FasTag

ನವದೆಹಲಿ, ಮಾರ್ಚ್‌ 15: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 2026–27ನೇ ಹಣಕಾಸು ವರ್ಷಕ್ಕೆ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್‌ಗೆ (Fastag Yearly Pass) ಅನ್ವಯವಾಗುವ ಶುಲ್ಕವನ್ನು ಪರಿಷ್ಕರಿಸಿದೆ. ಹಾಲಿ ಇರುವ 3,000  ರೂಪಾಯಿಗಳಿಂದ 3,075 ರೂ.ಗೆ ಏರಿಕೆ ಮಾಡಿರುವುದಾಗಿ ಘೋಷಿಸಿದೆ. ಪರಿಷ್ಕೃತ ಶುಲ್ಕವು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹದ ನಿರ್ಣಯ) ನಿಯಮ 2008 ರ ನಿಬಂಧನೆಗಳಿಗೆ ಅನುಗುಣವಾಗಿ ಶುಲ್ಕದಲ್ಲಿ ಪರಿಷ್ಕರಣೆಯನ್ನು ಕೈಗೊಳ್ಳಲಾಗಿದೆ. 56 ಲಕ್ಷಕ್ಕೂ ಅಧಿಕ ಬಳಕೆದಾರರೊಂದಿಗೆ ವಿಶೇಷವಾಗಿ ಖಾಸಗಿ ವಾಹನ ಮಾಲೀಕರಲ್ಲಿ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್‌ನ ಅಳವಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇಗಳಲ್ಲಿ ಸುಮಾರು 1,150 ಶುಲ್ಕ ಪ್ಲಾಜಾಗಳಲ್ಲಿ ವಾರ್ಷಿಕ ಪಾಸ್ ಸೌಲಭ್ಯ ಪಡೆಯಲು ಬಯಸುವ ಅಧಿಕೃತ ಫಾಸ್ಟ್‌ಟ್ಯಾಗ್ ಹೊಂದಿರುವ ಅರ್ಹ ವಾಣಿಜ್ಯೇತರ ವಾಹನಗಳಿಗೆ ಪರಿಷ್ಕೃತ ದರ ಅನ್ವಯಿಸುತ್ತದೆ.

ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್, ಒಂದು ವರ್ಷದ ಮಾನ್ಯತೆ ಅಥವಾ 200 ಟೋಲ್ ಪ್ಲಾಜಾ ಕ್ರಾಸಿಂಗ್‌ಗಳಿಗೆ ಒಂದು ಬಾರಿ ಶುಲ್ಕ ಪಾವತಿಯ ಮೂಲಕ ಆಗಾಗ್ಗೆ ಫಾಸ್ಟ್‌ಟ್ಯಾಗ್ ಅನ್ನು ರೀಚಾರ್ಜ್ ಮಾಡುವ ಅಗತ್ಯತೆಯನ್ನು ನಿವಾರಿಸುತ್ತದೆ. ಅಧಿಕೃತ ಫಾಸ್ಟ್‌ಟ್ಯಾಗ್ ಹೊಂದಿರುವ ಎಲ್ಲಾ ವಾಣಿಜ್ಯೇತರ ವಾಹನಗಳಿಗೆ ಈ ಪಾಸ್ ಅನ್ವಯಿಸುತ್ತದೆ.

ವಾರ್ಷಿಕ ಫಾಸ್ಟ್‌ಟ್ಯಾಗ್‌ ಪಡೆಯುವುದು ಹೇಗೆ?

ರಾಜಮಾರ್ಗ ಯಾತ್ರಾ ಅಪ್ಲಿಕೇಶನ್ ಅಥವಾ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವೆಬ್‌ಸೈಟ್ ಮೂಲಕ ಒಂದು ಬಾರಿ ಶುಲ್ಕವನ್ನು ಪಾವತಿಸಿದ ನಂತರ ವಾಹನಕ್ಕೆ ಲಿಂಕ್ ಮಾಡಲಾದ ಅಸ್ತಿತ್ವದಲ್ಲಿರುವ ಫಾಸ್ಟ್ ಟ್ಯಾಗ್‌ನಲ್ಲಿ ವಾರ್ಷಿಕ ಪಾಸ್ ಎರಡು ಗಂಟೆಗಳೊಳಗೆ ಸಕ್ರಿಯವಾಗುತ್ತದೆ.

ಇದನ್ನೂ ಓದಿ: ಶ್ರೀನಗರ: ಉರಿ ಸೆಕ್ಟರ್‌ ಬಳಿ ಒಳನುಸುಳುವಿಕೆ ಯತ್ನ, ಉಗ್ರನ ಹತ್ಯೆ  

2025ರ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಆರಂಭಿಸಲಾದ ಫಾಸ್‌ ಟ್ಯಾಗ್‌ ವಾರ್ಷಿಕ ಪಾಸ್‌ಗೆ ದೊರೆತ ಅಗಾಧ ಪ್ರತಿಕ್ರಿಯೆಯು ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ಒದಗಿಸುವ ಹೆಚ್ಚಿನ ಅನುಕೂಲತೆ ಮತ್ತು ಪರಿಣಾಮಕಾರಿ ವೆಚ್ಚದ ಪ್ರಯಾಣ ಆಯ್ಕೆಯನ್ನು ಒತ್ತಿ ಹೇಳುತ್ತದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *