NEET UG 2026 Registration Deadline Extended Till March 11ಸಾಂದರ್ಭಿಕ ಚಿತ್ರ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET UG) 2026ರ ನೋಂದಣಿ ಅವಧಿಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಇದೀಗ ಅಭ್ಯರ್ಥಿಗಳು ಮಾರ್ಚ್ 11ರ ರಾತ್ರಿ 9 ಗಂಟೆಯವರೆಗೆ ಅಧಿಕೃತ ವೆಬ್‌ಸೈಟ್ neet.nta.nic.in ನಲ್ಲಿ ಅರ್ಜಿ ಸಲ್ಲಿಸಬಹುದು. ಮೊದಲು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮಾರ್ಚ್ 8 ಆಗಿತ್ತು.

ಅರ್ಜಿ ಶುಲ್ಕ ಪಾವತಿಸಲು ಮಾರ್ಚ್ 11ರ ರಾತ್ರಿ 11:50ರವರೆಗೆ ಅವಕಾಶ ನೀಡಿದೆ. ನೀಟ್‌ ಯುಜಿ ಪರೀಕ್ಷೆಯು ಭಾರತದೆಲ್ಲೆಡೆ ಇರುವ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್‌, ಬಿಡಿಎಸ್‌ ಸೇರಿದಂತೆ ವಿವಿಧ ಪದವಿ ಮಟ್ಟದ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಾಗಿದೆ. ನೀಟ್‌ ಯುಜಿ ಮೇ 3 ರಂದು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ನಡೆಯಲಿದೆ.

ನೋಂದಣಿ ಪ್ರಕ್ರಿಯೆ ವಿವರ

ನೀಟ್‌ ಯುಜಿ 2026ರ ನೋಂದಣಿ ಪ್ರಕ್ರಿಯೆ ಫೆಬ್ರವರಿ 8 ರಂದು ಆರಂಭವಾಗಿದೆ. ಅಭ್ಯರ್ಥಿಗಳು ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಇದರಲ್ಲಿ ನೋಂದಣಿ, ಅರ್ಜಿ ಫಾರ್ಮ್ ಭರ್ತಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು ಮತ್ತು ಅರ್ಜಿ ಶುಲ್ಕ ಪಾವತಿಸುವುದು ಒಳಗೊಂಡಿದೆ.

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಲಾಗಿನ್ ಕ್ರೆಡೆನ್ಷಿಯಲ್‌ಗಳನ್ನು ಸೃಷ್ಟಿಸಬೇಕು. ಬಳಿಕ ವೈಯಕ್ತಿಕ ವಿವರಗಳು, ಶೈಕ್ಷಣಿಕ ಮಾಹಿತಿ ಮತ್ತು ಪರೀಕ್ಷಾ ನಗರ ಆಯ್ಕೆಗಳನ್ನು ನಮೂದಿಸಬೇಕು. ಜೊತೆಗೆ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ, ಸಹಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.

ತಿದ್ದುಪಡಿಗೆ ಅವಕಾಶ  

ಮಾರ್ಚ್ 10 ರಿಂದ ಮಾರ್ಚ್ 12 ಅರ್ಜಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.  ಈ ಅವಧಿಯಲ್ಲಿ ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ಕೆಲವು ವಿವರಗಳನ್ನು ಮಾತ್ರ ತಿದ್ದುಪಡಿ ಮಾಡಬಹುದು. ಹೆಸರು, ಜನ್ಮ ದಿನಾಂಕ, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಮುಂತಾದ ಪ್ರಮುಖ ವೈಯಕ್ತಿಕ ವಿವರಗಳನ್ನು ಬದಲಾಯಿಸಲು ಅವಕಾಶ ಇರುವುದಿಲ್ಲ.

ಇದನ್ನೂ ಓದಿ: ಗರ್ಭಕೋಶ ಕ್ಯಾನ್ಸರ್ ತಡೆಯಲು ಕೇಂದ್ರದಿಂದ ಬಾಲಕಿಯರಿಗೆ ಉಚಿತ HPV ಲಸಿಕೆ

ತಿದ್ದುಪಡಿ ಪ್ರಕ್ರಿಯೆ ಮುಗಿದ ನಂತರ ಏಪ್ರಿಲ್ ತಿಂಗಳಲ್ಲಿ ಪ್ರವೇಶ ಪತ್ರ (Admit Card) ಬಿಡುಗಡೆ ಆಗುವ ಸಾಧ್ಯತೆ ಇದೆ. ನೀಟ್‌ ಯುಜಿ ಪರೀಕ್ಷೆಯ ಫಲಿತಾಂಶಗಳನ್ನು ನಂತರದ ತಿಂಗಳಲ್ಲಿ ಪ್ರಕಟಿಸಲಾಗುತ್ತದೆ.

ಯುಜಿ ನೀಟ್‌ ಭಾರತದಲ್ಲಿ ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ, ವಿಶೇಷವಾಗಿ ಎಂಬಿಬಿಎಸ್‌, ಬಿಡಿಎಸ್‌ ಹಾಗೂ ಆಯುಷ್‌ ಕೋರ್ಸ್‌ಗಳಿಗೆ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಏಕೈಕ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಾಗಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *