Pandit Puttaraj Gawai 112th Birth Anniversary: Puttaraj Gawai Sang Megha Raga and It rainedಡಾ. ಪುಟ್ಟರಾಜ ಕವಿ ಗವಾಯಿಯವರ 112 ಜಯಂತ್ಯೋತ್ಸವ

ಕರ್ತನಟ್ಟಿದಡೆ ಮರ್ತ್ಯದಲ್ಲಿ ಮಹಾಮನೆಯ ಕಟ್ಟಿದೆ
ಸತ್ಯ ಶರಣರಿಗೆತೊತ್ತು ‌ಭೃತ್ಯನಾಗಿ ಸವೆದು ಬದುಕಿದೆ
ಕರ್ತನ ಬೆಸನು ಮತ್ತೆ ಬರಲೆಂದಟ್ಟವಡೆ ಕೂಡಲ ಸಂಗಮದೇವ ಮಹಾಪ್ರಸಾದವೆಂಬೆ

ವಿಶ್ವಗುರು ಬಸವಣ್ಣನವರ ವಚನದಂತೆ ಪರಮಾತ್ಮನ ಅಪ್ಪಣೆಯ ಮೇರೆಗೆ ಅವನ ನಿಷ್ಕಲ ರೂಪವೇ ಧರೆಗಿಳಿದು ಬಂದು ಮಾನವ ಶರೀರಧಾರಿಯಾಗಿ ತನ್ನ 97 ವರ್ಷಗಳವರೆಗೆ ಅವ್ಯಾಹತವಾಗಿ ಸಂಗೀತ-ಸಾಹಿತ್ಯ ಕಲೆಯನ್ನು ನಾಡಿಗೆ ಧಾರೆಯೆರೆದು, ಸಾಕಾರರೂಪ ತ್ಯಜಿಸಿ ನಿರಾಕಾರದಲ್ಲಿ ಒಂದಾದವರು ಪಂಡಿತ ಶ್ರೀ ಪುಟ್ಟರಾಜ ಕವಿ ಗವಾಯಿಯವರು (Pandit Puttaraj Gawai).

ಮಹಾಪುರುಷರೆಲ್ಲರೂ ಹುಟ್ಟತ್ತಲೇ ಅಜ್ಞಾತರು, ಬೆಳೆಯುತ್ತಲೇ ಪ್ರಖ್ಯಾತರು. ಜೀವನಾನಂತರ ಸುವಿಜ್ಞಾತರಾಗುತ್ತಾರೆ. ಆ ಅರ್ಥದಲ್ಲಿ ಶ್ರೀ ಪುಟ್ಟರಾಜ ಗುರುಗಳು ತಮ್ಮ ಅಮೋಘ ಸಾಧನೆ, ಸಿದ್ದಿ, ತಪಸ್ಸಿನಿಂದ ಲೋಕವಿಖ್ಯಾತರಾದರು.

ಇಂದು (ಮಾ.03) ಡಾ. ಪುಟ್ಟರಾಜ ಕವಿ ಗವಾಯಿಗಳ 112 ಜಯಂತ್ಯೋತ್ಸವ. ಡಾ. ಪುಟ್ಟರಾಜ ಕವಿ ಗವಾಯಿಯವರು ಸಂಗೀತ ಲೋಕಕ್ಕೆ ಬೆಳಕಾದವರು. ನಾಡಿನ ಅಂಧ, ಅನಾಥ, ಬಡವರ ಮಕ್ಕಳ ಬಾಳಿಗೆ ಜ್ಯೀತಿಯಾದವರು.

ಮೇಘರಾಗ ಹಾಡಿ ಮೇಘರಾಜನನ್ನು ತರಿಸಿದರು

ವೀರೇಶ್ವರ ಪುಣ್ಯಾಶ್ರಮದಲ್ಲಿ ಗುರು ಪುಟ್ಟರಾಜರ ಗುರುಗಳಾದ ಪಂದ್ಯಾ ಪಂಚಾಕ್ಷರ ಗವಾಯಿಗಳವರ 61ನೇ ಪುಣ್ಯಸ್ಮರಣೆಯ ಕಾರ್ಯಕ್ರಮ ನಡೆದಿತ್ತು. ಆ ವರ್ಷ ಮಳೆ ಇಲ್ಲದೇ ಬೆಳೆಗಳೆಲ್ಲ ಒಣಗಿ ಹೋಗಿದ್ದವು. ರೈತರೆಲ್ಲ ಕಂಗಾಲಾಗಿದ್ದರು.

ಕೆಲವರು ಪಂಚಾಕ್ಷರ ಅಜ್ಜವರ ಪುಣ್ಯತಿಥಿಗೆ ಮಳೆ ಬಂದೇ ಬರುತ್ತದೆಂಬ ಧೈರ್ಯ ತಾಳಿದ್ದರು. ಆದರೆ ಆ ವರ್ಷ ಮಳೆಯ ಲಕ್ಷಣವೇ ಇಲ್ಲ. ಜನರೆಲ್ಲ ಗಾಬರಿಯಾದರು. ದನ ಕರುಗಳ ಗತಿ ಏನು? ಹೊಟ್ಟೆಗೆ ಆಹಾರವೇನು? ಬರಗಾಲದ ಬವಣೆಗೆ ಸಿಕ್ಕು ರೈತರು ಕಕ್ಕಾಬಿಕ್ಕಿಯಾದರು.

ತಿನ್ನಲು ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿದ್ದರು. ದನಕರುಗಳ ಪಾಡು ಹೇಳತಿರದು. ಮುಂದಿನ ಒಂದು ವರ್ಷ ಹೇಗೆ ಕಳೆಯಬೇಕು? ರೈತರಲ್ಲಿ ನಿರುತ್ಸಾಹ, ಅಸಂತುಷ್ಟಿ, ಅಸಮಾಧಾನಗಳು ತಲೆದೂರಿ ಬದುಕೇ ಬೇಸರವಾದಂತಿತ್ತು. ಕಷ್ಟ ಕಾರ್ಪಣ್ಯಗಳ ಹಿರಿಗಿಚ್ಚಿನಲ್ಲಿ ದೇಹ ದಹಿಸುತ್ತಿರುವಂತೆ ಭಾಸವಾಗುತ್ತಿತ್ತು. ತಮಗಾದ ನೋವು ಯಾರಿಗೆ ಹೇಳುವರು?

ಹೇಗೋ ಗದುಗಿನ ಪುಟ್ಟರಾಜರ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂಚಾಕ್ಷರಿ ಅಜ್ಜವರ ಪುಣ್ಯಸ್ಮರಣೆ ಕಾರ್ಯಕ್ರಮವಿದೆ. ಅಜ್ಜವರು ಏನಾದರೂ ಭವಿಷ್ಯ ನುಡಿತಾರೋ ಏನೋ ಅಲ್ಲಿಗೇರ ಹೋದರಾಯಿತೆಂದು ಸುತ್ತಮುತ್ತ ಹಳ್ಳಿಯ ಜನ ಸಾಗರದಂತೆ ಹರಿದು ಬಂದಿತು.

ಭೂತ, ಭವಿಷ್ಯತ್ತು, ವರ್ತಮಾನ ಕಾಲಗಳ ಗರ್ಭದಲ್ಲಿ ಒಳಹೊಕ್ಕು ಆಳವನ್ನು ಅಗೆದು ನೋಡುವ ಗುರುವಿಗೆ ಅರಿಯಲಾರದ್ದು ಯಾವುದಿದೆ ? ಭಕ್ತರ ಅಖಂಡ ಭಕ್ತಿಗೆ ನಿಲುಕುವ ದೇವಮಾನವರಾಗಿದ್ದ ಪೂಜ್ಯ ಪುಟ್ಟರಾಜರು ಪೂಜೆ ಮುಗಿಸಿಕೊಂಡು ಪೂಜಾ ಕೋಣೆಯಿಂದ ಹೊರಬಂದರು. ಸಾವಿರಾರು ರೈತ ಭಕ್ತರು ಕಾದು ಕುಳಿತಿದ್ದರು. “ಯಪ್ಪಾ! ಮಳೆನೇ ಇಲ್ಲ, ಬಿತ್ತುವುದಾದರೂ ಹೇಗೆ? ಮುಂದೆ ಬೆಳೆಯುವುದಾದರೂ ಏನನ್ನು? ಬದುಕಿಗೆ ಆಧಾರ ಆಶ್ರಯವೇನು?” ಹೀಗೆ ರೈತರು ಕೇಳಿಕೊಂಡಾಗ, ಗುರುಗಳ ಕರ್ಣಕ್ಕೆ ಮುಟ್ಟಿ ಹೃದಯಕ್ಕೆ ತಟ್ಟಿತು ಇವರ ಆರ್ತಧ್ವನಿ, “ಎಲ್ಲರಿಗೂ ಚಿಂತೆ ಮಾಡಬೇಡಿರಿ ಈಗ ಗುರುಸೇವೆಗೆ ಹೊರಟಿದ್ದೇನೆ.

ಗುರುಗಳ ಗದ್ದುಗೆ ದರ್ಶನ ಪಡೆದು. ವೇದಿಕೆ ಹತ್ತಿರ ಹೋಗಿ ಮೇಘರಾಗ ಹಾಡುತ್ತೇನೆ, ಮೇಘರಾಜ ಬಂದೇ ಬರುತ್ತಾನೆ ನೋಡ್ರಿ! ಭೂಮಿಗೆಲ್ಲಾ ನೀರು ಬಿಡಿಸುತ್ತಾನೆ. ಹೊಳೆ, ಹಳ್ಳ ತುಂಬಿ ಹರಿಯುತ್ತವೆ. ಇದು ಸತ್ಯ”.
ಹೀಗೆಂದು ಗುರು ಪುಟ್ಟರಾಜರು ಆ ಪುಣ್ಯಸರಣೆಯ ಕಾರ್ಯಕ್ರಮದ ಮಂಗಲದ ದಿನವದು, ತುಂಬಿದ ಸಭೆಯಲ್ಲಿ ತಂಬೂರಿ ಕೈಗೆತ್ತಿಕೊಂಡು ಮೇಘರಾಗ ಕೂಡಿಸಿಕೊಂಡು ಹಾಡಹತ್ತಿದರು. ಜನರಿಗೆಲ್ಲ ಆಶ್ವಾಸನೆ ಕೊಡುತ್ತ ಇತ್ತ ಮೇಘರಾಗ ಕೇಳಿರಿ. ಅತ್ತ ಮೇಘರಾಜ ಬರುವುದನ್ನು ನೋಡಿರಿ.

ರೈತರಿಗೆ ಎಲ್ಲಿಲ್ಲದ ಆನಂದ. ಹೊರಗೆ ಮೋಡವನ್ನೇ ನೋಡಹತ್ತಿದರು. “ಉತ್ತಮರ ನುಡಿ ಹುಸಿಯಾದರೆ ಲೋಕವಿನ್ನೆತ್ತ ಬಾಳುವುದು? ಎಂಬ ಸರ್ವಜ್ಞನ ನುಡಿಯಂತೆ ಪೂಜ್ಯರ ನುಡಿ ಹುಸಿಯಾಗಲಿಲ್ಲ. ಮೋಡ ಕವಿಯಿತು. ಗುಡುಗು-ಸಿಡಿಲು-ಮಿಂಚುಗಳು ಪ್ರಾರಂಭವಾದವು. ಮೇಘರಾಗವನ್ನು ಹಾಡಿದಂತೆ, ಹಾಡಿದಂತೆ, ಮೇಘರಾಜನ ಆರ್ಭಟ, ದೊಡ್ಡ ಮಳೆಯು ಒಂದೊವರೆ ತಾಸಿನವರೆಗೆ ಸುರಿಯಿತು. ಎಲ್ಲೆಲ್ಲೂ ನೀರೇ ನೀರು, ಎಲ್ಲರಿಗೂ ಸಂತೋಷವೇ ಸಂತೋಷ.

ಮೇಘರಾಗದ ಧ್ವನಿ ನಿಲ್ಲಿಸಿದರು. ಮಳೆಯೂ ನಿಂತಿತು. ನಿಸರ್ಗವು ಮಹಾತ್ಮರ ಆಜ್ಞೆಯನ್ನು ಪಾಲಿಸುತ್ತದೆಂಬುದಕ್ಕೆ ಸಾಕ್ಷಿಯಾಯಿತು. ಸಂಪೂರ್ಣ ಮಳೆ ಬಿತ್ತು ಪುಟ್ಟರಾಜ ಗುರುಗಳ ಮೇಘರಾಗ ಹಾಡಿ ಮಳೆ ತರಿಸಿದರೆಂಬ ಸುದ್ದಿನೇ ಸುದ್ದಿ. ಭಕ್ತರೆಲ್ಲರೂ ಗುರುಗಳ ಮಹಿಮೆಯನ್ನು ಕೊಂಡಾಡಿದರು.

ಹಿಂದೆ ದೀಪರಾಗ ಹಾಡಿ ದೀಪ ಹಚ್ಚುತ್ತಿದ್ದರಂತೆ. (ತನ್ನಷ್ಟಕ್ಕೆ ತಾನೇ ದೀಪ ಹತ್ತಿಕೊಳ್ಳುತ್ತಿದ್ದವಂತೆ), ಹಾಗೆ ಈಗ ಪೂಜ್ಯರು ಮೇಘರಾಗ ಹಾಡಿ ಮಳೆ ತರಿಸಿದರು. ಎಂಥ ಮಹಿಮಾ ಪುರುಷರು! ಕೂಡಿದ ಸಭಿಕರೆಲ್ಲ ಆಸೀನರಾದ ಪೂಜ್ಯ ಸ್ವಾಮಿಗಳೆಲ್ಲ, ಸಮಸ್ತ ಕಲಾವಿದರೆಲ್ಲ ತಲೆದೂಗಿದರು. ಜೈ ಘೋಷ ಮಾಡುತ್ತಾ ಹಾಡಿ ಹೊಗಳಿದರು. ಗುರುವಾಜ್ಞೆಗೆ ಮೇಘರಾಜನೆ ತಲೆದೂಗಿ ತನ್ನ ಕರ್ತವ್ಯವನ್ನು ನಿರ್ವಹಿಸಿದನೇನೋ ಎಂಬಂತೆ ಸಮೃದ್ಧ ಮಳೆಯಾಯಿತು.

ವೀರೇಶ್ವರ ಪುಣ್ಯಾಶ್ರಮಕ್ಕೆ ಬೀಜವ
ನೀನೇ ಬಿತ್ತಿದೆ ಬೆಳೆದ ಸಸಿಗಳ
ಸಂಗೀತ ಲರೋತದ ಅಗ್ಗಜದ ರೂಪದಲ್ಲಿ
ಏನು ಹೇಳಲಿ ಗದುಗಿನ ಸಿರಿ
ತಾನೆಪರದೇಶದೊಳು ಹರಿಸಿದ ಗಾನ ಸಿರಿ
ನೂನ ಕೀರ್ತಿಯು ನಿನಗೆ ಪುಟ್ಟರಾಜ ಗುರುವರ್ಯನೆ

ನಾಡಿನ ಯಾವುದೇ ಮೂಲೆಮೂಲೆಯಲಿ ಸಂಗೀತದ ಸ್ವರ ಕೇಳಿಬರುತ್ತಿದ್ದರೆ ಅದಕ್ಕೆ ವೀರೇಶ್ವರ ಪುಣ್ಯಾಶ್ರಮವೇ ಕಾರಣ. ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ – ಸಾಹಿತ್ಯದ ಬೀಜವ ಬಿತ್ತಿ. ಅನೇಕ ಸಂಗೀತ ಸಾಮ್ರಾಟರೆಂಬ ಸಸಿಗಳನ್ನು ಬೆಳೆಸಿದವರು.

ಈ ಪುಣ್ಯಾಶ್ರಮವು ಶತಮಾನದಿಂದ ಶತಮಾನಕ್ಕೆ ಶಾಶ್ವತವಾಗಿ ಬೆಳೆಯಬಲ್ಲ ಕೊಡುಗೆಯನ್ನು ನೀಡುವ ಪ್ರೇರಣಾಶಕ್ತಿ ಕೇಂದ್ರವಾಗಿದೆ. ಕನ್ನಡ ನಾಡಿಗೆ ಪ್ರತಿಭಾ ಸಂಪನ್ನ ಸಂಗೀತಗಾರರನ್ನು, ಕೀರ್ತನಕಾರರನ್ನು, ವಾದ್ಯ ವಾದನಕಾರರನ್ನು, ಸಂಗೀತ ಶಿಕ್ಷಕರನ್ನು ನಿರಂತರವಾಗಿ ನೀಡುತ್ತಲೇ ಬಂದಿದೆ. ಅನೇಕರು ಪುಣ್ಯಾಶ್ರಮದಲ್ಲಿ ತರಬೇತಿಯನ್ನು ಪಡೆದು ಅಂತರಾಷ್ಟ್ರೀಯಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *