ಪದ್ಮಶ್ರೀ ವಸಿಷ್ಠ ನಾರಾಯಣ ಸಿಂಗ್ (Vashishtha Narayan Singh) ದೇಶ ಕಂಡ ಅದ್ಭುತ ಗಣಿತಜ್ಞ. ಶ್ರೀನಿವಾಸ ರಾಮಾನುಜನ್, ಆರ್ಯಭಟ, ಭಾಸ್ಕರಾಚಾರ್ಯ, ವರಾಹಮಿಹಿರಷ್ಟು ಎತ್ತರಕ್ಕೆ ಬೆಳೆಯಬೇಕಿದ್ದವರು. ಆದರೆ ದುರಾದೃಷ್ಟ ಮಾನಸಿಕ ರೋಗಿಯಾಗಿ ಕೊನೆಯುಸಿರು ಎಳೆದರು. ಪದ್ಮಶ್ರೀ ಪುರಸ್ಕೃತ ಡಾ. ವಸಿಷ್ಠ ನಾರಾಯಣ ಸಿಂಗ್. ಮಾನಸಿಕ ಸ್ಥಿತಿ ಸರಿಯಾಗಿದ್ದರೆ ಖಂಡಿತವಾಗಿಯೂ 60, 70ರ ದಶಕದಲ್ಲೇ ಗಣಿತ ಕ್ಷೇತ್ರದಲ್ಲಿ ಭಾರತಕ್ಕೆ ನೋಬೆಲ್ ಪ್ರಶಸ್ತಿ ಬಂದಿರುತ್ತಿತ್ತು. 20 22 2320 22 2320 22 23 ಈ ಮೇಲಿನ ಸಂಖ್ಯೆಗಳನ್ನು ಗಮನಿಸಿ. ಇದು ಯಾವ ಅನುಕ್ರಮ? ಗುಪ್ತ ಗಣಿತವೇ? ಆಟದ ಸಂಖ್ಯೆಯೇ? ಗೊತ್ತಿಲ್ಲ. ಇದನ್ನು ಡಾ. ವಸಿಷ್ಠ ನಾರಾಯಣ ಸಿಂಗ್ ಅವರು ತಮ್ಮ ಮನೆಯ ಗೋಡೆಯ ಮೇಲೆ ಬರೆದಿದ್ದರು. ಈ ಸಂಖ್ಯೆಗಳ ಹಿಂದಿನ ರಹಸ್ಯ ಭೇದಿಸಲು ಗಣಿತಜ್ಞರು ಹರಸಾಹಸಪಟ್ಟರೂ ಆಗಲಿಲ್ಲ. ಇವರ ಜೀವನ ನಿಜವಾಗಿಯೂ ಇತಿಹಾಸವಾಗಬೇಕಿತ್ತು, ಆದರೆ ಕಾಲದ ಆಟಕ್ಕೆ ಸಿಕ್ಕು ಬದಿಗೆ ಸರಿದುಬಿಟ್ಟರು. ತಮ್ಮ ಜೀವನದ ಹತ್ತಾರು ವರ್ಷಗಳು ಆಸ್ಪತ್ರೆಯಲ್ಲೇ ಕಳೆದರು. ಇವರ ಸಂಕ್ಷಿಪ್ತ ಜೀವನ ಇಲ್ಲಿದೆ. ವಸಿಷ್ಠರು 02 ಏಪ್ರಿಲ್ 1946ರಂದು ಲಾಲ ಬಹಾದೂರ್ ಸಿಂಗ್ ಹಾಗೂ ಲಹಾಸೋ ದೇವಿ ಅವರ ಮಗನಾಗಿ ಬಿಹಾರದ ಭೋಜ್‌ಪುರ ಜಿಲ್ಲೆಯ ಸಣ್ಣ ಹಳ್ಳಿಯಾದ ಬಸಂತಪುರದಲ್ಲಿ ಹುಟ್ಟಿದರು. ತಂದೆ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಹುದ್ದೆಯಲ್ಲಿದ್ದರು. ವಸಿಷ್ಠ ಬಾಲ್ಯದಲ್ಲೇ ಅತ್ಯಂತ ಚಾಣಾಕ್ಷ ಹುಡುಗನಾಗಿದ್ದರು. ಗಣಿತದ ಲೆಕ್ಕಗಳೆಂದರೆ ಹಾಲು ಕುಡಿದಷ್ಟೇ ಸರಳ. ಹೀಗಾಗಿ ಶಿಕ್ಷಕರಿಗೆ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದರು. ತನ್ನ ಬಾಲ್ಯದ ಶಿಕ್ಷಣವನ್ನು ಹುಟ್ಟೂರಲ್ಲೇ ಮುಗಿಸಿದ ವಸಿಷ್ಠ ಮುಂದಿನ ವಿದ್ಯಾಭ್ಯಾಸಕ್ಕಾಗಿ ನೇತರ್‌ಹಾಟ್ ವಸತಿ ಶಾಲೆಗೆ ಪರೀಕ್ಷೆ ಬರೆದು ಪಾಸಾಗಿ ಉನ್ನತ ಶಿಕ್ಷಣವನ್ನು ಅಲ್ಲಿ ಪ್ರಾರಂಭಿಸಿದರು. ನೇತರ್‌ಹಾಟ್‌ನಲ್ಲಿದ್ದ ವಸಿಷ್ಠ ಸಿಂಗ್ ಅವರು ತಮ್ಮ ಹೆಚ್ಚಿನ ಸಮಯವನ್ನು ಅಧ್ಯಯನಕ್ಕಾಗಿ ಮೀಸಲಿಟ್ಟಿದ್ದರು. ಬಿಡುವಿನ ಸಮಯದಲ್ಲೂ ವಸಿಷ್ಠರು ತಮ್ಮ ಸಹಪಾಠಿಗಳ ಜೊತೆ ಪುಸ್ತಕಗಳ ಕುರಿತು, ಪ್ರಮೇಯಗಳು ಮತ್ತು ತತ್ವಶಾಸ್ತ್ರವನ್ನು ಚರ್ಚಿಸುತ್ತಿದ್ದರು. 1963ರಲ್ಲಿ ನೇತರ್‌ಹಾಟ್‌ನಲ್ಲಿ ಹೈಯರ್ ಸೆಕೆಂಡರಿ ಪೂರ್ಣಗೊಳಿಸಿದರು. ವಸಿಷ್ಠ ಅವರು BSc ಶಿಕ್ಷಣಕ್ಕಾಗಿ ಪಾಟ್ನಾ ವಿಜ್ಞಾನ ಕಾಲೇಜಿಗೆ ಸೇರಿದರು. ಅಲ್ಲಿಯೂ ಕೂಡ ಶಿಕ್ಷಕರಿಗೆ ವಸಿಷ್ಠ ಅವರು ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದರು. ಕಾಲೇಜಿನಲ್ಲಿ ಓರ್ವ ಗಣಿತ ಶಿಕ್ಷಕರ ಜೊತೆ ವಾದ ಮಾಡುತ್ತಿರುವಾಗ ಪ್ರಾಂಶುಪಾಲರು ಗಮನಿಸಿ ವಸಿಷ್ಠನನ್ನು ಕೂಡಲೇ ತಮ್ಮ ಚೇಂಬರ್‌ಗೆ ಬರಬೇಕೆಂದು ಆದೇಶಿಸಿದರು. ಚೇಂಬರ್‌ನಲ್ಲಿ ವಸಿಷ್ಠನನ್ನು ಪ್ರಶ್ನಿಸಿದಾಗ, “ಸರ್, ನಾನು ಆ ಶಿಕ್ಷಕರ ಜೊತೆ ವಾದ ಮಾಡಲಿಲ್ಲ. ಬದಲಾಗಿ ಗಣಿತದ ಲೆಕ್ಕಗಳನ್ನು ನೀವು ಹೇಳುವ ರೀತಿಯಲ್ಲಷ್ಟೇ ಅಲ್ಲದೆ ಹತ್ತಾರು ರೀತಿಯಲ್ಲಿ ಬಿಡಿಸಬಹುದು ಎಂದು ಹೇಳುತ್ತಿದ್ದೆ” ಎಂದರು. ಕೂಡಲೇ ಆ ಪ್ರಾಂಶುಪಾಲರು “ಬಿಡಿಸಿ ತೋರಿಸು” ಎಂದು ಕೇಳಿದಾಗ ವಸಿಷ್ಠ ಅಲ್ಲಿಯೇ ಬಿಡಿಸಿ ತೋರಿಸಿದರು. ವಸಿಷ್ಠರ ಪ್ರತಿಭೆಗೆ ಮಾರುಹೋದ ಪ್ರಾಂಶುಪಾಲರಾದ ಗಣಿತಜ್ಞ ಪ್ರೊಫೆಸರ್ ನಾಗೇಂದ್ರ ನಾಥ್ ಅವರು ಹೇಳಿದರು, “ನೀನು ಪ್ರಥಮ ವರ್ಷದ BSc ಕಲಿಯೋದು ಬೇಡ. ನೀನು ನೇರವಾಗಿ BSc ಅಂತಿಮ ವರ್ಷಕ್ಕೆ ಹೋಗು. ಅಲ್ಲಿ ನಿನಗೆ ಏನು ಅನುಕೂಲ ಬೇಕೋ ನಾನು ಮಾಡುವೆ.” ಖುಷಿಯಿಂದ ಯುವಕ ವಸಿಷ್ಠ ಒಪ್ಪಿದರು. ಅಷ್ಟೇ ಅಲ್ಲದೆ ಇಡೀ ಬಿಹಾರದಲ್ಲೇ ಪ್ರಥಮ ರ್ಯಾಂಕ್‌ನಲ್ಲಿಯೂ ಪಾಸಾಗಿ ಹೆಸರು ಮಾಡಿದರು. 1964ರಲ್ಲಿ BSc ಮುಗಿಸಿದ ವಸಿಷ್ಠರ ಜೀವನದ ಸಾಧನೆಯ ಹಾದಿ ಪ್ರಾರಂಭವಾಯಿತು. 1965ರಲ್ಲಿ ಪ್ರೊಫೆಸರ್ ನಾಥ್ ಅವರನ್ನು ಭೇಟಿಗೆಂದು ಬಂದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಜಾನ್ ಎಲ್. ಕೆಲ್ಲಿ, ಹದಿಹರೆಯದ ಯುವ ಪ್ರತಿಭೆಯ ಕುರಿತು ಕೇಳಿದರು. ಅವರ ಪ್ರತಿಭೆಗೆ ಮಾರುಹೋದ ಕೆಲ್ಲಿ ವಸಿಷ್ಠರನ್ನು ಅಮೆರಿಕಕ್ಕೆ ಕರೆದೊಯ್ಯಬಹುದೇ ಎಂದು ಕೇಳಿದರು. ಬಸಂತಪುರದ ಭೋಜ್‌ಪುರಿ ಮಾತನಾಡುವ ಹುಡುಗ 19ನೇ ವಯಸ್ಸಿನಲ್ಲಿ ಬರ್ಕ್ಲಿ ಕ್ಯಾಂಪಸ್‌ನಲ್ಲಿ ಪ್ರವೇಶ ಪಡೆದರು. ಅಲ್ಲಿ ಅವರು ತಮ್ಮ MSc ಪದವಿ ಮತ್ತು ನಂತರ Reproducing Kernels and Operators with a Cyclic Vector (Cycle Vector Space Theory) PhD ಮಾಡಿದರು. ಡಾ. ವಸಿಷ್ಠ ನಾರಾಯಣ ಅವರ ವೃತ್ತಿ ಸಾಧನೆ ಅಮೆರಿಕಾದ ಪ್ರತಿಷ್ಠಿತ ವಿಶ್ವವಿದ್ಯಾಲಯವಾದ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಗಣಿತ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು. ಅದಾದ ನಂತರ ನಾಸಾದಲ್ಲಿಯೂ ಸೇವೆ ಸಲ್ಲಿಸಿದರು. ನಾಸಾದಲ್ಲಿ ಕೆಲಸ ಮಾಡಿದ್ದರೂ ಮನಸ್ಸಿಲ್ಲದೆ 1971ರಲ್ಲಿ ಭಾರತಕ್ಕೆ ಮರಳಿದರು. ನಾಸಾದಲ್ಲಿ ನಡೆದ ಘಟನೆ ಅವರ ಬುದ್ಧಿವಂತಿಕೆಗೆ ಹಿಡಿದ ಕೈಗನ್ನಡಿಯಾಗಿದೆ. ನಂತರ IIT ಕಾನ್ಪುರ್, ನಂತರ IIT ಬಾಂಬೆ, ಮತ್ತು ನಂತರ ISI ಕೋಲ್ಕತ್ತಾದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ವಸಿಷ್ಠ ನಾರಾಯಣ್ ಸಿಂಗ್ ಐನ್‌ಸ್ಟೈನ್ ಅವರ ಸಾಪೇಕ್ಷತಾ ಸಿದ್ಧಾಂತವನ್ನು ಪ್ರಶ್ನಿಸಿದ್ದರು. ನಾಸಾದಲ್ಲಿ ಅಪೊಲೊ ಪ್ರಾರಂಭವಾಗುವ ಮೊದಲು 31 ಕಂಪ್ಯೂಟರ್‌ಗಳು ಸ್ವಲ್ಪ ಸಮಯದವರೆಗೆ ಸ್ಥಗಿತಗೊಂಡಾಗ, ಅವುಗಳ ಲೆಕ್ಕಾಚಾರವನ್ನು ಪರಿಶೀಲಿಸಿ ಯಶಸ್ವಿಯಾಗಿ ಅಪೊಲೊ ಉಪಗ್ರಹ ಉಡಾವಣೆಯಾಗಿತ್ತು ಎನ್ನುವ ಕಥೆ ಪ್ರಸಿದ್ಧವಾಗಿದೆ. ಮುಂದೆ ವಸಿಷ್ಠರು ತಂದೆಯ ಇಚ್ಛೆಯಂತೆ 1973ರಲ್ಲಿ ವಂದನಾ ರಾಣಿ ಸಿಂಗ್ ಅವರನ್ನು ವಿವಾಹವಾದರು. ಸತತ ಓದಿನಲ್ಲಿ ನಿರತರಾಗಿದ್ದ ವಸಿಷ್ಠರ ಕುರಿತು ಮಡದಿ ಮಾತ್ರ ಬೇರೆ ಭಾವನೆ ತಾಳಿದಳು. ಯಾವುದೋ ಒಂದು ವಿಷಯದ ಮೇಲೆ ಸಂಶೋಧನೆಯಲ್ಲಿ ತೊಡಗಿದ್ದ ವಸಿಷ್ಠರು ಇನ್ನು ಕೆಲವೇ ದಿನಗಳಲ್ಲಿ ಮುಗಿಸುವ ಹಂತದಲ್ಲಿದ್ದಾಗ ಆ ಎಲ್ಲಾ ಪೇಪರ್‌ಗಳನ್ನು ವಂದನಾ ರಾಣಿ ಸುಟ್ಟು ಹಾಕಿದರು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾದ ವಸಿಷ್ಠರಿಗೆ ಮತ್ತೊಂದು ಆಘಾತವಾಯಿತು. ಅದು ಮಡದಿಯಿಂದ ವಿಚ್ಛೇದನ. ಇದಾದ ಒಂದೇ ವರ್ಷದಲ್ಲಿ ವಸಿಷ್ಠರ ತಂದೆ ಅಕಾಲ ಮರಣಕ್ಕೀಡಾದರು. ಇವೆಲ್ಲ ಆಘಾತದಿಂದ ಅವರು ಮಾನಸಿಕ ಅಸ್ವಸ್ಥತೆಗೆ ಒಳಗಾದರು. ಆಗ ಅವರಿಗೆ ಸ್ಕಿಜೋಫ್ರೆನಿಯಾ ಎನ್ನುವ ರೋಗ ಲಕ್ಷಣಗಳು ಕಾಣಿಸಿಕೊಂಡವು. ಅವರ ಅತ್ತಿಗೆ ಪ್ರಭಾವತಿ ಹೇಳುವಂತೆ: “ಅವನು ಸಣ್ಣ ವಿಷಯಗಳ ಬಗ್ಗೆ ತುಂಬಾ ಕೋಪಗೊಳ್ಳುತ್ತಿದ್ದನು. ಇಡೀ ಮನೆಯ ಸಮಸ್ಯೆಯೇ ತನ್ನ ತಲೆಯ ಮೇಲೆ ಬಿದ್ದಿದೆ ಎನ್ನುವಂತೆ ಆಡುತ್ತಿದ್ದನು. ತನ್ನ ಕೊಠಡಿಯನ್ನು ಮುಚ್ಚಿ ಹಗಲು-ರಾತ್ರಿ ಅಧ್ಯಯನ ಮಾಡುತ್ತಿದ್ದನು. ರಾತ್ರಿಯಿಡೀ ಎಚ್ಚರವಾಗಿರುತ್ತಿದ್ದನು.” ಅವನಿಗೆ ಕೆಲವು ಔಷಧಿಗಳೂ ನೀಡಲಾಗುತ್ತಿತ್ತು. ಒಂದು ಕಡೆ ನೆನಪಿನ ಶಕ್ತಿ ಕಳೆದುಕೊಳ್ಳುವ ಸ್ಕಿಜೋಫ್ರೆನಿಯಾ ರೋಗ, ಮತ್ತೊಂದು ಕಡೆ ಕುಟುಂಬದ ಸಮಸ್ಯೆ. ಇದರ ಜೊತೆಗೆ ತಮ್ಮ ಅಯೋಧ್ಯಾ ಸಿಂಗ್, “ಅಣ್ಣಾ, ನೀವು ಬರೆದ ಪೇಪರ್‌ಗಳನ್ನು ಕದ್ದು ಬೇರೆಯವರು PhD ಪಡೆದುಕೊಂಡರು” ಎಂದು ಹೇಳಿದನು. ಇದರಿಂದಾಗಿ ವಸಿಷ್ಠರು ಮತ್ತಷ್ಟು ಕುಗ್ಗಿದರು. 1974ರಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನೆನಪಿನ ಶಕ್ತಿ ಕಳೆದುಕೊಂಡರು. ನಂತರ ಅವರಿಗೆ ಚಿಕಿತ್ಸೆ ಪ್ರಾರಂಭಿಸಲಾಯಿತು. 1976ರಲ್ಲಿ ರಾಂಚಿಗೆ ಸೇರಿಸಲಾಯಿತು. ಕುಟುಂಬದ ಪ್ರಕಾರ ಚಿಕಿತ್ಸೆ ಸರಿಯಾಗಿ ಮಾಡಿದರೆ ಅವರು ಗುಣಮುಖರಾಗುವ ಸಾಧ್ಯತೆ ಇತ್ತು. ಆದರೆ, ಕಡು ಬಡತನದ ಕುಟುಂಬಕ್ಕೆ ವಸಿಷ್ಠರಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿಲ್ಲ. ಅಂದಿನ ಸರ್ಕಾರ ಸ್ವಲ್ಪ ಮಟ್ಟಿಗೆ ಸಹಾಯ ಮಾಡಿತು ಆದ್ರೆ, ಉಪಯೋಗಕ್ಕೆ ಬರಲಿಲ್ಲ. ಕೊನೆಗೆ ಕುಟುಂಬ 1987ರಲ್ಲಿ ವಸಿಷ್ಠ ನಾರಾಯಣ್ ಅವರನ್ನು ಮನೆಗೆ ಕರೆದುಕೊಂಡುಬಂದರು. ಆದರೆ ಇದ್ದಕ್ಕಿದ್ದಂತೆ 1989ರಲ್ಲಿ ಕಣ್ಮರೆಯಾದರು. 1993ರಲ್ಲಿ ಅವರು ಸರನ್‌ನ ಡೊರೆಗಂಜ್‌ನಲ್ಲಿ ಅತ್ಯಂತ ಕರುಣಾಜನಕ ಸ್ಥಿತಿಯಲ್ಲಿ ಪತೆಯಾದರು. ಅಲ್ಲಿಯೂ ಸಹ ಅವರು ಗಣಿತದ ಸೂತ್ರಗಳನ್ನೇ ಗುನುಗುನಿಸುತ್ತಿದ್ದರು. ಎಷ್ಟೋ ಜನ ಅವರು ಗುನುಗುನಿಸುವ ಲೆಕ್ಕಗಳನ್ನು ಕೇಳಿ ಬರೆದುಕೊಳ್ಳುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಅವರನ್ನು ಕರೆದುಕೊಂಡು ಮತ್ತೆ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿಯೂ ಕೂಡ ಅವರು ಕೇಳುತ್ತಿದ್ದದ್ದು ಪೆನ್ಸಿಲ್ ಮಾತ್ರ. ಇಡೀ ಗೋಡೆಯ ಮೇಲೆ ಸಾವಿರಾರು ಗಣಿತದ ಲೆಕ್ಕಗಳು, ಮತ್ತೆ ಅಳಿಸುವಿಕೆ, ಮತ್ತೆ ಲೆಕ್ಕ—ಹೀಗೆ ಅವರ 12 ವರ್ಷಗಳು ಸಾಗಿತು. ನಂತರ ಮನೆಗೆ ಕರೆದುಕೊಂಡು ಹೋಗಲಾಯಿತು. ಸೈನ್ಯದಿಂದ ನಿವೃತ್ತರಾದ ಡಾ. ವಸಿಷ್ಠ ಅವರ ಸಹೋದರ ಅಯೋಧ್ಯಾ ಸಿಂಗ್ ಹೇಳುವಂತೆ: “ಆಗಿನ ರಕ್ಷಣಾ ಸಚಿವರ ಸಹಾಯದಿಂದ ಅಣ್ಣ ವಸಿಷ್ಠ ಅವರನ್ನು ಬೆಂಗಳೂರಿನಲ್ಲಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಗುಣಮುಖವಾಗಲಿಲ್ಲ.” ಇದಾದ ನಂತರ ವಸಿಷ್ಠರನ್ನು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಗೆ (NIMHANS) ಸೇರಿಸಲಾಯಿತು. 2002ರಲ್ಲಿ ದೆಹಲಿಯ Institute of Human Behaviour and Allied Sciences (IHBAS) ನಲ್ಲಿ ಚಿಕಿತ್ಸೆ ನೀಡಲಾಯಿತು. 2014ರಲ್ಲಿ ಸಿಂಗ್ ಅವರನ್ನು ಮಾಧೇಪುರದ ಭೂಪೇಂದ್ರ ನಾರಾಯಣ್ ಮಂಡಲ್ ವಿಶ್ವವಿದ್ಯಾಲಯದಲ್ಲಿ (BNMU) ಸಂಶೋಧಕ ಪ್ರಾಧ್ಯಾಪಕರಾಗಿ ನೇಮಿಸಲಾಯಿತು. ವಸಿಷ್ಠ ಅವರು 2019ರ ನವೆಂಬರ್ 14 ರಂದು ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದೀರ್ಘಕಾಲದ ಅನಾರೋಗ್ಯದ ನಂತರ ನಿಧನರಾದರು. 2020ರಲ್ಲಿ ಭಾರತ ಸರ್ಕಾರ ಇವರ ಸಾಧನೆಯನ್ನು ಗುರುತಿಸಿ ಮರಣೋತ್ತರವಾಗಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನೀಡಿ ಸನ್ಮಾನಿಸಿತು. ಲೇಖನ: ಸುನೀಲ ಭಾರತೀಯ ಹವ್ಯಾಸಿ ಬರಹಗಾರರು 9731048392 Post navigation ತತ್ತ್ವಶಾಸ್ತ್ರದ ಪಿತಾಮಹ ಕಪಿಲ ಮಹರ್ಷಿ ಕಥೆ Shankaracharya Jayanti: ಆದಿ ಶಂಕರಾಚಾರ್ಯರಿಂದ ವೃದ್ಧೆ ಮನೆಯಲ್ಲಿ ಬಂಗಾರದ ನೆಲ್ಲಿಕಾಯಿಗಳು ಸುರಿದ ಕಥೆ