ್ಯ ನೆತ್ತಿ ಸುಡುತ್ತಿದ್ದಾನೆ.ಮಧ್ಯಾಹ್ನದ ಹೊತ್ತಲ್ಲಿ ಅನವಶ್ಯಕವಾಗಿ ಹೊರಗಡೆತಿರುಗಾಡಬೇಡಿ ಎಂದು ಆರೋಗ್ಯ ಇಲಾಖೆ (Health Department) ಸೂಚನೆ ನೀಡಿದೆ. ಬೇಸಿಗೆ ಆರಂಭದಲ್ಲೇ ರಾಜ್ಯದಲ್ಲಿ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.    

ರಾಜ್ಯದಾದ್ಯಂತ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌ (Yellow Alert) ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಹಲವು ಭಾಗಗಳಲ್ಲಿಗರಿಷ್ಠ ತಾಪಮಾನ 33°C ರಿಂದ 37°C ವರೆಗೆ ದಾಖಲಾಗಿದೆ. ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ37°C ಗರಿಷ್ಠ ತಾಪಮಾನ ದಾಖಲಾಗಿದ್ದು, ಉಡುಪಿಯಲ್ಲಿ 35.8°C ಗರಿಷ್ಠ ಹಾಗೂ 24°C ಕನಿಷ್ಠ ತಾಪಮಾನ ದಾಖಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ 36.6°C ಹಾಗೂ ಕನಿಷ್ಠ 21.2°C ತಾಪಮಾನ ದಾಖಲಾಗಿದೆ. ಕರಾವಳಿ ಪ್ರದೇಶಗಳಲ್ಲಿ ತೇವಾಂಶ ಹೆಚ್ಚಿರುವುದರಿಂದ ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚು ಬಿಸಿಯಾಗಿರುವ ಅನುಭವವಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಉಳಿದ ಜಿಲ್ಲೆಗಳಲ್ಲಿಯೂ ಹೆಚ್ಚಿನ ತಾಪಮಾನ ದಾಖಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 36.6°C ಗರಿಷ್ಠ ತಾಪಮಾನ ದಾಖಲಾಗಿದ್ದರೆ, ಹಾವೇರಿ ಜಿಲ್ಲೆಯಲ್ಲಿ 36.4°C ದಾಖಲಾಗಿದೆ. ಬೀದರ್‌ನಲ್ಲಿ 36.3°C ಮತ್ತು ರಾಯಚೂರಿನಲ್ಲಿ 36.1°C ತಾಪಮಾನ ದಾಖಲಾಗಿದೆ.

ಬಾಗಲಕೋಟೆ 35.9°C, ಬೆಳಗಾವಿ 35.4°C, ಶಿವಮೊಗ್ಗ 35.3°C  ಹಾಗೂ ಬಳ್ಳಾರಿ  35°C ಜಿಲ್ಲೆಗಳಲ್ಲಿಯೂ ಹೆಚ್ಚಿನ ದಿನದ ತಾಪಮಾನ ದಾಖಲಾಗಿದ್ದು, ರಾಜ್ಯದ ಹಲವೆಡೆ ಬಿಸಿಲಿನ ತೀವ್ರತೆ ನಿಧಾನವಾಗಿ ಹೆಚ್ಚುತ್ತಿರುವುದು ಗೋಚರಿಸುತ್ತಿದೆ.

ಆರೋಗ್ಯ ಇಲಾಖೆ ಸೂಚನೆ

ಕರಾವಳಿ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಜನರು ಎಚ್ಚರಿಕೆಯಿಂದ ಇರಬೇಕು ಹಾಗೂ ಬಿಸಿಲಿನಿಂದ ಉಂಟಾಗುವ ತೊಂದರೆಗಳಿಂದ  ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ಬಿಸಿಲಿನಲ್ಲಿ ತಿರುಗಾಡಬಾರದು ಎಂದು ಸಲಹೆ ನೀಡಿದೆ.

ಸಾಕಷ್ಟು ನೀರು ಕುಡಿಯಬೇಕು, ಮಜ್ಜಿಗೆ, ನಿಂಬೆರಸ, ತೆಂಗಿನಕಾಯಿ ನೀರು ಮುಂತಾದ ಪಾನೀಯಗಳನ್ನು ಸೇವಿಸುವ ಮೂಲಕ ದೇಹದಲ್ಲಿ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಹೊರಗೆ ಹೋಗುವಾಗ ಹಗುರವಾದ ಹತ್ತಿ ಬಟ್ಟೆ ಧರಿಸುವುದು, ಟೋಪಿ ಅಥವಾ ಛತ್ರಿ ಬಳಸುವುದು ಹಾಗೂ ಬಿಸಿಲಿನ ಗರಿಷ್ಠ ಸಮಯದಲ್ಲಿ ಕಠಿಣ ಶಾರೀರಿಕ ಚಟುವಟಿಕೆಗಳನ್ನು ಕಡಿಮೆ ಮಾಡುವುದು ಉತ್ತಮ ಎಂದು ಸೂಚಿಸಿದೆ.

ಟ್ವಿಟರ್‌ ಪೋಸ್ಟ್‌

ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ಈಗಾಗಲೇ ಆರೋಗ್ಯ ಸಮಸ್ಯೆ ಹೊಂದಿರುವವರು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ. ತಲೆ ಸುತ್ತು, ಹೆಚ್ಚು ಬೆವರು, ವಾಂತಿ, ಸ್ನಾಯು ನೋವು ಅಥವಾ ಮೂರ್ಛೆ ಆಗುವ ಲಕ್ಷಣಗಳು ಕಂಡುಬಂದರೆ ಅವನ್ನು ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇದಲ್ಲದೆ, ನಿಲ್ಲಿಸಿದ ವಾಹನಗಳೊಳಗೆ ಮಕ್ಕಳನ್ನಾಗಲಿ ಅಥವಾ ಸಾಕುಪ್ರಾಣಿಗಳನ್ನಾಗಲಿ ಕೆಲವೇ ನಿಮಿಷಗಳಾದರೂ ಬಿಟ್ಟು ಹೋಗಬಾರದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಏಕೆಂದರೆ ವಾಹನಗಳ ಒಳಗಿನ ತಾಪಮಾನ ಕ್ಷಿಪ್ರವಾಗಿ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೇಸಿಗೆ ಆರಂಭ: ರಾಜ್ಯದ 183 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ

ಮುಂದಿನ ದಿನಗಳಲ್ಲಿ ರಾಜ್ಯದ ಹಲವೆಡೆ ಸಾಮಾನ್ಯಕ್ಕಿಂತ ಹೆಚ್ಚಾದ ತಾಪಮಾನ ಮುಂದುವರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಮತ್ತು ಆರೋಗ್ಯ ಇಲಾಖೆ ನೀಡುವ ಸೂಚನೆಗಳನ್ನು ಪಾಲಿಸಿ ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *