KMF Nandini Dairy Partner with RCBಆರ್‌ಸಿಬಿ, ಕೆಎಂಎಫ್‌

ಬೆಂಗಳೂರು, ಮಾರ್ಚ್‌ 25: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (KMF) ಯ ನಂದಿನಿ ಬ್ರ್ಯಾಂಡ್, ಮಾರ್ಚ್ 28ರಿಂದ ಆರಂಭವಾಗಲಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಧಿಕೃತ ಡೈರಿ ಪಾಲುದಾರವಾಗಿದೆ.

KMF ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಅವರು ಈ ಕುರಿತು ಮಾತನಾಡಿ, “RCB ಜೊತೆಗಿನ ಈ ಸಹಭಾಗಿತ್ವವು ಕ್ರೀಡೆಗಳಿಗೆ KMF ನೀಡುತ್ತಿರುವ ಬೆಂಬಲವನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ಕರ್ನಾಟಕದಲ್ಲಿ ಬೇರೂರಿರುವ ಎರಡು ಪ್ರಮುಖ ರಾಷ್ಟ್ರೀಯ ಬ್ರ್ಯಾಂಡ್‌ಗಳಾದ KMF ಮತ್ತು RCB ಒಂದಾಗಿರುವುದು ನಮಗೆ ಸಂತೋಷ ತಂದಿದೆ.

ಈ ಸೀಸನ್‌ನಲ್ಲಿ RCB ಅಭಿಮಾನಿಗಳೊಂದಿಗೆ ನೇರ ಸಂಪರ್ಕ ಸಾಧಿಸುವುದಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ. ‘ಅಧಿಕೃತ ಡೈರಿ ಪಾಲುದಾರ’ರಾಗಿರುವ ನಂದಿನಿ, ವಿವಿಧ ಜಾಹೀರಾತು ಮತ್ತು ಪ್ರಚಾರ ಚಟುವಟಿಕೆಗಳಲ್ಲಿ ಭಾಗವಹಿಸುತ್ತದೆ,” ಎಂದು ಹೇಳಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಮೆನನ್ ಅವರು ಈ ಸಹಭಾಗಿತ್ವ ಅಭಿಮಾನಿಗಳಿಗೆ ವಿಶೇಷ ಅನುಭವ ನೀಡಲಿದೆ ಎಂದು ಅಭಿಪ್ರಾಯಪಟ್ಟರು.

“ಈ ಸೀಸನ್‌ಗೆ KMF (ನಂದಿನಿ) ಜೊತೆಗೆ ಕೈಜೋಡಿಸಿರುವುದು ನಮಗೆ ಅತ್ಯಂತ ಸಂತೋಷದ ವಿಚಾರ. ಈ ಸಹಭಾಗಿತ್ವವು ಗುಣಮಟ್ಟ, ವಿಶ್ವಾಸ ಮತ್ತು ನಮ್ಮ ಸಮುದಾಯದೊಂದಿಗೆ ಇರುವ ಗಾಢ ಸಂಪರ್ಕ ಎಂಬ ಸಾಮಾನ್ಯ ಮೌಲ್ಯಗಳ ಮೇಲೆ ನಿರ್ಮಾಣವಾಗಿದೆ.

ನಂದಿನಿಯ ಪರಂಪರೆ ಮತ್ತು ರಾಜ್ಯದಾದ್ಯಂತ ಮನೆಮಾತಾಗಿರುವ ಸ್ಥಾನಮಾನ ಈ ಸಂಬಂಧವನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ. ಈ ಸೀಸನ್‌ ತುಂಬ ಅಭಿಮಾನಿಗಳಿಗೆ ಅರ್ಥಪೂರ್ಣ ಕ್ಷಣಗಳನ್ನು ನೀಡಲು ನಾವು ಒಟ್ಟಾಗಿ ಕೆಲಸ ಮಾಡಲಿದ್ದೇವೆ,” ಎಂದು ಹೇಳಿದರು.

ಇದಕ್ಕೂ ಮುನ್ನ KMF, 2024ರ ಟಿ20 ವಿಶ್ವಕಪ್ ಸಂದರ್ಭದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಿತ್ತು.

ಸಿಎಂ ಟ್ವೀಟ್‌

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದು, “ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್ ಕಳೆದ ಐಪಿಎಲ್ ಸೀಸನ್‌ನ ಚಾಂಪಿಯನ್ ತಂಡ ಆರ್‌ಸಿಬಿಯ ಅಧಿಕೃತ ಡೈರಿ ಪಾಲುದಾರವಾಗಿದೆ. ನಂದಿನಿಯ ವಿಶ್ವಾಸಾರ್ಹತೆ ಮತ್ತು ಆರ್‌ಸಿಬಿಯ ಕ್ರೀಡಾ ಬದ್ಧತೆ ಈ ಬಾರಿಯ ಐಪಿಎಲ್‌ನ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ.” ಎಂದು ಎಂದು ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *