Bidar Farmer Earns Huge Profit by Cultivating Chia Seedsರೈತ ಆನಂದ

ಬೀದರ್, ಮಾ.09: ಬೀದರ್ (Bidar) ಜಿಲ್ಲೆಯ ಸಾಂಪ್ರದಾಯಿಕ ಬೆಳೆಗಳಾದ ಉದ್ದಿನಕಾಳು, ಸೋಯಾಬಿನ್ ಹಾಗೂ ಕಬ್ಬು  ಬಿಟ್ಟು, ಓರ್ವ ರೈತ (Farmer) ಚಿಯಾ ಬೆಳೆ ಬೆಳೆಯುವ ಮೂಲಕ ಉತ್ತಮ ಆದಾಯ ಗಳಿಸಿ ಇದೀಗ ಇತರ ರೈತರಿಗೆ ಮಾದರಿಯಾಗಿದ್ದಾರೆ. ಬೀದರ ಜಿಲ್ಲೆಯ ರೈತರು ಸಾಂಪ್ರದಾಯಿಕ ಬೆಳೆಗಳನ್ನು ಪದೇಪದೇ ನಷ್ಟ ಅನುಭವಿಸಿ ಸಾಲದ ಬಾಧೆಗೆ ಒಳಗಾಗುತ್ತಿದ್ದರು. ಹೀಗಾಗಿ, ಈ ರೈತ ವಿಭಿನ್ನ ಮಾರ್ಗವನ್ನು ಕಂಡುಕೊಂಡಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.  

ಬೀದರ್ ತಾಲ್ಲೂಕಿನ ಸ್ಮಶಾನ ನಗರ ಗ್ರಾಮದ ರೈತ ಆನಂದ್ ಅವರು ಆರ್ಥಿಕವಾಗಿ ತಮ್ಮ ಒಂದು ಎಕರೆ ಜಮೀನಿನಲ್ಲಿ ಚಿಯಾ ಬೆಳೆ ಬೆಳೆಸಲು ಆರಂಭಿಸಿದರು. ತಮ್ಮ ವಿನೂತನ ಪ್ರಯೋಗ ಕುರಿತಾಗಿ ಮಾತನಾಡಿದ ಅವರು,  ಇಂಟರ್ನೆಟ್ ಮೂಲಕ ಚಿಯಾ ಬೆಳೆಯ ಕುರಿತು ಮಾಹಿತಿ ಸಂಗ್ರಹಿಸಿ ಬೀಜಗಳನ್ನು ಖರೀದಿಸಿ ಬೆಳೆ ಬೆಳೆದೆ ಹೇಳಿದ್ದಾರೆ.  

ಚಿಯಾ ಧಾನ್ಯದಲ್ಲಿ ಪೌಷ್ಟಿಕ ಹಾಗೂ ಔಷಧೀಯ ಗುಣಗಳಿವೆ. ಈ ಬೆಳೆಗೆ ಪಶುಗಳು ಅಥವಾ ಕಾಡುಪ್ರಾಣಿಗಳ ಕಾಟವು ಕಡಿಮೆ ಇರುವುದರಿಂದ ಸುಲಭವಾಗಿ ಬೆಳೆಯಬಹುದು. ಸಿರಿಧಾನ್ಯಗಳಂತೆ ಚಿಯಾ ಬೆಳೆಯನ್ನು ಕೂಡ ಬೆಳೆಸಬಹುದು. ಈ ಸಂಬಂದ ಮತ್ತೋರ್ವ ರೈತ ಅಜರ್ ಮಸ್ತಾನ್ ಮಾತನಾಡಿ, ಈ ಬೆಳೆಗೆ ಹೆಚ್ಚಿನ ನೀರಿನ ಅವಶ್ಯಕತೆ ಇಲ್ಲ. ಒಣ ಹವಾಮಾನದಲ್ಲಿ ವಾರಕ್ಕೆ ಒಮ್ಮೆ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಿದರೆ ಸಾಕು ಎಂದರು.

ಚಿಯಾ ಬೆಳೆ ಸುಮಾರು 90 ರಿಂದ 100 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಒಂದು ಎಕರೆಯಲ್ಲಿ ಚಿಯಾ ಬೆಳೆಯಲು ಸುಮಾರು 3 ರಿಂದ 4 ಸಾವಿರ ರೂ. ಖರ್ಚಾಗುತ್ತದೆ. ಗಿಡ ನೆಟ್ಟು ಬೆಳೆಸಬಹುದು ಅಥವಾ ಸಾಲುಗಳಲ್ಲಿ ನೇರವಾಗಿ ಬೀಜ ಬಿತ್ತಬಹುದು. ರಾಸಾಯನಿಕ ಗೊಬ್ಬರವನ್ನು ಒಂದೇ ಬಾರಿ ಹಾಕಿದರೆ ಸಾಕಾಗುತ್ತದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: NWKRTCಗೆ ಶೀಘ್ರವೇ ಕಿತ್ತೂರು ರಾಣಿ ಚೆನ್ನಮ್ಮ ಸಾರಿಗೆ ಎಂದು ಮರುನಾಮಕರಣ: ರಾಮಲಿಂಗಾ ರೆಡ್ಡಿ

ಸ್ಥಳೀಯ ಹವಾಮಾನಕ್ಕೆ ಹೊಂದುವ ಈ ವಾಣಿಜ್ಯ ಬೆಳೆಯಿಂದ ಒಂದು ಎಕರೆಗೆ ಸುಮಾರು 4 ರಿಂದ 5 ಕ್ವಿಂಟಲ್ ಫಲ ಬರುತ್ತದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ 14 ರಿಂದ 19 ಸಾವಿರ ರೂ. ಮಾರಾಟವಾಗುತ್ತಿದ್ದು ರೈತರು ಉತ್ತಮ ಲಾಭ ಗಳಿಸಬಹುದು ಎಂದು ತಿಳಿಸಿದರು.

ಚಿಯಾ ಧಾನ್ಯದಲ್ಲಿ ಕ್ಯಾಲ್ಸಿಯಂ, ಮ್ಯಾಗ್ನೀಷಿಯಂ ಮತ್ತು ಫಾಸ್ಫರಸ್ ಅಂಶಗಳು ಹೆಚ್ಚು ಇರುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಈ ಧಾನ್ಯವನ್ನು ಸೇವಿಸುವುದರಿಂದ ಎಲುಬುಗಳು ಬಲವಾಗುತ್ತವೆ. ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮಟ್ಟ ಹಾಗೂ ಮಧುಮೇಹ ನಿಯಂತ್ರಣಕ್ಕೆ ಸಹಾಯಕವಾಗುತ್ತದೆ. ಜೀರ್ಣಕ್ರಿಯೆ ಸುಧಾರಣೆಯಲ್ಲಿಯೂ ಉಪಯುಕ್ತವೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ರೈತರು ಹೇಳುತ್ತಾರೆ.

ಆದರೆ ಬೀದರ ಜಿಲ್ಲೆಯಲ್ಲಿ ಚಿಯಾ ಬೆಳೆ ಮತ್ತು ಅದರ ಮಾರುಕಟ್ಟೆ ಬಗ್ಗೆ ರೈತರಿಗೆ ಹೆಚ್ಚನ ಮಾಹಿತಿ ಇಲ್ಲ. ಆದ್ದರಿಂದ ಪ್ರಸ್ತುತ ಕೆಲವೇ ರೈತರು ಈ ಬೆಳೆಯತ್ತ ಮುಖ ಮಾಡಿದ್ದಾರೆ ಎಂದು ರೈತ ರೇವಣಸಿದ್ದಯ್ಯ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *