ನವದೆಹಲಿ, ಫೆಬ್ರವರಿ 19: ಮಾನವಕುಲದ ಆರನೇ ಒಂದು ಭಾಗವನ್ನು ಪ್ರತಿನಿಧಿಸುವ ಭಾರತದಲ್ಲಿ ವಿಶ್ವದ ಅತಿದೊಡ್ಡ ಮತ್ತು ಐತಿಹಾಸಿಕ ‘ಎಐ ಇಂಪ್ಯಾಕ್ಟ್ ಶೃಂಗಸಭೆ’ (AI Impact Summit) ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ ಮಂಟಪದಲ್ಲಿ ‘ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026’ ಅನ್ನು ಉದ್ಘಾಟಿಸಿ ಮಾತನಾಡಿದ ಮೋದಿ ಅವರು, ಭಾರತವು ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆ, ಅತಿದೊಡ್ಡ ತಾಂತ್ರಿಕ ಪ್ರತಿಭಾನ್ವಿತರ ಬಳಗ ಮತ್ತು ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಆಧಾರಿತ ಪರಿಸರ ವ್ಯವಸ್ಥೆಗೆ ನೆಲೆಯಾಗಿದೆ ಎಂದು ಅವರು ಒತ್ತಿಹೇಳಿದರು. ಭಾರತವು ಕೇವಲ ಹೊಸ ತಂತ್ರಜ್ಞಾನಗಳನ್ನು ಸೃಷ್ಟಿಸುವುದು ಮಾತ್ರವಲ್ಲದೆ, ಅವುಗಳನ್ನು ಅಭೂತಪೂರ್ವ ವೇಗದಲ್ಲಿ ಅಳವಡಿಸಿಕೊಳ್ಳುತ್ತದೆ ಎಂದು ಅವರು ಪ್ರತಿಪಾದಿಸಿದರು. 140 ಕೋಟಿ ಭಾರತೀಯರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದರು. ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ವಿವಿಧ ರಾಷ್ಟ್ರಗಳ ಮುಖ್ಯಸ್ಥರಿಗೆ, ಜಾಗತಿಕ ಎಐ ವ್ಯವಸ್ಥೆಯ ನಾಯಕರಿಗೆ ಮತ್ತು ನಾವೀನ್ಯಕಾರರಿಗೆ ಭಾರತೀಯರ ಪರವಾಗಿ ಆತ್ಮೀಯ ಸ್ವಾಗತ ಕೋರಿದರು. ಅವರ ಉಪಸ್ಥಿತಿಗಾಗಿ ಕೃತಜ್ಞತೆ ಸಲ್ಲಿಸಿದ ಅವರು, ಈ ಶೃಂಗಸಭೆಯನ್ನು ಭಾರತದಲ್ಲಿ ಆಯೋಜಿಸಿರುವುದು ಕೇವಲ ದೇಶಕ್ಕೆ ಮಾತ್ರವಲ್ಲದೆ ಇಡೀ ಜಾಗತಿಕ ದಕ್ಷಿಣದ ರಾಷ್ಟ್ರಗಳಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ. ಈ ಶೃಂಗಸಭೆಯು 100 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಮತ್ತು ಜಗತ್ತಿನಾದ್ಯಂತದ ಗಣ್ಯ ಪಾಲ್ಗೊಳ್ಳುವಿಕೆಯೊಂದಿಗೆ ಎಐ ಪ್ರಪಂಚದ ಅತಿರಥ ಮಹಾರಥರನ್ನು ಒಂದೆಡೆ ಸೇರಿಸಿದ್ದು, ಇದರ ಯಶಸ್ಸನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಶೃಂಗಸಭೆಯಲ್ಲಿ ಯುವ ಪೀಳಿಗೆಯ ಬಲವಾದ ಉಪಸ್ಥಿತಿಯನ್ನು ಉಲ್ಲೇಖಿಸಿದ ಅವರು, ಇದು ಹೊಸ ಆತ್ಮವಿಶ್ವಾಸವನ್ನು ತುಂಬುತ್ತದೆ. ಹೊಸ ತಂತ್ರಜ್ಞಾನಗಳು ಆರಂಭದಲ್ಲಿ ಸಂದೇಹಗಳನ್ನು ಎದುರಿಸುವುದು ಸಹಜವಾದರೂ, ವಿಶ್ವದಾದ್ಯಂತ ಯುವಜನರು ಎಐ ಅನ್ನು ಸ್ವೀಕರಿಸುತ್ತಿರುವ, ಅದರ ಮಾಲೀಕತ್ವವನ್ನು ಪಡೆಯುತ್ತಿರುವ ಮತ್ತು ಬಳಸುತ್ತಿರುವ ವೇಗ ಹಾಗೂ ವಿಶ್ವಾಸವು ಅಭೂತಪೂರ್ವವಾಗಿದೆ ಎಂದು ಅವರು ಹೇಳಿದರು. ಎಐ ಶೃಂಗಸಭೆಯ ಪ್ರದರ್ಶನದ ಬಗ್ಗೆ ಇರುವ ಉತ್ಸಾಹವನ್ನು, ವಿಶೇಷವಾಗಿ ಯುವ ಪ್ರತಿಭೆಗಳ ದೊಡ್ಡ ಮಟ್ಟದ ಭಾಗವಹಿಸುವಿಕೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಕೃಷಿ, ಭದ್ರತೆ, ದಿವ್ಯಾಂಗರಿಗೆ ನೆರವು ಮತ್ತು ಬಹುಭಾಷಾ ಜನಸಂಖ್ಯೆಯ ಅಗತ್ಯಗಳನ್ನು ಪೂರೈಸುವಂತಹ ಕ್ಷೇತ್ರಗಳಲ್ಲಿ ಪ್ರಸ್ತುತಪಡಿಸಲಾದ ಪರಿಹಾರಗಳು ‘ಮೇಡ್ ಇನ್ ಇಂಡಿಯಾ’ದ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ ಮತ್ತು ಎಐ ಕ್ಷೇತ್ರದಲ್ಲಿ ಭಾರತದ ನವೀನ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತವೆ ಎಂದು ಅವರು ಹೇಳಿದರು. ಮಾನವ ಇತಿಹಾಸದಲ್ಲಿ, ಪ್ರತಿ ಕೆಲವು ಶತಮಾನಗಳಿಗೊಮ್ಮೆ ನಾಗರಿಕತೆಯ ದಿಕ್ಕನ್ನು ಮರುಹೊಂದಿಸುವ ಒಂದು ತಿರುವು ಉದ್ಭವಿಸುತ್ತದೆ ಎಂದು ಪ್ರಧಾನಿ ಹೇಳಿದರು. ಇಂತಹ ಕ್ಷಣಗಳು ಅಭಿವೃದ್ಧಿಯ ವೇಗವನ್ನು ಬದಲಾಯಿಸುತ್ತವೆ ಮತ್ತು ಆಲೋಚನೆ, ತಿಳುವಳಿಕೆ ಮತ್ತು ಕೆಲಸದ ಮಾದರಿಗಳನ್ನು ರೂಪಾಂತರಿಸುತ್ತವೆ ಎಂದು ಅವರು ತಿಳಿಸಿದರು. ಇಂತಹ ಪರಿವರ್ತನೆಯ ಅವಧಿಯಲ್ಲಿ, ನಿಜವಾದ ಪ್ರಭಾವವು ತಕ್ಷಣವೇ ಅರ್ಥವಾಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಇಂಡಿಯಾ-AI ಮಿಷನ್: ಗಿನ್ನೆಸ್ ವಿಶ್ವ ದಾಖಲೆ ಪಟ್ಟಿಗೆ ಸೇರಿದ ಭಾರತ ಕಲ್ಲುಗಳಿಂದ ಮೊದಲ ಬಾರಿಗೆ ಕಿಡಿಗಳನ್ನು ಸೃಷ್ಟಿಸಿದಾಗ, ಅದೇ ಕಿಡಿ ನಾಗರಿಕತೆಯ ಅಡಿಪಾಯವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದು ಅವರು ಸ್ಮರಿಸಿದರು. ಆಡುಭಾಷೆಯನ್ನು ಮೊದಲು ಲಿಪಿಯಾಗಿ ಪರಿವರ್ತಿಸಿದಾಗ, ಲಿಖಿತ ಜ್ಞಾನವು ಭವಿಷ್ಯದ ವ್ಯವಸ್ಥೆಗಳ ಬೆನ್ನೆಲುಬಾಗುತ್ತದೆ ಎಂದು ಯಾರೂ ಅರಿತುಕೊಂಡಿರಲಿಲ್ಲ ಎಂದು ಶ್ರೀ ಮೋದಿ ಉಲ್ಲೇಖಿಸಿದರು. ತಂತಿರಹಿತವಾಗಿ ಸಂಕೇತಗಳನ್ನು (ಸಿಗ್ನಲ್ ಗಳನ್ನು) ಮೊದಲು ರವಾನಿಸಿದಾಗ, ಒಂದು ದಿನ ಇಡೀ ಜಗತ್ತು ನೈಜ ಸಮಯದಲ್ಲಿ ಸಂಪರ್ಕಗೊಳ್ಳುತ್ತದೆ ಎಂದು ಯಾರೂ ಕಲ್ಪಿಸಿಕೊಂಡಿರಲಿಲ್ಲ ಎಂದು ತಿಳಿಸಿದರು. “ಕೃತಕ ಬುದ್ಧಿಮತ್ತೆಯು ಮಾನವ ನಾಗರಿಕತೆಯ ಐತಿಹಾಸಿಕ ತಿರುವುಗಳಷ್ಟೇ ಭಾರಿ ಪ್ರಮಾಣದ ರೂಪಾಂತರವನ್ನು ಪ್ರತಿನಿಧಿಸುತ್ತದೆ” ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು. ಇಂದು ನಾವು ನೋಡುತ್ತಿರುವುದು ಮತ್ತು ಊಹಿಸುತ್ತಿರುವುದು ಅದರ ಪ್ರಭಾವದ ಆರಂಭಿಕ ಚಿಹ್ನೆಗಳು ಮಾತ್ರ ಎಂದು ಅವರು ಹೇಳಿದರು. ಎಐ ಯಂತ್ರಗಳನ್ನು ಬುದ್ಧಿವಂತವಾಗಿಸುತ್ತಿದೆ, ಆದರೆ ಅದಕ್ಕಿಂತ ಮುಖ್ಯವಾಗಿ, ಇದು ಮಾನವ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸುತ್ತಿದೆ ಎಂದು ತಿಳಿಸಿದ್ದಾರೆ. ಈ ಬಾರಿಯ ವ್ಯತ್ಯಾಸವೆಂದರೆ ಅದರ ಅಭೂತಪೂರ್ವ ವೇಗ ಮತ್ತು ನಿರೀಕ್ಷೆಗೂ ಮೀರಿದ ಪ್ರಮಾಣ ಎಂದು ಪ್ರಧಾನಮಂತ್ರಿ ಹೇಳಿದರು. ಹಿಂದೆ ತಂತ್ರಜ್ಞಾನದ ಪ್ರಭಾವವು ವ್ಯಕ್ತವಾಗಲು ದಶಕಗಳೇ ಬೇಕಾಗುತ್ತಿತ್ತು, ಆದರೆ ಇಂದು ‘ಮೆಷಿನ್ ಲರ್ನಿಂಗ್’ನಿಂದ ‘ಲರ್ನಿಂಗ್ ಮೆಷಿನ್ಸ್’ವರೆಗಿನ ಪಯಣವು ವೇಗವಾಗಿ, ಆಳವಾಗಿ ಮತ್ತು ವಿಸ್ತಾರವಾಗಿ ಸಾಗುತ್ತಿದೆ ಎಂದು ಅವರು ಹೇಳಿದರು. ಇದು ವಿಶಾಲವಾದ ದೃಷ್ಟಿಕೋನ ಮತ್ತು ಅಷ್ಟೇ ಹೆಚ್ಚಿನ ಜವಾಬ್ದಾರಿಯನ್ನು ಬಯಸುತ್ತದೆ ಎಂದು ಹೇಳಿದರು. ಪ್ರಸ್ತುತ ಪೀಳಿಗೆಯ ಜೊತೆಗೆ, ಭವಿಷ್ಯದ ಪೀಳಿಗೆಗೆ ಹಸ್ತಾಂತರಿಸುವ ಎಐ ರೂಪದ ಬಗ್ಗೆಯೂ ಕಾಳಜಿ ಇರಬೇಕು ಎಂದು ಶ್ರೀ ಮೋದಿ ಹೇಳಿದರು. ಭವಿಷ್ಯದಲ್ಲಿ ಎಐ ಏನು ಮಾಡಬಲ್ಲದು ಎಂಬುದು ಅಸಲಿ ಪ್ರಶ್ನೆಯಲ್ಲ, ಬದಲಾಗಿ ವರ್ತಮಾನದಲ್ಲಿ ಮಾನವಕುಲವು ಎಐ ಅನ್ನು ಹೇಗೆ ಬಳಸಿಕೊಳ್ಳಲು ಆಯ್ಕೆ ಮಾಡುತ್ತದೆ ಎಂಬುದು ಮುಖ್ಯ ಎಂದು ಹೇಳಿದರು. ಪರಮಾಣು ಶಕ್ತಿಯ ಸಾಮ್ಯತೆಯನ್ನು ನೀಡಿದ ಪ್ರಧಾನಮಂತ್ರಿಯವರು, ಮಾನವಕುಲವು ಅದರ ವಿನಾಶಕಾರಿ ಸಾಮರ್ಥ್ಯ ಮತ್ತು ಸಕಾರಾತ್ಮಕ ಕೊಡುಗೆಗಳೆರಡನ್ನೂ ಕಂಡಿದೆ ಎಂದು ಹೇಳಿದರು. ಎಐ ಕೂಡ ಒಂದು ರೂಪಾಂತರದ ಶಕ್ತಿಯಾಗಿದೆ – ಅದಕ್ಕೆ ದಿಕ್ಕು ದೆಸೆ ಇಲ್ಲದಿದ್ದರೆ ಅದು ಅಸ್ತವ್ಯಸ್ತತೆಗೆ ಕಾರಣವಾಗುತ್ತದೆ, ಆದರೆ ಸರಿಯಾದ ದಿಕ್ಕಿನಲ್ಲಿ ಸಾಗಿದರೆ ಅದು ಪರಿಹಾರವಾಗುತ್ತದೆ ಎಂದು ಅವರು ಪ್ರತಿಪಾದಿಸಿದರು. ಜಾಗತಿಕ ಎಐ ಇಂಪ್ಯಾಕ್ಟ್ ಶೃಂಗಸಭೆಯ ಮೂಲ ಉದ್ದೇಶವು ಎಐ ಅನ್ನು ಯಂತ್ರ-ಕೇಂದ್ರಿತವಾಗಿಸುವ ಬದಲಿಗೆ ಮಾನವ-ಕೇಂದ್ರಿತವಾಗಿಸುವುದು ಹೇಗೆ ಮತ್ತು ಅದನ್ನು ಸಂವೇದನಾಶೀಲ ಹಾಗೂ ಜವಾಬ್ದಾರಿಯುತವಾಗಿಸುವುದು ಹೇಗೆ ಎಂಬುದರ ಕುರಿತು ಚರ್ಚಿಸುವುದಾಗಿದೆ ಎಂದರು. ಎಐ ಬಗ್ಗೆ ಭಾರತದ ದೃಷ್ಟಿಕೋನವು ಶೃಂಗಸಭೆಯ ವಿಷಯವಾದ ‘ಸರ್ವಜನ ಹಿತಾಯ, ಸರ್ವಜನ ಸುಖಾಯ’ – ಎಲ್ಲರ ಕಲ್ಯಾಣ, ಎಲ್ಲರ ಸಂತೋಷ ಎಂಬಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಅವರು ತಿಳಿಸಿದರು. ಇದು ಭಾರತದ ಮಾನದಂಡ ಎಂದು ಅವರು ಹೇಳಿದರು. ಮಾನವರು ಕೇವಲ ‘ಡೇಟಾ ಪಾಯಿಂಟ್ಸ್’ ಅಥವಾ ಎಐಗಾಗಿ ಕಚ್ಚಾ ವಸ್ತುಗಳಾಗಬಾರದು ಎಂದು ಅವರು ಎಚ್ಚರಿಸಿದರು ಮತ್ತು ಆದ್ದರಿಂದ ಎಐ ಅನ್ನು ಪ್ರಜಾಪ್ರಭುತ್ವೀಕರಣಗೊಳಿಸಬೇಕು ಎಂದರು. ಎಐ ವಿಶೇಷವಾಗಿ ಜಾಗತಿಕ ದಕ್ಷಿಣದ ರಾಷ್ಟ್ರಗಳಲ್ಲಿ ಒಳಗೊಳ್ಳುವಿಕೆ ಮತ್ತು ಸಬಲೀಕರಣದ ಮಾಧ್ಯಮವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹಿರಿದಾಗಿ ಹೇಳಿದರು. ಎಐಗೆ ಮುಕ್ತ ಆಕಾಶವನ್ನು ನೀಡಬೇಕು, ಆದರೆ ಅದರ ನಿಯಂತ್ರಣ ಮಾನವನ ಕೈಯಲ್ಲೇ ಇರಬೇಕು ಎಂದು ಪ್ರಧಾನಮಮತ್ರಿ ತಿಳಿಸಿದರು. ಇದನ್ನು ಜಿಪಿಎಸ್ ಗೆ ಹೋಲಿಸಿದ ಅವರು, ಅದು ಮಾರ್ಗವನ್ನು ಸೂಚಿಸುತ್ತದೆ ಆದರೆ ಅಂತಿಮ ನಿರ್ಧಾರವನ್ನು ಬಳಕೆದಾರರಿಗೆ ಬಿಡುತ್ತದೆ ಎಂದರು. ಇಂದು ಮಾನವಕುಲವು ಎಐ ಅನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತದೆ ಎಂಬುದು ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ನವದೆಹಲಿಯ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರು ಭಾರತದ ಎಐಗಾಗಿ ‘M.A.N.A.V.’ (ಮಾನವ್) ದೃಷ್ಟಿಕೋನವನ್ನು ಮಂಡಿಸಿದರು. M.A.N.A.V. ಎಂದರೆ: M – ನೈತಿಕ ಮತ್ತು ನೀತಿಬದ್ಧ ವ್ಯವಸ್ಥೆಗಳು: ಎಐ ನೈತಿಕ ಮಾರ್ಗಸೂಚಿಗಳನ್ನು ಆಧರಿಸಿರಬೇಕು. A – ಹೊಣೆಗಾರಿಕೆಯ ಆಡಳಿತ: ಪಾರದರ್ಶಕ ನಿಯಮಗಳು ಮತ್ತು ದೃಢವಾದ ಮೇಲ್ವಿಚಾರಣೆ. N – ರಾಷ್ಟ್ರೀಯ ಸಾರ್ವಭೌಮತ್ವ: ದತ್ತಾಂಶವು ಅದರ ಹಕ್ಕುದಾರರಿಗೆ ಸೇರಿದ್ದು. A – ಸುಲಭ ಲಭ್ಯತೆ ಮತ್ತು ಒಳಗೊಳ್ಳುವಿಕೆ: ಎಐ ಏಕಸ್ವಾಮ್ಯವಾಗಬಾರದು, ಬದಲಾಗಿ ಗುಣಕವಾಗಬೇಕು. V-ಮಾನ್ಯತೆ ಮತ್ತು ಕಾನೂನುಬದ್ಧತೆ: ಎಐ ಕಾನೂನುಬದ್ಧ ಮತ್ತು ಪರಿಶೀಲಿಸುವಂತಿರಬೇಕು. ಭಾರತದ M.A.N.A.V. ದೃಷ್ಟಿಕೋನವು 21ನೇ ಶತಮಾನದ ಎಐ ಚಾಲಿತ ಜಗತ್ತಿನಲ್ಲಿ ಮನುಕುಲದ ಕಲ್ಯಾಣಕ್ಕಾಗಿ ಒಂದು ಪ್ರಮುಖ ಕೊಂಡಿಯಾಗಲಿದೆ ಎಂದು ಅವರು ಪ್ರತಿಪಾದಿಸಿದರು. ದಶಕಗಳ ಹಿಂದೆ ಇಂಟರ್ನೆಟ್ ಪ್ರಾರಂಭವಾದಾಗ, ಅದು ಎಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು. ಇಂದು ಎಐ ವಿಷಯದಲ್ಲೂ ಇದು ನಿಜವಾಗಿದೆ, ಭವಿಷ್ಯದಲ್ಲಿ ಎಂತಹ ಉದ್ಯೋಗಗಳು ಹೊರಹೊಮ್ಮಲಿವೆ ಎಂದು ಊಹಿಸುವುದು ಕಷ್ಟ ಎಂದು ಅವರು ತಿಳಿಸಿದರು. ಎಐನಲ್ಲಿ ಕೆಲಸದ ಭವಿಷ್ಯವು ಮೊದಲೇ ನಿರ್ಧರಿಸಲ್ಪಟ್ಟಿಲ್ಲ, ಆದರೆ ಅದು ಸಾಮೂಹಿಕ ನಿರ್ಧಾರಗಳು ಮತ್ತು ಕ್ರಮಗಳನ್ನು ಅವಲಂಬಿಸಿರುತ್ತದೆ ಎಂದು ಒತ್ತಿ ಹೇಳಿದರು. ಕೆಲಸದ ಭವಿಷ್ಯವು ಒಂದು ಹೊಸ ಅವಕಾಶವಾಗಿದ್ದು, ಇದು ಮಾನವರು ಮತ್ತು ಬುದ್ಧಿವಂತ ವ್ಯವಸ್ಥೆಗಳು ಸಹ-ಸೃಷ್ಟಿಸುವ, ಸಹ-ಕೆಲಸ ಮಾಡುವ ಮತ್ತು ಸಹ-ವಿಕಸನಗೊಳ್ಳುವ ಯುಗವನ್ನು ಸೂಚಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು. ಎಐ ಕೆಲಸವನ್ನು ಹೆಚ್ಚು ಚತುರ, ಹೆಚ್ಚು ದಕ್ಷ ಮತ್ತು ಹೆಚ್ಚು ಪ್ರಭಾವಶಾಲಿಯಾಗಿಸುತ್ತದೆ, ಇದು ಉತ್ತಮ ವಿನ್ಯಾಸ, ವೇಗದ ನಿರ್ಮಾಣ ಮತ್ತು ಸುಧಾರಿತ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸಕ್ರಿಯಗೊಳಿಸುತ್ತದೆ ಎಂದರು. ಎಐ ಹೆಚ್ಚು ಮೌಲ್ಯಯುತ, ಸೃಜನಶೀಲ ಮತ್ತು ಅರ್ಥಪೂರ್ಣ ಪಾತ್ರಗಳನ್ನು ಹೆಚ್ಚಿನ ಜನರಿಗೆ ಮುಕ್ತಗೊಳಿಸುತ್ತದೆ, ಇದು ನಾವೀನ್ಯತೆ, ಉದ್ಯಮಶೀಲತೆ ಮತ್ತು ಹೊಸ ಕೈಗಾರಿಕೆಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಶ್ರೀ ಮೋದಿ ಗಮನಿಸಿದರು. ಕೌಶಲ್ಯ ಅಭಿವೃದ್ಧಿ, ಮರು-ಕೌಶಲ್ಯಮತ್ತು ಜೀವಮಾನದ ಕಲಿಕೆಯನ್ನು ಜನಾಂದೋಲನವನ್ನಾಗಿ ಮಾಡುವ ಪ್ರಾಮುಖ್ಯತೆಯನ್ನು ಹೇಳಿದರು. ಕೆಲಸದ ಭವಿಷ್ಯವು ಒಳಗೊಳ್ಳುವಿಕೆ, ವಿಶ್ವಾಸಾರ್ಹತೆ ಮತ್ತು ಮಾನವ-ಕೇಂದ್ರಿತವಾಗಿರುತ್ತದೆ ಎಂದು ಪ್ರತಿಪಾದಿಸಿದ ಪ್ರಧಾನಮಂತ್ರಿಯವರು, ಮಾನವಕುಲವು ಒಟ್ಟಾಗಿ ಮುನ್ನಡೆದರೆ, ಕೃತಕ ಬುದ್ಧಿಮತ್ತೆಯು ಮಾನವ ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು. ಪಾರದರ್ಶಕತೆಯೇ ದೊಡ್ಡ ರಕ್ಷಣೆ ಎಂದು ಹೇಳಿದ ಪ್ರಧಾನಮಂತ್ರಿಯವರು, “ಸೂರ್ಯನ ಬೆಳಕು ಅತ್ಯುತ್ತಮ ಸೋಂಕುನಿವಾರಕ” ಎಂಬ ಗಾದೆಯನ್ನು ಉಲ್ಲೇಖಿಸಿದರು. ಕೆಲವು ದೇಶಗಳು ಮತ್ತು ಕಂಪನಿಗಳು ಎಐ ಅನ್ನು ಗೌಪ್ಯವಾಗಿ ಅಭಿವೃದ್ಧಿಪಡಿಸಬೇಕಾದ ಕಾರ್ಯತಂತ್ರದ ಆಸ್ತಿ ಎಂದು ಪರಿಗಣಿಸಿದರೆ, ಭಾರತವು ಎಐ ಅನ್ನು ಜಗತ್ತಿನೊಂದಿಗೆ ಹಂಚಿಕೊಂಡಾಗ ಮಾತ್ರ ಅದು ಜಗತ್ತಿಗೆ ಪ್ರಯೋಜನಕಾರಿಯಾಗುತ್ತದೆ ಎಂದು ನಂಬುತ್ತದೆ ಎಂದರು. ಓಪನ್ ಕೋಡ್ ಮತ್ತು ಹಂಚಿಕೆಯ ಅಭಿವೃದ್ಧಿಯು ಲಕ್ಷಾಂತರ ಯುವ ಮನಸ್ಸುಗಳಿಗೆ ಎಐ ಅನ್ನು ಉತ್ತಮವಾಗಿ ಮತ್ತು ಸುರಕ್ಷಿತವಾಗಿ ಮಾಡಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು. ಎಐ ಅನ್ನು ‘ಜಾಗತಿಕ ಸಾಮಾನ್ಯ ಒಳಿತಾಗಿ’ ಅಭಿವೃದ್ಧಿಪಡಿಸಲು ಸಾಮೂಹಿಕ ಸಂಕಲ್ಪಕ್ಕೆ ಕರೆ ನೀಡಿದರು. ಜಾಗತಿಕ ಮಾನದಂಡಗಳ ತುರ್ತು ಅಗತ್ಯವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಡೀಪ್ ಫೇಕ್ ಗಳು ಮತ್ತು ಕಟ್ಟುಕಥೆಯ ವಿಷಯಗಳು ಮುಕ್ತ ಸಮಾಜಗಳನ್ನು ಅಸ್ಥಿರಗೊಳಿಸುತ್ತಿವೆ ಎಂದು ಹೇಳಿದರು. ಆಹಾರದ ಮೇಲಿನ ಪೌಷ್ಟಿಕಾಂಶದ ಲೇಬಲ್ ಗಳ ಉದಾಹರಣೆ ನೀಡಿದ ಅವರು, ಡಿಜಿಟಲ್ ವಿಷಯಗಳೂ ಸಹ ಅಧಿಕೃತತೆಯ ಲೇಬಲ್ ಗಳನ್ನು ಹೊಂದಿರಬೇಕು, ಇದರಿಂದ ಜನರು ಅಸಲಿ ಮತ್ತು ಎಐ-ಸೃಷಿಯ ವಿಷಯಗಳ ನಡುವೆ ವ್ಯತ್ಯಾಸವನ್ನು ಗುರುತಿಸಬಹುದು ಎಂದರು. ಎಐ ಹೆಚ್ಚಾಗಿ ಪಠ್ಯ, ಚಿತ್ರಗಳು ಮತ್ತು ವೀಡಿಯೊಗಳನ್ನು ರಚಿಸುತ್ತಿರುವುದರಿಂದ ‘ವಾಟರ್‌ಮಾರ್ಕಿಂಗ್’ ಮತ್ತು ಸ್ಪಷ್ಟ ಮೂಲ ಮಾನದಂಡಗಳ ಅಗತ್ಯವು ಹೆಚ್ಚುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು, ತಂತ್ರಜ್ಞಾನದಲ್ಲಿ ಮೊದಲಿನಿಂದಲೇ ನಂಬಿಕೆಯನ್ನು ನಿರ್ಮಿಸಬೇಕು ಎಂದು ಹೇಳಿದರು. ಮಕ್ಕಳ ಸುರಕ್ಷತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಶಾಲಾ ಪಠ್ಯಕ್ರಮವನ್ನು ಹೇಗೆ ರೂಪಿಸಲಾಗುತ್ತದೆಯೋ ಹಾಗೆಯೇ ಎಐ ಕ್ಷೇತ್ರವೂ ಮಕ್ಕಳ ಪಾಲಿಗೆ ಸುರಕ್ಷಿತವಾಗಿರಬೇಕು ಮತ್ತು ಕುಟುಂಬದಿಂದ ಮಾರ್ಗದರ್ಶಿಸಲ್ಪಡಬೇಕು ಎಂದು ಹೇಳಿದರು. ಇಂದು ಎರಡು ರೀತಿಯ ಜನರಿದ್ದಾರೆ – ಎಐನಲ್ಲಿ ಭಯವನ್ನು ಕಾಣುವವರು ಮತ್ತು ಅದರಲ್ಲಿ ಭವಿಷ್ಯವನ್ನು ಕಾಣುವವರು ಎಂದು ಅವರು ಹೇಳಿದರು. ಭಾರತವು ಪ್ರತಿಭೆ, ಶಕ್ತಿಯ ಸಾಮರ್ಥ್ಯ ಮತ್ತು ನೀತಿಯ ಸ್ಪಷ್ಟತೆಯ ಬೆಂಬಲದೊಂದಿಗೆ ಎಐನಲ್ಲಿ ಭವಿಷ್ಯ ಮತ್ತು ಅದೃಷ್ಟವನ್ನು ಕಾಣುತ್ತಿದೆ ಎಂದು ಅವರು ಪ್ರತಿಪಾದಿಸಿದರು. ಶೃಂಗಸಭೆಯ ಸಂದರ್ಭದಲ್ಲಿ ಮೂರು ಭಾರತೀಯ ಕಂಪನಿಗಳು ತಮ್ಮ ಎಐ ಮಾಡೆಲ್ ಗಳು ಮತ್ತು ಆಪ್ ಗಳನ್ನು ಬಿಡುಗಡೆ ಮಾಡಿರುವುದಕ್ಕೆ ಶ್ರೀ ಮೋದಿ ಸಂತೋಷ ವ್ಯಕ್ತಪಡಿಸಿದರು. ಈ ಮಾಡೆಲ್ ಗಳು ಭಾರತದ ಯುವಜನರ ಪ್ರತಿಭೆಯನ್ನು ಪ್ರತಿಬಿಂಬಿಸುತ್ತವೆ ಮತ್ತು ಜಾಗತಿಕ ಎಐ ಭೂದೃಶ್ಯಕ್ಕೆ ಭಾರತವು ನೀಡುತ್ತಿರುವ ಪರಿಹಾರಗಳ ಆಳ ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸುತ್ತವೆ ಎಂದು ಹೇಳಿದರು. ಸೆಮಿಕಂಡಕ್ಟರ್ ಗಳು ಮತ್ತು ಚಿಪ್-ತಯಾರಿಕೆಯಿಂದ ಹಿಡಿದು ಕ್ವಾಂಟಮ್ ಕಂಪ್ಯೂಟಿಂಗ್ ವರೆಗೆ ಭಾರತವು ಸ್ಥಿತಿಸ್ಥಾಪಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ ಎಂದು ತಿಳಿಸಿದರು. ಸುರಕ್ಷಿತ ಡೇಟಾ ಕೇಂದ್ರಗಳು, ಬಲವಾದ ಐಟಿ ಬೆನ್ನೆಲುಬು ಮತ್ತು ಕ್ರಿಯಾತ್ಮಕ ನವೋದ್ಯಮ ಪರಿಸರ ವ್ಯವಸ್ಥೆಯು ಭಾರತವನ್ನು ಮಿತವ್ಯಯದ, ವಿಸ್ತರಿಸಬಹುದಾದ ಮತ್ತು ಸುರಕ್ಷಿತವಾದ ಎಐ ಪರಿಹಾರಗಳ ಸಹಜ ಕೇಂದ್ರವನ್ನಾಗಿ ಮಾಡುತ್ತದೆ ಎಂದು ಹೇಳಿದರು. ಭಾರತವು ವೈವಿಧ್ಯತೆ, ಜನಸಂಖ್ಯಾ ಲಾಭ ಮತ್ತು ಪ್ರಜಾಪ್ರಭುತ್ವವನ್ನು ಹೊಂದಿದೆ ಎಂದು ಶ್ರೀ ಮೋದಿ ಹೇಳಿದರು. ಭಾರತದಲ್ಲಿ ಯಶಸ್ವಿಯಾಗುವ ಯಾವುದೇ ಎಐ ಮಾದರಿಯನ್ನು ಜಾಗತಿಕವಾಗಿ ಅಳವಡಿಸಬಹುದು ಎಂದು ಅವರು ಹೇಳಿದರು. ‘ಭಾರತದಲ್ಲಿ ವಿನ್ಯಾಸಗೊಳಿಸಿ ಮತ್ತು ಅಭಿವೃದ್ಧಿಪಡಿಸಿ. ಜಗತ್ತಿಗೆ ತಲುಪಿಸಿ. ಮಾನವಕುಲಕ್ಕೆ ತಲುಪಿಸಿ’ ಎಂಬ ಕರೆಯೊಂದಿಗೆ ಅವರು ಜಗತ್ತಿಗೆ ಆಮಂತ್ರಣ ನೀಡಿದರು. ಭಾಗವಹಿಸುವ ಎಲ್ಲರಿಗೂ ಶುಭ ಹಾರೈಸುವ ಮೂಲಕ ಅವರು ತಮ್ಮ ಮಾತು ಮುಗಿಸಿದರು. ಫ್ರಾನ್ಸ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಎಮ್ಯಾನುಯೆಲ್ ಮ್ಯಾಕ್ರನ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ವಿವಿಧ ರಾಷ್ಟ್ರಗಳ ಮುಖ್ಯಸ್ಥರು, ಸಚಿವರು, ಬಹುಪಕ್ಷೀಯ ಸಂಸ್ಥೆಗಳ ಹಿರಿಯ ಪ್ರತಿನಿಧಿಗಳು ಮತ್ತು ತಂತ್ರಜ್ಞಾನ ಹಾಗೂ ಎಐ ಉದ್ಯಮದ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಇಂಡಿಯಾ-AI ಮಿಷನ್: ಗಿನ್ನೆಸ್ ವಿಶ್ವ ದಾಖಲೆ ಪಟ್ಟಿಗೆ ಸೇರಿದ ಭಾರತ UKಯ ರಾಯಲ್ ಎಂಟೊಮೋಲಾಜಿಕಲ್ ಸೊಸೈಟಿ ಫೋಟೋಗ್ರಫಿ ಪ್ರಶಸ್ತಿ ಭಾರತದ ರಘುರಾಮ್ ಅನ್ನದಾನ ಮುಡಿಗೆ