ಬೆಂಗಳೂರು, ಮಾ.10: ರಾಜ್ಯದಲ್ಲಿ ಬೇಸಿಗೆ (Summer) ಈಗತಾನೆ ಆರಂಭವಾಗಿದ್ದು, ಸೂರ್ಯ ನೆತ್ತಿ ಸುಡುತ್ತಿದ್ದಾನೆ. ಬೇಸಿಗೆ ಆರಂಭದಲ್ಲೇ ರಾಜ್ಯದ 21 ಜಿಲ್ಲೆಗಳ 144 ತಾಲ್ಲೂಕುಗಳಲ್ಲಿರುವ 183 ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ (Drinking Water Shortage) ಕೊರತೆ ಉಂಟಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ. ಪ್ರಸ್ತುತ 183 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಅವುಗಳಲ್ಲಿ 31 ಗ್ರಾಮಗಳಿಗೆ 96 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಉಳಿದ 152 ಗ್ರಾಮಗಳಿಗೆ 154 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆಯಲಾಗಿದ್ದು, ಅವುಗಳ ಮೂಲಕ ನೀರು ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದರು. ಇದನ್ನೂ ಓದಿ: ಮೈಸೂರು ಸಿಲ್ಕ್ ಸೀರೆಗಳಿಗೆ ಭಾರೀ ಬೇಡಿಕೆ: ಆನ್‌ಲೈನ್ ಮಾರಾಟ ತಾತ್ಕಾಲಿಕ ಸ್ಥಗಿತ ಜಿಲ್ಲಾ ಆಡಳಿತಗಳು ಪರಿಸ್ಥಿತಿಯನ್ನು ಸಮೀಪದಿಂದಲೇ ಗಮನಿಸಿ, ಅಗತ್ಯವಿದ್ದಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯುವುದು ಹಾಗೂ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡುವಂತೆ ಸೂಚನೆ ನೀಡಲಾಗಿದೆ. ನೀರಿನ ಲಭ್ಯತೆ ಹೆಚ್ಚಿಸಲು ಒಣಗಿದ ಬೋರ್‌ವೆಲ್‌ಗಳನ್ನು ಫ್ಲಷಿಂಗ್ ಹಾಗೂ ಇನ್ನಷ್ಟು ಆಳಕ್ಕೆ ಬೋರ್ ಕೊರೆಯುವ ಮೂಲಕ ಪುನರುಜ್ಜೀವನಗೊಳಿಸಲಾಗುವುದು. ಅಗತ್ಯವಿದ್ದಲ್ಲಿ ಭೂವಿಜ್ಞಾನಿಗಳ ತಾಂತ್ರಿಕ ಸಲಹೆಯ ಆಧಾರದ ಮೇಲೆ ಹೊಸ ಬೋರ್‌ವೆಲ್‌ಗಳನ್ನು ತೋಡಲಾಗುತ್ತದೆ ಎಂದು ಹೇಳಿದರು. ಇದರ ಜೊತೆಗೆ ಗ್ರಾಮ ಪಂಚಾಯತ್‌ಗಳಿಗೆ ನೀರಿನ ಗುಣಮಟ್ಟ ಪರೀಕ್ಷೆ ನಡೆಸುವಂತೆ ಹಾಗೂ ಓವರ್‌ಹೆಡ್ ಟ್ಯಾಂಕ್ ಸ್ವಚ್ಛಗೊಳಿಸುವಂತೆ ಸೂಚಿಸಲಾಗಿದೆ. ಇದರಿಂದ ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ ಎಂದು ತಿಳಿಸಿದರು. ಸಚಿವರ ಹೊರಡಿಸಿದ ಪ್ರಕಟಣೆಯ ಪ್ರಕಾರ, ಬೇಸಿಗೆ ಸಮಯದಲ್ಲಿ ರಾಜ್ಯದ ಹಲವೆಡೆ ಒಣ ಹವಾಮಾನ ಇರುವುದರಿಂದ ಗ್ರಾಮೀಣ ಪ್ರದೇಶಗಳ ನೀರಿನ ಮೂಲಗಳು ಒಣಗುವ ಸಾಧ್ಯತೆ ಹೆಚ್ಚಿದೆ. ಇದರಿಂದ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. 2026ರ ಮಾರ್ಚ್ ತಿಂಗಳಲ್ಲಿ ಸುಮಾರು 1,053 ಬೋರ್‌ವೆಲ್‌ಗಳನ್ನು ಫ್ಲಷಿಂಗ್ ಹಾಗೂ ಇನ್ನಷ್ಟು ಆಳ ಬೋರ್ ಕೊರೆಸುವ ಮೂಲಕ ದುರಸ್ತಿ ಮಾಡುವ ಯೋಜನೆ ರೂಪಿಸಲಾಗಿದೆ. 2026ರ ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಕುಡಿಯುವ ನೀರು ಪೂರೈಕೆ ಆಗುವಂತೆ ಮಾಡಲು ಕೇಂದ್ರ ಹಾಗೂ ರಾಜ್ಯದ ಬರ ಪರಿಹಾರ ನಿಧಿ ಮತ್ತು ಇಲಾಖೆಯ ಟಾಸ್ಕ್ ಫೋರ್ಸ್ ನಿಧಿಗಳಿಂದ ತುರ್ತು ಕಾಮಗಾರಿಗಳಿಗೆ ಹಣವನ್ನು ಬಳಸಲಾಗುತ್ತದೆ ಎಂದರು. ಇದರ ಜೊತೆಗೆ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಆಡಳಿತಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚಿಸಲಾಗಿದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಮೈಸೂರು ಸಿಲ್ಕ್ ಸೀರೆಗಳಿಗೆ ಭಾರೀ ಬೇಡಿಕೆ: ಆನ್‌ಲೈನ್ ಮಾರಾಟ ತಾತ್ಕಾಲಿಕ ಸ್ಥಗಿತ ಬೇಸಿಗೆ ಆರಂಭದಲ್ಲೇ ರಾಜ್ಯದಲ್ಲಿ 37°C ತಾಪಮಾನ: 3 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್