Hubballi Unkal Siddappajja New Temple Without brick, cement, sand, ironಉಣಕಲ್‌ ಸಿದ್ದಪ್ಪಜ್ಜ ದೇವಸ್ಥಾನ

ಹುಬ್ಬಳ್ಳಿ, ಮಾರ್ಚ್‌ 17:  ಉಣಕಲ್ ಕೆರೆಯ (Unakal Lake) ತೀರದಲ್ಲಿ ನಿರ್ಮಾಣಗೊಂಡಿರುವ ಹೊಸ ಸಿದ್ಧಪ್ಪಜ್ಜ ದೇವಾಲಯವನ್ನು (Siddappajja Temple) ಜಗದ್ಗುರು ಪ್ರಸನ್ನ ರೇಣುಕ ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಅವರು ಉದ್ಘಾಟಿಸಿದರು.

ದೇವಾಲಯವನ್ನು ಇಟ್ಟಿಗೆ, ಸಿಮೆಂಟ್, ಮರಳು ಅಥವಾ ಕಬ್ಬಿಣ ಇಲ್ಲದೆ ಕೇವಲ ಕಲ್ಲುಗಳನ್ನು ಪರಸ್ಪರ ಇಂಟರ್‌ಲಾಕ್ ಮೂಲಕ ಜೋಡಿಸಿ ನಿರ್ಮಿಸಲಾಗಿದೆ. ಪ್ರಕೃತಿ ವಿಕೋಪಗಳನ್ನು ಹೊರತುಪಡಿಸಿದರೆ ಈ ಕಟ್ಟಡಕ್ಕೆ ದೀರ್ಘಾಯುಷ್ಯವಿದೆ ಎಂದು ಸಮಿತಿ ಸದಸ್ಯರು ಖಾಸಗಿ ಸುದ್ದಿ ಸಂಸ್ಥೆ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದ್ದಾರೆ.

ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ದೇವಾಲಯವು ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ದೇವಾಲಯದ ಹಿಂಭಾಗದಿಂದ ಕೆರೆಯ ಸುಂದರ ದೃಶ್ಯವನ್ನು ಕಾಣಬಹುದಾಗಿದೆ.

ಸದ್ಗುರು ಶ್ರೀ ಸಿದ್ಧೇಶ್ವರ ಸ್ವಾಮಿ ಮಠ (ಹೊಸ ಮಠ) ಪಂಚ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಅವರು ಮಾತನಾಡಿ, BRTS ಮಾರ್ಗ ನಿರ್ಮಾಣವಾದ ಬಳಿಕ ಹಳೆಯ ದೇವಾಲಯದ ಆಕರ್ಷಣೆ ಕಡಿಮೆಯಾಯಿತು. ಆದ್ದರಿಂದ ಭಕ್ತರು ವಿಶಿಷ್ಟ ರೀತಿಯಲ್ಲಿ ದೇವಾಲಯ ನಿರ್ಮಿಸಲು ಎರಡು ವರ್ಷಗಳ ಹಿಂದೆ ಹಣ ಸಂಗ್ರಹಿಸುವ ಮೂಲಕ ಕಾರ್ಯಾರಂಭ ಮಾಡಿದರು ಎಂದು ಹೇಳಿದರು.

ಸುಮಾರು ಒಂದು ಶತಮಾನ ಹಿಂದೆ ನೀಲಮ್ಮ ಮತ್ತು ಸಣ್ಣಫಕ್ಕಿರಪ್ಪ ಬೆಣಚಿ ಅವರು ದೇವಾಲಯಕ್ಕೆ ಎರಡು ಎಕರೆ ಜಾಗ ದಾನ ಮಾಡಿದ್ದರು. ದೇಣಿಗೆ ಕಾರ್ಯ ಆರಂಭಿಸಿದಾಗ ಭಕ್ತರ ಸಹಕಾರದಿಂದ ಕೇವಲ 10 ನಿಮಿಷಗಳಲ್ಲಿ 42 ಲಕ್ಷ ರೂ. ಸಂಗ್ರಹವಾಗಿದ್ದು, ಇದು ನಿರ್ಮಾಣ ಕಾರ್ಯಕ್ಕೆ ಪ್ರೇರಣೆಯಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು 5 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಸಮಿತಿ ಸದಸ್ಯ ವಿಶ್ವನಾಥ ಕೊರವಿ ಅವರ ಪ್ರಕಾರ, ಸಿದ್ಧರೂಢ ಸ್ವಾಮಿಗಳ ಕಾಲದಲ್ಲೇ ಸಿದ್ಧಪ್ಪಜ್ಜ ಕೂಡ ಬದುಕಿದ್ದರು. ಸಿದ್ಧರೂಢರನ್ನು ‘ರಾಜಯೋಗಿ’ ಎಂದು ಕರೆಯಲಾಗುತ್ತಿದ್ದರೆ, ಸಿದ್ಧಪ್ಪಜ್ಜರನ್ನು ‘ಹಠಯೋಗಿ’ ಎಂದು ಕರೆಯಲಾಗುತ್ತಿತ್ತು.

ಮುರುಡೇಶ್ವರದ ಮುಖ್ಯ ಶಿಲ್ಪಿ ಜಯಂತ್ ಜಟ್ಟಯೋ ನಾಯಕ್ ಅವರು ದೇವಾಲಯವನ್ನು ನಿರ್ಮಿಸಿದ್ದಾರೆ. ದೇವಾಲಯದ ಗೋಪುರವು 27 ಅಡಿ ಎತ್ತರವಿದ್ದು, ಗರ್ಭಗುಡಿಯಲ್ಲಿ ಸಿದ್ಧಪ್ಪಜ್ಜರ ಮೂರ್ತಿ ಸ್ಥಾಪಿಸಲಾಗಿದೆ. ಪ್ರಾಂಗಣದಲ್ಲಿ 6 ಅಡಿ ಎತ್ತರದ ನಂದಿ ಮೂರ್ತಿ ಹಾಗೂ ಪ್ರವೇಶ ದ್ವಾರದಲ್ಲಿ ಎರಡು ಆನೆಗಳ ಶಿಲ್ಪಗಳನ್ನು ಸ್ಥಾಪಿಸಲಾಗಿದೆ.

ವಾಸ್ತುಶಿಲ್ಪಿ ಗುರು ಹಿರೇಮಠ ಅವರ ಪ್ರಕಾರ, ದೇವಾಲಯದ ಅಡಿಪಾಯದಿಂದ ಗೋಪುರದವರೆಗೆ ಬಾಗೇಪಳ್ಳಿ ಕಲ್ಲು ಬಳಸಲಾಗಿದೆ. ದೇವಾಲಯದ ಅಗಲ 35 ಅಡಿ ಮತ್ತು ಉದ್ದ 61 ಅಡಿ ಆಗಿದೆ. ದ್ರಾವಿಡ ಶೈಲಿಯ ಜೊತೆಗೆ ಚಾಲುಕ್ಯ, ಕದಂಬ ಮತ್ತು ಹೊಯ್ಸಳ ಶೈಲಿಗಳ ಸ್ವಲ್ಪ ಮಿಶ್ರಣವನ್ನು ಶಿಲ್ಪಕಲೆಯನ್ನೂ ಬಳಸಲಾಗಿದೆ.

ಇದನ್ನೂ ಓದಿ: ಧಾರವಾಡದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕ್ರೀಡಾ ಸಂಕೀರ್ಣ ಲೋಕಾರ್ಪಣೆ

ದೇವಾಲಯದ ಒಳಭಾಗದಲ್ಲಿ ಸಾಂಪ್ರದಾಯಿಕ ಶಿಲ್ಪಕಲೆಗೆ ಆಧುನಿಕ ಬೆಳಕು ವ್ಯವಸ್ಥೆ ಇದ್ದು, ಭಕ್ತರಿಗೆ ಶಾಂತ ಮತ್ತು ಆಧ್ಯಾತ್ಮಿಕ ವಾತಾವರಣವನ್ನು ನೀಡುತ್ತದೆ. ಮುಂದಿನ ದಿನಗಳಲ್ಲಿ ಈ ದೇವಾಲಯವು ಹಂಪಿ ಮತ್ತು ಬದಾಮಿಯಂತೆ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗುವ ನಿರೀಕ್ಷೆ ಇದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *